Add parallel Print Page Options

ನಾವು ಮಕೆದೋನಿಯಕ್ಕೆ ಬಂದಾಗ ನಮಗೆ ವಿಶ್ರಾಂತಿಯೇ ಇರಲಿಲ್ಲ. ನಮ್ಮ ಸುತ್ತಮುತ್ತಲೆಲ್ಲಾ ಇಕ್ಕಟ್ಟುಗಳಿದ್ದವು. ಹೊರಗೆ ಕಲಹವಿತ್ತು, ಒಳಗೆ ಭಯವಿತ್ತು. ಆದರೆ ದೇವರು ಇಕ್ಕಟ್ಟುಗಳಲ್ಲಿರುವ ಜನರನ್ನು ಸಂತೈಸುತ್ತಾನೆ. ತೀತನು ಬಂದಾಗ ದೇವರು ನಮ್ಮನ್ನು ಸಂತೈಸಿದನು. ಅವನ ಆಗಮನದಿಂದಲೂ ನೀವು ಅವನಿಗೆ ಕೊಟ್ಟ ಆದರಣೆಯಿಂದಲೂ ನಮಗೆ ಸಮಾಧಾನವಾಯಿತು. ನನ್ನನ್ನು ನೋಡಲು ನಿಮಗಿರುವ ಹಂಬಲದ ಕುರಿತಾಗಿಯೂ ನಿಮ್ಮ ಕಾರ್ಯಗಳಿಂದ ನಿಮಗಾಗಿರುವ ದುಃಖದ ಕುರಿತಾಗಿಯೂ ನನ್ನ ವಿಷಯವಾಗಿ ನಿಮಗಿರುವ ಮಹಾಹಿತಚಿಂತನೆಯ ಕುರಿತಾಗಿಯೂ ಅವನು ನನಗೆ ಹೇಳಿದಾಗ ನನಗೆ ಬಹಳ ಸಂತೋಷವಾಯಿತು.

ನಾನು ನಿಮಗೆ ಬರೆದ ಪತ್ರವು ನಿಮಗೆ ದುಃಖವನ್ನು ಉಂಟುಮಾಡಿದ್ದರೂ, ಅದನ್ನು ಬರೆದದ್ದಕ್ಕೆ ನನಗೆ ದುಃಖವಿಲ್ಲ, ಆ ಪತ್ರವು ನಿಮಗೆ ದುಃಖವನ್ನು ಉಂಟು ಮಾಡಿತೆಂದು ನನಗೆಗೊತ್ತಿದೆ. ಆ ವಿಷಯದಲ್ಲಿ ನನಗೆ ವ್ಯಸನವಾಯಿತು. ಆದರೆ ಅದು ನಿಮ್ಮನ್ನು ಸ್ವಲ್ಪಕಾಲದವರೆಗೆ ಮಾತ್ರ ದುಃಖಿತರನ್ನಾಗಿ ಮಾಡಿತು. ಈಗ ನಾನು ಸಂತೋಷವಾಗಿದ್ದೇನೆ. ನಿಮ್ಮನ್ನು ದುಃಖಿತರನ್ನಾಗಿ ಮಾಡಿದ್ದಕ್ಕಾಗಿ ನಾನು ದುಃಖಿಸುತ್ತಿಲ್ಲ. ಆದರೆ ನಿಮ್ಮ ದುಃಖವು ನಿಮ್ಮ ಹೃದಯಗಳಲ್ಲಿ ಪರಿವರ್ತನೆಯನ್ನು ಉಂಟುಮಾಡಿದ್ದರಿಂದ ನಾನು ಸಂತೋಷವಾಗಿದ್ದೇನೆ. ದೇವರ ಇಚ್ಫೆಗನುಸಾರವಾಗಿ ನೀವು ದುಃಖಿತರಾದಿರಿ. ಆದ್ದರಿಂದ ನಮ್ಮಿಂದ ನಿಮಗೆ ಯಾವ ರೀತಿಯಲ್ಲಿಯೂ ನೋವಾಗಲಿಲ್ಲ. 10 ದೇವರ ಇಷ್ಟಾನುಸಾರವಾದ ದುಃಖವು ಹೃದಯವನ್ನೂ ಜೀವಿತವನ್ನೂ ಪರಿವರ್ತಿಸುತ್ತದೆ. ಈ ಪರಿವರ್ತನೆಯು ರಕ್ಷಣೆಗೆ ನಡೆಸುತ್ತದೆ. ಈ ಪರಿವರ್ತನೆಯ ವಿಷಯದಲ್ಲಿ ನಾವು ವ್ಯಸನಪಡಬೇಕಾಗಿಲ್ಲ. ಆದರೆ, ಲೋಕವು ಹೊಂದಿರುವ ದುಃಖವು ಮರಣವನ್ನು ಬರಮಾಡುತ್ತದೆ. 11 ನೀವು ಯಾವ ದುಃಖವನ್ನು ಹೊಂದಿರಬೇಕೆಂದು ದೇವರು ಬಯಸಿದ್ದನೋ ಅದೇ ದುಃಖವನ್ನು ನೀವು ಹೊಂದಿದ್ದೀರಿ. ಆ ದುಃಖವು ನಿಮ್ಮನ್ನು ಬಹು ಆಸಕ್ತಿಯುಳ್ಳವರನ್ನಾಗಿ ಮಾಡಿತು; ನೀವು ತಪ್ಪಿತಸ್ಥರಾಗಿರಲಿಲ್ಲವೆಂದು ನಿರೂಪಿಸಬೇಕೆಂಬ ಬಯಕೆಯನ್ನು ನಿಮ್ಮಲ್ಲಿ ಉಂಟುಮಾಡಿತು; ನಿಮ್ಮನ್ನು ಕೋಪಗೊಳಿಸಿತು ಮತ್ತು ಭಯಗೊಳಿಸಿತು; ನನ್ನನ್ನು ನೋಡಬೇಕೆಂಬ ಬಯಕೆಯನ್ನು ನಿಮ್ಮಲ್ಲಿ ಉಂಟುಮಾಡಿತು; ನನ್ನ ಬಗ್ಗೆ ಚಿಂತಿಸುವಂತೆ ಮಾಡಿತು; ತಪ್ಪಿತಸ್ಥರನ್ನು ದಂಡಿಸಬೇಕೆಂಬ ಬಯಕೆಯನ್ನು ಉಂಟು ಮಾಡಿತು. ಆ ಸಮಸ್ಯೆಯ ಯಾವ ವಿಷಯದಲ್ಲಿಯೂ ನೀವು ಅಪರಾಧಿಗಳಾಗಿರಲಿಲ್ಲವೆಂದು ನಿರೂಪಿಸಿದಿರಿ.

Read full chapter