ನ್ಯಾಯಸ್ಥಾಪಕರು 1:1-20
Kannada Holy Bible: Easy-to-Read Version
ಕಾನಾನ್ಯರೊಂದಿಗೆ ಯೆಹೂದ್ಯರ ಯುದ್ಧ
1 ಯೆಹೋಶುವನು ಮರಣಹೊಂದಿದ ನಂತರ ಇಸ್ರೇಲರು ಯೆಹೋವನಿಗೆ, “ನಮ್ಮಲ್ಲಿ ಯಾವ ಕುಲದವರು ಮೊದಲು ಹೋಗಿ ಕಾನಾನ್ಯರ ವಿರುದ್ಧ ಯುದ್ಧಮಾಡಬೇಕು?” ಎಂದು ಕೇಳಿದರು.
2 ಯೆಹೋವನು ಇಸ್ರೇಲರಿಗೆ, “ಯೆಹೂದ ಕುಲದವರು ಹೋಗಲಿ. ಅವರು ಈ ದೇಶವನ್ನು ವಶಪಡಿಸಿಕೊಳ್ಳುವಂತೆ ನಾನು ಮಾಡುತ್ತೇನೆ” ಎಂದು ಹೇಳಿದನು.
3 ಯೆಹೂದ್ಯರು ತಮ್ಮ ಸಹೋದರರಾದ ಸಿಮೆಯೋನ್ಯರಿಂದ ಸಹಾಯವನ್ನು ಕೇಳಿದರು; ಯೆಹೂದ್ಯರು, “ಸಹೋದರರೇ, ಯೆಹೋವನು ನಮ್ಮಲ್ಲಿ ಪ್ರತಿಯೊಬ್ಬರಿಗೂ ಸ್ವಲ್ಪಸ್ವಲ್ಪ ಭೂಮಿಯನ್ನು ಕೊಡುವುದಾಗಿ ವಾಗ್ದಾನ ಮಾಡಿದ್ದಾನೆ. ನೀವು ಬಂದು ನಮ್ಮ ಭೂಮಿಗಾಗಿ ಹೋರಾಡುವ ಯುದ್ಧದಲ್ಲಿ ಸಹಾಯ ಮಾಡಿದರೆ, ನಿಮ್ಮ ಭೂಮಿಗಾಗಿ ಹೋರಾಡುವ ಯುದ್ಧದಲ್ಲಿ ನಾವು ನಿಮಗೆ ಸಹಾಯ ಮಾಡುತ್ತೇವೆ” ಎಂದು ಹೇಳಿದರು. ಸಿಮೆಯೋನ್ಯರು ತಮ್ಮ ಸಹೋದರರಾದ ಯೆಹೂದ್ಯರಿಗೆ ಯುದ್ಧದಲ್ಲಿ ಸಹಾಯ ಮಾಡಲು ಒಪ್ಪಿಕೊಂಡರು.
4 ಯೆಹೋವನು ಕಾನಾನ್ಯರನ್ನೂ ಪೆರಿಜ್ಜೀಯರನ್ನೂ ಸೋಲಿಸುವುದರಲ್ಲಿ ಯೆಹೂದ್ಯರಿಗೆ ಸಹಾಯ ಮಾಡಿದನು. ಯೆಹೂದ್ಯರು ಬೆಜೆಕ್ ನಗರದಲ್ಲಿ ಹತ್ತು ಸಾವಿರ ಜನರನ್ನು ಕೊಂದುಹಾಕಿದರು. 5 ಯೆಹೂದ್ಯರು ಬೆಜೆಕ್ ನಗರದ ಅರಸನನ್ನು ಕಂಡುಹಿಡಿದು ಅವನೊಂದಿಗೆ ಯುದ್ಧಮಾಡಿ ಸೋಲಿಸಿದರು. ಯೆಹೂದ್ಯರು ಕಾನಾನ್ಯರನ್ನೂ ಪೆರಿಜ್ಜೀಯರನ್ನೂ ಸೋಲಿಸಿದರು.
6 ಬೆಜೆಕ್‌ನ ಅರಸನು[a] ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದನು. ಆದರೆ ಯೆಹೂದ್ಯರು ಅವನನ್ನು ಬೆನ್ನಟ್ಟಿ ಹಿಡಿದು ಅವನ ಕೈಕಾಲುಗಳ ಹೆಬ್ಬೆರಳುಗಳನ್ನು ಕತ್ತರಿಸಿಬಿಟ್ಟರು. 7 ಆಗ ಬೆಜೆಕ್‌ನ ಅರಸನು, “ನಾನು ಎಪ್ಪತ್ತು ಮಂದಿ ಅರಸರ ಕೈಕಾಲಿನ ಹೆಬ್ಬೆರಳುಗಳನ್ನು ಕತ್ತರಿಸಿ ಬಿಟ್ಟಿದ್ದೆ. ಆ ಅರಸರು ನನ್ನ ಮೇಜಿನ ಕೆಳಗೆ ಬೀಳುವ ಆಹಾರದ ಚೂರುಗಳನ್ನು ತಿನ್ನುವಂತೆ ಮಾಡಿದ್ದೆ. ನಾನು ಅವರಿಗೆ ಮಾಡಿದಂತೆಯೇ ದೇವರು ಈಗ ನನಗೆ ಮಾಡುತ್ತಿದ್ದಾನೆ” ಎಂದು ಹೇಳಿದನು. ಯೆಹೂದ್ಯರು ಬೆಜೆಕ್‌ನ ಅರಸನನ್ನು ಜೆರುಸಲೇಮಿಗೆ ತೆಗೆದುಕೊಂಡು ಬಂದರು; ಅವನು ಅಲ್ಲಿ ಸತ್ತುಹೋದನು.
8 ಯೆಹೂದ್ಯರು ಜೆರುಸಲೇಮಿನ ವಿರುದ್ಧ ಯುದ್ಧಮಾಡಿ ಅದನ್ನು ಗೆದ್ದುಕೊಂಡರು. ಯೆಹೂದ್ಯರು ಜೆರುಸಲೇಮಿನ ಜನರನ್ನು ಖಡ್ಗಗಳಿಂದ ಕೊಂದು ನಗರವನ್ನು ಸುಟ್ಟುಹಾಕಿದರು. 9 ತರುವಾಯ ಯೆಹೂದ್ಯರು ಉಳಿದಿರುವ ಕಾನಾನ್ಯರೊಂದಿಗೆ ಯುದ್ಧಮಾಡಲು ಹೋದರು. ಆ ಕಾನಾನ್ಯರು ಬೆಟ್ಟಪ್ರದೇಶ, ನೆಗೆವ್ ಮತ್ತು ಪಶ್ಚಿಮದ ಇಳಕಲಿನ ಪ್ರದೇಶದಲ್ಲಿ ವಾಸ ಮಾಡಿಕೊಂಡಿದ್ದರು.
10 ತರುವಾಯ ಯೆಹೂದ್ಯರು ಕಿರ್ಯತರ್ಬವೆಂಬ ಹೆಬ್ರೋನ್ ನಗರದಲ್ಲಿದ್ದ ಕಾನಾನ್ಯರೊಂದಿಗೆ ಯುದ್ಧಮಾಡಲು ಹೋದರು. ಯೆಹೂದ್ಯರು ಶೇಷೈ, ಅಹೀಮನ್ ಮತ್ತು ತಲ್ಮೈ ಎಂಬವರನ್ನು ಸೋಲಿಸಿಬಿಟ್ಟರು.
ಕಾಲೇಬ್ ಮತ್ತು ಅವನ ಮಗಳು
11 ಯೆಹೂದ್ಯರು ಆ ಸ್ಥಳವನ್ನು ಬಿಟ್ಟು ದೆಬೀರ ನಗರಕ್ಕೆ ವಿರುದ್ಧವಾಗಿ ಯುದ್ಧಮಾಡಲು ಹೋದರು. (ದೆಬೀರಕ್ಕೆ ಮುಂಚೆ ಕಿರ್ಯತ್‌ಸೇಫೆರ್ ಎಂಬ ಹೆಸರಿತ್ತು.) 12 ಯೆಹೂದ್ಯರು ಯುದ್ಧ ಆರಂಭಿಸುವ ಮುನ್ನ ಕಾಲೇಬನು ಜನರಿಗೆ, “ಕಿರ್ಯತ್‌ಸೇಫೆರನ್ನು ಗೆದ್ದುಕೊಳ್ಳಬೇಕೆಂದು ನನ್ನ ಇಚ್ಛೆ. ಆ ನಗರದ ಮೇಲೆ ಧಾಳಿಮಾಡಿ ಅದನ್ನು ಗೆದ್ದುಕೊಟ್ಟವನಿಗೆ ನಾನು ನನ್ನ ಮಗಳಾದ ಅಕ್ಷಾಳನ್ನು ಮದುವೆ ಮಾಡಿಕೊಡುತ್ತೇನೆ” ಎಂದು ಹೇಳಿದನು.
13 ಕಾಲೇಬನಿಗೆ ಕೆನಜನೆಂಬ ತಮ್ಮನಿದ್ದನು. ಕೆನಜನಿಗೆ ಒತ್ನೀಯೇಲನೆಂಬ ಮಗನಿದ್ದನು. ಒತ್ನೀಯೇಲನು ಕಿರ್ಯತ್‌ಸೇಫೆರನ್ನು ಗೆದ್ದುಕೊಂಡನು. ಅದಕ್ಕಾಗಿ ಕಾಲೇಬನು ತನ್ನ ಮಗಳಾದ ಅಕ್ಷಾಳನ್ನು ಒತ್ನೀಯೇಲನ ಜೊತೆ ಮದುವೆ ಮಾಡಿಕೊಟ್ಟನು.
14 ಅಕ್ಷಾಳು ಒತ್ನೀಯೇಲನ ಜೊತೆ ವಾಸಿಸಲು ಹೋದಳು. ಒತ್ನೀಯೇಲನು ಅಕ್ಷಾಳಿಗೆ,[b] “ನಿನ್ನ ತಂದೆಯಿಂದ ಸ್ವಲ್ಪ ಭೂಮಿಯನ್ನು ಕೇಳು” ಎಂದು ಹೇಳಿದನು. ಅಕ್ಷಾಳು ತನ್ನ ತಂದೆಯ ಹತ್ತಿರ ಹೋದಳು. ಅವಳು ತನ್ನ ಕತ್ತೆಯ ಮೇಲಿಂದ ಇಳಿದಾಗ, “ನಿನಗೇನು ಬೇಕು?” ಎಂದು ಕಾಲೇಬನು ಕೇಳಿದನು.
15 ಅದಕ್ಕೆ ಅವಳು, “ನನಗೊಂದು ದಾನ ಕೊಡಬೇಕು.[c] ನೀನು ನನಗೆ ನೆಗೆವಿನಲ್ಲಿ ನೀರಿಲ್ಲದ ಮರುಭೂಮಿಯನ್ನು ಕೊಟ್ಟಿರುವೆ. ದಯವಿಟ್ಟು ನನಗೆ ಸ್ವಲ್ಪ ನೀರಿನ ಬುಗ್ಗೆಗಳಿರುವ ಭೂಮಿಯನ್ನು ಕೊಡು” ಎಂದಳು. ಅವಳು ಕೇಳಿಕೊಂಡಂತೆಯೇ ಕಾಲೇಬನು ಅವಳಿಗೆ ಮೇಲಿನ ಮತ್ತು ಕೆಳಗಿನ ಬುಗ್ಗೆಗಳನ್ನು ಕೊಟ್ಟನು.
16 ಕೇನ್ಯರು (ಕೇನ್ಯರು ಮೋಶೆಯ ಮಾವನ ಗೋತ್ರದವರಾಗಿದ್ದರು.) ಖರ್ಜೂರ ನಗರವನ್ನು (ಜೆರಿಕೊವನ್ನು) ಬಿಟ್ಟು ಯೆಹೂದ್ಯರ ಸಂಗಡ ಹೋದರು. ಅವರು ನೆಗೆವಿನಲ್ಲಿ ಅರಾದ್ ನಗರದ ಹತ್ತಿರವಿದ್ದ ಯೆಹೂದ ಅರಣ್ಯಕ್ಕೆ ಬಂದು ಅಲ್ಲಿನ ಜನರ ಸಂಗಡ ವಾಸ ಮಾಡಿದರು.
17 ಕಾನಾನ್ಯರಾಗಿದ್ದ ಕೆಲವರು ಚೆಫತ್ ಎಂಬ ನಗರದಲ್ಲಿ ವಾಸ ಮಾಡಿಕೊಂಡಿದ್ದರು. ಯೆಹೂದ್ಯರು ಮತ್ತು ಸಿಮೆಯೋನ್ಯರು ಆ ಕಾನಾನ್ಯರ ಮೇಲೆ ಧಾಳಿಮಾಡಿ ಆ ನಗರವನ್ನು ಸಂಪೂರ್ಣವಾಗಿ ನಾಶಮಾಡಿದರು; ಅಲ್ಲದೆ ಆ ನಗರಕ್ಕೆ ಹೊರ್ಮಾ ಎಂದು ಹೆಸರಿಟ್ಟರು.
18 ಯೆಹೂದ್ಯರು ಗಾಜಾ ನಗರವನ್ನೂ ಅದರ ಸುತ್ತಮುತ್ತಲಿನ ಎಲ್ಲಾ ಸಣ್ಣ ಪಟ್ಟಣಗಳನ್ನೂ ಸ್ವಾಧೀನಪಡಿಸಿಕೊಂಡರು. ಯೆಹೂದ್ಯರು ಅಷ್ಕೆಲೋನ್ ಮತ್ತು ಎಕ್ರೋನ್ ನಗರಗಳನ್ನೂ ಅವುಗಳ ಸುತ್ತಮುತ್ತಲಿನ ಎಲ್ಲಾ ಸಣ್ಣಪುಟ್ಟ ಪಟ್ಟಣಗಳನ್ನೂ ಸಹ ಸ್ವಾಧೀನಪಡಿಸಿಕೊಂಡರು.
19 ಯೆಹೂದ್ಯರು ಯುದ್ಧಮಾಡುವಾಗ ಯೆಹೋವನು ಅವರ ಸಂಗಡ ಇದ್ದುದರಿಂದ ಅವರು ಬೆಟ್ಟಪ್ರದೇಶವನ್ನೆಲ್ಲಾ ಸ್ವಾಧೀನಪಡಿಸಿಕೊಂಡರು. ಆದರೆ ಕಣಿವೆಯಲ್ಲಿ ವಾಸ ಮಾಡುತ್ತಿದ್ದ ಜನರಲ್ಲಿ ಕಬ್ಬಿಣದ ರಥಗಳಿದ್ದದರಿಂದ ಯೆಹೂದ್ಯರು ಅವರನ್ನು ಸೋಲಿಸಲಾಗಲಿಲ್ಲ.
20 ಹೆಬ್ರೋನಿಗೆ ಸಮೀಪದಲ್ಲಿರುವ ಭೂಮಿಯನ್ನು ಕಾಲೇಬನಿಗೆ ಕೊಡುವುದಾಗಿ ಮೋಶೆಯು ವಾಗ್ದಾನ ಮಾಡಿದ್ದನು. ಆದ್ದರಿಂದ ಆ ಭೂಮಿಯನ್ನು ಕಾಲೇಬನ ಕುಟುಂಬದವರಿಗೆ ಕೊಡಲಾಯಿತು. ಕಾಲೇಬನ ಜನರು ಅನಾಕನ ಮೂರು ಜನ ಮಕ್ಕಳನ್ನು[d] ಆ ಪ್ರದೇಶದಿಂದ ಬಲವಂತವಾಗಿ ಹೊರಗಟ್ಟಿದರು.
Read full chapterKannada Holy Bible: Easy-to-Read Version. All rights reserved. © 1997 Bible League International