ಅರಣ್ಯಕಾಂಡ 20:2-13
Kannada Holy Bible: Easy-to-Read Version
ಮೋಶೆಯ ತಪ್ಪು
2 ಅಲ್ಲಿ ನೀರಿಲ್ಲದಿದ್ದ ಕಾರಣ ಅವರು ಮೋಶೆ ಆರೋನರ ವಿರುದ್ಧವಾಗಿ ಸೇರಿಬಂದರು. 3 ಜನರು ಮೋಶೆಯ ಸಂಗಡ ವಾದಮಾಡಿ, “ನಮ್ಮ ಸಹೋದರರು ಯೆಹೋವನ ಸನ್ನಿಧಿಯಲ್ಲಿ ಸತ್ತಾಗ ನಾವೂ ಸತ್ತುಹೋಗಿದ್ದರೆ ಎಷ್ಟೋ ಮೇಲಾಗಿತ್ತು. 4 ಯೆಹೋವನ ಜನರನ್ನು ಈ ಮರುಭೂಮಿಗೆ ಯಾಕೆ ಕರೆದುಕೊಂಡು ಬಂದೆ? ನಾವು ಮತ್ತು ನಮ್ಮ ಪ್ರಾಣಿಗಳು ಇಲ್ಲಿ ಸಾಯಬೇಕೆಂದು ನೀನು ಇಚ್ಛಿಸುತ್ತೀಯೋ? 5 ಈಜಿಪ್ಟಿನಿಂದ ನಮ್ಮನ್ನು ಇಲ್ಲಿಗೆ ಯಾಕೆ ಕರೆತಂದೆ? ಈ ಕೆಟ್ಟ ಸ್ಥಳಕ್ಕೆ ನಮ್ಮನ್ನು ಯಾಕೆ ಕರೆದುಕೊಂಡು ಬಂದೆ? ಇಲ್ಲಿ ಧಾನ್ಯವಾಗಲಿ ಅಂಜೂರವಾಗಲಿ ದ್ರಾಕ್ಷಿಯಾಗಲಿ ದಾಳಿಂಬೆಯಾಗಲಿ ಇಲ್ಲ, ಕುಡಿಯುವುದಕ್ಕೆ ನೀರೂ ಇಲ್ಲ” ಎಂದು ಹೇಳಿದರು.
6 ಮೋಶೆ ಆರೋನರು ಜನಸಮೂಹದ ಎದುರಿನಿಂದ ದೇವದರ್ಶನಗುಡಾರದ ಪ್ರವೇಶದ್ವಾರಕ್ಕೆ ಹೋಗಿ ಅಡ್ಡಬಿದ್ದರು. ಆಗ ಯೆಹೋವನ ಮಹಿಮೆಯು ಅವರಿಗೆ ಪ್ರತ್ಯಕ್ಷವಾಯಿತು.
7 ಆಗ ಯೆಹೋವನು ಮೋಶೆಯೊಡನೆ ಮಾತಾಡಿ, 8 “ಬಳಿಕ ನೀನು ಮತ್ತು ನಿನ್ನ ಸಹೋದರನಾದ ಆರೋನನು ಜನರನ್ನು ಬಂಡೆಯ ಮುಂದೆ ಸಭೆಸೇರಿಸಿ, ಜನರ ಮುಂದೆ ಆ ಬಂಡೆಗೆ ಮಾತಾಡು. ಆಗ ನೀರು ಬಂಡೆಯಿಂದ ಹರಿಯುವುದು ಮತ್ತು ನೀರನ್ನು ಜನರಿಗೂ ಅವರ ಪಶುಗಳಿಗೂ ಕೊಡು” ಎಂದು ಹೇಳಿದನು.
9 ಕೋಲು ಪವಿತ್ರಗುಡಾರದಲ್ಲಿ ಯೆಹೋವನ ಸನ್ನಿಧಿಯಲ್ಲಿತ್ತು. ಯೆಹೋವನು ಹೇಳಿದಂತೆ ಮೋಶೆ ಕೋಲನ್ನು ತೆಗೆದುಕೊಂಡನು. 10 ಜನರು ಬಂಡೆಯ ಮುಂದೆ ಒಟ್ಟಾಗಿ ಸೇರಿಬರಬೇಕೆಂದು ಮೋಶೆ ಆರೋನರು ಹೇಳಿದರು. ಆಗ ಮೋಶೆ, “ದ್ರೋಹಿಗಳೇ, ಈಗ ನನಗೆ ಕಿವಿಗೊಡಿರಿ. ನಿಮಗೋಸ್ಕರವಾಗಿ ಈ ಬಂಡೆಯಿಂದ ನೀರು ಹರಿಯುವಂತೆ ನಾವು ಮಾಡಬೇಕೋ?” ಎಂದು ಹೇಳಿ, 11 ತನ್ನ ಕೈಯಲ್ಲಿದ್ದ ಕೋಲನ್ನು ಎತ್ತಿ ಎರಡು ಸಾರಿ ಬಂಡೆಯನ್ನು ಹೊಡೆದನು. ಬಂಡೆಯಿಂದ ನೀರು ಹರಿಯತೊಡಗಿತು. ಜನರಿಗೆ ಮತ್ತು ಪಶುಗಳಿಗೆ ಕುಡಿಯಲು ನೀರು ದೊರೆಯಿತು.
12 ಆದರೆ ಯೆಹೋವನು ಮೋಶೆ ಆರೋನರಿಗೆ, “ನೀವು ನನ್ನನ್ನು ನಂಬದವರಾಗಿ ಇಸ್ರೇಲರ ಎದುರಿನಲ್ಲಿ ನನ್ನ ಪವಿತ್ರತೆಯನ್ನು ತೋರಿಸದೆ ಹೋದದ್ದರಿಂದ ಈ ಸಮುದಾಯದವರಿಗೆ ಕೊಡಲಿರುವ ದೇಶಕ್ಕೆ ನೀವು ಅವರನ್ನು ಕರೆದುಕೊಂಡು ಹೋಗುವುದಿಲ್ಲ.” ಎಂದು ಹೇಳಿದನು.
13 ಇಸ್ರೇಲರು ಅಲ್ಲಿ ಯೆಹೋವನೊಡನೆ ವಾದ ಮಾಡಿದ್ದರಿಂದ ಆ ಸ್ಥಳವು “ಮೆರೀಬಾ ಬುಗ್ಗೆ” ಎಂದು ಕರೆಯಲ್ಪಟ್ಟಿತು. ಅದಲ್ಲದೆ ಯೆಹೋವನು ತಾನು ಪರಿಶುದ್ಧನು ಎಂಬುದನ್ನು ಅವರಿಗೆ ತೋರಿಸಿದ ಸ್ಥಳವು ಇದೇ.
Read full chapterKannada Holy Bible: Easy-to-Read Version. All rights reserved. © 1997 Bible League International