Add parallel Print Page Options

ದೆವ್ವಗಳಿಂದ ಪೀಡಿತನಾಗಿದ್ದ ಮನುಷ್ಯ

(ಮತ್ತಾಯ 8:28-34; ಮಾರ್ಕ 5:1-20)

26 ಯೇಸು ಮತ್ತು ಆತನ ಶಿಷ್ಯರು ಗಲಿಲಾಯದಿಂದ ಸರೋವರವನ್ನು ದಾಟಿ, ಗೆರೆಸೇನರ ನಾಡಿಗೆ ಪ್ರಯಾಣ ಮಾಡಿದರು. 27 ಯೇಸು ದೋಣಿಯಿಂದ ಇಳಿದಾಗ, ಆ ಪಟ್ಟಣದ ಮನುಷ್ಯನೊಬ್ಬನು ಯೇಸುವಿನ ಬಳಿಗೆ ಬಂದನು. ಈ ಮನುಷ್ಯನಿಗೆ ದೆವ್ವ ಹಿಡಿದಿತ್ತು. ಬಹಳ ಕಾಲದಿಂದ ಅವನು ಬಟ್ಟೆಯನ್ನೇ ಹಾಕಿಕೊಂಡಿರಲಿಲ್ಲ. ಅವನು ಸಮಾಧಿಯ ಗವಿಗಳಲ್ಲಿ ವಾಸಿಸುತ್ತಿದ್ದನು.

28-29 ದೆವ್ವವು ಅವನನ್ನು ಪದೇಪದೇ ವಶಪಡಿಸಿಕೊಳ್ಳುತ್ತಿತ್ತು. ಆ ಮನುಷ್ಯನನ್ನು ಸೆರೆಮನೆಗೆ ಹಾಕಿ ಕೈಕಾಲುಗಳನ್ನು ಸರಪಣಿಗಳಿಂದ ಕಟ್ಟಿದರೂ ಅವನು ಅವುಗಳನ್ನು ಕಿತ್ತೊಗೆದುಬಿಡುತ್ತಿದ್ದನು. ಅವನೊಳಗಿದ್ದ ದೆವ್ವವು ಅವನನ್ನು ಜನರಿಲ್ಲದ ಸ್ಥಳಗಳಿಗೆ ಬಲವಂತವಾಗಿ ಕೊಂಡೊಯ್ಯುತ್ತಿತ್ತು. ಯೇಸು ಆ ದೆವ್ವಕ್ಕೆ, “ಅವನನ್ನು ಬಿಟ್ಟು ಹೋಗು” ಎಂದು ಆಜ್ಞಾಪಿಸಿದನು. ಆ ಮನುಷ್ಯನು ಯೇಸುವಿನ ಮುಂದೆ ಅಡ್ಡಬಿದ್ದು ಗಟ್ಟಿಯಾದ ಸ್ವರದಿಂದ, “ಯೇಸುವೇ, ಮಹೋನ್ನತನಾದ ದೇವರ ಮಗನೇ, ನನ್ನಿಂದ ನಿನಗೇನಾಗಬೇಕಾಗಿದೆ? ದಯಮಾಡಿ ನನ್ನನ್ನು ದಂಡಿಸಬೇಡ!” ಎಂದು ಕೂಗಿದನು.

30 “ನಿನ್ನ ಹೆಸರೇನು?” ಎಂದು ಯೇಸು ಕೇಳಿದನು.

“ದಂಡು” ಎಂದು ಅವನು ಉತ್ತರಿಸಿದನು. (ಏಕೆಂದರೆ ಅವನೊಳಗೆ ಅನೇಕ ದೆವ್ವಗಳು ಸೇರಿಕೊಂಡಿದ್ದವು.) 31 ತಮ್ಮನ್ನು ಪಾತಾಳಕ್ಕೆ ಕಳುಹಿಸಕೂಡದೆಂದು ಆ ದೆವ್ವಗಳು ಯೇಸುವನ್ನು ಬೇಡಿಕೊಂಡವು. 32 ಅಲ್ಲಿದ್ದ ಒಂದು ಗುಡ್ಡದ ಮೇಲೆ ಹಂದಿಗಳ ಒಂದು ದೊಡ್ಡ ಗುಂಪು ಮೇಯುತ್ತಿತ್ತು. ಹಂದಿಗಳೊಳಗೆ ಹೋಗಲು ತಮಗೆ ಅನುಮತಿ ಕೊಡಬೇಕೆಂದು ಆ ದೆವ್ವಗಳು ಯೇಸುವನ್ನು ಬೇಡಿಕೊಂಡವು. ಯೇಸು ಅವುಗಳಿಗೆ ಅನುಮತಿಕೊಟ್ಟನು. 33 ಆಗ ದೆವ್ವಗಳು ಆ ಮನುಷ್ಯನಿಂದ ಹೊರಬಂದು ಹಂದಿಗಳೊಳಗೆ ಸೇರಿಕೊಂಡವು. ಆ ಕೂಡಲೇ ಹಂದಿಗಳ ಗುಂಪು ಗುಡ್ಡದ ಕೆಳಗೆ ಓಡಿಹೋಗಿ ಸರೋವರದಲ್ಲಿ ಬಿದ್ದು ಮುಳುಗಿಹೋದವು.

34 ಹಂದಿಗಳನ್ನು ಕಾಯುತ್ತಿದ್ದವರು ಓಡಿಹೋಗಿ, ನಡೆದ ಈ ಸಂಗತಿಯನ್ನು ಹೊಲಗಳಲ್ಲಿಯೂ ಊರುಗಳಲ್ಲಿಯೂ ಇದ್ದ ಜನರಿಗೆ ತಿಳಿಸಿದರು. 35 ಅದನ್ನು ನೋಡಲು ಜನರೆಲ್ಲರೂ ಯೇಸುವಿದ್ದಲ್ಲಿಗೆ ಬಂದರು. ಆ ಮನುಷ್ಯನು ಯೇಸುವಿನ ಪಾದಗಳ ಬಳಿಯಲ್ಲಿ ಕುಳಿತಿದ್ದುದನ್ನು ಅವರು ನೋಡಿದರು. ಅವನು ಬಟ್ಟೆಗಳನ್ನು ಹಾಕಿಕೊಂಡಿದ್ದನು; ಸ್ವಸ್ಥಬುದ್ಧಿಯುಳ್ಳವನಾಗಿದ್ದನು. ದೆವ್ವಗಳು ಅವನನ್ನು ಬಿಟ್ಟುಹೋಗಿದ್ದವು. ಜನರಿಗೆ ಭಯವಾಯಿತು. 36 ಯೇಸು ಆ ಮನುಷ್ಯನನ್ನು ಗುಣಪಡಿಸಿದ ರೀತಿಯನ್ನು ನೋಡಿದ್ದವರು ಆತನನ್ನು ನೋಡಲು ಬಂದ ಜನರೆಲ್ಲರಿಗೂ ಆ ಘಟನೆಯನ್ನು ವಿವರಿಸಿ ಹೇಳಿದರು. 37 ಜನರು ಯೇಸುವಿಗೆ, “ನೀನು ಇಲ್ಲಿಂದ ಹೊರಟುಹೋಗು” ಎಂದು ಕೇಳಿಕೊಂಡರು. ಏಕೆಂದರೆ ಅವರು ಬಹಳ ಭಯಗೊಂಡಿದ್ದರು.

ಆದ್ದರಿಂದ ಯೇಸು ದೋಣಿಯನ್ನು ಹತ್ತಿ ಮತ್ತೆ ಗಲಿಲಾಯಕ್ಕೆ ಹಿಂತಿರುಗಿದನು. 38 ದೆವ್ವಗಳಿಂದ ಬಿಡುಗಡೆಯಾಗಿದ್ದವನು, “ನನ್ನನ್ನು ನಿನ್ನ ಜೊತೆಯಲ್ಲೇ ಕರೆದುಕೊಂಡು ಹೋಗು,” ಎಂದು ಕೇಳಿಕೊಂಡನು. 39 ಅದಕ್ಕೆ ಯೇಸು, “ನಿನ್ನ ಮನೆಗೆ ಹಿಂತಿರುಗಿ ಹೋಗು. ದೇವರು ನಿನಗೆ ಮಾಡಿದ ಉಪಕಾರವನ್ನು ಜನರಿಗೆ ತಿಳಿಸು” ಎಂದು ಹೇಳಿ ಅವನನ್ನು ಕಳುಹಿಸಿದನು.

ಆದ್ದರಿಂದ ಆ ಮನುಷ್ಯನು ಅಲ್ಲಿಂದ ಹೊರಟುಹೋಗಿ ಯೇಸು ತನಗೆ ಮಾಡಿದ ಉಪಕಾರವನ್ನು ಊರಲ್ಲೆಲ್ಲಾ ತಿಳಿಸಿದನು.

Read full chapter