Add parallel Print Page Options

ಯೇಸುವಿನ ಪುನರುತ್ಥಾನ

(ಮತ್ತಾಯ 28:1-10; ಮಾರ್ಕ 16:1-8; ಯೋಹಾನ 20:1-10)

24 ಭಾನುವಾರ ಮುಂಜಾನೆ ಇನ್ನೂ ಮೊಬ್ಬಿರುವಾಗ ಯೇಸುವಿನ ದೇಹವನ್ನಿಟ್ಟ ಸಮಾಧಿಯ ಬಳಿಗೆ ಆ ಸ್ತ್ರೀಯರು ತಾವು ಸಿದ್ಧಮಾಡಿದ ಪರಿಮಳದ್ರವ್ಯಗಳನ್ನು ತೆಗೆದುಕೊಂಡು ಬಂದರು. ಬಂಡೆ ಉರಳಿಸಲ್ಪಟ್ಟಿರುವುದನ್ನು ಕಂಡ ಅವರು ಒಳಗೆ ಹೋದರು. ಆದರೆ ಪ್ರಭು ಯೇಸುವಿನ ದೇಹವನ್ನು ಅವರು ಕಾಣಲಿಲ್ಲ. ಸ್ತ್ರೀಯರಿಗೆ ಇದು ಅರ್ಥವಾಗದೆ ಆಶ್ಚರ್ಯಪಡುತ್ತಿರಲು, ಹೊಳೆಯುವ ಉಡುಪುಗಳನ್ನು ಧರಿಸಿಕೊಂಡಿದ್ದ ಇಬ್ಬರು (ದೇವದೂತರು) ಅವರ ಬಳಿಯಲ್ಲಿ ನಿಂತರು. ಆ ಸ್ತ್ರೀಯರು ಬಹಳವಾಗಿ ಹೆದರಿ ತಮ್ಮ ಮುಖಗಳನ್ನು ನೆಲದ ಕಡೆಗೆ ಬಗ್ಗಿಸಿಕೊಂಡು ನಿಂತರು. ಆ ಮನುಷ್ಯರು, “ಬದುಕಿರುವ ವ್ಯಕ್ತಿಯನ್ನು ಇಲ್ಲಿ ಹುಡುಕುವುದೇಕೆ? ಇದು ಸತ್ತ ಜನರನ್ನು ಇಡುವ ಸ್ಥಳ! ಯೇಸು ಇಲ್ಲಿಲ್ಲ. ಆತನು ಜೀವಂತವಾಗಿ ಎದ್ದಿದ್ದಾನೆ! ಆತನು ಗಲಿಲಾಯದಲ್ಲಿದ್ದಾಗ ಹೇಳಿದ ವಿಷಯ ಜ್ಞಾಪಕವಿಲ್ಲವೋ? ಮನುಷ್ಯಕುಮಾರನು ಕೆಡುಕರ ವಶಕ್ಕೆ ಒಪ್ಪಿಸಲ್ಪಟ್ಟು; ಶಿಲುಬೆಯ ಮೇಲೆ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಜೀವಂತವಾಗಿ ಎದ್ದುಬರುವನು ಎಂದು ಯೇಸು ತಿಳಿಸಲಿಲ್ಲವೇ!” ಎಂದು ಹೇಳಿದರು. ಆಗ ಆ ಸ್ತ್ರೀಯರು ಯೇಸುವಿನ ಮಾತುಗಳನ್ನು ಜ್ಞಾಪಿಸಿಕೊಂಡರು.

ಆ ಸ್ತ್ರೀಯರು ಸಮಾಧಿಯಿಂದ ಹೊರಟು ಹನ್ನೊಂದು ಮಂದಿ ಅಪೊಸ್ತಲರ ಮತ್ತು ಇತರ ಹಿಂಬಾಲಕರ ಬಳಿಗೆ ಹೋದರು. ಆ ಸ್ತ್ರೀಯರು ಸಮಾಧಿಯ ಬಳಿ ನಡೆದ ಸಂಗತಿಗಳನ್ನೆಲ್ಲಾ ಅವರಿಗೆ ಹೇಳಿದರು. 10 ಈ ಸ್ತ್ರೀಯರು ಯಾರೆಂದರೆ: ಮಗ್ದಲದ ಮರಿಯಳು, ಯೋಹಾನಳು, ಯಾಕೋಬನ ತಾಯಿಯಾದ ಮರಿಯಳು ಮತ್ತು ಬೇರೆ ಕೆಲವು ಸ್ತ್ರೀಯರು. ನಡೆದ ಪ್ರತಿಯೊಂದನ್ನೂ ಈ ಸ್ತ್ರೀಯರು ಅಪೊಸ್ತಲರಿಗೆ ತಿಳಿಸಿದರು. 11 ಆದರೆ ಅಪೊಸ್ತಲರು ನಂಬಲಿಲ್ಲ. ಅವರಿಗೆ ಅದು ಹರಟೆಮಾತಾಗಿ ತೋರಿತು. 12 ಆದರೆ ಪೇತ್ರನು ಎದ್ದು ಇದು ನಿಜವೇ ಎಂದು ನೋಡಲು ಸಮಾಧಿಗೆ ಓಡಿಹೋದನು. ಅವನು ಒಳಗೆ ಹೋಗಿ ಬಗ್ಗಿ ನೋಡಿದಾಗ ಯೇಸುವಿನ ದೇಹಕ್ಕೆ ಸುತ್ತಿದ್ದ ಬಟ್ಟೆಯನ್ನು ಮಾತ್ರ ನೋಡಿದನು. ಕೇವಲ ಬಟ್ಟೆಯು ಅಲ್ಲಿ ಬಿದ್ದಿತ್ತು. ನಡೆದ ಈ ಸಂಗತಿಯ ಬಗ್ಗೆ ಪೇತ್ರನು ಆಶ್ಚರ್ಯಪಡುತ್ತಾ ಹೊರಟುಹೋದನು.

Read full chapter