Add parallel Print Page Options

ಜೆರುಸಲೇಮಿನಿಂದ ಧರ್ಮಶಾಸ್ತ್ರ ಬರುವದು

ಅಂತ್ಯದ ದಿವಸಗಳಲ್ಲಿ ಯೆಹೋವನ ಆಲಯದ ಪರ್ವತವು
    ಎಲ್ಲಾ ಪರ್ವತಗಳಿಗಿಂತಲೂ ಅತ್ಯುನ್ನತವಾಗಿರುವುದು.
ಅದು ಬೆಟ್ಟಗಳಿಗಿಂತಲೂ ಉನ್ನತವಾಗಿರುವದು.
    ಅಲ್ಲಿಗೆ ಜನರು ಗುಂಪುಗುಂಪಾಗಿ ಹೋಗುವರು.
ಅನೇಕ ದೇಶಗಳಿಂದ ಜನರು ಅಲ್ಲಿಗೆ ಹೋಗುವರು.
    “ಬನ್ನಿರಿ, ನಾವು ಯೆಹೋವನ ಪರ್ವತಕ್ಕೆ ಹೋಗೋಣ,
    ಯಾಕೋಬನ ದೇವರ ಆಲಯಕ್ಕೆ ನಾವು ಹೋಗೋಣ.
ಆಗ ದೇವರು ನಮಗೆ ಜೀವಿತದ ಮಾರ್ಗವನ್ನು ಕಲಿಸುವನು.
    ಮತ್ತು ನಾವು ಆತನನ್ನು ಅನುಸರಿಸುವೆವು” ಎಂದು ಹೇಳುವರು.

ದೇವರ ಉಪದೇಶವು, ಆತನ ಸಂದೇಶವು ಚೀಯೋನ್ ಬೆಟ್ಟದಲ್ಲಿರುವ
    ಜೆರುಸಲೇಮಿನಲ್ಲಿ ಪ್ರಾರಂಭವಾಗಿ ಪ್ರಪಂಚದಲ್ಲೆಲ್ಲಾ ಹಬ್ಬುತ್ತದೆ.
ಆಗ ಪ್ರಪಂಚದ ಎಲ್ಲಾ ಜನಾಂಗಗಳಿಗೆ ಯೆಹೋವನೇ ನ್ಯಾಯಾಧೀಶನು.
    ದೂರದೇಶದಲ್ಲಿರುವ ಅನೇಕ ಜನರ ಜಗಳಗಳನ್ನು ಆತನು ನಿಲ್ಲಿಸುವನು.
ಆ ಜನರು ಯುದ್ಧದ ಆಯುಧಗಳನ್ನು ಉಪಯೋಗಿಸುವದನ್ನು ನಿಲ್ಲಿಸುವರು.
    ತಮ್ಮ ಖಡ್ಗಗಳಿಂದ ನೇಗಿಲ ಗುಳಗಳನ್ನು ತಯಾರಿಸುವರು.
    ಭರ್ಜಿಗಳಿಂದ ಕುಡುಗೋಲುಗಳನ್ನು ತಯಾರಿಸುವರು.
ಜನರೊಳಗೆ ಪರಸ್ಪರ ಯುದ್ಧ ಮಾಡುವದನ್ನು ನಿಲ್ಲಿಸುವರು.
    ಯುದ್ಧಕ್ಕೆ ತರಬೇತಿ ಎಂದಿಗೂ ಮಾಡರು.
ಪ್ರತಿಯೊಬ್ಬನೂ ತನ್ನ ದ್ರಾಕ್ಷಾಲತೆಯ ನೆರಳಿನಲ್ಲಿ ಕುಳಿತುಕೊಳ್ಳುವನು.
    ಅವರು ಅಂಜೂರದ ಮರದಡಿಯಲ್ಲಿ ವಿಶ್ರಾಂತಿಯಲ್ಲಿರುವರು.
ಯಾರೂ ಅವರನ್ನು ಭಯಗೊಳಿಸುವದಿಲ್ಲ.
    ಯಾಕೆಂದರೆ ಸರ್ವಶಕ್ತನಾದ ಯೆಹೋವನು ಹೀಗೆ ಆಗುವದೆಂದು ಹೇಳಿದ್ದಾನೆ.

ಬೇರೆ ದೇಶಗಳವರು ತಮ್ಮ ದೇವರುಗಳ ಹೆಸರಿನಲ್ಲಿ ನಡೆಯುತ್ತಾರೆ.
    ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರನ್ನು ನಿತ್ಯಕಾಲಕ್ಕೂ ಸ್ಮರಿಸುವೆವು.

ರಾಜ್ಯವು ತಿರುಗಿ ತರಲ್ಪಡುವದು

ಯೆಹೋವನು ಹೇಳುವುದೇನೆಂದರೆ,
    “ಜೆರುಸಲೇಮು ಗಾಯಗೊಂಡು ಕುಂಟಾಗಿದೆ;
ತಳ್ಳಲ್ಪಟ್ಟಿದೆ; ಗಾಯಗೊಂಡು ಶಿಕ್ಷಿಸಲ್ಪಟ್ಟಿದೆ.
    ಆದರೆ ನಾನು ಆಕೆಯನ್ನು ನನ್ನ ಬಳಿಗೆ ಬರಮಾಡುವೆನು.

“ಆ ‘ಕುಂಟು’ ನಗರದ ಜನರೇ ಅಳಿದುಳಿದ ಜನರಾಗುವರು.
    ಆ ಪಟ್ಟಣದ ಜನರನ್ನು ಬಲವಂತದಿಂದ ಓಡಿಸಲಾಯಿತು.
    ಆದರೆ ನಾನು ಅವರನ್ನು ಬಲಶಾಲಿಯಾದ ಜನಾಂಗವನ್ನಾಗಿ ಮಾಡುವೆನು.”
ಯೆಹೋವನು ಅವರ ಅರಸನಾಗುವನು.
    ಆತನು ಚೀಯೋನ್ ಪರ್ವತದಿಂದ ನಿತ್ಯಕಾಲಕ್ಕೂ ಆಳುವನು.
ಹಿಂಡುಗಳ ಗೋಪುರವೇ,
    ನಿನ್ನ ಸಮಯವು ಬರುವದು.
ಚೀಯೋನಿನ ಒಫೆಲ್ ಗುಡ್ಡವೇ,
    ನಿನಗೆ ತಿರುಗಿ ಅಧಿಕಾರ ದೊರಕುವುದು.
ಹೌದು, ಮೊದಲಿನಂತೆಯೇ
    ಜೆರುಸಲೇಮಿನಲ್ಲೇ ರಾಜ್ಯವಿರುವುದು.

ಬಾಬಿಲೋನಿಗೆ ಇಸ್ರೇಲರು ಯಾಕೆ ಹೋಗಬೇಕು?

ಯಾಕೆ ನೀನು ಗಟ್ಟಿಯಾಗಿ ಅರಚಿಕೊಳ್ಳುವೆ?
    ನೀನು ನಿನ್ನ ನಾಯಕನನ್ನು ಕಳೆದುಕೊಂಡೆಯಾ?
ನಿನ್ನ ರಾಜನು ನಿನ್ನನ್ನು ಬಿಟ್ಟುಹೋದನೋ?
    ಈ ಕಾರಣದಿಂದ ನೀನು ಪ್ರಸವವೇದನೆಯನ್ನು ಅನುಭವಿಸುವ ಸ್ತ್ರೀಯಂತೆ ಶ್ರಮೆಯನ್ನು ಅನುಭವಿಸುತ್ತಿರುವೆಯೋ?
10 ಚೀಯೋನ್ ಕುಮಾರಿಯೇ, ಪ್ರಸವವೇದನೆಯಲ್ಲಿರುವ ಸ್ತ್ರೀಯಂತೆ
    ನೀನು ನೋವನ್ನು ಅನುಭವಿಸು.
ನೀನು ಜೆರುಸಲೇಮ್ ಪಟ್ಟಣದಿಂದ
    ಹೊರಗೆ ಹೋಗಿ ಹೊಲದಲ್ಲಿ ವಾಸಿಸುವೆ.
ನಾನು ಹೇಳುವುದೇನೆಂದರೆ, ನೀನು ಬಾಬಿಲೋನಿಗೆ ಹೋಗುವೆ,
    ಆದರೆ ಅಲ್ಲಿ ನೀನು ರಕ್ಷಿಸಲ್ಪಡುವೆ.
ಯೆಹೋವನು ಅಲ್ಲಿಗೆ ಬಂದು ನಿನ್ನನ್ನು ರಕ್ಷಿಸುವನು.
    ನಿನ್ನ ವೈರಿಗಳಿಂದ ನಿನ್ನನ್ನು ಬಿಡುಗಡೆ ಮಾಡುವನು.

ಯೆಹೋವನು ಜನಾಂಗಗಳನ್ನು ನಾಶಮಾಡುವನು

11 ಎಷ್ಟೋ ಜನಾಂಗಗಳು ನಿನ್ನ ವಿರುದ್ಧ ಯುದ್ಧಕ್ಕೆ ಬಂದಿವೆ.
    “ಅಲ್ಲಿ ನೋಡಿ, ಚೀಯೋನ್, ಬನ್ನಿ ಆಕ್ರಮಣ ಮಾಡೋಣ” ಎಂದು ಹೇಳುವರು.

12 ಅವರು ತಮ್ಮ ಯೋಜನೆಯನ್ನು ಹಾಕುತ್ತಾರೆ.
    ಆದರೆ ಯೆಹೋವನ ಯೋಜನೆಯೇನೆಂದು ಅವರು ಅರಿಯರು.
ಯೆಹೋವನು ತನ್ನ ಜನರನ್ನು ಒಂದು ವಿಶೇಷ ಉದ್ದೇಶಕ್ಕಾಗಿ ಇಲ್ಲಿಗೆ ತಂದಿದ್ದಾನೆ.
    ಆ ಜನರು ಕಣಕ್ಕೆ ಹಾಕಿದ ಸಿವುಡುಗಳಂತೆ ನಜ್ಜುಗುಜ್ಜಾಗುವರು.

ಇಸ್ರೇಲ್ ಜಯಗೊಂಡು ಇತರ ಜನಾಂಗಗಳನ್ನು ನಾಶಮಾಡುವದು

13 “ಚೀಯೋನ್ ಕುಮಾರಿಯೇ ಎದ್ದೇಳು, ಆ ಜನರನ್ನು ಪುಡಿಮಾಡು!
    ನಾನು ನಿನ್ನನ್ನು ಬಲಶಾಲಿಯನ್ನಾಗಿ ಮಾಡುವೆನು.
ಕಬ್ಬಿಣದ ಕೊಂಬುಗಳಿರುವಂತೆ, ತಾಮ್ರದ ಗೊರಸುಗಳಿರುವಂತೆ ನಿನ್ನನ್ನು ಮಾಡುವೆನು.
    ಎಷ್ಟೋ ಜನರನ್ನು ನೀನು ತುಂಡುತುಂಡು ಮಾಡುವೆ.
ಅವರ ಐಶ್ವರ್ಯವನ್ನು ನೀನು ಯೆಹೋವನಿಗೆ ಕೊಡುವೆ.
    ಅವರ ನಿಕ್ಷೇಪಗಳನ್ನು ಇಡೀ ಭೂಮಿಗೆ ಒಡೆಯನಾಗಿರುವ ಯೆಹೋವನಿಗೆ ಅರ್ಪಿಸುವೆ.”

ಬಲಶಾಲಿಯಾದ ನಗರಿಯೇ, ನಿನ್ನ ಸೈನಿಕರನ್ನು ಕೂಡಿಸು.
    ಅವರು ನಮ್ಮ ಮೇಲೆ ದಾಳಿಮಾಡಲು ಸುತ್ತುವರಿದಿದ್ದಾರೆ.
ಇಸ್ರೇಲಿನ ನ್ಯಾಯಾಧೀಶನ ಕೆನ್ನೆಯ ಮೇಲೆ
    ಕೋಲಿನಿಂದ ಹೊಡೆಯುವರು.

ಬೆತ್ಲೆಹೇಮಿನಲ್ಲಿ ಮೆಸ್ಸೀಯನು ಜನಿಸುವನು

ಎಫ್ರಾತದ ಬೆತ್ಲೆಹೇಮೇ,
    ನೀನು ಯೆಹೂದದ ಪ್ರಾಂತ್ಯದಲ್ಲಿ ಅತಿ ಚಿಕ್ಕ ಊರು ಆಗಿರುವೆ.
ನಿನ್ನಲ್ಲಿರುವ ಕುಟುಂಬಗಳು ಸ್ವಲ್ಪ ಮಾತ್ರವೇ.
    ಆದರೆ ಇಸ್ರೇಲನ್ನು ಆಳುವವನು ನನಗೋಸ್ಕರವಾಗಿ ನಿನ್ನಿಂದ ಹೊರಡುವನು.
ಆತನ ಪ್ರಾರಂಭವು ಅನಾದಿ ಕಾಲದಿಂದಲೇ ಆಗಿದೆ.
ಸ್ತ್ರೀಯು ತನ್ನ ಮಗನನ್ನು ಹೆರುವ ತನಕ
    ಯೆಹೋವನು ತನ್ನ ಜನರನ್ನು ತೊರೆದುಬಿಡುವನು.
ಅನಂತರ ಉಳಿದ ಅವನ ಸಹೋದರರು
    ಇಸ್ರೇಲ್ ಜನರ ಬಳಿಗೆ ತಿರುಗಿ ಬರುವರು.
ಆಗ ಇಸ್ರೇಲರನ್ನು ಆಳುವಾತನು ಯೆಹೋವನ ಶಕ್ತಿಯಲ್ಲಿಯೂ
    ತನ್ನ ದೇವರಾದ ಯೆಹೋವನ ಹೆಸರಿನಲ್ಲಿಯೂ ನಿಂತು ತನ್ನ ಮಂದೆಗೆ ಆಹಾರವನ್ನೀಯುವನು.
ಆತನ ಮಹತ್ತು ಭೂಮಿಯ ಕಟ್ಟಕಡೆಗೆ ಪ್ರಸರಿಸುವದರಿಂದ
    ಅವರು ಸಮಾಧಾನದಿಂದ ವಾಸಿಸುವರು.
    ಆಗ ಶಾಂತಿ ನೆಲೆಸುವದು.

ಹೌದು, ಅಶ್ಶೂರದ ಸೈನ್ಯವು ನಮ್ಮ ದೇಶಕ್ಕೆ ಬಂದು
    ನಮ್ಮ ಮಹಾ ಕಟ್ಟಡಗಳನ್ನು ತುಳಿದುಹಾಕುವರು.
ಆದರೆ ಇಸ್ರೇಲನ್ನು ಆಳುವಾತನು ಏಳು ಕುರುಬರನ್ನೂ
    ಎಂಟು ನಾಯಕರನ್ನೂ ಆರಿಸುವನು.
ಅವರು ತಮ್ಮ ಖಡ್ಗಗಳನ್ನು ಉಪಯೋಗಿಸಿ ಅಶ್ಶೂರದವರನ್ನು ಆಳುವರು.
    ಅವರು ನಿಮ್ರೋದನ ದೇಶವನ್ನು ಆಳುವರು.
    ಕೈಯಲ್ಲಿ ಖಡ್ಗವನ್ನು ಹಿಡಿದುಕೊಂಡು ಆ ಜನರನ್ನು ಆಳುವರು.
ಆದರೆ ಇಸ್ರೇಲಿನ ರಾಜನು ಅಶ್ಶೂರದವರಿಂದ ನಮ್ಮನ್ನು ರಕ್ಷಿಸುವನು.
    ಅವರು ನಮ್ಮ ದೇಶದೊಳಕ್ಕೆ ಬಂದು ನಮ್ಮ ಪ್ರದೇಶವನ್ನು ತುಳಿದು ಹಾಳುಮಾಡುವಾಗ ನಾವು ರಕ್ಷಿಸಲ್ಪಡುವೆವು.
ಆದರೆ ಜನಾಂಗಗಳಲ್ಲಿ ಚದರಿರುವ ಇಸ್ರೇಲಿನ ಅಳಿದುಳಿದವರು
    ಯೆಹೋವನಿಂದ ಹೊರಡುವ ಮಂಜಿನಂತಿರುವರು.
    ಅದು ಯಾರನ್ನೂ ಕಾಯುವದಿಲ್ಲ.
ಅವರು ಹುಲ್ಲಿನ ಮೇಲೆ ಬಿದ್ದಿರುವ ಮಳೆಯಂತಿರುವರು.
    ಆ ಮಳೆಯು ಯಾರನ್ನೂ ಕಾಯುವದಿಲ್ಲ.
ಆದರೆ ಜನಾಂಗಗಳಲ್ಲಿ ಚದರಿರುವ
    ಯಾಕೋಬನ ವಂಶದ ಅಳಿದುಳಿದವರು,
ಕಾಡಿನಲ್ಲಿರುವ ಪ್ರಾಣಿಗಳಲ್ಲಿ ಸಿಂಹವು ಹೇಗೆ ಇರುವದೋ, ಹಾಗೆಯೇ ಇರುವರು.
    ಕುರಿಗಳ ಹಿಂಡಿನ ಮಧ್ಯೆಯಿರುವ ಪ್ರಾಯದ ಸಿಂಹದಂತಿರುವರು.
ಅದು ತನಗೆ
    ಇಷ್ಟ ಬಂದಂತೆ ತಿರುಗಾಡುವದು.
ಅದು ಒಂದು ಪ್ರಾಣಿಯನ್ನು ಹಿಡಿದರೆ
    ಅದನ್ನು ಬಿಡಿಸಲು ಯಾರಿಂದಲೂ ಸಾಧ್ಯವಿಲ್ಲ.
    ಜನಶೇಷವು ಅದರಂತಿರುವದು.
ನೀನು ನಿನ್ನ ವೈರಿಗಳ ಮೇಲೆ ಕೈ ಎತ್ತಿ
    ಅವರನ್ನು ನಾಶಮಾಡುವೆ.

ಜನರು ಯೆಹೋವನನ್ನು ಅವಲಂಬಿಸುವರು

10 ಯೆಹೋವನು ಹೇಳುವುದೇನೆಂದರೆ,
“ಆ ಸಮಯದಲ್ಲಿ ನಿನ್ನ ಕುದುರೆಗಳನ್ನು ನಾನು ತೆಗೆದುಬಿಡುವೆನು.
    ನಿನ್ನ ರಥಗಳನ್ನು ನಾಶಮಾಡುವೆನು.
11 ನಿನ್ನ ದೇಶದಲ್ಲಿರುವ ಪಟ್ಟಣಗಳನ್ನು ಹಾಳುಮಾಡುವೆನು.
    ನಿನ್ನ ಕೋಟೆಗಳನ್ನೆಲ್ಲಾ ನಾಶಮಾಡುವೆನು.
12 ನೀನು ಮಾಟಮಂತ್ರಗಳನ್ನು ಇನ್ನು ಮುಂದೆ ಮಾಡದಿರುವೆ.
    ಭವಿಷ್ಯ ಮತ್ತು ಕಣಿ ಹೇಳುವ ಜನರು ಇನ್ನು ಮುಂದೆ ನಿನ್ನಲ್ಲಿ ಇರುವುದಿಲ್ಲ.
13 ನಿನ್ನ ವಿಗ್ರಹಗಳನ್ನೂ ಕಲ್ಲುಕಂಬಗಳನ್ನೂ ಒಡೆದು ನಾಶಮಾಡುವೆನು.
    ನಿನ್ನ ಕೈಗಳು ಮಾಡಿದ ವಸ್ತುಗಳನ್ನು ನೀನು ಪೂಜಿಸುವುದಿಲ್ಲ.
14 ನಾನು ನಿನ್ನ ಅಶೇರ ಸ್ತಂಭಗಳನ್ನೂ
    ಸುಳ್ಳು ದೇವರುಗಳನ್ನೂ ನಾಶಮಾಡುವೆನು.
15 ಕೆಲವು ಜನಾಂಗಗಳು ನನ್ನ ಮಾತಿಗೆ ಕಿವಿಗೊಡುವುದಿಲ್ಲ.
    ಆಗ ನಾನು ನನ್ನ ಕೋಪವನ್ನು ಪ್ರದರ್ಶಿಸಿ ಮುಯ್ಯಿತೀರಿಸುವೆನು.”