ಯೆಶಾಯ 9:1-7
Kannada Holy Bible: Easy-to-Read Version
ಒಂದು ಹೊಸ ದಿನ ಬರುವುದು
9 ಹಿಂದಿನ ಕಾಲದಲ್ಲಿ, ಜೆಬುಲೋನ್ ಮತ್ತು ನಫ್ತಾಲಿ ಪ್ರಾಂತ್ಯಗಳು ವಿಶೇಷವಾದವುಗಳಲ್ಲ ಎಂದು ಜನರು ತಿಳಿದುಕೊಂಡಿದ್ದರು. ಆದರೆ ಆಮೇಲೆ ಸಮುದ್ರಕ್ಕೆ ಸಮೀಪದಲ್ಲಿರುವ ಪ್ರಾಂತ್ಯ, ಜೋರ್ಡನಿನ ಆಚೆಗಿರುವ ಸ್ಥಳ ಮತ್ತು ಯೆಹೂದ್ಯರಲ್ಲದವರು ವಾಸಿಸುವ ಗಲಿಲಾಯ ಪ್ರಾಂತ್ಯ ಇವುಗಳನ್ನು ಮುಂದೆ ದೇವರು ಮಹಾದೇಶವನ್ನಾಗಿ ಮಾಡುವನು. 2 ಈಗ ಅವರು ಕತ್ತಲಲ್ಲಿ ವಾಸಿಸುವರು. ಆದರೆ ಒಂದು ದೊಡ್ಡ ಬೆಳಕನ್ನು ಅವರು ನೋಡುವರು. ಅವರಿರುವ ಸ್ಥಳವು ಮರಣದ ಸ್ಥಳದಂತೆ ಅಂಧಕಾರದಿಂದ ತುಂಬಿದೆ. ಆದರೆ ದೊಡ್ಡ ಬೆಳಕು ಅವರ ಮೇಲೆ ಪ್ರಕಾಶಿಸುವದು.
3 ದೇವರೇ, ಆ ದೇಶವನ್ನು ನೀನು ಅಭಿವೃದ್ಧಿಪಡಿಸುವೆ. ನೀನು ಆ ಜನರನ್ನು ಸಂತೋಷಪಡಿಸುವೆ. ಅವರು ತಮ್ಮ ಸಂತಸವನ್ನು ವ್ಯಕ್ತಪಡಿಸುವರು. ಅದು ಸುಗ್ಗಿಕಾಲದಲ್ಲಿರುವ ಸಂತಸದಂತೆಯೂ ಯುದ್ಧದಲ್ಲಿ ಗಳಿಸಿದ ಕೊಳ್ಳೆಯ ಪಾಲು ದೊರೆತಾಗ ಉಂಟಾಗುವ ಸಂತಸದಂತೆಯೂ ಇರುವುದು. 4 ಯಾಕೆಂದರೆ ಅವರ ಮೇಲಿದ್ದ ಭಾರವನ್ನು ನೀನು ತೆಗೆದುಬಿಡುವೆ. ಅವರ ಬೆನ್ನಿನ ಮೇಲಿದ್ದ ಭಾರವಾದ ನೊಗವನ್ನು ನೀನು ತೆಗೆದುಹಾಕುವೆ; ವೈರಿಗಳು ನಿನ್ನ ಜನರನ್ನು ಶಿಕ್ಷಿಸಲು ಉಪಯೋಗಿಸುವ ಬೆತ್ತವನ್ನು ತೆಗೆದುಬಿಡುವೆ. ಆ ಸಮಯವು ನೀನು ಮಿದ್ಯಾನರನ್ನು ಸೋಲಿಸಿದ ಸಮಯದಂತಿರುವದು.
5 ರಣರಂಗದಲ್ಲಿ ನಡೆಯುವ ಪ್ರತಿಯೊಂದು ಪಾದರಕ್ಷೆಯನ್ನೂ ನಾಶಮಾಡಲಾಗುವುದು; ರಕ್ತದ ಕಲೆಯಿರುವ ಪ್ರತಿಯೊಂದು ಸಮವಸ್ತ್ರವನ್ನೂ ನಾಶಮಾಡಲಾಗುವದು. ಅವುಗಳೆಲ್ಲವನ್ನು ಬೆಂಕಿಯಲ್ಲಿ ಹಾಕಲಾಗುವದು. 6 ವಿಶೇಷವಾದ ಗಂಡುಮಗುವು ಜನಿಸಿದಾಗ ಇವೆಲ್ಲಾ ಸಂಭವಿಸುವದು. ದೇವರು ನಮಗೊಬ್ಬ ವರದ ಮಗನನ್ನು ಕೊಡುವನು. ಈ ವರದ ಮಗನು ಜನರನ್ನು ನಡಿಸುವದಕ್ಕೆ ಜವಾಬ್ದಾರಿಯನ್ನು ಹೊಂದಿದವನಾಗುವನು. ಆತನ ಹೆಸರು “ಅದ್ಭುತಸ್ವರೂಪನು, ಆಲೋಚನಾಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭುವು” ಎಂಬುದಾಗಿ ಇರುವದು. 7 ಆತನ ರಾಜ್ಯದಲ್ಲಿ ಸಮಾಧಾನವೂ ಅಧಿಕಾರವೂ ಇರುತ್ತದೆ. ದಾವೀದನ ಕುಟುಂಬದವನ ರಾಜ್ಯದಲ್ಲಿ ಅವು ಸ್ಥಿರವಾಗಿರುತ್ತವೆ. ಈ ಅರಸನು ನ್ಯಾಯನೀತಿಗಳಿಂದ ನಿತ್ಯಕಾಲಕ್ಕೂ ರಾಜ್ಯವಾಳುವನು. ಸರ್ವಶಕ್ತನಾದ ಯೆಹೋವನಿಗೆ ತನ್ನ ಜನರ ಮೇಲೆ ಬಲವಾದ ಪ್ರೀತಿಯಿದೆ. ಆತನ ಈ ಕಾರ್ಯಗಳನ್ನೆಲ್ಲಾ ಮಾಡಲು ಬಲವಾದ ಪ್ರೀತಿಯೇ ಕಾರಣ.
Read full chapterKannada Holy Bible: Easy-to-Read Version. All rights reserved. © 1997 Bible League International