ವಿಮೋಚನಕಾಂಡ 19:1-34:33
Kannada Holy Bible: Easy-to-Read Version
ಇಸ್ರೇಲರ ಜೊತೆ ದೇವರ ಒಡಂಬಡಿಕೆ
19 ಇಸ್ರೇಲರು ಈಜಿಪ್ಟಿನಿಂದ ಹೊರಟ ಮೂರನೆಯ ತಿಂಗಳಲ್ಲಿ ಸೀನಾಯ್ ಮರುಭೂಮಿಯನ್ನು ತಲುಪಿದರು. 2 ಜನರು ರೆಫೀದೀಮನ್ನು ಬಿಟ್ಟು ಸೀನಾಯ್ ಮರುಭೂಮಿಗೆ ಬಂದಿದ್ದರು. ಅಲ್ಲಿ ಅವರು ಬೆಟ್ಟದ ಬಳಿ ತಂಗಿದರು. 3 ಆಗ ಮೋಶೆ ಬೆಟ್ಟವನ್ನೇರಿ ಯೆಹೋವನ ಸನ್ನಿಧಿಗೆ ಹೋದನು. ಮೋಶೆಯು ಬೆಟ್ಟದ ಮೇಲೆ ಇದ್ದಾಗ ಯೆಹೋವನು ಅವನಿಗೆ, “ಯಾಕೋಬನ ಮಹಾ ಕುಟುಂಬವಾದ ಇಸ್ರೇಲರಿಗೆ ಈ ಸಂಗತಿಗಳನ್ನು ಹೇಳು: 4 ‘ನಾನು ನನ್ನ ವೈರಿಗಳಿಗೆ ಮಾಡುವ ಸಂಗತಿಗಳನ್ನು ನೀವು ನೋಡಿದ್ದೀರಿ. ನಾನು ಈಜಿಪ್ಟಿನವರಿಗೆ ಏನು ಮಾಡಿದೆನೆಂದು ನೀವು ನೋಡಿದಿರಿ. ಹದ್ದು ತನ್ನ ಮರಿಗಳನ್ನು ಹೊತ್ತುಕೊಂಡು ಬರುವಂತೆ ನಾನು ನಿಮ್ಮನ್ನು ಈಜಿಪ್ಟಿನಿಂದ ಇಲ್ಲಿಗೆ ಕರೆದುಕೊಂಡು ಬಂದದ್ದನ್ನು ನೀವು ನೋಡಿದಿರಿ. 5 ಆದ್ದರಿಂದ ನನ್ನ ಆಜ್ಞೆಗಳಿಗೆ ವಿಧೇಯರಾಗಬೇಕೆಂದು ನಾನು ನಿಮಗೆ ಹೇಳುತ್ತೇನೆ. ನನ್ನ ಒಡಂಬಡಿಕೆಯನ್ನು ಕೈಕೊಂಡು ನಡೆಯಿರಿ. ಆಗ ನೀವು ನನಗೆ ವಿಶೇಷವಾದ ಜನರಾಗುವಿರಿ. ಈ ಲೋಕವೆಲ್ಲಾ ನನ್ನದೇ. ಆದರೆ ನಾನು ನಿಮ್ಮನ್ನು ನನ್ನ ಸ್ವಂತ ಜನಾಂಗವನ್ನಾಗಿ ಆರಿಸಿಕೊಳ್ಳುತ್ತಿದ್ದೇನೆ. 6 ನೀವು ಯಾಜಕರ ರಾಜ್ಯ’ ಎಂಬ ವಿಶೇಷವಾದ ಜನಾಂಗವಾಗುವಿರಿ. ಮೋಶೆಯೇ, ನಾನು ನಿನಗೆ ಹೇಳಿದ ಸಂಗತಿಗಳನ್ನು ನೀನು ಇಸ್ರೇಲರಿಗೆ ಹೇಳಲೇಬೇಕು” ಎಂದನು.
7 ಆದ್ದರಿಂದ ಮೋಶೆ ಬೆಟ್ಟದಿಂದಿಳಿದು ಬಂದು ಜನರ ಹಿರಿಯರನ್ನು ಒಟ್ಟಾಗಿ ಕರೆಸಿದನು. ಯೆಹೋವನು ಹೇಳಬೇಕೆಂದು ಆಜ್ಞಾಪಿಸಿದ ಸಂಗತಿಗಳನ್ನೆಲ್ಲಾ ಮೋಶೆಯು ಹಿರಿಯರಿಗೆ ಹೇಳಿದನು. 8 ಜನರೆಲ್ಲರೂ ಒಟ್ಟಾಗಿ ಮಾತಾಡಿದರು. “ಯೆಹೋವನು ಹೇಳುವ ಪ್ರತಿಯೊಂದಕ್ಕೂ ನಾವು ವಿಧೇಯರಾಗುವೆವು” ಎಂದು ಅವರು ಅರಿಕೆಮಾಡಿದರು.
ಬಳಿಕ ಮೋಶೆಯು ತಿರುಗಿ ಬೆಟ್ಟವನ್ನೇರಿ ಯೆಹೋವನ ಸನ್ನಿಧಿಗೆ ಹೋಗಿ ಜನರ ಪ್ರತಿಕ್ರಿಯೆಯನ್ನು ದೇವರಿಗೆ ತಿಳಿಸಿದನು. 9 ಯೆಹೋವನು ಮೋಶೆಗೆ, “ನಾನು ಕಾರ್ಮುಗಿಲಲ್ಲಿ ನಿನ್ನ ಬಳಿಗೆ ಬಂದು ಜನರೆಲ್ಲರಿಗೂ ಕೇಳುವಂತೆ ನಿನ್ನೊಡನೆ ಮಾತಾಡುವೆನು. ನೀನು ಹೇಳುವುದನ್ನು ಜನರು ಯಾವಾಗಲೂ ನಂಬಲು ಇದು ಸಹಾಯಕವಾಗುವುದು” ಎಂದು ಹೇಳಿದನು.
ಆಗ ಮೋಶೆಯು ಜನರು ಹೇಳಿದ್ದನ್ನೆಲ್ಲಾ ದೇವರಿಗೆ ಅರಿಕೆಮಾಡಿದನು.
10 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ, “ಈ ದಿನ ಮತ್ತು ನಾಳೆ ನೀನು ಜನರನ್ನು ಒಂದು ವಿಶೇಷ ಸಂದರ್ಶನಕ್ಕಾಗಿ ಸಿದ್ಧಪಡಿಸಬೇಕು. ಜನರು ತಮ್ಮ ಬಟ್ಟೆಗಳನ್ನು ತೊಳೆದುಕೊಂಡು 11 ಮೂರನೆಯ ದಿನದಲ್ಲಿ ನನಗಾಗಿ ಸಿದ್ಧರಾಗಬೇಕು. ಮೂರನೆಯ ದಿನದಲ್ಲಿ ನಾನು ಸೀನಾಯ್ ಬೆಟ್ಟದ ಮೇಲೆ ಇಳಿದುಬರುವೆನು; ಜನರೆಲ್ಲರೂ ನನ್ನನ್ನು ನೋಡುವರು. 12-13 ಆದರೆ ಬೆಟ್ಟದಿಂದ ದೂರವಿರಬೇಕೆಂದು ನೀನು ಜನರಿಗೆ ಹೇಳಬೇಕು. ಒಂದು ಗೆರೆಯನ್ನು ಹಾಕಿ ಆ ಗೆರೆಯನ್ನು ದಾಟಬಾರದೆಂದು ಅವರಿಗೆ ತಿಳಿಸು. ಯಾವ ವ್ಯಕ್ತಿಯಾಗಲಿ ಬೆಟ್ಟವನ್ನು ಮುಟ್ಟಿದರೆ ಅವನನ್ನು ಕಲ್ಲುಗಳಿಂದಾಗಲಿ ಬಾಣಗಳಿಂದಾಗಲಿ ಕೊಲ್ಲಬೇಕು. ಯಾವ ಪ್ರಾಣಿಯಾದರೂ ಬೆಟ್ಟವನ್ನು ಮುಟ್ಟಿದರೆ ಅದನ್ನು ಕೊಲ್ಲಬೇಕು. ಯಾರೂ ಬೆಟ್ಟವನ್ನು ಮುಟ್ಟಕೂಡದು. ಕೊಂಬಿನ ತುತ್ತೂರಿ ಊದಿದಾಗ ಜನರು ಬೆಟ್ಟದ ಸಮೀಪಕ್ಕೆ ಬರಬೇಕು ಎಂದು ಹೇಳು” ಎಂದನು.
14 ಮೋಶೆ ಬೆಟ್ಟದಿಂದಿಳಿದು ಹೋದನು. ಅವನು ಜನರ ಬಳಿಗೆ ಹೋಗಿ ವಿಶೇಷ ಸಂದರ್ಶನಕ್ಕಾಗಿ ಅವರನ್ನು ಸಿದ್ಧ ಮಾಡಿದನು. ಜನರು ತಮ್ಮ ಬಟ್ಟೆಗಳನ್ನು ತೊಳೆದುಕೊಂಡರು.
15 ಆಗ ಮೋಶೆ ಜನರಿಗೆ, “ಮೂರನೆಯ ದಿನದಲ್ಲಿ ಯೆಹೋವನೊಡನೆ ಒಂದು ವಿಶೇಷ ಸಂದರ್ಶನಕ್ಕಾಗಿ ಸಿದ್ಧರಾಗಿರಿ. ಅಲ್ಲಿಯವರೆಗೆ, ಪುರುಷರು ಸ್ತ್ರೀಯರ ಸಂಗ ಮಾಡಬಾರದು” ಎಂದು ಹೇಳಿದನು.
16 ಮೂರನೆಯ ದಿನದ ಮುಂಜಾನೆಯಲ್ಲಿ ಆ ಬೆಟ್ಟದ ಮೇಲೆ ಗುಡುಗು ಮಿಂಚುಗಳು ಉಂಟಾದವು. ಒಂದು ಕಾರ್ಮುಗಿಲು ಬೆಟ್ಟದ ಮೇಲೆ ಇಳಿದುಬಂತು; ತುತ್ತೂರಿಯ ಮಹಾ ಧ್ವನಿಯು ಕೇಳಿಸಿತು. ಪಾಳೆಯದಲ್ಲಿದ್ದ ಜನರೆಲ್ಲರೂ ಭಯಭೀತರಾದರು. 17 ಆಗ ಮೋಶೆ ದೇವರನ್ನು ಸಂಧಿಸುವುದಕ್ಕಾಗಿ ಜನರನ್ನು ಪಾಳೆಯದಿಂದ ಹೊರಗೆ ನಡಿಸಿ, ಬೆಟ್ಟದ ಬಳಿಗೆ ಕರೆದುಕೊಂಡು ಬಂದನು. 18 ಸೀನಾಯಿ ಬೆಟ್ಟವು ಹೊಗೆಯಿಂದ ಕವಿದುಕೊಂಡಿತು. ಕುಲುಮೆಯಿಂದ ಬರುವ ಹೊಗೆಯಂತೆ, ಬೆಟ್ಟದಿಂದ ಹೊಗೆಯು ಮೇಲಕ್ಕೇರಿತು. ಯೆಹೋವನು ಬೆಂಕಿಯಲ್ಲಿ ಬೆಟ್ಟದ ಮೇಲೆ ಇಳಿದು ಬಂದದ್ದರಿಂದ ಇದು ಸಂಭವಿಸಿತು. ಇಡೀ ಬೆಟ್ಟ ನಡುಗಲಾರಂಭಿಸಿತು. 19 ತುತ್ತೂರಿಯ ಧ್ವನಿ ಹೆಚ್ಚುಹೆಚ್ಚಾಯಿತು. ಮೋಶೆಯು ದೇವರೊಂದಿಗೆ ಮಾತಾಡಿದಾಗಲೆಲ್ಲಾ ದೇವರು ಗುಡುಗಿನಂತಿದ್ದ ಧ್ವನಿಯಲ್ಲಿ ಅವನಿಗೆ ಉತ್ತರಕೊಟ್ಟನು.
20 ಯೆಹೋವನು ಸೀನಾಯಿ ಬೆಟ್ಟಕ್ಕೆ ಇಳಿದುಬಂದನು. ಬಳಿಕ ಯೆಹೋವನು ಮೋಶೆಯನ್ನು ಕರೆದು ಬೆಟ್ಟದ ತುದಿಗೆ ಬರಲು ಹೇಳಿದನು. ಆದ್ದರಿಂದ ಮೋಶೆ ಮೇಲಕ್ಕೆ ಹೋದನು.
21 ಯೆಹೋವನು ಮೋಶೆಗೆ, “ಕೆಳಗಿಳಿದು ಹೋಗಿ, ಜನರು ನನ್ನನ್ನು ನೋಡಲು ನನ್ನ ಹತ್ತಿರ ಬರಬಾರದೆಂದು ಅವರನ್ನು ಎಚ್ಚರಿಸು. ಇಲ್ಲವಾದರೆ ಅವರಲ್ಲಿ ಅನೇಕರು ಸಾಯುವರು. 22 ಮಾತ್ರವಲ್ಲದೆ ನನ್ನ ಸಮೀಪಕ್ಕೆ ಬರುವ ಯಾಜಕರು ಈ ವಿಶೇಷ ಸಂದರ್ಶನಕ್ಕಾಗಿ ತಮ್ಮನ್ನು ಸಿದ್ಧಪಡಿಸಿಕೊಳ್ಳಬೇಕೆಂದು ಹೇಳು. ಇಲ್ಲವಾದರೆ ನಾನು ಅವರನ್ನೂ ಶಿಕ್ಷಿಸುವೆನು” ಅಂದನು.
23 ಮೋಶೆಯು ಯೆಹೋವನಿಗೆ, “ಜನರು ಬೆಟ್ಟವನ್ನೇರಿ ಬರಲಾರರು. ಬೆಟ್ಟದ ಸುತ್ತಲೂ ಮೇರೆಯನ್ನು ಹಾಕಿ ಅದನ್ನು ಪವಿತ್ರ ಸ್ಧಳವನ್ನಾಗಿ ಪ್ರತ್ಯೇಕಿಸಬೇಕೆಂದು ನೀನೇ ನಮಗೆ ಎಚ್ಚರಿಕೆ ನೀಡಿದೆಯಲ್ಲಾ!” ಎಂದು ಹೇಳಿದನು.
24 ಯೆಹೋವನು ಅವನಿಗೆ, “ಜನರ ಬಳಿಗೆ ಇಳಿದುಹೋಗಿ ಆರೋನನನ್ನು ಕರೆದುಕೊಂಡು ಬಾ. ಆದರೆ ಯಾಜಕರಾಗಲಿ ಜನರಾಗಲಿ ಬರಕೂಡದು. ಅವರು ನನ್ನ ಸಮೀಪಕ್ಕೆ ಬಂದರೆ, ನಾನು ಅವರನ್ನು ದಂಡಿಸುವೆನು” ಎಂದು ಹೇಳಿದನು.
25 ಆದ್ದರಿಂದ ಮೋಶೆ ಜನರ ಬಳಿಗೆ ಇಳಿದುಹೋಗಿ ಈ ಸಂಗತಿಗಳನ್ನು ಅವರಿಗೆ ತಿಳಿಸಿದನು.
ದಶಾಜ್ಞೆಗಳು
20 ಬಳಿಕ ಯೆಹೋವನು ಈ ದಶಾಜ್ಞೆಗಳನ್ನು ಅವರಿಗೆ ಕೊಟ್ಟನು:
2 “ಯೆಹೋವನೆಂಬ ನಾನೇ ನಿಮ್ಮ ದೇವರು. ಈಜಿಪ್ಟಿನಲ್ಲಿ ಗುಲಾಮರಾಗಿದ್ದ ನಿಮ್ಮನ್ನು ಆ ದೇಶದಿಂದ ಹೊರಗೆ ನಡಿಸಿದವನು ನಾನೇ.
3 “ನನ್ನನ್ನಲ್ಲದೆ ಬೇರೆ ಯಾವ ದೇವರುಗಳನ್ನೂ ನೀವು ಆರಾಧಿಸಬಾರದು.
4 “ನೀವು ಯಾವ ವಿಗ್ರಹಗಳನ್ನೂ ಮಾಡಬಾರದು. ಆಕಾಶದಲ್ಲಿಯಾಗಲಿ ಭೂಮಿಯ ಮೇಲಾಗಲಿ ನೀರಿನಲ್ಲಾಗಲಿ ಇರುವ ಯಾವುದೇ ವಸ್ತುವಿನ ರೂಪವನ್ನು ನೀವು ಮಾಡಿಕೊಳ್ಳಬಾರದು. ಅವುಗಳಿಗೆ ಅಡ್ಡಬೀಳಲೂ ಬಾರದು ಪೂಜಿಸಲೂ ಬಾರದು. 5 ನಿಮ್ಮ ದೇವರಾದ ಯೆಹೋವನೆಂಬ ನನಗೆ ಸಲ್ಲತಕ್ಕ ಗೌರವವನ್ನು ನೀವು ಬೇರೆಯವರಿಗೆ ಸಲ್ಲಿಸಿದರೆ ನಾನು ನಿಮ್ಮನ್ನು ದ್ವೇಷಿಸುತ್ತೇನೆ. ನನಗೆ ವಿರುದ್ಧವಾಗಿ ಪಾಪಮಾಡುವವರ ದೋಷಫಲವನ್ನು ಅವರ ಮೂರು ನಾಲ್ಕು ತಲೆಮಾರುಗಳವರೆಗೂ ಬರಮಾಡುವೆನು. 6 ಆದರೆ ನನ್ನ ಆಜ್ಞೆಗಳಿಗೆ ವಿಧೇಯರಾಗಿರುವವರಿಗೆ ಅವರ ಸಾವಿರ ತಲೆಮಾರುಗಳವರೆಗೂ ದಯೆತೋರಿಸುವೆನು.
7 “ನಿಮ್ಮ ದೇವರಾದ ಯೆಹೋವನ ಹೆಸರನ್ನು ಅಯೋಗ್ಯ ಕಾರ್ಯಕ್ಕಾಗಿ ಉಪಯೋಗಿಸಬಾರದು. ಯೆಹೋವನು ತನ್ನ ಹೆಸರನ್ನು ಅಯೋಗ್ಯಕಾರ್ಯಕ್ಕಾಗಿ ಉಪಯೋಗಿಸುವವನನ್ನು ಶಿಕ್ಷಿಸದೆ ಬಿಡುವುದಿಲ್ಲ.
8 “ನೀವು ಸಬ್ಬತ್ ದಿನವನ್ನು ದೇವರ ದಿನವೆಂದು ಜ್ಞಾಪಕದಲ್ಲಿಟ್ಟುಕೊಂಡು ಅದನ್ನು ಆಚರಿಸಿರಿ. 9 ವಾರದ ಆರು ದಿನಗಳಲ್ಲಿ ಕೆಲಸಮಾಡಿರಿ. 10 ಆದರೆ ಏಳನೆ ದಿನವು ನಿಮ್ಮ ದೇವರಾದ ಯೆಹೋವನನ್ನು ಸನ್ಮಾನಿಸಲು ಮೀಸಲಾಗಿರುವ ವಿಶ್ರಾಂತಿ ದಿನವಾಗಿದೆ. ಅಂದು ನೀವು ಯಾವ ಕೆಲಸವನ್ನೂ ಮಾಡಬಾರದು. ನೀವಾಗಲಿ ನಿಮ್ಮ ಗಂಡುಮಕ್ಕಳಾಗಲಿ ಹೆಣ್ಣುಮಕ್ಕಳಾಗಲಿ ಸೇವಕರಾಗಲಿ ಸೇವಕಿಯರಾಗಲಿ ನಿಮ್ಮ ಪಶುಗಳಾಗಲಿ ನಿಮ್ಮಲ್ಲಿರುವ ವಿದೇಶಿಯರಾಗಲಿ ಕೆಲಸ ಮಾಡಬಾರದು. 11 ಯಾಕೆಂದರೆ ಯೆಹೋವನು ಆರು ದಿನಗಳಲ್ಲಿ ಕೆಲಸ ಮಾಡಿ ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಸಮಸ್ತವನ್ನೂ ನಿರ್ಮಿಸಿ ಏಳನೆಯ ದಿನದಲ್ಲಿ ವಿಶ್ರಮಿಸಿದನು. ಆದ್ದರಿಂದ ಯೆಹೋವನು ಸಬ್ಬತ್ ದಿನವನ್ನು ಆಶೀರ್ವದಿಸಿ ಅದನ್ನು ತನ್ನ ದಿನವನ್ನಾಗಿ ಮಾಡಿದನು.
12 “ನೀವು ನಿಮ್ಮ ತಂದೆತಾಯಿಗಳನ್ನು ಸನ್ಮಾನಿಸಬೇಕು; ನೀವು ಸನ್ಮಾನಿಸಿದರೆ, ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ಬಹುಕಾಲ ಬಾಳುವಿರಿ.
13 “ನೀವು ಯಾರನ್ನೂ ಕೊಲೆ ಮಾಡಬಾರದು.
14 “ನೀವು ವ್ಯಭಿಚಾರ ಮಾಡಬಾರದು.
15 “ನೀವು ಕದಿಯಬಾರದು.
16 “ನೀವು ಬೇರೆಯವರ ಮೇಲೆ ಸುಳ್ಳುಸಾಕ್ಷಿ ಹೇಳಬಾರದು.[a]
17 “ನೀವು ನೆರೆಯವನ ಮನೆಯನ್ನು ಆಶಿಸಬಾರದು. ನೀವು ಮತ್ತೊಬ್ಬನ ಹೆಂಡತಿಯನ್ನಾಗಲಿ ಸೇವಕರನ್ನಾಗಲಿ ದಾಸಿಯರನ್ನಾಗಲಿ ಪಶುಗಳನ್ನಾಗಲಿ ಆಶಿಸಬಾರದು.”
ಜನರು ದೇವರಿಗೆ ಭಯಪಟ್ಟಿದು
18 ಆಗ ಅಲ್ಲಿದ್ದ ಜನರು ಗುಡುಗಿನ ಧ್ವನಿಯನ್ನು ಕೇಳಿದರು; ಬೆಟ್ಟದ ಮೇಲೆ ಮಿಂಚುಗಳನ್ನು ನೋಡಿದರು; ಹೊಗೆಯು ಬೆಟ್ಟದಿಂದ ಏರುವುದನ್ನು ಕಂಡರು. ಅವರೆಲ್ಲರೂ ಭಯದಿಂದ ನಡುಗಿದರು; ಬೆಟ್ಟದಿಂದ ದೂರದಲ್ಲಿದ್ದುಕೊಂಡು ಅವುಗಳನ್ನೆಲ್ಲಾ ಗಮನಿಸಿದರು. 19 ಆಗ ಜನರು ಮೋಶೆಗೆ, “ನೀನು ನಮ್ಮೊಡನೆ ಮಾತಾಡು; ನಾವು ನಿನಗೆ ಕಿವಿಗೊಡುವೆವು. ಆದರೆ ಯೆಹೋವನು ನಮ್ಮೊಡನೆ ಮಾತಾಡದಿರಲಿ. ಇಲ್ಲವಾದರೆ ನಾವು ಸಾಯುವೆವು” ಅಂದರು.
20 ಆಗ ಮೋಶೆಯು ಜನರಿಗೆ, “ಭಯಪಡಬೇಡಿರಿ, ಯೆಹೋವನು ನಿಮ್ಮನ್ನು ಪರೀಕ್ಷಿಸಲು ಬಂದಿದ್ದಾನೆ. ನೀವು ಆತನಲ್ಲಿ ಭಕ್ತಿಯುಳ್ಳವರಾಗಿರಬೇಕೆಂದು ಆತನು ಬಯಸುತ್ತಾನೆ. ಆಗ ನೀವು ಪಾಪ ಮಾಡುವುದಿಲ್ಲ” ಎಂದು ಹೇಳಿದನು.
21 ದೇವರ ಸನ್ನಿಧಾನಕ್ಕೆ ಹೋಗಲು ಮೋಶೆಯು ಕಾರ್ಮುಗಿಲಿನೊಳಗೆ ಹೋದಾಗ, ಜನರು ಬೆಟ್ಟದಿಂದ ದೂರ ನಿಂತುಕೊಂಡರು. 22 ಆಗ ಯೆಹೋವನು ಈ ಸಂಗತಿಗಳನ್ನು ಇಸ್ರೇಲರಿಗೆ ತಿಳಿಸಲು ಮೋಶೆಗೆ ಆಜ್ಞಾಪಿಸಿದನು: “ನಾನು ಪರಲೋಕದಿಂದ ನಿಮ್ಮ ಸಂಗಡ ಮಾತಾಡಿದ್ದನ್ನು ನೀವು ನೋಡಿದ್ದೀರಿ. 23 ಆದ್ದರಿಂದ ನನ್ನೊಡನೆ ಸ್ಪರ್ಧಿಸಲು, ನೀವು ಬೆಳ್ಳಿಬಂಗಾರಗಳಿಂದ ಮೂರ್ತಿಗಳನ್ನು ಮಾಡಿಕೊಳ್ಳಬಾರದು. ಈ ಸುಳ್ಳು ದೇವರುಗಳನ್ನು ನೀವು ಮಾಡಿಕೊಳ್ಳಲೇಬಾರದು.”
24 “ಒಂದು ವಿಶೇಷ ಯಜ್ಞವೇದಿಕೆಯನ್ನು ನನಗೋಸ್ಕರ ಮಣ್ಣಿನಿಂದ ಕಟ್ಟಿರಿ. ಈ ಯಜ್ಞವೇದಿಕೆಯ ಮೇಲೆ ಕುರಿದನಗಳನ್ನು ನನಗೆ ಸರ್ವಾಂಗಹೋಮಗಳನ್ನಾಗಿಯೂ ಸಮಾಧಾನಯಜ್ಞಗಳನ್ನಾಗಿಯೂ ಸಮರ್ಪಿಸಿರಿ. ನಾನು ನಿಮಗೆ ಹೇಳುವ ಪ್ರತಿಯೊಂದು ಸ್ಥಳದಲ್ಲಿಯೂ ನನ್ನನ್ನು ಜ್ಞಾಪಕಮಾಡಿಕೊಳ್ಳಲು ಹೀಗೆಯೇ ಮಾಡಿರಿ. ಆಗ ನಾನು ಬಂದು ನಿಮ್ಮನ್ನು ಆಶೀರ್ವದಿಸುವೆನು. 25 ನೀವು ಯಜ್ಞವೇದಿಕೆಯನ್ನು ಕಲ್ಲುಗಳಿಂದ ಕಟ್ಟಬೇಕೆಂದಿದ್ದರೆ, ಉಳಿಯಿಂದ[b] ಕೆತ್ತಿದ ಕಲ್ಲುಗಳನ್ನು ಉಪಯೋಗಿಸಬೇಡಿರಿ. ಅಂಥ ಕಲ್ಲುಗಳನ್ನು ಉಪಯೋಗಿಸಿದರೆ, ಯಜ್ಞವೇದಿಕೆಯು ಅಪವಿತ್ರವಾಗುವುದು. 26 ಅಲ್ಲದೆ ಯಜ್ಞವೇದಿಕೆಯನ್ನು ಹತ್ತುವುದಕ್ಕೆ ಮೆಟ್ಟಲುಗಳನ್ನು ಮಾಡಬಾರದು. ಮೆಟ್ಟಲುಗಳಿದ್ದರೆ ಜನರು ತಲೆ ಎತ್ತಿ ಯಜ್ಞವೇದಿಕೆಯನ್ನು ನೋಡುವಾಗ ನಿಮ್ಮ ರಹಸ್ಯಾಂಗವು ಕಾಣಿಸೀತು.”
ಇತರ ಕಟ್ಟಳೆಗಳು ಮತ್ತು ಆಜ್ಞೆಗಳು
21 ಬಳಿಕ ದೇವರು ಮೋಶೆಗೆ ಹೇಳಿದ್ದೇನೆಂದರೆ, “ನೀನು ಜನರಿಗೆ ನೇಮಿಸಬೇಕಾದ ಇತರ ಕಟ್ಟಳೆಗಳು ಯಾವುವೆಂದರೆ:
2 “ನೀವು ಇಬ್ರಿಯ ಗುಲಾಮನನ್ನು ಕೊಂಡುಕೊಂಡರೆ, ಆ ಗುಲಾಮನು ಆರು ವರ್ಷಗಳವರೆಗೆ ಮಾತ್ರ ನಿಮ್ಮ ಸೇವೆಮಾಡುವನು. ಆರು ವರ್ಷಗಳ ನಂತರ, ಅವನು ಬಿಡುಗಡೆಯಾಗುವನು, ಅವನು ಏನೂ ಕೊಡಬೇಕಾಗಿರುವುದಿಲ್ಲ. 3 ಅವನು ನಿಮ್ಮ ಗುಲಾಮನಾಗುವಾಗ ಮದುವೆಯಾಗಿಲ್ಲದಿದ್ದರೆ, ಅವನು ಬಿಡುಗಡೆ ಹೊಂದುವಾಗಲೂ ಹೆಂಡತಿಯಿಲ್ಲದವನಾಗಿ ಹೋಗುವನು. ಆದರೆ ಅವನು ನಿಮ್ಮ ಗುಲಾಮನಾಗುವಾಗ ಮದುವೆಯಾಗಿದ್ದರೆ ಅವನು ಬಿಡುಗಡೆ ಹೊಂದುವಾಗ ತನ್ನ ಹೆಂಡತಿಯನ್ನು ಕರೆದುಕೊಂಡು ಹೋಗುವನು. 4 ಗುಲಾಮನು ಮದುವೆಯಾಗಿಲ್ಲದಿದ್ದರೆ, ಅವನ ಯಜಮಾನನು ಅವನಿಗೆ ಮದುವೆ ಮಾಡಿಸಬಹುದು. ಆ ಸ್ತ್ರೀಯು ಮಕ್ಕಳನ್ನು ಹೆತ್ತರೆ, ಆಕೆಯೂ ಆಕೆಯ ಮಕ್ಕಳೂ ಯಜಮಾನನ ಸ್ವತ್ತಾಗುವರು. ಗುಲಾಮನು ತನ್ನ ಸೇವಾ ವರ್ಷಗಳನ್ನು ಮುಗಿಸಿದ ತರುವಾಯ ಬಿಡುಗಡೆ ಹೊಂದುವನು.
5 “ಆದರೆ ಒಂದುವೇಳೆ ಆ ಗುಲಾಮನು ತನ್ನ ಯಜಮಾನನ ಸಂಗಡವಿರಲು ದೃಢವಾಗಿ ಬಯಸಿದರೆ ಅವನು, ‘ನಾನು ನನ್ನ ಯಜಮಾನನನ್ನು ಪ್ರೀತಿಸುತ್ತೇನೆ. ನಾನು ನನ್ನ ಹೆಂಡತಿಯನ್ನೂ ಮಕ್ಕಳನ್ನೂ ಪ್ರೀತಿಸುತ್ತೇನೆ. ನಾನು ಬಿಡುಗಡೆ ಹೊಂದದೆ ಇಲ್ಲೇ ಇರುವೆನು’ ಎಂದು ಹೇಳಬೇಕು. 6 ಹೀಗಾದರೆ ಯಜಮಾನನು ಆ ಗುಲಾಮನನ್ನು ದೇವರ ಸನ್ನಿಧಿಗೆ[c] ಕರೆದುಕೊಂಡು ಬರುವನು. ಯಜಮಾನನು ಗುಲಾಮನನ್ನು ಬಾಗಿಲ ಬಳಿಗೆ ಅಥವಾ ಬಾಗಿಲಿನ ಮರದ ನಿಲುವುಪಟ್ಟಿಗಳ ಬಳಿಗೆ ಕರೆದುಕೊಂಡು ಬರುವನು. ಯಜಮಾನನು ಗುಲಾಮನ ಕಿವಿಗೆ ಚೂಪಾದ ಸಲಾಕೆಯಿಂದ ರಂಧ್ರ ಮಾಡುವನು. ಆಗ ಗುಲಾಮನು ತನ್ನ ಜೀವಮಾನಪರ್ಯಂತ ಆ ಯಜಮಾನನಿಗೆ ಸೇವೆ ಮಾಡುವನು.
7 “ಒಬ್ಬನು ತನ್ನ ಮಗಳನ್ನು ಗುಲಾಮಳನ್ನಾಗಿ ಮಾರಲು ತೀರ್ಮಾನಿಸಿದರೆ, ಆಕೆಯನ್ನು ಬಿಡುಗಡೆಗೊಳಿಸುವ ನಿಯಮಗಳು ಗುಲಾಮರಾದ ಪುರುಷರನ್ನು ಬಿಡುಗಡೆಗೊಳಿಸುವ ನಿಯಮಗಳ ಪ್ರಕಾರ ಇರುವುದಿಲ್ಲ. 8 ಯಜಮಾನನು ತನಗಾಗಿ ಆರಿಸಿಕೊಂಡ ಗುಲಾಮಳನ್ನು ಇಷ್ಟಪಡದಿದ್ದರೆ, ಅವಳನ್ನು ಬಿಡುಗಡೆ ಮಾಡಬಹುದು. (ಅವಳ ತಂದೆಗೆ ಅವಳನ್ನು ಮಾರಬಹುದು.) ಅವಳನ್ನು ವಿದೇಶಿಯರಿಗೆ ಮಾರುವ ಹಕ್ಕನ್ನು ಯಜಮಾನನು ಕಳೆದುಕೊಳ್ಳುತ್ತಾನೆ; ಯಾಕೆಂದರೆ ಆಕೆಯಲ್ಲಿ ಅವನಿಗಿದ್ದ ನಂಬಿಕೆಯು ಮುರಿದುಹೋಯಿತು. 9 ಯಜಮಾನನು ಗುಲಾಮಳನ್ನು ತನ್ನ ಸ್ವಂತ ಮಗನಿಗೆ ಮದುವೆ ಮಾಡಿಸುವುದಾಗಿ ವಾಗ್ದಾನ ಮಾಡಿದರೆ, ಅವಳನ್ನು ಗುಲಾಮಳನ್ನಾಗಿ ನೋಡಿಕೊಳ್ಳದೆ ಸೊಸೆಯಾಗಿ ನೋಡಿಕೊಳ್ಳಬೇಕು.
10 “ಯಜಮಾನನು ಇನ್ನೊಬ್ಬ ಸ್ತ್ರೀಯನ್ನು ಮದುವೆಯಾದರೆ, ಅವನು ತನ್ನ ಮೊದಲನೆಯ ಹೆಂಡತಿಗೆ ಅವನು ಕೊಡುವ ಆಹಾರ ಅಥವಾ ಬಟ್ಟೆಬರೆಗಳಲ್ಲಿ ಏನೂ ಕಡಿಮೆ ಮಾಡಬಾರದು; ಮದುವೆಯ ಮೂಲಕ ಆಕೆಯು ಯಾವ್ಯಾವ ವಸ್ತುಗಳನ್ನು ಹೊಂದಲು ಹಕ್ಕು ಪಡೆದಿರುತ್ತಾಳೊ ಅವೆಲ್ಲವನ್ನು ಅವನು ಆಕೆಗೆ ಕೊಡಬೇಕು. 11 ಅವನು ಆಕೆಗಾಗಿ ಈ ಮೂರು ಸಂಗತಿಗಳನ್ನು ಮಾಡಬೇಕು. ಇಲ್ಲವಾದರೆ ಅವಳು ಬಿಡುಗಡೆಯಾಗಿದ್ದಾಳೆ. ಅವಳು ಅವನಿಗೆ ಯಾವ ಸಾಲವನ್ನೂ ತೀರಿಸಬೇಕಾಗಿಲ್ಲ.
12 “ಒಬ್ಬನು ಮತ್ತೊಬ್ಬನನ್ನು ಹೊಡೆದು ಕೊಂದರೆ, ಅವನೂ ಕೊಲ್ಲಲ್ಪಡಬೇಕು. 13 ಆದರೆ ಕೊಲ್ಲಬೇಕೆಂಬ ಉದ್ದೇಶವಿಲ್ಲದೆ ಹೊಡೆದಾಗ ಸತ್ತುಹೋದರೆ ಅದು ದೇವರ ಸಂಕಲ್ಪವೆಂದು ಪರಿಗಣಿಸಬೇಕು. ನಾನು ನೇಮಿಸಲಿರುವ ಆಶ್ರಯಸ್ಥಳಗಳಿಗೆ ಹೊಡೆದವನು ಓಡಿಹೋಗಿ ಸುರಕ್ಷಿತವಾಗಿ ಬದುಕಲಿ. 14 ಆದರೆ ಒಬ್ಬನು ಕೋಪದಿಂದಾಗಲಿ ದ್ವೇಷದಿಂದಾಗಲಿ ಇನ್ನೊಬ್ಬನನ್ನು ಕೊಂದರೆ, ಆ ಕೊಲೆಗಾರನಿಗೆ ದಂಡನೆಯಾಗಬೇಕು. ನನ್ನ ಯಜ್ಞವೇದಿಕೆಯಿಂದ ಅವನನ್ನು ದೂರಕ್ಕೆ ತೆಗೆದುಕೊಂಡು ಹೋಗಿ ಕೊಲ್ಲಬೇಕು.
15 “ತಂದೆಯನ್ನಾಗಲಿ ತಾಯಿಯನ್ನಾಗಲಿ ಹೊಡೆಯುವವನನ್ನು ಕೊಲ್ಲಬೇಕು.
16 “ಯಾವನಾದರೂ ಮತ್ತೊಬ್ಬನನ್ನು ಕದ್ದು ಗುಲಾಮನನ್ನಾಗಿ ಮಾರಿದರೆ ಅಥವಾ ತನ್ನ ಗುಲಾಮನನ್ನಾಗಿ ಮಾಡಿಕೊಂಡರೆ ಅವನಿಗೆ ಮರಣಶಿಕ್ಷೆಯಾಗಬೇಕು.
17 “ತಂದೆಯನ್ನಾಗಲಿ ತಾಯಿಯನ್ನಾಗಲಿ ಶಪಿಸುವವನನ್ನೂ ಕೊಲ್ಲಬೇಕು.
18 “ಇಬ್ಬರು ಜಗಳವಾಡುತ್ತಿರುವಾಗ ಒಬ್ಬನನ್ನು ಕಲ್ಲಿನಿಂದಾಗಲಿ ಮುಷ್ಟಿಯಿಂದಾಗಲಿ ಹೊಡೆದಾಗ, ಪೆಟ್ಟಾದ ಮನುಷ್ಯನು ಸಾಯದಿದ್ದರೆ, ಹೊಡೆದವನನ್ನು ಕೊಲ್ಲಬಾರದು. 19 ಗಾಯಗೊಂಡವನು ಕೆಲವು ಕಾಲದವರೆಗೆ ಹಾಸಿಗೆಯಲ್ಲಿರಬೇಕಾದರೆ, ಬಳಿಕ ಅವನು ಎದ್ದು ಊರುಗೋಲಿನ ಸಹಾಯದಿಂದ ನಡೆಯಬಲ್ಲವನಾದರೆ, ಹೊಡೆದವನು ಅವನನ್ನು ಆರೈಕೆ ಮಾಡಬೇಕು. ಗಾಯಗೊಂಡವನು ಕೆಲಸಮಾಡಲಾರದೆ ಹೋದ ಸಮಯಕ್ಕೆ ಹೊಡೆದವನು ಹಣ ಕೊಡಬೇಕು; ಅವನು ಸಂಪೂರ್ಣ ವಾಸಿಯಾಗುವವರೆಗೆ ಆರೈಕೆ ಮಾಡಬೇಕು.
20 “ಕೆಲವು ಸಲ ಯಜಮಾನರು ಗುಲಾಮನನ್ನಾಗಲಿ ಗುಲಾಮಳನ್ನಾಗಲಿ ಹೊಡೆಯುತ್ತಾರೆ. ಹೊಡೆದಾಗ ಆ ವ್ಯಕ್ತಿಯು ಸತ್ತರೆ, ಯಜಮಾನನಿಗೆ ಶಿಕ್ಷೆಯಾಗಬೇಕು. 21 ಆದರೆ ಆ ವ್ಯಕ್ತಿಯು ಸಾಯದೆ ಕೆಲವು ದಿನಗಳ ನಂತರ ಗುಣವಾದರೆ ಯಜಮಾನನಿಗೆ ಶಿಕ್ಷೆಯಾಗಬಾರದು. ಯಾಕೆಂದರೆ ಯಜಮಾನನು ಹಣವನ್ನು ಕೊಟ್ಟು ಆ ವ್ಯಕ್ತಿಯನ್ನು ಕೊಂಡುಕೊಂಡಿದ್ದಾನೆ ಮತ್ತು ಆ ವ್ಯಕ್ತಿಯು ಅವನ ಸ್ವತ್ತಾಗಿದ್ದಾನೆ.
22 “ಇಬ್ಬರು ಜಗಳವಾಡುವಾಗ ಗರ್ಭಿಣೆ ಸ್ತ್ರೀಗೆ ಪೆಟ್ಟಾಗಿ ಗರ್ಭಸ್ರಾವವಾದರೆ ಅದಕ್ಕೆ ಕಾರಣನಾದ ವ್ಯಕ್ತಿಯು ಅವಳಿಗೆ ದಂಡ ಕೊಡಬೇಕು. ಅವನು ಎಷ್ಟು ದಂಡ ಕೊಡಬೇಕೆಂಬುದನ್ನು ಅವಳ ಗಂಡನು ನ್ಯಾಯಾಧಿಪತಿಗಳ ಸಹಾಯದಿಂದ ತೀರ್ಮಾನಿಸುವನು. 23 ಆದರೆ ಆ ಸ್ತ್ರೀಯು ತೀರಿಕೊಂಡರೆ ಅದಕ್ಕೆ ಕಾರಣನಾದವನಿಗೆ ಮರಣದಂಡನೆಯಾಗಬೇಕು. ನೀವು ಪ್ರಾಣಕ್ಕೆ ಪ್ರತಿಯಾಗಿ ಪ್ರಾಣವನ್ನು ಕೊಡಿಸಬೇಕು. 24 ಕಣ್ಣಿಗೆ ಪ್ರತಿಯಾಗಿ ಕಣ್ಣು, ಹಲ್ಲಿಗೆ ಪ್ರತಿಯಾಗಿ ಹಲ್ಲು, ಕೈಗೆ ಪ್ರತಿಯಾಗಿ ಕೈ, ಕಾಲಿಗೆ ಪ್ರತಿಯಾಗಿ ಕಾಲು, 25 ಬರೆಗೆ ಪ್ರತಿಯಾಗಿ ಬರೆ, ಗಾಯಕ್ಕೆ ಪ್ರತಿಯಾಗಿ ಗಾಯ, ಏಟಿಗೆ ಪ್ರತಿಯಾಗಿ ಏಟು, ಈ ಮೇರೆಗೆ ಪ್ರತಿದಂಡನೆಯಾಗಬೇಕು.
26 “ಯಜಮಾನನು ಗುಲಾಮನಿಗೆ ಹೊಡೆದಾಗ ಗುಲಾಮನು ಕುರುಡನಾದರೆ, ಆ ಗುಲಾಮನು ಬಿಡುಗಡೆ ಹೊಂದಿದ್ದಾನೆ. ಅವನು ತನ್ನ ಬಿಡುಗಡೆಗೆ ತನ್ನ ಕಣ್ಣನ್ನೇ ಪ್ರತಿಯಾಗಿ ಕೊಟ್ಟಿದ್ದಾನೆ. ಗುಲಾಮನ ಅಥವಾ ಗುಲಾಮಳ ವಿಷಯದಲ್ಲಿಯೂ ಇದೇ ನಿಯಮ ಅನ್ವಯಿಸುತ್ತದೆ. 27 ಯಜಮಾನನು ಗುಲಾಮನ ಬಾಯಿಗೆ ಹೊಡೆದದ್ದರಿಂದ, ಗುಲಾಮನು ತನ್ನ ಹಲ್ಲನ್ನು ಕಳೆದುಕೊಂಡರೆ, ಆ ಗುಲಾಮನ ಹಲ್ಲು ಅವನ ಬಿಡುಗಡೆಗೆ ಕೊಟ್ಟ ಹಣವಾಗಿದೆ. ಗುಲಾಮನ ಅಥವಾ ಗುಲಾಮಳ ವಿಷಯದಲ್ಲಿ ಇದೇ ನಿಯಮವು ಅನ್ವಯಿಸುತ್ತದೆ.
28 “ಒಬ್ಬನ ಎತ್ತು ಪುರುಷನನ್ನಾಗಲಿ ಸ್ತ್ರೀಯನ್ನಾಗಲಿ ಕೊಂದರೆ, ಆಗ ನೀವು ಕಲ್ಲುಗಳಿಂದ ಆ ಎತ್ತನ್ನು ಕೊಲ್ಲಬೇಕು. ನೀವು ಅದರ ಮಾಂಸವನ್ನು ತಿನ್ನಬಾರದು. ಆದರೆ ಎತ್ತಿನ ಮಾಲೀಕನು ತಪ್ಪಿತಸ್ಥನಲ್ಲ. 29 ಆದರೆ ಹಿಂದೊಮ್ಮೆ ಆ ಎತ್ತು ಜನರಿಗೆ ತಿವಿದಿದ್ದು, ಅದರ ಮಾಲೀಕನಿಗೆ ಇದರ ವಿಷಯದಲ್ಲಿ ಎಚ್ಚರಿಕೆ ನೀಡಿದ್ದರೆ ಆಗ ಆ ಮಾಲೀಕನು ತಪ್ಪಿತಸ್ಥನಾಗಿದ್ದಾನೆ. ಯಾಕೆಂದರೆ ಅವನು ಆ ಎತ್ತನ್ನು ಕಟ್ಟಿಹಾಕಲಿಲ್ಲ ಅಥವಾ ಅದರ ಸ್ಥಳದಲ್ಲಿ ಬಂಧಿಸಿರಲಿಲ್ಲ. ಆದ್ದರಿಂದ ಎತ್ತನ್ನು ಕಟ್ಟಿಹಾಕದೆ ಇದ್ದುದರಿಂದ, ಅದು ಯಾರನ್ನಾದರೂ ಕೊಂದರೆ, ಆಗ ಆ ಮಾಲೀಕನು ತಪ್ಪಿತಸ್ಥನಾಗಿದ್ದಾನೆ. ನೀವು ಎತ್ತನ್ನು ಕಲ್ಲೆಸೆದು ಕೊಲ್ಲಬೇಕಲ್ಲದೆ ಅದರ ಮಾಲೀಕನನ್ನೂ ಕೊಲ್ಲಬೇಕು. 30 ಆದರೆ ಸತ್ತವನ ಕುಟುಂಬದವರು ಅವನಿಂದ ಹಣವನ್ನು ಕೇಳಿದರೆ ಮತ್ತು ಅವನು ಹಣವನ್ನು ಕೊಟ್ಟರೆ, ಅವನು ತನ್ನ ಜೀವವನ್ನು ಬಿಡಿಸಿಕೊಂಡಂತಾಗುವುದು. ಆಗ ಆ ಎತ್ತಿನ ಮಾಲೀಕನನ್ನು ಕೊಲ್ಲಬಾರದು. ಆದರೆ ನ್ಯಾಯಾಧಿಪತಿಗಳು ತೀರ್ಮಾನಿಸುವಷ್ಟು ಹಣವನ್ನು ಅವನು ಕೊಡಬೇಕು.
31 “ಎತ್ತು ಒಬ್ಬನ ಮಗನನ್ನಾಗಲಿ ಅಥಲಾ ಮಗಳನ್ನಾಗಲಿ ಕೊಂದರೆ ಇದೇ ನಿಯಮವನ್ನು ಪಾಲಿಸಬೇಕು. 32 ಆದರೆ ಎತ್ತು ಗುಲಾಮನನ್ನು ಕೊಂದರೆ, ಆಗ ಆ ಪಶುವಿನ ಮಾಲೀಕನು ಗುಲಾಮನ ಯಜಮಾನನಿಗೆ ಮೂವತ್ತು ಬೆಳ್ಳಿಯ ನಾಣ್ಯಗಳನ್ನು ಕೊಡಬೇಕು ಮತ್ತು ಎತ್ತನ್ನು ಕಲ್ಲುಗಳಿಂದ ಹೊಡೆದು ಕೊಲ್ಲಬೇಕು. ಗುಲಾಮನ ಅಥವಾ ಗುಲಾಮಳ ವಿಷಯದಲ್ಲಿ ಇದೇ ನಿಯಮವನ್ನು ಪಾಲಿಸಬೇಕು.
33 “ಒಬ್ಬ ಮನುಷ್ಯನು ಕುಣಿಯೊಂದನ್ನು ತೋಡಿ ಅದನ್ನು ಮುಚ್ಚಿಲ್ಲದಿದ್ದರೆ ಮತ್ತು ಆ ಕುಣಿಯಲ್ಲಿ ಬೇರೊಬ್ಬನ ಪಶುವು ಬಿದ್ದು ಸತ್ತುಹೋದರೆ, 34 ಕುಣಿಯನ್ನು ತೋಡಿದವನು ಆ ಪಶುವಿಗೆ ಪ್ರತಿಯಾಗಿ ಈಡುಕೊಡಬೇಕು. ಅವನು ಈಡುಕೊಟ್ಟ ನಂತರ ಆ ಸತ್ತ ಪಶುವು ಅವನದಾಗುತ್ತದೆ.
35 “ಒಬ್ಬನ ಎತ್ತು ಇನ್ನೊಬ್ಬನ ಎತ್ತನ್ನು ಹಾದು ಕೊಂದರೆ ಆಗ ಜೀವಂತವಾಗಿರುವ ಎತ್ತನ್ನು ಮಾರಬೇಕು. ಆ ಎತ್ತನ್ನು ಮಾರಿದ್ದರಿಂದ ಬಂದ ಹಣವನ್ನು ಸಮವಾಗಿ ಹಂಚಿಕೊಳ್ಳಬೇಕು. ಕೊಲ್ಲಲ್ಪಟ್ಟ ಎತ್ತನ್ನು ಸಮವಾಗಿ ಹಂಚಿಕೊಳ್ಳಬೇಕು. 36 ಆದರೆ ಒಬ್ಬನ ಎತ್ತು ಮೊದಲೊಮ್ಮೆ ಇತರ ಪಶುಗಳಿಗೆ ಗಾಯಮಾಡಿದ್ದರೆ, ಅದರ ಮಾಲೀಕನು ಅದನ್ನು ಕಟ್ಟಿಹಾಕದಿದ್ದರಿಂದ ತಪ್ಪಿತಸ್ಥನಾಗಿದ್ದಾನೆ. ಅವನು ಸತ್ತ ಎತ್ತಿಗೆ ಪ್ರತಿಯಾಗಿ ಸ್ವಂತ ಎತ್ತನ್ನು ಕೊಡಬೇಕು. ಸತ್ತ ಎತ್ತನ್ನು ತಾನೇ ತೆಗೆದುಕೊಳ್ಳಬೇಕು.
22 “ಒಬ್ಬನು ಎತ್ತನ್ನಾಗಲಿ ಕುರಿಯನ್ನಾಗಲಿ ಕದ್ದು ಅದನ್ನು ಕೊಯಿದರೆ ಅಥವಾ ಮಾರಿದರೆ, ಅವನು ತಾನು ಕದ್ದ ಎತ್ತಿಗೆ ಪ್ರತಿಯಾಗಿ ಐದು ಎತ್ತುಗಳನ್ನೂ ಅಥವಾ ತಾನು ಕದ್ದ ಕುರಿಗೆ ಪ್ರತಿಯಾಗಿ ನಾಲ್ಕು ಕುರಿಗಳನ್ನೂ ಕೊಡಬೇಕು. 2-4 ಅವನಲ್ಲಿ ಏನೂ ಇಲ್ಲದ ಪಕ್ಷಕ್ಕೆ, ಅವನು ಗುಲಾಮನಾಗುವನು. ಆದರೆ ಆ ಕಳ್ಳನು ಪಶುವನ್ನು ಇನ್ನೂ ಇಟ್ಟುಕೊಂಡಿರುವುದು ನಿಮಗೆ ಗೊತ್ತಾದರೆ, ಅವನು ಕದ್ದ ಪಶುವಿಗೆ ಪ್ರತಿಯಾಗಿ ಎರಡು ಪಶುಗಳನ್ನು ಮಾಲೀಕನಿಗೆ ಕೊಡಿಸಬೇಕು. ಕದ್ದದ್ದು ಎತ್ತಾಗಿರಬಹುದು, ಕತ್ತೆಯಾಗಿರಬಹುದು ಅಥವಾ ಕುರಿಯಾಗಿರಬಹುದು.
“ಕಳ್ಳನು ರಾತ್ರಿಯಲ್ಲಿ ಮನೆಗೆ ಕನ್ನ ಹಾಕಲು ಪ್ರಯತ್ನಿಸುತ್ತಿರುವಾಗ ಕೊಲ್ಲಲ್ಪಟ್ಟರೆ, ಅವನನ್ನು ಕೊಂದದ್ದಕ್ಕೆ ಯಾರೂ ತಪ್ಪಿತಸ್ಧರಾಗುವುದಿಲ್ಲ. ಆದರೆ ಇದು ಹಗಲಿನಲ್ಲಿ ನಡೆದರೆ ಕೊಂದವನು ಕೊಲೆಗಾರನಾಗುವನು.
5 “ಒಬ್ಬನು ತನ್ನ ಹೊಲದಲ್ಲಾಗಲಿ ದ್ರಾಕ್ಷಿತೋಟದಲ್ಲಾಗಲಿ ತನ್ನ ಪಶುವಿಗೆ ಮೇಯಲು ಬಿಡಬಹುದು. ಆದರೆ ಅದು ಅವನ ನೆರೆಯವನ ಹೊಲವನ್ನಾಗಲಿ, ದ್ರಾಕ್ಷಿತೋಟವನ್ನಾಗಲಿ ಹಾಳು ಮಾಡಿದರೆ, ಅವನು ತನ್ನ ನೆರೆಯವನಿಗೆ ಉಂಟಾದ ನಷ್ಟಕ್ಕೆ ಪ್ರತಿಯಾಗಿ ತನ್ನ ಉತ್ತಮ ಬೆಳೆಗಳನ್ನು ಕೊಡಬೇಕು.
6 “ಒಬ್ಬನು ತನ್ನ ಹೊಲದಲ್ಲಿರುವ ಮುಳ್ಳಿನ ಪೊದೆಗಳನ್ನು ಸುಟ್ಟುಹಾಕಲು ಬೆಂಕಿಯನ್ನು ಹೊತ್ತಿಸಬಹುದು. ಆದರೆ ಬೆಂಕಿಯು ಹೆಚ್ಚಾಗಿ ಅವನ ನೆರೆಯವನ ಬೆಳೆಯನ್ನಾಗಲಿ ಬೆಳೆಯುತ್ತಿರುವ ಧಾನ್ಯಗಳನ್ನಾಗಲಿ ಸುಟ್ಟುಹಾಕಿದರೆ ಬೆಂಕಿಯನ್ನು ಹೊತ್ತಿಸಿದವನು ತಾನು ಸುಟ್ಟುಹಾಕಿದ ವಸ್ತುಗಳಿಗೆ ಪ್ರತಿಯಾಗಿ ಈಡುಕೊಡಬೇಕು.
7 “ಒಬ್ಬನು ತನ್ನ ನೆರೆಯವನ ಮನೆಯಲ್ಲಿ ಸ್ವಲ್ಪ ಹಣವನ್ನಾಗಲಿ ವಸ್ತುಗಳನ್ನಾಗಲಿ ಇಟ್ಟಿದ್ದು, ಆ ಹಣವಾಗಲಿ ವಸ್ತುಗಳಾಗಲಿ ಕಳುವಾದರೆ ಕಳ್ಳನನ್ನು ಕಂಡುಹಿಡಿಯಲು ನೀವು ಪ್ರಯತ್ನಿಸಬೇಕು. ನೀವು ಕಳ್ಳನನ್ನು ಕಂಡುಹಿಡಿದರೆ, ಆಗ ಅವನು ತಾನು ಕದ್ದವಸ್ತುಗಳ ಬೆಲೆಯ ಎರಡರಷ್ಟನ್ನು ಕೊಡಬೇಕು. 8 ಆದರೆ ನೀವು ಕಳ್ಳನನ್ನು ಕಂಡುಹಿಡಿಯಲಾಗದಿದ್ದರೆ, ಆ ಮನೆಯ ಮಾಲೀಕನು ತಪ್ಪಿತಸ್ಧನಾಗಿದ್ದಾನೋ ಇಲ್ಲವೋ ಎಂದು ದೇವರು[d] ನಿರ್ಣಯಿಸುವನು. ಮನೆಯ ಮಾಲೀಕನು ದೇವರ ಸನ್ನಿಧಿಗೆ ಹೋಗಬೇಕು. ಅವನು ಕದ್ದಿದ್ದಾನೋ ಇಲ್ಲವೋ ಎಂದು ದೇವರು ತೀರ್ಮಾನಿಸುವನು.
9 “ಕಳೆದುಹೋದ ಎತ್ತು, ಕತ್ತೆ, ಕುರಿ, ಬಟ್ಟೆಬರೆ, ಅಥವಾ ವಸ್ತುವಿನ ವಿಷಯದಲ್ಲಿ ಒಬ್ಬನು, ‘ಇದು ನನ್ನದು’ ಎಂದು ಹೇಳಿದರೆ ಮತ್ತು ಇನ್ನೊಬ್ಬನು, ‘ಇಲ್ಲ, ಇದು ನನ್ನದು’ ಎಂದು ಹೇಳಿದರೆ, ಇವರಿಬ್ಬರೂ ದೇವರ ಸನ್ನಿಧಿಗೆ ಹೋಗಬೇಕು. ತಪ್ಪಿತಸ್ಥನಾರೆಂದು ದೇವರು ತೀರ್ಮಾನಿಸುವನು. ತಪ್ಪಿತಸ್ಥನು ಇನ್ನೊಬ್ಬನಿಗೆ ಕಳೆದುಹೋದ ವಸ್ತುವಿನ ಬೆಲೆಯ ಎರಡರಷ್ಟನ್ನು ಕೊಡಬೇಕು.
10 “ಸ್ವಲ್ಪಕಾಲದವರೆಗೆ ತನ್ನ ಪಶುವನ್ನು ಪೋಷಿಸಬೇಕೆಂದು ತನ್ನ ನೆರೆಯವನನ್ನು ಕೇಳಿಕೊಳ್ಳಬಹುದು. ಈ ಪಶುವು ಕತ್ತೆಯಾಗಿರಬಹುದು, ಎತ್ತಾಗಿರಬಹುದು, ಕುರಿಯಾಗಿರಬಹುದು ಅಥವಾ ಯಾವುದೇ ಪಶುವಾಗಿರಬಹುದು. ಆದರೆ ಅದು ಸತ್ತರೆ ಅಥವಾ ಅದಕ್ಕೆ ಪೆಟ್ಟಾದರೆ ಅಥವಾ ಕಳುವಾದರೆ, 11 ಆ ನೆರೆಯವನು ಆ ಪಶುವನ್ನು ಕದ್ದಿಲ್ಲದ್ದಿದ್ದರೆ ತಾನು ಕದ್ದಿಲ್ಲವೆಂದು ಯೆಹೋವನ ಹೆಸರಿನಲ್ಲಿ ಪ್ರಮಾಣ ಮಾಡಬೇಕು. ಪಶುವಿನ ಮಾಲೀಕನು ಈ ಪ್ರಮಾಣವನ್ನು ಸ್ವೀಕರಿಸಬೇಕು. ನೆರೆಯವನು ಮಾಲೀಕನಿಗೆ ಪಶುವಿಗಾಗಿ ಈಡು ಕೊಡಬೇಕಾಗಿಲ್ಲ. 12 ಆದರೆ ಪಶುವು ಕದಿಯಲ್ಪಟ್ಟಿದ್ದರೆ, ಅವನು ಅದಕ್ಕಾಗಿ ಈಡು ಕೊಡಬೇಕು. 13 ಕ್ರೂರಪ್ರಾಣಿಗಳು ಆ ಪಶುವನ್ನು ಕೊಂದುಹಾಕಿದ್ದರೆ, ನೆರೆಯವನು ಸತ್ತ ಪಶುವನ್ನು ಸಾಕ್ಷಿಯಾಗಿ ತರಬೇಕು. ನೆರೆಯವನು ಮಾಲೀಕನಿಗೆ ಸತ್ತ ಪಶುವಿಗಾಗಿ ಈಡು ಕೊಡಬೇಕಾಗಿಲ್ಲ.
14 “ಒಬ್ಬನು ತನ್ನ ನೆರೆಯವನಿಂದ ಪಶುವನ್ನು ಸ್ವಲ್ಪಕಾಲಕ್ಕೆ ಸಾಲವಾಗಿ ತೆಗೆದುಕೊಂಡಿರುವಾಗ ಅದರ ಮಾಲೀಕನು ಅದರ ಸಮೀಪದಲ್ಲಿ ಇಲ್ಲದಿರುವ ಸಮಯದಲ್ಲಿ ಆ ಪಶುವಿಗೆ ಗಾಯವಾದರೆ ಅಥವಾ ಅದು ಸತ್ತುಹೋದರೆ, ಸಾಲ ತೆಗೆದುಕೊಂಡವನು ಆ ಪಶುವಿಗೆ ಈಡುಕೊಡಬೇಕು. 15 ಆದರೆ ಅದರ ಮಾಲೀಕನು ಪಶುವಿನೊಂದಿಗೆ ಅಲ್ಲಿದ್ದರೆ ಆಗ ನೆರೆಯವನು ಈಡುಕೊಡಬೇಕಾಗಿಲ್ಲ. ನೆರೆಯವನು ಪಶುವನ್ನು ಬಾಡಿಗೆಗೆ ತೆಗೆದುಕೊಂಡಿರುವಾಗ ಆ ಪಶು ಸತ್ತರೆ ಅಥವಾ ಅದಕ್ಕೆ ಪೆಟ್ಟಾದರೆ ಅವನು ಈಡುಕೊಡಬೇಕಾಗಿಲ್ಲ. ಆ ಪಶುವನ್ನು ಉಪಯೋಗಿಸಲು ಅವನು ಕೊಟ್ಟ ಬಾಡಿಗೆಯೇ ಸಾಕು.
16 “ಒಬ್ಬನು ಕನ್ನಿಕೆಯನ್ನು ಮರುಳುಗೊಳಿಸಿ ಕೂಡಿದರೆ, ಅವನು ಅವಳನ್ನು ಮದುವೆಯಾಗಬೇಕು. ಅವನು ಆಕೆಯ ತಂದೆಗೆ ತಕ್ಕ ತೆರವನ್ನು ಕೊಡಬೇಕು. 17 ತಂದೆಯು ತನ್ನ ಮಗಳನ್ನು ಅವನಿಗೆ ಕೊಡಲು ನಿರಾಕರಿಸಿದರೂ ಅವನು ತೆರವನ್ನು ಕೊಡಬೇಕು. ಅವನು ಅವಳಿಗೋಸ್ಕರ ಪೂರ್ಣ ತೆರವನ್ನು ಕೊಡಬೇಕು.
18 “ಮಾಟಗಾರ್ತಿಯನ್ನು ನೀವು ಜೀವಸಹಿತ ಉಳಿಸಬಾರದು.
19 “ಪಶುಸಂಗ ಮಾಡಿದವನಿಗೆ ಮರಣದಂಡನೆಯಾಗಬೇಕು.
20 “ಸುಳ್ಳುದೇವರಿಗೆ ಯಜ್ಞವನ್ನರ್ಪಿಸುವವನನ್ನು ನಾಶ ಮಾಡಬೇಕು.[e] ನೀವು ದೇವರಾದ ಯೆಹೋವನೊಬ್ಬನಿಗೇ ಯಜ್ಞವನ್ನರ್ಪಿಸಬೇಕು.
21 “ನೀವು ಮೊದಲು ಈಜಿಪ್ಟಿನಲ್ಲಿ ಪರದೇಶಸ್ಥರಾಗಿದ್ದದ್ದನ್ನು ಜ್ಞಾಪಕಮಾಡಿಕೊಳ್ಳಿ. ಆದ್ದರಿಂದ ನೀವು ಮೋಸಮಾಡಬಾರದು; ನಿಮ್ಮ ದೇಶದಲ್ಲಿರುವ ಯಾವ ಪರದೇಶಸ್ಥನಿಗೂ ಕೇಡು ಮಾಡಬಾರದು.
22 “ನೀವೆಂದಿಗೂ ವಿಧವೆಯರಿಗೆ ಅಥವಾ ಅನಾಥ ಮಕ್ಕಳಿಗೆ ಕೇಡುಮಾಡಬಾರದು. 23 ನೀವು ಆ ವಿಧವೆಯರಿಗೆ ಅಥವಾ ಅನಾಥರಿಗೆ ಕೇಡುಮಾಡಿದರೆ, ನಾನು ಅವರ ಗೋಳಾಟವನ್ನು ಕೇಳಿ, 24 ನಿಮ್ಮ ಮೇಲೆ ಕೋಪಗೊಳ್ಳುವೆನು; ಕತ್ತಿಯಿಂದ ನಿಮ್ಮನ್ನು ಕೊಲ್ಲುವೆನು. ಆಗ ನಿಮ್ಮ ಹೆಂಡತಿಯರು ವಿಧವೆಯರಾಗುವರು; ನಿಮ್ಮ ಮಕ್ಕಳು ಅನಾಥರಾಗುವರು.
25 “ನನ್ನ ಜನರಲ್ಲಿ ಬಡವನಾಗಿರುವವನಿಗೆ ನೀವು ಹಣವನ್ನು ಸಾಲಕೊಟ್ಟರೆ, ನೀವು ಆ ಹಣಕ್ಕೆ ಬಡ್ಡಿ ಕೇಳಬಾರದು. ಬೇಗನೆ ಮರುಪಾವತಿ ಮಾಡುವಂತೆ ಅವನನ್ನು ಬಲವಂತಪಡಿಸಬಾರದು. 26 ಯಾವನಾದರೂ ನೀವು ಕೊಟ್ಟ ಸಾಲಕ್ಕೆ ತನ್ನ ಅಂಗಿಯನ್ನು ಒತ್ತೆಯಾಗಿಟ್ಟರೆ, ಸೂರ್ಯನು ಮುಳುಗುವ ಮೊದಲೇ ನೀವು ಆ ಅಂಗಿಯನ್ನು ಅವನಿಗೆ ಹಿಂತಿರುಗಿಸಬೇಕು. 27 ಯಾಕೆಂದರೆ ಅವನಿಗೆ ಬೇರೆ ಯಾವ ಹೊದಿಕೆಯೂ ಇಲ್ಲ; ಅದನ್ನೇ ಅವನು ಧರಿಸಿಕೊಳ್ಳಬೇಕು. ಅವನು ಮಲಗಿಕೊಳ್ಳುವಾಗ ಚಳಿಯಿಂದ ನನಗೆ ಮೊರೆಯಿಟ್ಟರೆ, ನಾನು ಅವನ ಮೊರೆಯನ್ನು ಕೇಳಿ ಅವನಿಗೆ ದಯೆತೋರುವೆನು.
28 “ನೀವು ದೇವರನ್ನಾಗಲಿ ಅಥವಾ ನಿಮ್ಮ ನಾಯಕರುಗಳನ್ನಾಗಲಿ ಶಪಿಸಬಾರದು.
29 “ಸುಗ್ಗಿಕಾಲದಲ್ಲಿ ನೀವು ಪ್ರಥಮಫಲವಾದ ಧಾನ್ಯವನ್ನು ಮತ್ತು ನಿಮ್ಮ ಪ್ರಥಮಫಲವಾದ ದ್ರಾಕ್ಷಾರಸವನ್ನು ನನಗೆ ಕೊಡಬೇಕು. ನೀವು ಅದನ್ನು ನಿಮಗಾಗಿಯೇ ಇಟ್ಟುಕೊಳ್ಳಬಾರದು.
“ನಿಮ್ಮ ಚೊಚ್ಚಲು ಗಂಡುಮಕ್ಕಳನ್ನು ನನಗೆ ಪ್ರತಿಷ್ಠಿಸಬೇಕು. 30 ಮಾತ್ರವಲ್ಲದೆ, ನಿಮ್ಮ ಕುರಿದನಗಳಲ್ಲಿ ಚೊಚ್ಚಲಾದವುಗಳನ್ನು ನನಗೆ ಅರ್ಪಿಸಬೇಕು. ಚೊಚ್ಚಲಾದವುಗಳು ತನ್ನ ತಾಯಿಯೊಂದಿಗೆ ಏಳು ದಿನಗಳಿರಲಿ. ಬಳಿಕ, ಎಂಟನೆಯ ದಿನದಲ್ಲಿ ನೀವು ಅದನ್ನು ನನಗೆ ಅರ್ಪಿಸಬೇಕು.
31 “ನೀವು ನನ್ನ ವಿಶೇಷ ಜನರಾಗಿದ್ದೀರಿ. ಆದ್ದರಿಂದ ಕ್ರೂರಪ್ರಾಣಿಗಳಿಂದ ಕೊಲ್ಲಲ್ಪಟ್ಟ ಪ್ರಾಣಿಯ ಮಾಂಸವನ್ನು ನೀವು ತಿನ್ನಬಾರದು. ಅದನ್ನು ನಾಯಿಗಳು ತಿನ್ನಲಿ.
23 “ಬೇರೆಯವರ ವಿರುದ್ಧವಾಗಿ ಸುಳ್ಳು ಹೇಳಬೇಡಿರಿ. ನೀವು ನ್ಯಾಯಾಲಯದಲ್ಲಿ ದುಷ್ಟರ ಸಹಾಯಕ್ಕಾಗಿ ಸುಳ್ಳುಸಾಕ್ಷಿ ಹೇಳದಿರಿ.
2 “ದುಷ್ಕೃತ್ಯವನ್ನು ಮಾಡುವವರು ಬಹಳ ಮಂದಿಯೆಂದು ಅವರ ಜೊತೆಯಲ್ಲಿ ಸೇರಿಕೊಳ್ಳಬೇಡಿ. ಬಹಳ ಮಂದಿಯ ಮಾತಿಗೆ ಒಪ್ಪಿ ನ್ಯಾಯವನ್ನು ಕೆಡಿಸುವ ಸಾಕ್ಷಿಯನ್ನು ಹೇಳದಿರಿ.
3 “ಇದಲ್ಲದೆ ಬಡವನೆಂದು ಕರುಣಿಸಿ ಪಕ್ಷಪಾತದ ತೀರ್ಪನ್ನು ನೀಡಬಾರದು.
4 “ನೀವು ಕಳೆದುಹೋದ ಎತ್ತನ್ನಾಗಲಿ ಕತ್ತೆಯನ್ನಾಗಲಿ ನೋಡಿದರೆ, ಆಗ ನೀವು ಅದನ್ನು ಅದರ ಮಾಲೀಕನಿಗೆ ಹಿಂತಿರುಗಿಸಬೇಕು. ಒಂದುವೇಳೆ ಆ ಮಾಲೀಕನು ನಿಮ್ಮ ವೈರಿಯಾಗಿದ್ದರೂ ನೀವು ಈ ಕಾರ್ಯವನ್ನು ಮಾಡಬೇಕು.
5 “ಬಹು ತೂಕದ ಹೊರೆಯಿಂದ ನಡೆಯಲಾಗದೆ ಬಿದ್ದಿರುವ ಕತ್ತೆಯನ್ನು ನೀವು ನೋಡಿದರೆ ಅದನ್ನು ಎಬ್ಬಿಸಲು ನೀವು ನಿಂತು ಸಹಾಯ ಮಾಡಬೇಕು. ಆ ಕತ್ತೆಯು ನಿಮ್ಮ ವೈರಿಯದಾಗಿದ್ದರೂ ನೀವು ಅದಕ್ಕೆ ಸಹಾಯ ಮಾಡಬೇಕು.
6 “ಬಡವರಿಗೆ ವ್ಯಾಜ್ಯದಲ್ಲಿ ನೀವು ಅನ್ಯಾಯವಾದ ತೀರ್ಪನ್ನು ಕೊಡಕೂಡದು.
7 “ನೀವು ಮೋಸದ ಕಾರ್ಯಕ್ಕೆ ದೂರವಿರಬೇಕು. ನಿರಪರಾಧಿಯೂ ನೀತಿವಂತನೂ ಆಗಿರುವ ವ್ಯಕ್ತಿಗೆ ಮರಣದಂಡನೆ ವಿಧಿಸಕೂಡದು. ಅಂಥ ದುಷ್ಟಕಾರ್ಯ ಮಾಡಿದವನಿಗೆ ನಾನು ದಂಡನೆಯನ್ನು ವಿಧಿಸೇ ವಿಧಿಸುವೆನು.
8 “ಲಂಚವನ್ನು ತೆಗೆದುಕೊಳ್ಳಕೂಡದು; ಲಂಚವು ಕಣ್ಣುಳ್ಳವರನ್ನು ಕುರುಡರನ್ನಾಗಿ ಮಾಡುತ್ತದೆ; ನಿರಪರಾಧಿಗೆ ಅನ್ಯಾಯ ಮಾಡುತ್ತದೆ.
9 “ನೀವು ಪರದೇಶಸ್ಥರಿಗೆ ತೊಂದರೆ ಕೊಡಬಾರದು. ನೀವು ಈಜಿಪ್ಟಿನಲ್ಲಿ ಪರದೇಶಸ್ಥರಾಗಿದ್ದಿರೆಂಬುದನ್ನು ಜ್ಞಾಪಕಮಾಡಿಕೊಳ್ಳಿರಿ.
ವಿಶೇಷ ವಿಶ್ರಾಂತಿ ದಿನಗಳು
10 “ಆರು ವರ್ಷ ನಿಮ್ಮ ಭೂಮಿಯಲ್ಲಿ ಬೀಜಬಿತ್ತಿ ಬೆಳೆಯನ್ನು ಬೆಳೆಯಿರಿ. 11 ಆದರೆ ಏಳನೆಯ ವರ್ಷದಲ್ಲಿ ನಿಮ್ಮ ಭೂಮಿಯನ್ನು ಬೀಳುಬಿಡಿರಿ; ಬೀಜಬಿತ್ತಬೇಡಿರಿ. ಏಳನೆಯ ವರ್ಷ ನೀವು ಏನನ್ನೂ ಬೆಳೆಸಬಾರದು. ನಿಮ್ಮ ಭೂಮಿಯಲ್ಲಿ ಏನಾದರೂ ಬೆಳೆದರೆ ಅದನ್ನು ಬಡವರು ತಿನ್ನಲಿ. ಉಳಿದದ್ದನ್ನು ಪ್ರಾಣಿಗಳು ಮೇಯಲಿ. ನಿಮ್ಮ ದ್ರಾಕ್ಷಿತೋಟಗಳ ವಿಷಯದಲ್ಲಿಯೂ ಆಲಿವ್ ಮರಗಳ ತೋಪಿನ ವಿಷಯದಲ್ಲಿಯೂ ಇದೇ ನಿಯಮವನ್ನು ಪಾಲಿಸಬೇಕು.
12 “ಆರು ದಿನಗಳಲ್ಲಿ ನಿಮ್ಮ ಕೆಲಸ ಮಾಡಿರಿ. ಏಳನೆಯ ದಿನದಲ್ಲಿ ವಿಶ್ರಮಿಸಿಕೊಳ್ಳಿರಿ. ಏಳನೆಯ ದಿನದಲ್ಲಿ ನಿಮ್ಮ ಗುಲಾಮರೂ ಎತ್ತುಗಳೂ ಕತ್ತೆಗಳೂ ವಿದೇಶಿಯರೂ ವಿಶ್ರಮಿಸಿಕೊಳ್ಳಲಿ.
13 “ನೀವು ಈ ಆಜ್ಞೆಗಳಿಗೆಲ್ಲಾ ಜಾಗರೂಕತೆಯಿಂದ ವಿಧೇಯರಾಗಬೇಕು. ಸುಳ್ಳುದೇವರುಗಳನ್ನು ಆರಾಧಿಸಬೇಡಿರಿ. ನೀವು ಅವುಗಳ ಹೆಸರುಗಳನ್ನು ಉಚ್ಚರಿಸಲೂ ಕೂಡದು.
14 “ಪ್ರತಿವರ್ಷ ನೀವು ಮೂರುಜಾತ್ರೆಗಳನ್ನು ಮಾಡಬೇಕು. 15 ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕಾದ ಹಬ್ಬ ಅವುಗಳಲ್ಲಿ ಒಂದಾಗಿದೆ. ನಾನು ನಿಮಗೆ ಆಜ್ಞಾಪಿಸಿದಂತೆ ಈ ಜಾತ್ರೆಯಲ್ಲಿ ಏಳು ದಿನ ಹುಳಿಯಿಲ್ಲದ ರೊಟ್ಟಿಯನ್ನು ನೀವು ತಿನ್ನಬೇಕು. ಈ ಹಬ್ಬವು ಏಳು ದಿನಗಳವರೆಗೆ ನಡೆಯುವುದು. ನೀವು ಇದನ್ನು ಅಬೀಬ್ ತಿಂಗಳಲ್ಲಿ ಮಾಡಬೇಕು. ಯಾಕೆಂದರೆ ಈ ತಿಂಗಳಲ್ಲಿಯೇ ನೀವು ಈಜಿಪ್ಟಿನಿಂದ ಹೊರಗೆ ಬಂದಿರಿ! ಈ ಹಬ್ಬದಲ್ಲಿ ಪ್ರತಿಯೊಬ್ಬನೂ ನನಗೆ ಕಾಣಿಕೆಯನ್ನು ಅರ್ಪಿಸಬೇಕು.
16 “ಇದಲ್ಲದೆ ನೀವು ಸುಗ್ಗಿಯ ಜಾತ್ರೆಯನ್ನು ಆಚರಿಸಬೇಕು. ನೀವು ಬಿತ್ತಿದ ಹೊಲಗಳಲ್ಲಿ ಬೆಳೆಗಳನ್ನು ಕೊಯ್ಯುವ ಕಾಲದಲ್ಲಿ ಈ ಜಾತ್ರೆಯು ಆರಂಭವಾಗುವುದು.
“ಇದಲ್ಲದೆ ಫಲಸಂಗ್ರಹ ಜಾತ್ರೆಯನ್ನೂ ನೀವು ಆಚರಿಸಬೇಕು. ವರ್ಷಾಂತ್ಯದಲ್ಲಿ ನೀವು ಹೊಲತೋಟಗಳ ಬೆಳೆಗಳನ್ನೆಲ್ಲಾ ಒಟ್ಟುಗೂಡಿಸುವ ಕಾಲದಲ್ಲಿ ಇದು ಆರಂಭವಾಗುವುದು.
17 “ಹೀಗೆ ಪ್ರತಿವರ್ಷ ಮೂರು ಸಲ ಗಂಡಸರೆಲ್ಲರೂ ಒಂದು ವಿಶೇಷ ಸ್ಥಳಕ್ಕೆ ದೇವರಾದ ಯೆಹೋವನ ಸನ್ನಿಧಿಗೆ ಬರಬೇಕು.
18 “ನೀವು ನನಗೆ ಯಜ್ಞವನ್ನು ಅರ್ಪಿಸುವಾಗ ಯಜ್ಞಪಶುವಿನ ರಕ್ತದೊಡನೆ ಹುಳಿಬೆರಸಿದ ಏನನ್ನೂ ಸಮರ್ಪಿಸಬಾರದು. ಅಲ್ಲದೆ ಅದರ ಮಾಂಸವನ್ನು ಒಂದೇ ದಿನದಲ್ಲಿ ತಿಂದು ಮುಗಿಸಬೇಕು; ಮರುದಿನದವರೆಗೂ ಇಟ್ಟುಕೊಳ್ಳಬಾರದು.
19 “ಸುಗ್ಗಿ ಕಾಲದಲ್ಲಿ ನಿಮ್ಮ ಬೆಳೆಯ ಫಲವನ್ನು ನಿಮ್ಮ ದೇವರಾದ ಯೆಹೋವನ ಆಲಯಕ್ಕೆ[f] ತರಬೇಕು.
“ಆಡುಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು.”
20 “ಇಗೋ, ನಿಮ್ಮ ಮುಂದೆ ನಾನು ಒಬ್ಬ ದೂತನನ್ನು[g] ಕಳುಹಿಸುತ್ತಿದ್ದೇನೆ. ನಾನು ನಿಮಗಾಗಿ ಸಿದ್ಧಮಾಡಿದ ಸ್ಥಳಕ್ಕೆ ಈ ದೂತನು ನಿಮ್ಮನ್ನು ಮುನ್ನಡೆಸುವನು; ದಾರಿಯುದ್ದಕ್ಕೂ ಸಂರಕ್ಷಿಸುವನು. 21 ದೂತನಿಗೆ ವಿಧೇಯರಾಗಿ ಆತನನ್ನು ಹಿಂಬಾಲಿಸಿರಿ. ಆತನಿಗೆ ವಿರೋಧವಾಗಿ ದಂಗೆಯೇಳಬೇಡಿರಿ. ನೀವು ಅವಿಧೇಯರಾದರೆ ಆತನು ನಿಮ್ಮನ್ನು ಕ್ಷಮಿಸುವುದಿಲ್ಲ. ಆತನಲ್ಲಿ ನನ್ನ ಶಕ್ತಿಯು ಇರುತ್ತದೆ.[h] 22 ಆತನು ಹೇಳುವ ಪ್ರತಿಯೊಂದಕ್ಕೆ ನೀವು ವಿಧೇಯರಾಗಬೇಕು. ನನ್ನ ಆಜ್ಞೆಗಳನ್ನೆಲ್ಲಾ ನೀವು ಅನುಸರಿಸಬೇಕು. ಆಗ ನಾನು ನಿಮ್ಮ ಸಂಗಡ ಇರುವೆನು. ನಾನು ನಿಮ್ಮ ಶತ್ರುಗಳಿಗೆ ಶತ್ರುವಾಗಿರುವೆನು; ನಿಮಗೆ ಕೇಡುಮಾಡುವವರಿಗೆಲ್ಲಾ ಕೇಡುಮಾಡುವೆನು.
23 “ನನ್ನ ದೂತನು ನಿಮ್ಮ ಮುಂದೆ ನಡೆದು ಅಮೋರಿಯರು, ಹಿತ್ತಿಯರು, ಪೆರಿಜೀಯರು, ಕಾನಾನ್ಯರು, ಹಿವ್ವಿಯರು ಮತ್ತು ಯೆಬೂಸಿಯರು ಇರುವ ದೇಶಕ್ಕೆ ನಿಮ್ಮನ್ನು ನಡಿಸುವನು. ನಾನು ಅವರನ್ನೆಲ್ಲಾ ಸೋಲಿಸುವೆನು.
24 “ಅವರ ದೇವರುಗಳನ್ನು ಪೂಜಿಸಬೇಡಿರಿ. ಆ ದೇವರುಗಳಿಗೆ ನಮಸ್ಕರಿಸಬೇಡಿರಿ. ಅವರ ಆಚರಣೆಗಳನ್ನು ಅನುಸರಿಸಬೇಡಿರಿ. ನೀವು ಅವರ ವಿಗ್ರಹಗಳನ್ನು ನಾಶಮಾಡಬೇಕು. ಅವರ ಸ್ಮಾರಕ ಸ್ತಂಭಗಳನ್ನು ಕೆಡವಿಹಾಕಬೇಕು. 25 ನೀವು ನಿಮ್ಮ ದೇವರಾದ ಯೆಹೋವನನ್ನೇ ಆರಾಧಿಸಬೇಕು. ಆಗ ಆತನು ನಿಮ್ಮ ಅನ್ನಪಾನಗಳನ್ನು ಆಶೀರ್ವದಿಸುವನು. ನಾನು ನಿಮ್ಮೊಳಗಿಂದ ಎಲ್ಲಾ ವ್ಯಾಧಿಯನ್ನು ತೆಗೆದುಬಿಡುವೆನು. 26 ನಿಮ್ಮ ಸ್ತ್ರೀಯರು ಮಕ್ಕಳನ್ನು ಪಡೆಯಲು ಶಕ್ತರಾಗುವರು. ನಿಮ್ಮ ಮಕ್ಕಳು ಹುಟ್ಟುವಾಗಲೇ ಸಾಯುವುದಿಲ್ಲ; ನಿಮಗೆ ದೀರ್ಘಾಯುಷ್ಯವನ್ನು ಅನುಗ್ರಹಿಸುವೆನು.
27 “ನೀವು ನಿಮ್ಮ ವೈರಿಗಳ ವಿರುದ್ಧ ಯುದ್ಧ ಮಾಡುವಾಗ, ನಿಮ್ಮ ವೈರಿಗಳನ್ನೆಲ್ಲಾ ಸೋಲಿಸುವಂತೆ ನಾನು ನಿಮಗೆ ನನ್ನ ಮಹಾಶಕ್ತಿಯಿಂದ ಸಹಾಯ ಮಾಡುವೆನು. ನಿಮ್ಮ ವೈರಿಗಳು ಯುದ್ಧದಲ್ಲಿ ಭಯದಿಂದಲೂ ಗಲಿಬಿಲಿಯಿಂದಲೂ ಓಡಿಹೋಗುವರು. 28 ನಾನು ನಿಮ್ಮ ಮುಂದೆ ಹೆದ್ದುಂಬಿಯನ್ನು[i] ಕಳುಹಿಸುವೆನು. ನಿಮ್ಮ ವೈರಿಗಳಾದ ಹಿವ್ವಿಯರನ್ನು ಕಾನಾನ್ಯರನ್ನು ಮತ್ತು ಹಿತ್ತಿಯರನ್ನು ಅದು ಬಲವಂತದಿಂದ ಅಟ್ಟಿಬಿಡುವುದು. 29 ಆದರೆ ನಾನು ಒಂದೇ ವರ್ಷದಲ್ಲಿ ಅವರೆಲ್ಲರನ್ನೂ ಅಲ್ಲಿಂದ ಹೊರಡಿಸುವುದಿಲ್ಲ. ಯಾಕೆಂದರೆ ದೇಶದಲ್ಲಿ ಜನರು ಕಡಿಮೆಯಾಗುವುದರಿಂದ ಕ್ರೂರ ಪ್ರಾಣಿಗಳೆಲ್ಲಾ ಹೆಚ್ಚಾಗಿ ನಿಮಗೆ ಬಹಳ ತೊಂದರೆಯಾಗಬಹುದು. 30 ಆದ್ದರಿಂದ ನೀವು ಅಭಿವೃದ್ಧಿಯಾಗಿ ದೇಶದಲ್ಲೆಲ್ಲಾ ತುಂಬಿಕೊಳ್ಳುವತನಕ ಅವರನ್ನು ಸ್ವಲ್ಪ ಸ್ವಲ್ಪವಾಗಿ ಹೊರದೂಡುವೆನು.
31 “ಕೆಂಪುಸಮುದ್ರದಿಂದ ಯೂಫ್ರೇಟೀಸ್ ನದಿಯವರೆಗೆ ಇರುವ ಪ್ರದೇಶವನ್ನೆಲ್ಲಾ ಕೊಡುವೆನು. ಪಶ್ಚಿಮ ಗಡಿಯು ಫಿಲಿಷ್ಟಿಯ ಸಮುದ್ರವಾಗಿರುವುದು (ಮೆಡಿಟರೇನಿಯನ್ ಸಮುದ್ರ) ಮತ್ತು ಪೂರ್ವ ಗಡಿಯು ಅರೇಬಿಯಾ ಮರುಭೂಮಿಯಾಗಿರುವುದು. ನೀವು ಅಲ್ಲಿ ವಾಸಿಸುವ ಜನರನ್ನು ಸೋಲಿಸುವಂತೆ ನಾನು ಮಾಡುವೆನು; ಅವರೆಲ್ಲರನ್ನು ನೀವು ಬಲವಂತವಾಗಿ ಹೊರಗಟ್ಟುವಿರಿ.
32 “ನೀವು ಆ ಜನರೊಡನೆಯಾಗಲಿ ಅವರ ದೇವರುಗಳೊಡನೆಯಾಗಲಿ ಯಾವ ಒಡಂಬಡಿಕೆಯನ್ನೂ ಮಾಡಿಕೊಳ್ಳಬಾರದು. 33 ನಿಮ್ಮ ದೇಶದಲ್ಲಿ ವಾಸಿಸಲು ಅವರನ್ನು ಬಿಡಬೇಡಿರಿ. ಇಲ್ಲವಾದರೆ ಅವರು ನಿಮ್ಮಲ್ಲಿ ದ್ರೋಹ ಬುದ್ಧಿಯನ್ನು ಹುಟ್ಟಿಸಬಹುದು. ನೀವು ಅವರ ದೇವರುಗಳನ್ನು ಪೂಜಿಸಿದರೆ ಆ ಪೂಜೆಯೂ ನಿಮಗೆ ಉರುಲಾಗುವುದು.”
ದೇವರ ಮತ್ತು ಇಸ್ರೇಲರ ನಡುವೆ ಒಡಂಬಡಿಕೆ
24 ದೇವರು ಮೋಶೆಗೆ, “ನೀನು, ಆರೋನ, ನಾದಾಬ, ಅಬೀಹೂ ಮತ್ತು ಇಸ್ರೇಲರ ಎಪ್ಪತ್ತು ಮಂದಿ ಹಿರಿಯರು ಬೆಟ್ಟವನ್ನೇರಿಬಂದು ದೂರದಿಂದ ನನ್ನನ್ನು ಆರಾಧಿಸಬೇಕು. 2 ಬಳಿಕ ನೀನು ಮಾತ್ರ ನನ್ನ ಬಳಿಗೆ ಬರಬೇಕು; ಬೇರೆಯವರು ಬರಕೂಡದು; ಆದರೆ ಉಳಿದ ಜನರು ಬೆಟ್ಟವನ್ನೂ ಏರಕೂಡದು” ಎಂದು ಹೇಳಿದನು.
3 ಮೋಶೆಯು ಯೆಹೋವನ ಎಲ್ಲಾ ನಿಯಮಗಳನ್ನು ಮತ್ತು ಆಜ್ಞೆಗಳನ್ನು ಜನರಿಗೆ ತಿಳಿಸಿದನು. ಆಗ ಜನರೆಲ್ಲರೂ, “ಯೆಹೋವನ ಆಜ್ಞೆಗಳಿಗೆಲ್ಲಾ ನಾವು ವಿಧೇಯರಾಗುವೆವು” ಎಂದು ಒಂದೇ ಸ್ವರದಿಂದ ಹೇಳಿದರು.
4 ಆದ್ದರಿಂದ ಮೋಶೆ ಯೆಹೋವನ ಆಜ್ಞೆಗಳನ್ನೆಲ್ಲಾ ಒಂದು ಸುರುಳಿಯಲ್ಲಿ ಬರೆದನು. ಮರುದಿನ ಮುಂಜಾನೆ, ಅವನು ಬೇಗನೆ ಎದ್ದು ಬೆಟ್ಟದ ಕೆಳಭಾಗದ ಹತ್ತಿರ, ಹನ್ನೆರಡು ಕುಲಗಳಿಗೆ ಒಂದೊಂದರಂತೆ ಹನ್ನೆರಡು ಕಂಬಗಳುಳ್ಳ ಒಂದು ಯಜ್ಞವೇದಿಕೆಯನ್ನು ಕಟ್ಟಿಸಿದನು. ಇಸ್ರೇಲರ ಹನ್ನೆರಡು ಕುಲಗಳಿಗೆ ಒಂದೊಂದರಂತೆ ಹನ್ನೆರಡು ಕಲ್ಲುಗಳನ್ನು ನಿಲ್ಲಿಸಿದನು. 5 ಬಳಿಕ ಮೋಶೆಯು ಯಜ್ಞಗಳನ್ನು ಸಮರ್ಪಿಸುವುದಕ್ಕೆ ಇಸ್ರೇಲರ ಯೌವನಸ್ಥರನ್ನು ಕಳುಹಿಸಿದನು. ಅವರು ಯೆಹೋವನಿಗೆ ಎತ್ತುಗಳನ್ನು ಸರ್ವಾಂಗಹೋಮಗಳಾಗಿಯೂ ಸಮಾಧಾನಯಜ್ಞಗಳಾಗಿಯೂ ಅರ್ಪಿಸಿದರು.
6 ಮೋಶೆಯು ಈ ಪಶುಗಳ ರಕ್ತವನ್ನು ತೆಗೆದುಕೊಂಡು ಅದರಲ್ಲಿ ಅರ್ಧಭಾಗವನ್ನು ಬೋಗುಣಿಗಳಲ್ಲಿ ಹಾಕಿದನು; ಉಳಿದ ಅರ್ಧಭಾಗವನ್ನು ಯಜ್ಞವೇದಿಕೆಯ ಮೇಲೆ ಸುರಿದನು.
7 ವಿಶೇಷ ಒಡಂಬಡಿಕೆಯಿಂದ ಬರೆಯಲ್ಪಟ್ಟಿದ್ದ ಸುರುಳಿಯನ್ನು ಮೋಶೆಯು ಎಲ್ಲಾ ಜನರಿಗೆ ಕೇಳುವಂತೆ ಓದಿದನು. ಆಗ ಜನರು, “ಯೆಹೋವನ ಆಜ್ಞೆಗಳನ್ನೆಲ್ಲ ಅನುಸರಿಸಿ ಆತನಿಗೆ ವಿಧೇಯರಾಗಿರುತ್ತೇವೆ” ಅಂದರು.
8 ಆಗ ಮೋಶೆ ಯಜ್ಞಗಳ ರಕ್ತದಿಂದ ತುಂಬಿದ ಬೋಗುಣಿಯನ್ನು ತೆಗೆದುಕೊಂಡು ಅದರಲ್ಲಿದ್ದ ರಕ್ತವನ್ನು ಜನರ ಮೇಲೆ ಚಿಮಿಕಿಸಿ, “ಈ ಸುರುಳಿಯಲ್ಲಿರುವ ವಾಕ್ಯಗಳಿಗನುಸಾರವಾಗಿ ಯೆಹೋವನು ನಿಮ್ಮೊಡನೆ ಒಂದು ವಿಶೇಷ ಒಡಂಬಡಿಕೆಯನ್ನು ಮಾಡಿಕೊಂಡಿದ್ದಾನೆಂಬುದನ್ನು ಈ ರಕ್ತವು ಸೂಚಿಸುತ್ತದೆ” ಎಂದು ಹೇಳಿದನು.
9 ಬಳಿಕ ಮೋಶೆ, ಆರೋನ, ನಾದಾಬ, ಅಬೀಹೂ ಮತ್ತು ಇಸ್ರೇಲರ ಎಪ್ಪತ್ತು ಮಂದಿ ಹಿರಿಯರು ಬೆಟ್ಟವನ್ನೇರಿದರು. 10 ಈ ಜನರು ಇಸ್ರೇಲರ ಯೆಹೋವನನ್ನು ನೋಡಿದರು. ದೇವರು ಆಕಾಶಮಂಡಲದಂತೆ ಅತಿ ನಿರ್ಮಲವಾದ ಇಂದ್ರನೀಲಮಣಿಯ ನೆಲಗಟ್ಟಿನ ಮೇಲೆ ನಿಂತುಕೊಂಡಿದ್ದನು! 11 ಇಸ್ರೇಲರ ನಾಯಕರೆಲ್ಲರೂ ಯೆಹೋವನನ್ನು ನೋಡಿದರು, ಆದರೆ ದೇವರು ಅವರನ್ನು ನಾಶಮಾಡಲಿಲ್ಲ. ಅವರೆಲ್ಲರೂ ದೇವದರ್ಶನ ಮಾಡಿ ಅನ್ನಪಾನಗಳನ್ನು ತೆಗೆದುಕೊಂಡರು.
ಯೆಹೋವನ ನಿಬಂಧನೆಯನ್ನು ಪಡೆಯಲು ಮೋಶೆ ಹೋದದ್ದು
12 ಯೆಹೋವನು ಮೋಶೆಗೆ, “ನೀನು ಬೆಟ್ಟವನ್ನು ಹತ್ತಿ ಬಂದು ನನ್ನ ಬಳಿಯಲ್ಲಿರು. ನಾನು ನನ್ನ ಉಪದೇಶಗಳನ್ನು ಮತ್ತು ಕಟ್ಟಳೆಗಳನ್ನು ಎರಡು ಕಲ್ಲಿನ ಹಲಗೆಗಳ ಮೇಲೆ ಬರೆದಿದ್ದೇನೆ. ಈ ಉಪದೇಶಗಳನ್ನು ಮತ್ತು ಕಟ್ಟಳೆಗಳನ್ನು ನೀನು ಜನರಿಗೆ ಬೋಧಿಸಬೇಕು. ನಾನು ಈ ಕಲ್ಲಿನ ಹಲಗೆಗಳನ್ನು ನಿನಗೆ ಕೊಡುವೆನು” ಎಂದು ಹೇಳಿದನು.
13 ಆದ್ದರಿಂದ ಮೋಶೆಯು ತನ್ನ ಶಿಷ್ಯನಾದ ಯೆಹೋಶುವನೊಡನೆ ಎದ್ದುನಿಂತು ದೇವರ ಬೆಟ್ಟದ ಮೇಲಕ್ಕೆ ಹೋದನು. 14 ಮೋಶೆಯು ಹಿರಿಯರಿಗೆ, “ನಾವು ನಿಮ್ಮ ಬಳಿಗೆ ಹಿಂತಿರುಗಿ ಬರುವ ತನಕ ನೀವು ಇಲ್ಲಿ ಕಾದುಕೊಂಡಿರಿ. ಆರೋನನು ಮತ್ತು ಹೂರನು ನಿಮ್ಮ ಬಳಿಯಿದ್ದಾರೆ; ನಿಮ್ಮಲ್ಲಿ ಯಾರಿಗಾದರೂ ಸಮಸ್ಯೆಯಿದ್ದರೆ ಅವರ ಬಳಿಗೆ ಹೋಗಲಿ” ಎಂದು ಹೇಳಿದನು.
ಮೋಶೆಯು ದೇವರನ್ನು ಭೇಟಿಯಾದದ್ದು
15 ಬಳಿಕ ಮೋಶೆ ಬೆಟ್ಟದ ಮೇಲಕ್ಕೆ ಹೋದನು. ಮೋಡವು ಬೆಟ್ಟವನ್ನು ಕವಿದುಕೊಂಡಿತ್ತು. 16 ಸೀನಾಯಿ ಬೆಟ್ಟದ ಮೇಲೆ ಯೆಹೋವನ ಮಹಿಮೆಯು ಇಳಿದು ಬಂದಿತು. ಮೋಡವು ಆರುದಿನಗಳವರೆಗೆ ಬೆಟ್ಟವನ್ನು ಕವಿದುಕೊಂಡಿತ್ತು. ಏಳನೆಯ ದಿನದಲ್ಲಿ, ಮೋಡದೊಳಗಿಂದ ಯೆಹೋವನು ಮೋಶೆಯೊಡನೆ ಮಾತಾಡಿದನು. 17 ಇಸ್ರೇಲರಿಗೆ ಯೆಹೋವನ ಮಹಿಮೆಯು ಬೆಟ್ಟದ ತುದಿಯಲ್ಲಿ ಉರಿಯುವ ಬೆಂಕಿಯಂತೆ ಕಾಣುತ್ತಿತ್ತು.
18 ಬಳಿಕ ಮೋಶೆಯು ಮೋಡದಲ್ಲಿ ಬೆಟ್ಟದ ಮೇಲೆ ಇನ್ನೂ ಎತ್ತರಕ್ಕೆ ಹೋದನು. ಮೋಶೆಯು ಬೆಟ್ಟದಲ್ಲಿ ಹಗಲಿರುಳು ನಲವತ್ತು ದಿವಸ ಇದ್ದನು.
ಪವಿತ್ರ ವಸ್ತುಗಳಿಗಾಗಿ ಕಾಣಿಕೆಗಳು
25 ಯೆಹೋವನು ಮೋಶೆಗೆ, 2 “ಇಸ್ರೇಲರು ನನಗೆ ಕಾಣಿಕೆಗಳನ್ನು ತರಬೇಕೆಂದು ಅವರಿಗೆ ಹೇಳು. ಪ್ರತಿಯೊಬ್ಬನು ನನಗೆ ಕೊಡುವುದರ ಬಗ್ಗೆ ತನ್ನ ಹೃದಯದಲ್ಲಿ ತೀರ್ಮಾನಿಸಿಕೊಳ್ಳಬೇಕು. ಈ ಕಾಣಿಕೆಗಳನ್ನು ನನಗಾಗಿ ಸ್ವೀಕರಿಸು. 3 ಜನರಿಂದ ನೀನು ಸ್ವೀಕರಿಸಬೇಕಾದ ವಸ್ತುಗಳ ಪಟ್ಟಿ ಇಲ್ಲಿದೆ: ಚಿನ್ನ, ಬೆಳ್ಳಿ, ತಾಮ್ರ, 4 ನೀಲಿ, ನೇರಳೆ, ಕೆಂಪುದಾರ, ನಾರುಬಟ್ಟೆ, ಆಡು ಕೂದಲಿನ ಬಟ್ಟೆ, 5 ಕೆಂಪುಬಣ್ಣದ ಕುರಿದೊಗಲು, ಉತ್ತಮ ತೊಗಲುಗಳು,[j] ಜಾಲೀಮರ, 6 ದೀಪಗಳಿಗೆ ಬೇಕಾದ ಎಣ್ಣೆ, ಅಭಿಷೇಕತೈಲಕ್ಕೆ ಮತ್ತು ಪರಿಮಳಧೂಪಕ್ಕೆ ಬೇಕಾದ ಸುಗಂಧದ್ರವ್ಯಗಳು, 7 ಏಪೋದಿಗೆ ದೈವನಿರ್ಣಯದ ಪದಕಚೀಲಕ್ಕೆ ಬೇಕಾದ ಗೋಮೇಧಕರತ್ನಗಳು ಮತ್ತು ಇತರ ರತ್ನಗಳು” ಎಂದು ಹೇಳಿದನು.
ಪವಿತ್ರ ಗುಡಾರ
8 ಇದಲ್ಲದೆ ದೇವರು ಮೋಶೆಗೆ, “ಜನರು ನನಗೋಸ್ಕರವಾಗಿ ಒಂದು ಪವಿತ್ರ ಗುಡಾರವನ್ನು ಕಟ್ಟಬೇಕು. ಆಗ ನಾನು ಅವರ ನಡುವೆ ಅದರಲ್ಲಿ ವಾಸಿಸುವೆನು. 9 ಪವಿತ್ರ ಗುಡಾರ ಮತ್ತು ಅದರಲ್ಲಿರುವ ಪ್ರತಿಯೊಂದು ವಸ್ತುವೂ ಹೇಗಿರಬೇಕೆಂದು ನಾನು ನಿನಗೆ ತೋರಿಸುವೆನು. ನಾನು ನಿನಗೆ ತೋರಿಸುವ ಮಾದರಿಯ ಪ್ರಕಾರವೇ ಪ್ರತಿಯೊಂದನ್ನು ಮಾಡು.
ಒಡಂಬಡಿಕೆಯ ಪೆಟ್ಟಿಗೆ
10 “ಜಾಲೀಮರದಿಂದ ಒಂದು ವಿಶೇಷ ಪೆಟ್ಟಿಗೆಯನ್ನು ಮಾಡಿಸು. ಈ ಪವಿತ್ರ ಪೆಟ್ಟಿಗೆಯು ಎರಡೂವರೆ ಮೊಳ ಉದ್ದ, ಒಂದೂವರೆ ಮೊಳ ಅಗಲ ಮತ್ತು ಒಂದೂವರೆ ಮೊಳ ಎತ್ತರ ಇರಬೇಕು. 11 ಅದರ ಹೊರಮೈಯನ್ನು ಮತ್ತು ಒಳಮೈಯನ್ನು ಅಪ್ಪಟ ಬಂಗಾರದಿಂದ ಹೊದಿಸಬೇಕು. ಪೆಟ್ಟಿಗೆಯ ಅಂಚುಗಳ ಸುತ್ತಲೂ ಚಿನ್ನದ ಗೋಟು ಕಟ್ಟಿಸಬೇಕು. 12 ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಲು ಅನುಕೂಲವಾಗುವಂತೆ ನಾಲ್ಕು ಚಿನ್ನದ ಬಳೆಗಳನ್ನು ಎರಕಹೊಯ್ಯಬೇಕು. ನಾಲ್ಕು ಮೂಲೆಗಳಲ್ಲಿ ಅಂದರೆ ಒಂದೊಂದು ಕಡೆಯಲ್ಲಿ ಎರಡೆರಡು ಬಳೆಗಳನ್ನು ಇಡಬೇಕು. 13 ಬಳಿಕ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಲು ಅನುಕೂಲವಾಗುವಂತೆ ಕಂಬಗಳನ್ನು ಮಾಡಬೇಕು. ಈ ಕಂಬಗಳನ್ನು ಜಾಲೀಮರದಿಂದ ಮಾಡಿ ಬಂಗಾರದಿಂದ ಹೊದಿಸಬೇಕು. 14 ಕಂಬಗಳನ್ನು ಪೆಟ್ಟಿಗೆ ಕೊನೆಗಳಲ್ಲಿರುವ ಬಳೆಗಳಲ್ಲಿ ಸೇರಿಸಿ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಬೇಕು. 15 ಕಂಬಗಳು ಯಾವಾಗಲೂ ಪೆಟ್ಟಿಗೆಯ ಬಳೆಗಳಲ್ಲಿ ಇರಬೇಕು. ಕಂಬಗಳನ್ನು ಅವುಗಳಿಂದ ಹೊರಗೆ ತೆಗೆಯಬಾರದು.
16 “ನಾನು ನಿನಗೆ ಕೊಡುವ ಆಜ್ಞಾಶಾಸನವನ್ನು ಅದರೊಳಗೆ ಇಡು” ಎಂದು ಹೇಳಿದನು. 17 ಇದಲ್ಲದೆ ದೇವರು ಮೋಶೆಗೆ, “ಅಪ್ಪಟ ಬಂಗಾರದಿಂದ ಕೃಪಾಸನವನ್ನು ಮಾಡಿಸಬೇಕು. ಅದು ಎರಡೂವರೆ ಮೊಳ ಉದ್ದವಾಗಿರಬೇಕು. ಒಂದೂವರೆ ಮೊಳ ಅಗಲವಾಗಿರಬೇಕು. 18 ಬಳಿಕ ಕೆರೂಬಿಯರ ಎರಡು ಬಂಗಾರದ ಆಕಾರಗಳನ್ನು ಮಾಡಿಸಿ ಕೃಪಾಸನದ ಎರಡು ಕೊನೆಗಳಲ್ಲಿ ಇಡಬೇಕು. 19 ಕೃಪಾಸನದ ಒಂದು ಕೊನೆಯಲ್ಲಿ ಒಂದು ಕೆರೂಬಿಯನ್ನೂ ಇನ್ನೊಂದು ಕೊನೆಯಲ್ಲಿ ಇನ್ನೊಂದು ಕೆರೂಬಿಯನ್ನೂ ಜೋಡಿಸಬೇಕು. 20 ಅವುಗಳ ರೆಕ್ಕೆಗಳು ಆಕಾಶದ ಕಡೆಗೆ ಚಾಚಿರಬೇಕು; ಪೆಟ್ಟಿಗೆಯನ್ನು ಮುಚ್ಚಿಕೊಂಡಿರಬೇಕು. ಅವುಗಳ ಮುಖಗಳು ಎದುರುಬದುರಾಗಿ ಕೃಪಾಸನವನ್ನು ನೋಡುತ್ತಿರಬೇಕು.
21 “ನಾನು ನಿನಗೆ ಕೊಡುವ ಆಜ್ಞಾಶಾಸನವನ್ನು ಪೆಟ್ಟಿಗೆಯಲ್ಲಿಡಬೇಕು; ಕೃಪಾಸನವನ್ನು ಆ ಪೆಟ್ಟಿಗೆಯ ಮೇಲಿಡಬೇಕು. 22 ನಾನು ನಿನಗೆ ದರ್ಶನ ಕೊಡುವಾಗ ಒಡಂಬಡಿಕೆ ಪೆಟ್ಟಿಗೆಯ ಮೇಲಿರುವ ಕೆರೂಬಿಗಳ ಮಧ್ಯದಿಂದ ನಿನ್ನ ಸಂಗಡ ಮಾತಾಡುವೆನು; ಇಸ್ರೇಲರಿಗೆ ಆಜ್ಞಾಪಿಸಬೇಕಾದವುಗಳನ್ನು ನಿನಗೆ ತಿಳಿಸುವೆನು.
ಮೇಜು
23 “ನೀನು ಜಾಲೀಮರದಿಂದ ಮೇಜನ್ನು ಮಾಡಬೇಕು. ಮೇಜು ಎರಡು ಮೊಳ ಉದ್ದ, ಒಂದು ಮೊಳ ಅಗಲ ಮತ್ತು ಒಂದೂವರೆ ಮೊಳ ಎತ್ತರ ಇರಬೇಕು. 24 ಶುದ್ಧಬಂಗಾರದ ತಗಡುಗಳನ್ನು ಮೇಜಿಗೆ ಹೊದಿಸಿ ಅದರ ಸುತ್ತಲೂ ಚಿನ್ನದ ಗೋಟು ಕಟ್ಟಿಸಬೇಕು. 25 ಬಳಿಕ ಮೇಜಿನ ಸುತ್ತಲೂ ಮೂರು ಇಂಚು[k] ಅಗಲದ ಚೌಕಟ್ಟನ್ನು ಮಾಡಿಸಿ ಅದಕ್ಕೂ ಚಿನ್ನದ ಗೋಟು ಕಟ್ಟಿಸಬೇಕು. 26 ಬಳಿಕ ನಾಲ್ಕು ಚಿನ್ನದ ಬಳೆಗಳನ್ನು ಮಾಡಿಸಿ ಮೇಜಿನ ನಾಲ್ಕು ಕಾಲುಗಳಿಗೆ ಜೋಡಿಸಬೇಕು. 27 ಆ ಬಳೆಗಳು ಅಡ್ಡಪಟ್ಟಿಗೆ ಜೋಡಿಸಿಕೊಂಡಿರಬೇಕು. ಮೇಜನ್ನು ಹೊತ್ತುಕೊಂಡು ಹೋಗುವುದಕ್ಕೆ ಉಪಯೋಗಿಸುವ ಕೋಲುಗಳನ್ನು ಅವುಗಳಲ್ಲಿ ಸೇರಿಸಬೇಕು. 28 ಆ ಕೋಲುಗಳನ್ನು ಜಾಲೀಮರದಿಂದ ಮಾಡಿಸಿ ಅವುಗಳಿಗೆ ಚಿನ್ನದ ತಗಡನ್ನು ಹೊದಿಸಬೇಕು. 29 ತಟ್ಟೆಗಳನ್ನು, ಚಮಚಗಳನ್ನು, ಹೂಜಿಗಳನ್ನು ಮತ್ತು ಬೋಗುಣಿಗಳನ್ನು ಶುದ್ಧಬಂಗಾರದಿಂದ ಮಾಡಬೇಕು. ಹೂಜಿಗಳನ್ನು ಮತ್ತು ಬೋಗುಣಿಗಳನ್ನು ಪಾನದ್ರವ್ಯಗಳನ್ನು ಅರ್ಪಿಸಲು ಉಪಯೋಗಿಸಬೇಕು. 30 ನೈವೇದ್ಯದ ರೊಟ್ಟಿಗಳನ್ನು ಮೇಜಿನ ಮೇಲೆ ನನ್ನ ಮುಂದೆ ಇಡು. ಅವು ಅಲ್ಲಿ ನನ್ನ ಮುಂದೆ ಯಾವಾಗಲೂ ಇರಬೇಕು.
ದೀಪಸ್ತಂಭ
31 “ಬಳಿಕ ಒಂದು ದೀಪಸ್ತಂಭವನ್ನು ಶುದ್ಧಬಂಗಾರದಿಂದ ಮಾಡಿಸಬೇಕು. ಅದರ ಬುಡವನ್ನೂ ಕಂಬವನ್ನೂ ಕಸೂತಿ ಕೆಲಸದಿಂದ ಮಾಡಿಸಬೇಕು. ಆ ದೀಪಸ್ತಂಭವೆಲ್ಲಾ ಅಖಂಡವಾಗಿದ್ದು ಪುಷ್ಪಪಾತ್ರೆಗಳಂತೆಯೂ ಅಲಂಕಾರವಾಗಿ ಕೆತ್ತಲ್ಪಡಬೇಕು.
32 “ದೀಪಸ್ತಂಭಕ್ಕೆ ಒಂದೊಂದು ಪಾರ್ಶ್ವದಲ್ಲಿ ಮೂರುಮೂರು ಕೊಂಬೆಗಳಂತೆ ಆರು ಕೊಂಬೆಗಳಿರಬೇಕು. 33 ಪ್ರತಿಯೊಂದು ಕೊಂಬೆಯಲ್ಲಿ ಬಾದಾಮಿ ಹೂವುಗಳಂತಿರುವ ಮೂರುಮೂರು ಪುಷ್ಪಾಲಂಕಾರಗಳಿರಬೇಕು. ಒಂದೊಂದು ಅಲಂಕಾರಕ್ಕೆ ಒಂದು ಪುಷ್ಪಪಾತ್ರೆಯೂ ಒಂದು ಪುಷ್ಪವೂ ಇರಬೇಕು. ಆರು ಕೊಂಬೆಗಳನ್ನೂ ಹಾಗೇ ಮಾಡಿಸಬೇಕು. 34 ದೀಪಸ್ತಂಭದಲ್ಲಿ ಪುಷ್ಪಪಾತ್ರೆಗಳೂ ಪುಷ್ಪಗಳೂ ಇರುವ ಬಾದಾಮಿ ಹೂವುಗಳಂತೆ ನಾಲ್ಕು ಪುಷ್ಪಾಲಂಕಾರಗಳು ಇರಬೇಕು. 35 ಎರಡೆರಡು ಕೊಂಬೆಗಳು ಕವಲು ಒಡೆದಿರುವ ಸ್ಥಳಗಳಲ್ಲೆಲ್ಲಾ ಒಂದೊಂದು ಪುಷ್ಪಪಾತ್ರೆಯಿರಬೇಕು. 36 ಪುಷ್ಪಪಾತ್ರೆಗಳನ್ನೂ ಕೊಂಬೆಗಳನ್ನೂ ಒಳಗೊಂಡಿರುವ ದೀಪಸ್ತಂಭವು ಅಖಂಡವಾಗಿದ್ದು ಅಪ್ಪಟ ಬಂಗಾರದಿಂದಲೂ ನಕಾಸಿ ಕೆಲಸದಿಂದಲೂ ಮಾಡಿದ್ದಾಗಿರಬೇಕು. 37 ಅದಕ್ಕೆ ಏಳು ಹಣತೆಗಳನ್ನು ಮಾಡಿಸಬೇಕು. ಈ ಹಣತೆಗಳು ದೀಪಸ್ತಂಭದ ಮುಂದಿರುವ ಪ್ರದೇಶಕ್ಕೆ ಬೆಳಕು ಕೊಡುವುದು. 38 ಅದರ ಬತ್ತಿಗಳನ್ನು ಕತ್ತರಿಸುವ ಕತ್ತರಿಯನ್ನು ಮತ್ತು ಹರಿವಾಣಗಳನ್ನು ಅಪ್ಪಟ ಬಂಗಾರದಿಂದ ಮಾಡಿಸಬೇಕು. 39 ದೀಪಸ್ತಂಭವನ್ನು ಮತ್ತು ಅದರ ಎಲ್ಲಾ ಉಪಕರಣಗಳನ್ನು ಎಪ್ಪತ್ತೈದು ಪೌಂಡು[l] 40 ನಾನು ನಿನಗೆ ಬೆಟ್ಟದ ಮೇಲೆ ತೋರಿಸಿದ ಮಾದರಿಯಂತೆಯೇ ಪ್ರತಿಯೊಂದನ್ನು ಮಾಡಬೇಕು” ಎಂದು ಹೇಳಿದನು.
ಪವಿತ್ರಗುಡಾರ
26 ಯೆಹೋವನು ಮೋಶೆಗೆ, “ಪವಿತ್ರಗುಡಾರವನ್ನು ಹತ್ತು ಪರದೆಗಳಿಂದ ಮಾಡಿಸಬೇಕು. ಈ ಪರದೆಗಳನ್ನು ನಾರುಬಟ್ಟೆ ಮತ್ತು ನೀಲಿ, ನೇರಳೆ ಮತ್ತು ಕೆಂಪು ದಾರದಿಂದ ಮಾಡಿಸಬೇಕು. ನುರಿತ ಕೆಲಸಗಾರನು ಪರದೆಗಳಲ್ಲಿ ರೆಕ್ಕೆಗಳಿರುವ ಕೆರೂಬಿಗಳ ಚಿತ್ರವನ್ನು ಕಸೂತಿ ಹಾಕಬೇಕು. 2 ಪ್ರತಿಯೊಂದು ಪರದೆಯ ಅಳತೆಯು ಒಂದೇ ಆಗಿರಬೇಕು. ಪ್ರತಿ ಪರದೆಯು ಇಪ್ಪತ್ತೆಂಟು ಮೊಳ ಉದ್ದವಾಗಿಯೂ ನಾಲ್ಕು ಮೊಳ ಅಗಲವಾಗಿಯೂ ಇರಬೇಕು. 3 ಪರದೆಗಳನ್ನು ಒಟ್ಟಾಗಿ ಜೋಡಿಸಿ ಎರಡು ಭಾಗಗಳನ್ನಾಗಿ ಮಾಡಬೇಕು. ಒಂದು ಭಾಗದಲ್ಲಿ ಐದು ಪರದೆಗಳನ್ನೂ ಇನ್ನೊಂದು ಭಾಗದಲ್ಲಿ ಐದು ಪರದೆಗಳನ್ನೂ ಒಟ್ಟಾಗಿ ಜೋಡಿಸಬೇಕು. 4 ಒಂದು ಭಾಗದ ಕೊನೆಯ ಪರದೆಯ ಅಂಚಿನಲ್ಲಿ ಕುಣಿಕೆಗಳನ್ನು ನೀಲಿ ಬಟ್ಟೆಯಿಂದ ಮಾಡಬೇಕು; ಇನ್ನೊಂದು ಭಾಗದ ಕೊನೆಯ ಪರದೆಯ ಅಂಚಿನಲ್ಲಿಯೂ ಅದೇ ರೀತಿ ಮಾಡಬೇಕು. 5 ಒಂದು ಭಾಗದ ಕೊನೆಯ ಪರದೆಯ ಅಂಚಿನಲ್ಲಿ ಐವತ್ತು ಕುಣಿಕೆಗಳು ಇರಬೇಕು. ಇನ್ನೊಂದು ಭಾಗದ ಕೊನೆಯ ಪರದೆಯ ಅಂಚಿನಲ್ಲೂ ಐವತ್ತು ಕುಣಿಕೆಗಳು ಇರಬೇಕು. 6 ಬಳಿಕ ಪರದೆಗಳನ್ನು ಒಟ್ಟಾಗಿ ಜೋಡಿಸಲು ಅನುಕೂಲವಾಗುವಂತೆ ಐವತ್ತು ಚಿನ್ನದ ಕೊಂಡಿಗಳನ್ನು ಮಾಡಿಸಬೇಕು. ಹೀಗೆ ಒಂದೇ ಗುಡಾರವಾಗುವುದು.
7 “ಪವಿತ್ರಗುಡಾರದ ಮೇಲೆ ಹೊದಿಸುವುದಕ್ಕೆ ಇನ್ನೊಂದು ಗುಡಾರವನ್ನು ಮಾಡಿಸಬೇಕು. ಈ ಗುಡಾರವನ್ನು ಹನ್ನೊಂದು ಪರದೆಗಳಿಂದ ಮಾಡಿಸಬೇಕು. ಈ ಪರದೆಗಳು ಆಡುಕೂದಲಿನಿಂದ ಮಾಡಲ್ಪಟ್ಟಿರಬೇಕು. 8 ಈ ಎಲ್ಲಾ ಪರದೆಗಳ ಅಳತೆಯು ಒಂದೇ ಆಗಿರಬೇಕು. ಅವು ಮೂವತ್ತು ಮೊಳ ಉದ್ದವಾಗಿಯೂ ನಾಲ್ಕು ಮೊಳ ಅಗಲವಾಗಿಯೂ ಇರಬೇಕು. 9 ಐದು ಪರದೆಗಳನ್ನು ಒಟ್ಟಾಗಿ ಸೇರಿಸಿ ಒಂದು ಭಾಗವನ್ನಾಗಿ ಮಾಡು. ಬಳಿಕ ಉಳಿದ ಆರು ಪರದೆಗಳನ್ನು ಒಟ್ಟಾಗಿ ಸೇರಿಸಿ ಇನ್ನೊಂದು ಭಾಗವನ್ನಾಗಿ ಮಾಡು. ಆರನೇ ಪರದೆಯ ಅರ್ಧದಷ್ಟನ್ನು ಡೇರೆಯ ಮುಂದುಗಡೆಯಲ್ಲಿ ಮಡಚಬೇಕು. 10 ಒಂದು ಭಾಗದ ಕೊನೇ ಪರದೆಯ ಕೆಳಗಿನ ಭಾಗದ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನು ಮಾಡಬೇಕು. ಇನ್ನೊಂದು ಭಾಗದ ಕೊನೇ ಪರದೆಯ ಕೆಳಭಾಗದಲ್ಲಿಯೂ ಅದೇ ರೀತಿಯಾಗಿ ಮಾಡಬೇಕು. 11 ಬಳಿಕ ಪರದೆಗಳನ್ನು ಒಟ್ಟಾಗಿ ಜೋಡಿಸಲು ಐವತ್ತು ತಾಮ್ರದ ಕೊಂಡಿಗಳನ್ನು ಮಾಡಬೇಕು. ಹೀಗೆ ಒಂದೇ ಗುಡಾರವಾಗುವುದು. 12 ಈ ಗುಡಾರದ ಪರದೆಗಳಲ್ಲಿ ಉಳಿದ ಹೆಚ್ಚಿನ ಭಾಗಗಳನ್ನು ಅಂದರೆ ಉಳಿದ ಅರ್ಧಭಾಗವನ್ನು ಪವಿತ್ರಗುಡಾರದ ಹಿಂಬದಿಯಲ್ಲಿ ತೂಗುಹಾಕಬೇಕು. 13 ಪಾರ್ಶ್ವಗಳಲ್ಲಿ ಈ ಗುಡಾರದ ಪರದೆಗಳು, ಪವಿತ್ರಗುಡಾರದ ಕೆಳಗಣ ಅಂಚುಗಳಿಂದ ಕೆಳಗೆ ಒಂದು ಮೊಳದಷ್ಟು ತೂಗಾಡುವವು. ಆದ್ದರಿಂದ ಈ ಡೇರೆಯು ಸಂಪೂರ್ಣವಾಗಿ ಪವಿತ್ರಗುಡಾರವನ್ನು ಮುಚ್ಚಿಕೊಳ್ಳುವುದು. 14 ಹೊರಗಿನ ಗುಡಾರಕ್ಕೆ ಸರಿಹೊಂದುವ ಎರಡು ಹೊದಿಕೆಗಳನ್ನು ಮಾಡಿಸಬೇಕು. ಒಂದು ಹೊದಿಕೆಯನ್ನು ಕೆಂಪುಬಣ್ಣದ ಕುರಿದೊಗಲಿನ ಚರ್ಮದಿಂದ ಮಾಡಬೇಕು. ಇನ್ನೊಂದು ಹೊದಿಕೆಯನ್ನು ಉತ್ತಮ ತೊಗಲಿನಿಂದ ಮಾಡಿಸಬೇಕು.
15 “ಪವಿತ್ರಗುಡಾರದ ಚೌಕಟ್ಟುಗಳನ್ನು ಜಾಲೀಮರದಿಂದ ಮಾಡಿಸಬೇಕು. 16 ಚೌಕಟ್ಟುಗಳು ಹತ್ತುಮೊಳ ಎತ್ತರವಾಗಿಯೂ ಒಂದೂವರೆ ಮೊಳ ಅಗಲವಾಗಿಯೂ ಇರಬೇಕು. 17 ಪ್ರತಿ ಚೌಕಟ್ಟನ್ನು ಮಾಡುವುದಕ್ಕೆ ಎರಡು ಕಡೆಯ ಕೋಲುಗಳನ್ನು ಅಡ್ಡಪಟ್ಟಿಗಳೊಂದಿಗೆ ಒಟ್ಟಾಗಿ ಜೋಡಿಸಬೇಕು. ಪವಿತ್ರಗುಡಾರದ ಎಲ್ಲಾ ಚೌಕಟ್ಟುಗಳು ಒಂದೇ ರೀತಿಯಾಗಿರಬೇಕು. 18 ಪವಿತ್ರಗುಡಾರದ ದಕ್ಷಿಣ ಭಾಗಕ್ಕೆ ಇಪ್ಪತ್ತು ಚೌಕಟ್ಟುಗಳನ್ನು ಮಾಡಿಸಬೇಕು. 19 ಚೌಕಟ್ಟುಗಳಿಗೆ ನಲವತ್ತು ಬೆಳ್ಳಿಯ ಗದ್ದಿಗೇಕಲ್ಲುಗಳನ್ನು ಮಾಡಿಸು. ಪ್ರತಿಯೊಂದು ಕಡೆಯ ಕಂಬಕ್ಕೆ ಒಂದು ಗದ್ದಿಗೇಕಲ್ಲಿನಂತೆ ಪ್ರತಿಯೊಂದು ಚೌಕಟ್ಟಿಗೆ ಎರಡು ಬೆಳ್ಳಿಯ ಗದ್ದಿಗೇಕಲ್ಲುಗಳು ಇರಬೇಕು. 20 ಪವಿತ್ರಗುಡಾರದ ಇನ್ನೊಂದು ಕಡೆಗೆ ಅಂದರೆ, ಉತ್ತರದಿಕ್ಕಿನಲ್ಲಿಯೂ ಇಪ್ಪತ್ತು ಚೌಕಟ್ಟುಗಳನ್ನು ಮಾಡಿಸಬೇಕು. 21 ಪ್ರತಿಯೊಂದು ಚೌಕಟ್ಟಿನ ಕೆಳಗೆ ಎರಡು ಗದ್ದಿಗೇಕಲ್ಲುಗಳು ಇರುವಂತೆ ಪ್ರತಿಯೊಂದು ಕಡೆಗೆ ನಲವತ್ತು ಬೆಳ್ಳಿಯ ಗದ್ದಿಗೇಕಲ್ಲುಗಳನ್ನು ಮಾಡಿಸಬೇಕು. 22 ಪವಿತ್ರಗುಡಾರದ ಹಿಂಭಾಗಕ್ಕೆ ಅಂದರೆ ಪಶ್ಚಿಮ ದಿಕ್ಕಿನಲ್ಲಿಯೂ ಆರು ಚೌಕಟ್ಟುಗಳನ್ನು ಮಾಡಿಸಬೇಕು. 23 ಪವಿತ್ರಗುಡಾರದ ಹಿಂಭಾಗದಲ್ಲಿರುವ ಮೂಲೆಗಳಿಗೆ ಎರಡು ಚೌಕಟ್ಟುಗಳನ್ನು ಮಾಡಿಸಬೇಕು. 24 ಮೂಲೆಗಳಲ್ಲಿರುವ ಚೌಕಟ್ಟುಗಳು ಕೆಳಗಿನ ಭಾಗದಲ್ಲಿ ಒಟ್ಟಾಗಿ ಜೋಡಿಸಿರಬೇಕು. ತುದಿಯಲ್ಲಿ ಒಂದು ಬಳೆಯು ಚೌಕಟ್ಟುಗಳನ್ನು ಒಟ್ಟಾಗಿ ಹಿಡಿದುಕೊಂಡಿರುವುದು. ಎರಡು ಮೂಲೆಗಳಿಗೂ ಅದೇ ರೀತಿಯಾಗಿ ಮಾಡಿಸಬೇಕು. 25 ಗುಡಾರದ ಪಶ್ಚಿಮ ದಿಕ್ಕಿನ ಕೊನೆಯಲ್ಲಿ ಒಟ್ಟು ಎಂಟು ಚೌಕಟ್ಟುಗಳಿರುವವು. ಪ್ರತಿ ಚೌಕಟ್ಟಿನ ಕೆಳಗೆ ಎರಡು ಗದ್ದಿಗೇಕಲ್ಲುಗಳಂತೆ ಹದಿನಾರು ಬೆಳ್ಳಿಯ ಗದ್ದಿಗೇಕಲ್ಲುಗಳಿರುವವು.
26 “ಜಾಲೀಮರದಿಂದ ಪವಿತ್ರಗುಡಾರದ ಚೌಕಟ್ಟುಗಳಿಗೆ ಅಗುಳಿಗಳನ್ನು ಮಾಡಿಸು. ಪವಿತ್ರಗುಡಾರದ ಒಂದು ಭಾಗದಲ್ಲಿ ಐದು ಅಗುಳಿಗಳು ಇರಬೇಕು. 27 ಪವಿತ್ರಗುಡಾರದ ಇನ್ನೊಂದು ಭಾಗದಲ್ಲಿ ಐದು ಅಗುಳಿಗಳು ಇರಬೇಕು. ಪವಿತ್ರಗುಡಾರದ ಹಿಂಭಾಗದಲ್ಲಿರುವ, ಅಂದರೆ ಪಶ್ಚಿಮ ಭಾಗದಲ್ಲಿರುವ ಚೌಕಟ್ಟುಗಳಿಗೆ ಐದು ಅಗುಳಿಗಳು ಇರಬೇಕು. 28 ಮಧ್ಯದಲ್ಲಿರುವ ಅಗುಳಿಯು ಚೌಕಟ್ಟುಗಳ ಮೂಲಕ ಒಂದು ಕೊನೆಯಿಂದ ಇನ್ನೊಂದು ಕೊನೆಯವರೆಗೂ ಹಾದುಹೋಗಬೇಕು.
29 “ಚೌಕಟ್ಟುಗಳಿಗೆ ಚಿನ್ನದ ತಗಡನ್ನು ಹೊದಿಸಬೇಕು; ಅಗುಳಿಗಳನ್ನು ಹಿಡಿದುಕೊಂಡಿರಲು ಚೌಕಟ್ಟುಗಳಿಗೆ ಬಳೆಗಳನ್ನು ಮಾಡಿಸಬೇಕು. ಮಾತ್ರವಲ್ಲದೆ ಅಗುಳಿಗಳನ್ನು ಚಿನ್ನದಿಂದ ಹೊದಿಸಬೇಕು. 30 ನಾನು ನಿನಗೆ ಬೆಟ್ಟದಲ್ಲಿ ತೋರಿಸಿದ ಪ್ರಕಾರವೇ ಪವಿತ್ರಗುಡಾರವನ್ನು ಮಾಡಿಸಬೇಕು.
ಪವಿತ್ರಗುಡಾರದ ಒಳಭಾಗ
31 “ಪವಿತ್ರಗುಡಾರದ ಒಳಭಾಗವನ್ನು ವಿಂಗಡಿಸಲು ಉತ್ತಮವಾದ ಹುರಿನಾರಿನ ಬಟ್ಟೆಯಿಂದ ಒಂದು ವಿಶೇಷ ಪರದೆಯನ್ನು ಮಾಡಿಸಬೇಕು. ನೀಲಿ, ನೇರಳೆ ಮತ್ತು ಕೆಂಪು ದಾರಗಳಿಂದ ಪರದೆಯ ಮೇಲೆ ಕೆರೂಬಿಗಳ ಚಿತ್ರಗಳನ್ನು ಕಸೂತಿಹಾಕಿಸಬೇಕು. 32 ಜಾಲೀಮರದಿಂದ ನಾಲ್ಕು ಕಂಬಗಳನ್ನು ಮಾಡಿಸಿ ಅವುಗಳನ್ನು ಚಿನ್ನದಿಂದ ಹೊದಿಸಬೇಕು. ನಾಲ್ಕು ಕಂಬಗಳ ಮೇಲೆ ಚಿನ್ನದಿಂದ ಮಾಡಿದ ಕೊಂಡಿಗಳನ್ನು ಹಾಕಿಸಬೇಕು. ಕಂಬಗಳ ಕೆಳಗೆ ಬೆಳ್ಳಿಯ ಗದ್ದಿಗೇಕಲ್ಲುಗಳನ್ನು ಹಾಕಿಸಬೇಕು. ಬಳಿಕ ಚಿನ್ನದ ಕೊಂಡಿಗಳಲ್ಲಿ ಪರದೆಯನ್ನು ತೂಗುಹಾಕಿಸಬೇಕು. 33 ಚಿನ್ನದ ಬಳೆಗಳ ಕೆಳಗೆ ಪರದೆಯನ್ನು ಹಾಕಿಸಬೇಕು; ಪರದೆಯ ಹಿಂಭಾಗದಲ್ಲಿ ಒಡಂಬಡಿಕೆಯ ಪೆಟ್ಟಿಗೆಯನ್ನು ಇಡಬೇಕು. ಈ ಪರದೆಯು ಪವಿತ್ರ ಸ್ಥಳವನ್ನು ಮಹಾಪವಿತ್ರ ಸ್ಥಳದಿಂದ ಪ್ರತ್ಯೇಕಿಸುವುದು. 34 ಮಹಾಪವಿತ್ರ ಸ್ಥಾನದಲ್ಲಿರುವ ಒಡಂಬಡಿಕೆಯ ಪೆಟ್ಟಿಗೆಯ ಮೇಲೆ ಕೃಪಾಸನವನ್ನು ಇಡಬೇಕು.
35 “ಪರದೆಯ ಇನ್ನೊಂದು ಭಾಗದಲ್ಲಿ ನೀನು ಮಾಡಿಸಿದ ವಿಶೇಷ ಮೇಜನ್ನು ಇಡಬೇಕು. ಮೇಜು ಪರಿಶುದ್ಧ ಗುಡಾರದ ಉತ್ತರಭಾಗದಲ್ಲಿರಬೇಕು. ಬಳಿಕ ದೀಪಸ್ತಂಭವನ್ನು ದಕ್ಷಿಣಭಾಗದಲ್ಲಿಡಬೇಕು. ಇದು ಮೇಜಿನ ಎದುರಿಗೆ ಇರಬೇಕು.
ಪವಿತ್ರಗುಡಾರದ ಬಾಗಿಲು
36 “ಬಳಿಕ ಪವಿತ್ರಗುಡಾರದ ಪ್ರವೇಶಸ್ಥಳವನ್ನು ಮುಚ್ಚುವುದಕ್ಕೆ ಒಂದು ಪರದೆಯನ್ನು ಮಾಡಿಸಬೇಕು. ಈ ಪರದೆಯನ್ನು ನೀಲಿ, ನೇರಳೆ, ಕೆಂಪು ದಾರಗಳಿಂದ ಮತ್ತು ಶ್ರೇಷ್ಠ ನಾರುಬಟ್ಟೆಯಿಂದ ಮಾಡಿಸಿ ಅದರಲ್ಲಿ ಚಿತ್ರಗಳನ್ನು ಕಸೂತಿ ಹಾಕಿಸಬೇಕು. 37 ಈ ಪರದೆಗೆ ಚಿನ್ನದ ಕೊಂಡಿಗಳನ್ನು ಮಾಡಿಸಬೇಕು. ಜಾಲೀಮರದಿಂದ ಐದು ಕಂಬಗಳನ್ನು ಮಾಡಿಸಿ ಅವುಗಳಿಗೆ ಚಿನ್ನದ ತಗಡನ್ನು ಹೊದಿಸಬೇಕು ಮತ್ತು ಈ ಕಂಬಗಳಿಗೆ ಐದು ತಾಮ್ರದ ಗದ್ದಿಗೇಕಲ್ಲುಗಳನ್ನು ಮಾಡಿಸಬೇಕು” ಎಂದು ಹೇಳಿದನು.
ಯಜ್ಞವೇದಿಕೆ
27 ಯೆಹೋವನು ಮೋಶೆಗೆ, “ಜಾಲೀಮರದಿಂದ ಯಜ್ಞವೇದಿಕೆಯನ್ನು ಮಾಡಿಸಬೇಕು. ಈ ಯಜ್ಞವೇದಿಕೆಯು ಚೌಕವಾಗಿರಬೇಕು. ಅದು ಐದು ಮೊಳ ಉದ್ದ, ಐದು ಮೊಳ ಅಗಲ ಮತ್ತು ಮೂರು ಮೊಳ ಎತ್ತರ ಇರಬೇಕು. 2 ಈ ಯಜ್ಞವೇದಿಕೆಯ ನಾಲ್ಕು ಮೂಲೆಗಳಿಗೆ ನಾಲ್ಕು ಕೊಂಬುಗಳನ್ನು ಮಾಡಿಸಬೇಕು. ಪ್ರತಿಯೊಂದು ಕೊಂಬೂ ಯಜ್ಞವೇದಿಕೆಗೆ ಜೋಡಿಸಲ್ಪಟ್ಟಿರಬೇಕು. ಹೀಗೆ ಅವು ಯಜ್ಞವೇದಿಕೆಯ ಅವಿಭಾಜ್ಯ ಭಾಗವಾಗಿರಬೇಕು. ಬಳಿಕ ಯಜ್ಞವೇದಿಕೆಯನ್ನು ತಾಮ್ರದ ತಗಡಿನಿಂದ ಹೊದಿಸಬೇಕು.
3 “ಯಜ್ಞವೇದಿಕೆಯ ಉಪಕರಣಗಳನ್ನೆಲ್ಲಾ ತಾಮ್ರದಿಂದ ಮಾಡಿಸಬೇಕು. ಬಟ್ಟಲುಗಳನ್ನು, ಸಲಿಕೆಗಳನ್ನು, ಬೋಗುಣಿಗಳನ್ನು, ಮುಳ್ಳುಗಳನ್ನು ಮತ್ತು ಅಗ್ಗಿಷ್ಟಿಕೆಗಳನ್ನು ಮಾಡಿಸಬೇಕು. ಇವುಗಳನ್ನು ಯಜ್ಞವೇದಿಕೆಯಿಂದ ಬೂದಿಯನ್ನು ತೆಗೆದು ಶುಚಿಗೊಳಿಸುವುದಕ್ಕೆ ಉಪಯೋಗಿಸಬೇಕು. 4 ಯಜ್ಞವೇದಿಕೆಗೆ ಹೆಣಿಗೇ ಕೆಲಸದಿಂದ ತಾಮ್ರದ ಜಾಳಿಗೆ ಮಾಡಿಸಬೇಕು. ಈ ಜಾಳಿಗೆಯ ನಾಲ್ಕುಮೂಲೆಗಳಲ್ಲಿ ನಾಲ್ಕು ತಾಮ್ರದ ಬಳೆಗಳನ್ನು ಮಾಡಿಸಬೇಕು. 5 ಆ ಜಾಳಿಗೆಯು ಯಜ್ಞವೇದಿಕೆಯ ಸುತ್ತಲಿರುವ ಕಟ್ಟೆಯ ಕೆಳಗೆ ಇದ್ದು ಯಜ್ಞವೇದಿಕೆಯ ಬುಡದಿಂದ ಅರ್ಧದಷ್ಟು ಮೇಲಕ್ಕೆ ಇರಬೇಕು.
6 “ಯಜ್ಞವೇದಿಕೆಗೆ ಕೋಲುಗಳನ್ನು ಜಾಲೀಮರದಿಂದ ಮಾಡಿಸಿ ಅವುಗಳಿಗೆ ತಾಮ್ರದ ತಗಡನ್ನು ಹೊದಿಸಬೇಕು. 7 ಯಜ್ಞವೇದಿಕೆಯ ಎರಡು ಕಡೆಗಳಲ್ಲಿರುವ ಬಳೆಗಳಲ್ಲಿ ಕೋಲುಗಳನ್ನು ಸೇರಿಸಬೇಕು. ಈ ಕೋಲುಗಳಿಂದ ಯಜ್ಞವೇದಿಕೆಯನ್ನು ಹೊತ್ತುಕೊಂಡು ಹೋಗಬೇಕು. 8 ಯಜ್ಞವೇದಿಕೆಯ ಪಾರ್ಶ್ವಗಳನ್ನು ಹಲಗೆಗಳಿಂದ ಮಾಡಿಸಬೇಕು. ನಾನು ಬೆಟ್ಟದ ಮೇಲೆ ನಿನಗೆ ತೋರಿಸಿದ ಪ್ರಕಾರವೇ ಯಜ್ಞವೇದಿಕೆಯನ್ನು ಮಾಡಿಸಬೇಕು.
ಪವಿತ್ರಗುಡಾರದ ಅಂಗಳ
9 “ಪವಿತ್ರಗುಡಾರಕ್ಕೆ ಅಂಗಳವನ್ನು ಮಾಡಿಸಬೇಕು. ದಕ್ಷಿಣ ದಿಕ್ಕಿನಲ್ಲಿ ನೂರು ಮೊಳ ಉದ್ದದ ಪರದೆಗಳ ಗೋಡೆಯಿರಬೇಕು. ಈ ಪರದೆಗಳನ್ನು ಉತ್ತಮ ನಾರುಬಟ್ಟೆಯಿಂದ ಮಾಡಿಸಬೇಕು. 10 ಇಪ್ಪತ್ತು ಕಂಬಗಳನ್ನು ಮತ್ತು ಆ ಕಂಬಗಳಿಗೆ ಇಪ್ಪತ್ತು ತಾಮ್ರದ ಗದ್ದಿಗೇಕಲ್ಲುಗಳನ್ನು ಮಾಡಿಸಬೇಕು. ಕಂಬಗಳಿಗೆ ಬೆಳ್ಳಿಯ ಕೊಂಡಿಗಳನ್ನು ಮತ್ತು ಪರದೆಯ ಕೋಲುಗಳಿಗೆ ಬೆಳ್ಳಿಯ ಕಂಬಿಗಳನ್ನು ಮಾಡಿಸಬೇಕು. 11 ಉತ್ತರ ದಿಕ್ಕಿನಲ್ಲಿ ಸಹ ನೂರು ಮೊಳ ಉದ್ದದ ಪರದೆಗಳ ಗೋಡೆಯಿರಬೇಕು. ಅದಕ್ಕೆ ಇಪ್ಪತ್ತು ಕಂಬಿಗಳು ಮತ್ತು ಇಪ್ಪತ್ತು ತಾಮ್ರದ ಗದ್ದಿಗೇಕಲ್ಲುಗಳು ಇರಬೇಕು. ಕಂಬಗಳ ಕೊಂಡಿಗಳನ್ನು ಮತ್ತು ಪರದೆಯ ಕಟ್ಟುಗಳನ್ನು ಬೆಳ್ಳಿಯಿಂದ ಮಾಡಿಸಬೇಕು.
12 “ಪಶ್ಚಿಮದಿಕ್ಕಿನಲ್ಲಿ ಅಂಗಳದ ಅಗಲಕ್ಕೆ ಐವತ್ತು ಮೊಳ ಉದ್ದದ ಪರದೆಗಳೂ ಹತ್ತು ಕಂಬಗಳೂ ಮತ್ತು ಹತ್ತು ಗದ್ದಿಗೇಕಲ್ಲುಗಳೂ ಇರಬೇಕು. 13 ಅಂಗಳದ ಪೂರ್ವದಿಕ್ಕಿನಲ್ಲಿ ಐವತ್ತು ಮೊಳ ಉದ್ದ ಇರಬೇಕು. 14 ಈ ಪೂರ್ವದಿಕ್ಕಿನಲ್ಲಿ ಅಂಗಳದ ಪ್ರವೇಶದ್ವಾರವಿರುತ್ತದೆ. ಪ್ರವೇಶದ್ವಾರದ ಒಂದು ಕಡೆಯಲ್ಲಿ ಹದಿನೈದು ಮೊಳ ಉದ್ದದ ಪರದೆಗಳು, ಮೂರು ಕಂಬಗಳು ಮತ್ತು ಮೂರು ಗದ್ದಿಗೇಕಲ್ಲುಗಳು ಇರಬೇಕು. 15 ಇನ್ನೊಂದು ಕಡೆಯಲ್ಲಿ ಹದಿನೈದು ಮೊಳ ಉದ್ದದ ಪರದೆಗಳು, ಮೂರು ಕಂಬಗಳು; ಮೂರು ಗದ್ದಿಗೇಕಲ್ಲುಗಳು ಇರಬೇಕು.
16 “ಅಂಗಳದ ದ್ವಾರವನ್ನು ಮುಚ್ಚುವುದಕ್ಕೆ ಇಪ್ಪತ್ತು ಮೊಳ ಉದ್ದದ ಪರದೆಯನ್ನು ಮಾಡಿಸಬೇಕು. ಪರದೆಯನ್ನು ಉತ್ತಮ ನಾರಿನ ಬಟ್ಟೆಯಿಂದ ಮತ್ತು ನೀಲಿ, ನೇರಳೆ ಮತ್ತು ಕೆಂಪು ದಾರಗಳಿಂದ ಮಾಡಿಸಬೇಕು. ಆ ಪರದೆಯಲ್ಲಿ ಅಲಂಕೃತವಾದ ಚಿತ್ರಗಳನ್ನು ಬುಟೇದಾರೀ ಕೆಲಸದವರಿಂದ ಮಾಡಿಸಬೇಕು. ಆ ಪರದೆಗೆ ನಾಲ್ಕು ಕಂಬಗಳು ಮತ್ತು ನಾಲ್ಕು ಗದ್ದಿಗೇಕಲ್ಲುಗಳು ಇರಬೇಕು. 17 ಅಂಗಳದ ಸುತ್ತಲಿರುವ ಕಂಬಗಳನ್ನೆಲ್ಲ ಬೆಳ್ಳಿಯ ಪರದೆ ಕೋಲುಗಳೊಡನೆ ಜೋಡಿಸಬೇಕು. ಕಂಬಗಳ ಕೊಂಡಿಗಳನ್ನು ಬೆಳ್ಳಿಯಿಂದಲೂ ಕಂಬಗಳ ಗದ್ದಿಗೇಕಲ್ಲುಗಳನ್ನು ತಾಮ್ರದಿಂದಲೂ ಮಾಡಿಸಬೇಕು. 18 ಅಂಗಳವು ನೂರು ಮೊಳ ಉದ್ದ ಮತ್ತು ಐವತ್ತು ಮೊಳ ಅಗಲ ಇರಬೇಕು. ಅಂಗಳದ ಸುತ್ತಲಿರುವ ಪರದೆಗಳ ಗೋಡೆಯು ಐದು ಮೊಳ ಎತ್ತರವಿರಬೇಕು. ಪರದೆಗಳನ್ನು ಉತ್ತಮ ನಾರುಬಟ್ಟೆಯಿಂದ ಮಾಡಿಸಬೇಕು. ಕಂಬಗಳ ಕೆಳಗಿರುವ ಗದ್ದಿಗೇಕಲ್ಲುಗಳನ್ನು ತಾಮ್ರದಿಂದ ಮಾಡಿಸಬೇಕು. 19 ಪವಿತ್ರಗುಡಾರದ ಉಪಕರಣಗಳನ್ನೂ ಗುಡಾರದ ಗೂಟಗಳನ್ನೂ ಗುಡಾರದ ಸುತ್ತಲೂ ಇರುವ ಪರದೆಯ ಗೂಟಗಳನ್ನೂ ತಾಮ್ರದಿಂದ ಮಾಡಿಸಬೇಕು.
ದೀಪದ ಎಣ್ಣೆ
20 “ಉತ್ತಮವಾದ ಆಲಿವ್‌ಎಣ್ಣೆಯನ್ನು ತರಬೇಕೆಂದು ಇಸ್ರೇಲರಿಗೆ ಆಜ್ಞಾಪಿಸು. ಪ್ರತಿ ಸಾಯಂಕಾಲ ಉರಿಸುವ ದೀಪಕ್ಕೆ ಈ ಎಣ್ಣೆಯನ್ನು ಉಪಯೋಗಿಸು. 21 ಆರೋನ ಮತ್ತು ಅವನ ಗಂಡುಮಕ್ಕಳಿಗೆ ದೀಪವನ್ನು ನೋಡಿಕೊಳ್ಳುವ ಕೆಲಸವಿರುವುದು. ಅವರು ದೇವದರ್ಶನಗುಡಾರದ ಮೊದಲಿನ ಕೋಣೆಯೊಳಗೆ ಹೋಗುವರು. ಇದು ಎರಡು ಕೋಣೆಗಳನ್ನು ಪ್ರತ್ಯೇಕಿಸುವ ಪರದೆಯ ಹಿಂದೆ ಒಪ್ಪಂದವಿರುವ ಕೋಣೆಯ ಹೊರಗೆ ಇರುತ್ತದೆ. ಈ ಸ್ಥಳದಲ್ಲಿ ದೀಪವು ಯೆಹೋವನ ಮುಂದೆ ಸಾಯಂಕಾಲದಿಂದ ಮುಂಜಾನೆಯವರೆಗೆ ಯಾವಾಗಲೂ ಉರಿಯುತ್ತಿರುವಂತೆ ಅವರು ನೋಡಿಕೊಳ್ಳುವರು. ಇಸ್ರೇಲರು ಮತ್ತು ಅವರ ಸಂತತಿಯವರು ಈ ನಿಯಮಕ್ಕೆ ಶಾಶ್ವತವಾಗಿ ವಿಧೇಯರಾಗಬೇಕು” ಎಂದು ಹೇಳಿದನು.
ಯಾಜಕರು ಧರಿಸಬೇಕಾದ ಬಟ್ಟೆಗಳು
28 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಇಸ್ರೇಲರಿಂದ ನಿನ್ನ ಬಳಿಗೆ ಬರಲು ನಿನ್ನ ಅಣ್ಣನಾದ ಆರೋನನಿಗೂ ಅವನ ಗಂಡುಮಕ್ಕಳಾದ ನಾದಾಬ, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್ ಎಂಬವರಿಗೂ ಹೇಳು. ಇವರು ಯಾಜಕರಾಗಿ ನನ್ನ ಸೇವೆ ಮಾಡುವರು.
2 “ನಿನ್ನ ಅಣ್ಣನಾದ ಆರೋನನಿಗೆ ವಿಶೇಷ ಬಟ್ಟೆಗಳನ್ನು ಮಾಡಿಸು. ಈ ಬಟ್ಟೆಗಳು ಅವನಿಗೆ ಘನತೆಯನ್ನೂ ಗೌರವವನ್ನೂ ನೀಡುತ್ತವೆ. 3 ಈ ಬಟ್ಟೆಗಳನ್ನು ಮಾಡುವಂಥ ಕೆಲವು ನಿಪುಣರಿದ್ದಾರೆ. ನಾನು ಅವರಿಗೆ ವಿಶೇಷ ಜ್ಞಾನವನ್ನು ಕೊಟ್ಟಿದ್ದೇನೆ. ಆರೋನನಿಗೆ ಬೇಕಾದ ಬಟ್ಟೆಗಳನ್ನು ಮಾಡಲು ಅವರಿಗೆ ಹೇಳು. ಅವನು ವಿಶೇಷವಾದ ರೀತಿಯಲ್ಲಿ ನನ್ನ ಸೇವೆಮಾಡುತ್ತಾನೆಂದು ಈ ಬಟ್ಟೆಗಳು ತೋರಿಸುತ್ತವೆ. ಆಗ ಅವನು ಯಾಜಕನಾಗಿ ನನ್ನ ಸೇವೆ ಮಾಡಬಹುದು. 4 ಅವರು ಮಾಡತಕ್ಕ ಬಟ್ಟೆಗಳು ಯಾವುವೆಂದರೆ: ದೈವನಿರ್ಣಯಕ ಪದಕ, ಏಫೋದು, ನೀಲಿಯ ನಿಲುವಂಗಿ, ಹೆಣೆದ ಬಿಳಿಯ ನಿಲುವಂಗಿ, ಮುಂಡಾಸು ಮತ್ತು ನಡುಕಟ್ಟು. ನಿನ್ನ ಅಣ್ಣನಾದ ಆರೋನನಿಗೂ ಅವನ ಗಂಡುಮಕ್ಕಳಿಗೂ ಈ ವಿಶೇಷ ಬಟ್ಟೆಗಳನ್ನು ಅವರು ಮಾಡಬೇಕು. ಆಗ ಆರೋನನೂ ಅವನ ಗಂಡುಮಕ್ಕಳೂ ಯಾಜಕರಾಗಿ ನನ್ನ ಸೇವೆಮಾಡಬಹುದು. 5 ಚಿನ್ನದ ದಾರಗಳು, ನಾರುಬಟ್ಟೆ, ನೀಲಿ, ನೇರಳೆ ಮತ್ತು ಕೆಂಪುದಾರಗಳನ್ನು ಉಪಯೋಗಿಸಲು ಅವರಿಗೆ ಹೇಳು.
ಏಫೋದು ಮತ್ತು ನಡುಕಟ್ಟು
6 “ಏಫೋದನ್ನು ಚಿನ್ನದ ದಾರಗಳು, ನಾರಿನಬಟ್ಟೆ, ನೀಲಿ, ನೇರಳೆ ಮತ್ತು ಕೆಂಪುದಾರಗಳನ್ನು ಉಪಯೋಗಿಸಿ ಚಾಣಾಕ್ಷತೆಯಿಂದ ಹೆಣೆದು ತಯಾರಿಸಬೇಕು. 7 ಏಫೋದಿನ ಪ್ರತಿಭುಜದಲ್ಲಿ ಭುಜದ ಪಟ್ಟಿಯಿರಬೇಕು. ಭುಜದ ಈ ಪಟ್ಟಿಗಳು ಏಫೋದಿನ ಎರಡು ಕೊನೆಗಳಿಗೆ ಕಟ್ಟಿರಬೇಕು.
8 “ಇವರು ಏಫೋದಿಗೆ ಸೇರಿಸಲ್ಪಟ್ಟಿರುವ ನಡುಕಟ್ಟನ್ನು ಬಹಳ ಎಚ್ಚರಿಕೆಯಿಂದ ಹೆಣೆಯಬೇಕು. ಏಫೋದನ್ನು ತಯಾರಿಸಿದಂತೆಯೇ ಈ ನಡುಕಟ್ಟನ್ನು ತಯಾರಿಸಬೇಕು. ಚಿನ್ನದ ದಾರಗಳು, ನಾರುಬಟ್ಟೆ, ನೀಲಿ, ನೇರಳೆ ಮತ್ತು ಕೆಂಪುದಾರಗಳನ್ನು ಉಪಯೋಗಿಸಿ ಇದನ್ನು ಮಾಡಬೇಕು.
9 “ಎರಡು ಗೋಮೇಧಕ ರತ್ನಗಳನ್ನು ತೆಗೆದುಕೊ. ಈ ರತ್ನಗಳ ಮೇಲೆ ಇಸ್ರೇಲನ ಹನ್ನೆರಡು ಗಂಡುಮಕ್ಕಳ ಹೆಸರನ್ನು ಬರೆಸು. 10 ಒಂದು ರತ್ನದ ಮೇಲೆ ಆರು ಹೆಸರುಗಳನ್ನೂ ಇನ್ನೊಂದು ರತ್ನದ ಮೇಲೆ ಆರು ಹೆಸರುಗಳನ್ನೂ ಬರೆಸು. ಹಿರಿಮಗನಿಂದ ಹಿಡಿದು ಕಿರಿ ಮಗನವರೆಗೆ ಕ್ರಮಾನುಸಾರವಾಗಿ ಹೆಸರುಗಳನ್ನು ಬರೆಸು. 11 ಈ ಕಲ್ಲುಗಳ ಮೇಲೆ ಇಸ್ರೇಲನ ಗಂಡುಮಕ್ಕಳ ಹೆಸರನ್ನು ಕೆತ್ತಿಸು. ಒಬ್ಬ ಕೆಲಸಗಾರನು ಮುದ್ರೆಯನ್ನು ಮಾಡುವ ರೀತಿಯಲ್ಲಿ ಇದನ್ನು ಮಾಡಿಸು. ಚಿನ್ನದ ಕುಂದಣದಲ್ಲಿ ರತ್ನಗಳನ್ನಿಡು. 12 ಬಳಿಕ ಈ ಎರಡು ರತ್ನಗಳನ್ನು ಏಫೋದಿನ ಪ್ರತಿಭುಜದ ಪಟ್ಟಿಯಲ್ಲಿಡು. ಆರೋನನು ಯೆಹೋವನ ಮುಂದೆ ನಿಲ್ಲುವಾಗ ಈ ವಿಶೇಷ ಅಂಗಿಯನ್ನು ಧರಿಸಿಕೊಂಡಿರುವನು. ಇಸ್ರೇಲನ ಗಂಡುಮಕ್ಕಳ ಹೆಸರುಗಳುಳ್ಳ ಎರಡು ರತ್ನಗಳು ಏಫೋದಿನ ಮೇಲಿರುತ್ತವೆ. ದೇವರು ಇಸ್ರೇಲರನ್ನು ಜ್ಞಾಪಿಸಿಕೊಳ್ಳುವಂತೆ ಈ ರತ್ನಗಳು ಮಾಡುವವು. 13 ಏಫೋದಿನಲ್ಲಿ ಕಲ್ಲುಗಳು ಬಿಗಿಯಾಗಿ ಹಿಡಿದುಕೊಂಡಿರಲು ಉತ್ತಮ ಚಿನ್ನವನ್ನು ಉಪಯೋಗಿಸು. 14 ಹೆಣಿಗೆ ಕೆಲಸದಿಂದ ಶುದ್ಧಬಂಗಾರದ ಎರಡು ಸರಪಣಿಗಳನ್ನು ಮಾಡಿಸಿ ಚಿನ್ನದ ಗೂಡುಗಳಿಗೆ ಬಿಗಿಯಾಗಿ ಸಿಕ್ಕಿಸಬೇಕು.
ದೈವನಿರ್ಣಯದ ಪದಕ
15 “ಮಹಾಯಾಜಕನಿಗೆ ದೈವನಿರ್ಣಯದ ಪದಕವನ್ನು ಮಾಡಿಸು. ಏಫೋದನ್ನು ಮಾಡಿಸಿದಂತೆ ನಿಪುಣರಾದ ಕೆಲಸಗಾರರಿಂದ ಇದನ್ನು ಮಾಡಿಸಬೇಕು. ಚಿನ್ನದ ದಾರಗಳು, ಉತ್ಕೃಷ್ಟವಾದ ನಾರುಬಟ್ಟೆ, ನೀಲಿ, ನೇರಳೆ ಮತ್ತು ಕೆಂಪು ದಾರಗಳನ್ನು ಉಪಯೋಗಿಸಿ ಇದನ್ನು ಮಾಡಬೇಕು. 16 ಅದು ಚೌಕವಾಗಿದ್ದು ಒಂಭತ್ತು ಇಂಚು ಉದ್ದವಾಗಿಯೂ ಒಂಭತ್ತು ಇಂಚು ಅಗಲವಾಗಿಯೂ ಇರಬೇಕು. 17 ಅದರ ಮೇಲೆ ಅಂದವಾದ ರತ್ನಗಳನ್ನು ನಾಲ್ಕು ಸಾಲುಗಳಾಗಿ ಹಾಕಿಸಬೇಕು. ರತ್ನಗಳ ಮೊದಲಿನ ಸಾಲಿನಲ್ಲಿ ಮಾಣಿಕ್ಯ, ಪುಷ್ಪರಾಗ, ಸ್ಪಟಿಕಗಳಿರಬೇಕು. 18 ಎರಡನೆಯ ಸಾಲಿನಲ್ಲಿ ಕೆಂಪರಲು, ನೀಲ, ಪಚ್ಚೆಗಳಿರಬೇಕು. 19 ಮೂರನೆಯ ಸಾಲಿನಲ್ಲಿ ಸುವರ್ಣರತ್ನ, ಗೋಮೇಧಕ ಮತ್ತು ಧೂಮ್ರಮಣಿಗಳಿರಬೇಕು. 20 ನಾಲ್ಕನೆಯ ಸಾಲಿನಲ್ಲಿ ಪೀತರತ್ನ ಮತ್ತು ಬೆರುಲ್ಲ ವಜ್ರಗಳಿರಬೇಕು. ಈ ಎಲ್ಲಾ ರತ್ನಗಳನ್ನು ಚಿನ್ನದ ಜವೆಯ ಕಲ್ಲುಗಳಲ್ಲಿ ಸೇರಿಸಬೇಕು. 21 ಇಸ್ರೇಲನ ಗಂಡುಮಕ್ಕಳಲ್ಲಿ ಪ್ರತಿಯೊಬ್ಬನಿಗೆ ಒಂದೊಂದು ರತ್ನದಂತೆ ದೈವನಿರ್ಣಯ ಪದಕದಲ್ಲಿ ಹನ್ನೆರಡು ರತ್ನಗಳಿರಬೇಕು. ಪ್ರತಿಯೊಂದು ಕಲ್ಲುಗಳಲ್ಲಿ ಇಸ್ರೇಲನ ಗಂಡುಮಕ್ಕಳ ಒಬ್ಬೊಬ್ಬರ ಹೆಸರನ್ನು ಬರೆಸಬೇಕು. ಒಬ್ಬ ಕೆಲಸಗಾರನು ಮುದ್ರೆಯನ್ನು ಕೆತ್ತುವಂತೆ ಈ ಹೆಸರುಗಳನ್ನು ಪ್ರತಿ ರತ್ನದ ಮೇಲೆ ಕೆತ್ತಿಸಬೇಕು.
22 “ದೈವನಿರ್ಣಯ ಪದಕದಲ್ಲಿ ಶುದ್ಧಬಂಗಾರದ ಸರಪಣಿಗಳನ್ನು ಮಾಡಿಸು. ಈ ಸರಪಣಿಗಳು ಹುರಿಗಳಂತಿರುವ ಹಗ್ಗದಂತೆ ಇರಬೇಕು. 23 ಬಂಗಾರದ ಎರಡು ಬಳೆಗಳನ್ನು ಮಾಡಿಸಿ ಅದರ ಎರಡು ಕೊನೆಗಳಲ್ಲಿ ಸಿಕ್ಕಿಸಬೇಕು. 24 ಅದರ ಕೊನೆಯಲ್ಲಿರುವ ಎರಡು ಬಳೆಗಳ ಮೂಲಕ ಚಿನ್ನದ ಎರಡು ಸರಪಣಿಗಳನ್ನು ಸಿಕ್ಕಿಸಬೇಕು. 25 ಚಿನ್ನದ ಸರಪಣಿಗಳ ಇನ್ನೊಂದು ಕೊನೆಗಳನ್ನು ಎರಡು ಪಟ್ಟಿಗಳಿಗೆ ಬಿಗಿಯಾಗಿ ಕಟ್ಟಿಸಬೇಕು. ಇದು ಮುಂಬದಿಯಲ್ಲಿರುವ ಏಫೋದಿನ ಎರಡು ಭುಜದ ಪಟ್ಟಿಗಳಿಗೆ ಬಿಗಿಯಾಗಿ ಹಿಡಿದುಕೊಂಡಿರುವಂತೆ ಮಾಡುವುದು. 26 ಇನ್ನೂ ಎರಡು ಚಿನ್ನದ ಬಳೆಗಳನ್ನು ಮಾಡಿಸಿ, ಅವುಗಳನ್ನು ದೈವನಿರ್ಣಯದ ಪದಕದ ಬೇರೆ ಎರಡು ಕೊನೆಗಳಿಗೆ ಸಿಕ್ಕಿಸು. ಇದು ದೈವನಿರ್ಣಯದ ಪದಕದ ಒಳಗಣ ಅಂಚಿನಲ್ಲಿರುವುದು. 27 ಇನ್ನೆರಡು ಚಿನ್ನದ ಬಳೆಗಳನ್ನು ಮಾಡಿಸಿ ಅವುಗಳನ್ನು ಏಫೋದಿನ ಭುಜಪಟ್ಟಿಗಳ ಮುಂಭಾಗದ ಕೆಳಗೆ ಸಿಕ್ಕಿಸು. ಈ ಚಿನ್ನದ ಬಳೆಗಳನ್ನು ಏಫೋದಿನ ನಡುಕಟ್ಟಿನ ಮೇಲ್ಗಡೆ ಇರಿಸು. 28 ದೈವನಿರ್ಣಯದ ಪದಕದ ಬಳೆಗಳನ್ನು ಏಫೋದಿನ ಬಳೆಗಳಿಗೆ ಜೋಡಿಸಲು ನೀಲಿದಾರವನ್ನು ಉಪಯೋಗಿಸು. ಈ ರೀತಿಯಲ್ಲಿ ದೈವನಿರ್ಣಯದ ಪದಕವು ನಡುಕಟ್ಟಿಗೆ ಹತ್ತಿರವಾಗಿದ್ದು ಏಫೋದಿಗೆ ಬಿಗಿಯಾಗಿ ಅಂಟಿಕೊಂಡಿರುವುದು.
29 “ಆರೋನನು ಪವಿತ್ರಸ್ಥಳವನ್ನು ಪ್ರವೇಶಿಸುವಾಗ, ದೈವನಿರ್ಣಯದ ಪದಕವನ್ನು ಧರಿಸಿಕೊಳ್ಳಬೇಕು. ಈ ರೀತಿ ಎದೆಯ ಮೇಲೆ ಇಸ್ರೇಲನ ಗಂಡುಮಕ್ಕಳ ಹೆಸರುಗಳಿರಬೇಕು. ಅವನು ನ್ಯಾಯತೀರಿಸಲು ಧರಿಸಿಕೊಂಡಿರುವ ದೈವನಿರ್ಣಯದ ಪದಕದ ಮೇಲೆ ಈ ಹೆಸರುಗಳಿರುತ್ತವೆ. ಈ ರೀತಿಯಲ್ಲಿ ಇಸ್ರೇಲನ ಹನ್ನೆರಡು ಮಂದಿ ಗಂಡುಮಕ್ಕಳನ್ನು ಯೆಹೋವನಿಗೆ ಯಾವಾಗಲೂ ಜ್ಞಾಪಿಸಲಾಗುವುದು. 30 ದೈವನಿರ್ಣಯದ ಪದಕದೊಳಗೆ ಊರೀಮ್ ಮತ್ತು ತುಮ್ಮೀಮ್ ಎಂಬ ವಸ್ತುಗಳನ್ನು ಇಡು. ಆರೋನನು ಯೆಹೋವನ ಮುಂದೆ ಹೋಗುವಾಗ ಅವುಗಳು ಅವನ ಎದೆಯ ಮೇಲಿರುವವು. ಹೀಗೆ ಆರೋನನು ಯೆಹೋವನ ಮುಂದೆ ನಿಲ್ಲುವಾಗಲೆಲ್ಲಾ, ಜನರಿಗೆ ತೀರ್ಪು ನೀಡತಕ್ಕದ್ದನ್ನು ಯಾವಾಗಲೂ ತನ್ನ ಎದೆಯ ಮೇಲೆ ಹೊತ್ತುಕೊಂಡಿರುವನು.
ಯಾಜಕರ ಇತರ ಬಟ್ಟೆಗಳು
31 “ಏಫೋದಿನ ಒಳಗೆ ಹಾಕಿಕೊಳ್ಳಲು ಒಂದು ನಿಲುವಂಗಿಯನ್ನು ನೀಲಿಬಟ್ಟೆಯಿಂದ ಮಾಡಿಸಬೇಕು. 32 ತಲೆಯನ್ನು ತೂರಿಸುವುದಕ್ಕೆ ಮಧ್ಯದಲ್ಲಿ ಒಂದು ಸಂದು ಮಾಡಿಸು. ಈ ಸಂದಿನ ಸುತ್ತಲೂ ಹೆಣೆದ ಬಟ್ಟೆಯನ್ನು ಹೊಲಿಸು. ಈ ಬಟ್ಟೆಯು ಸಂದು ಹರಿದುಹೋಗದಂತೆ ಕಾಪಾಡುವುದು. 33 ಬಟ್ಟೆಯ ಅಂಚಿನ ಸುತ್ತಲೂ ದಾಳಿಂಬೆ ಹಣ್ಣುಗಳನ್ನು ಮಾಡಲು ನೀಲಿ, ನೇರಳೆ ಮತ್ತು ಕೆಂಪುದಾರಗಳನ್ನು ಉಪಯೋಗಿಸಬೇಕು. ಆ ದಾಳಿಂಬೆ ಹಣ್ಣಿನ ಚೆಂಡುಗಳನ್ನು ನಿಲುವಂಗಿಯ ಕೆಳಅಂಚಿನಲ್ಲಿ ಸುತ್ತಲೂ ನೇತಾಡುವಂತೆ ಸಿಕ್ಕಿಸಬೇಕು. ದಾಳಿಂಬೆ ಹಣ್ಣಿನ ಚೆಂಡುಗಳ ನಡುವೆ ಚಿನ್ನದ ಗೆಜ್ಜೆಗಳನ್ನು ಸಿಕ್ಕಿಸಬೇಕು. 34 ಹೀಗೆ ನಿಲುವಂಗಿಯ ಕೆಳಅಂಚಿನಲ್ಲಿ ಸುತ್ತಲೂ ಗೆಜ್ಜೆಗಳು ಮತ್ತು ದಾಳಿಂಬೆ ಹಣ್ಣುಗಳು ಇರಬೇಕು. ಪ್ರತಿ ಎರಡು ದಾಳಿಂಬೆ ಹಣ್ಣಿನ ನಡುವೆ ಗೆಜ್ಜೆ ಇರಬೇಕು. 35 ಆರೋನನು ಯಾಜಕನಾಗಿ ಸೇವೆಮಾಡುವಾಗ ಈ ನಿಲುವಂಗಿಯನ್ನು ಧರಿಸಿಕೊಂಡಿರುವನು. ಯೆಹೋವನ ಮುಂದೆ ನಿಲ್ಲುವುದಕ್ಕೆ ಆರೋನನು ಪವಿತ್ರಸ್ಥಳವನ್ನು ಪ್ರವೇಶಿಸುವಾಗ ಗೆಜ್ಜೆಗಳು ಶಬ್ದ ಮಾಡುತ್ತಿರುತ್ತವೆ. ಅವನು ಪವಿತ್ರಸ್ಥಳವನ್ನು ಬಿಡುವಾಗಲೂ ಗೆಜ್ಜೆಗಳು ಶಬ್ಧ ಮಾಡುತ್ತಿರುತ್ತವೆ. ಹೀಗಾಗಿ ಆರೋನನು ಸಾಯುವುದಿಲ್ಲ.
36 “ಶುದ್ಧಬಂಗಾರದ ಪಟ್ಟಿಯನ್ನು ಮಾಡಿಸಿ ಮುದ್ರೆಯನ್ನು ಕೆತ್ತುವ ರೀತಿಯಲ್ಲಿ “ಯೆಹೋವನಿಗೆ ಮೀಸಲು” ಎಂಬ ಮಾತುಗಳನ್ನು ಚಿನ್ನದಲ್ಲಿ ಕೆತ್ತಿಸಬೇಕು. 37 ಚಿನ್ನದ ಪಟ್ಟಿಯನ್ನು ನೀಲಿದಾರಕ್ಕೆ ಬಿಗಿಯಾಗಿ ಕಟ್ಟಿಸಬೇಕು. ನೀಲಿದಾರವನ್ನು ಮುಂಡಾಸದ ಸುತ್ತಲೂ ಅದರಲ್ಲಿ ಕೆತ್ತಿಸಬೇಕು. ಚಿನ್ನದ ಪಟ್ಟಿಯು ಮುಂಡಾಸದ ಮುಂಭಾಗದಲ್ಲಿರಬೇಕು. 38 ಆರೋನನು ಇದನ್ನು ತನ್ನ ಹಣೆಯ ಮೇಲೆ ಧರಿಸಿಕೊಳ್ಳುವನು. ಹೀಗೆ, ಇಸ್ರೇಲರು ಅರ್ಪಿಸಿದ ಕಾಣಿಕೆಗಳಲ್ಲಿ ದೋಷವೇನಾದರೂ ಇದ್ದರೆ ಅವನು ಅದನ್ನು ತನ್ನ ಮೇಲೆ ತೆಗೆದುಕೊಂಡು ತಾನೇ ಅದನ್ನು ವಹಿಸಿಕೊಳ್ಳುವನು. ಇವು ಜನರು ಯೆಹೋವನಿಗೆ ಸಮರ್ಪಿಸುವ ಕಾಣಿಕೆಗಳಾಗಿವೆ. ಜನರ ಕಾಣಿಕೆಗಳನ್ನು ಯೆಹೋವನು ಅಂಗೀಕರಿಸುವಂತೆ ಆರೋನನು ಇದನ್ನು ಯಾವಾಗಲೂ ತನ್ನ ಶಿರದಲ್ಲಿ ಧರಿಸಿಕೊಂಡಿರುವನು.
39 “ಹೆಣೆದ ಅಂಗಿಯನ್ನು ಮತ್ತು ಮುಂಡಾಸವನ್ನು ಮಾಡಲು ಉತ್ಕೃಷ್ಟವಾದ ನಾರಿನ ಬಟ್ಟೆಯನ್ನು ಉಪಯೋಗಿಸು. ನಡುಕಟ್ಟನ್ನು ಬುಟ್ಟೀದಾರಿ ಕೆಲಸದಿಂದ ಮಾಡಿಸಬೇಕು. 40 ಆರೋನನ ಗಂಡುಮಕ್ಕಳಿಗೂ ಅಂಗಿಗಳನ್ನು, ನಡುಕಟ್ಟುಗಳನ್ನು ಮತ್ತು ಮುಂಡಾಸಗಳನ್ನು ಮಾಡಿಸು. ಇವು ಅವರಿಗೆ ಘನತೆ ಮತ್ತು ಗೌರವಗಳನ್ನು ಕೊಡುತ್ತವೆ. 41 ನಿನ್ನ ಸಹೋದರನಾದ ಆರೋನನಿಗೆ ಮತ್ತು ಅವನ ಗಂಡುಮಕ್ಕಳಿಗೆ ಬಟ್ಟೆಗಳನ್ನು ತೊಡಿಸು. ಬಳಿಕ ಅವರನ್ನು ಯಾಜಕರನ್ನಾಗಿ ಮಾಡಲು ವಿಶೇಷ ತೈಲದಿಂದ ಅಭಿಷೇಕಿಸು. ಇದು ಅವರನ್ನು ಪ್ರತಿಷ್ಠಿಸುವುದು ಮತ್ತು ಪವಿತ್ರರನ್ನಾಗಿ ಮಾಡುವುದು. ಅವರು ಯಾಜಕರಾಗಿ ನನ್ನ ಸೇವೆ ಮಾಡುವರು.
42 “ಯಾಜಕರಿಗೆ ಒಳಗಿನ ಉಡುಪುಗಳನ್ನು ಮಾಡಲು ನಾರುಬಟ್ಟೆಯನ್ನು ಉಪಯೋಗಿಸು. ಈ ಒಳಗಿನ ಉಡುಪುಗಳು ಅವರನ್ನು ಸೊಂಟದಿಂದ ತೊಡೆಯವರೆಗೆ ಮುಚ್ಚುವುದು. 43 ಆರೋನನು ಮತ್ತು ಅವನ ಗಂಡುಮಕ್ಕಳು ದೇವದರ್ಶನ ಗುಡಾರದೊಳಗೆ ಪ್ರವೇಶಿಸುವಾಗಲೆಲ್ಲಾ ಈ ಉಡುಪುಗಳನ್ನು ಧರಿಸಿಕೊಳ್ಳಬೇಕು. ಪವಿತ್ರಸ್ಥಳದಲ್ಲಿ ಯಾಜಕರಾಗಿ ಸೇವೆಮಾಡಲು ಯಜ್ಞವೇದಿಕೆಯ ಬಳಿಗೆ ಬರುವಾಗ ಅವರು ಈ ಬಟ್ಟೆಗಳನ್ನು ಧರಿಸಿಕೊಂಡಿರಬೇಕು. ಅವರು ಈ ಉಡುಪುಗಳನ್ನು ಧರಿಸಿಕೊಳ್ಳದಿದ್ದರೆ, ದೋಷಿಗಳಾಗಿ ಸಾಯುವರು. ಇವುಗಳೆಲ್ಲಾ ಆರೋನನಿಗೂ ಅವನ ನಂತರ ಅವನ ಕುಟುಂಬಸ್ಥರೆಲ್ಲರಿಗೂ ಶಾಶ್ವತವಾದ ಕಟ್ಟಳೆಯಾಗಿವೆ.”
ಯಾಜಕರನ್ನು ನೇಮಿಸುವ ಆಚಾರವಿಧಿ
29 ಬಳಿಕ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಆರೋನನು ಮತ್ತು ಅವನ ಗಂಡುಮಕ್ಕಳು ಅಭಿಷೇಕಿಸಲ್ಪಟ್ಟ ಮತ್ತು ಪ್ರತ್ಯೇಕಿಸಲ್ಪಟ್ಟ ಯಾಜಕರಾಗಿ ವಿಶೇಷವಾದ ರೀತಿಯಲ್ಲಿ ನನ್ನ ಸೇವೆಮಾಡಲು ಅವರು ಮಾಡತಕ್ಕದ್ದೇನೆಂಬುದನ್ನು ನಾನೀಗ ಹೇಳುವೆನು. ಯಾವ ಅಂಗದೋಷವಿಲ್ಲದ ಒಂದು ಹೋರಿಮರಿಯನ್ನು ಮತ್ತು ಎರಡು ಟಗರುಗಳನ್ನು ತೆಗೆದುಕೊ. 2 ಬಳಿಕ ಹುಳಿಯಿಲ್ಲದ ರೊಟ್ಟಿಯನ್ನೂ ಆಲಿವ್ ಎಣ್ಣೆ ಮಿಶ್ರವಾದ ಹುಳಿಯಿಲ್ಲದ ಹೋಳಿಗೆಗಳನ್ನೂ ಎಣ್ಣೆ ಹಾಕಿದ ತೆಳುವಾದ ಕಡುಬುಗಳನ್ನೂ ಗೋಧಿಹಿಟ್ಟಿನಿಂದ ಮಾಡಿಸಿ ಒಂದೇ ಬುಟ್ಟಿಯಲ್ಲಿ ತುಂಬಿಸಬೇಕು. 3 ಬಳಿಕ ಆ ಬುಟ್ಟಿಯನ್ನು ಆರೋನನಿಗೂ ಮತ್ತು ಅವನ ಪುತ್ರರಿಗೂ ಕೊಡು. ಅದೇ ಸಮಯದಲ್ಲಿ ಹೋರಿಯನ್ನು ಮತ್ತು ಎರಡು ಟಗರುಗಳನ್ನು ಅವರಿಗೆ ಕೊಡು.
4 “ತರುವಾಯ ಆರೋನನನ್ನೂ ಅವನ ಪುತ್ರರನ್ನೂ ದೇವದರ್ಶನಗುಡಾರದ ದ್ವಾರಕ್ಕೆ ಕರೆದುಕೊಂಡು ಬಾ. ಅವರನ್ನು ನೀರಿನಲ್ಲಿ ಸ್ನಾನಮಾಡಿಸು. 5 ವಿಶೇಷವಾದ ಬಟ್ಟೆಗಳನ್ನು ಆರೋನನಿಗೆ ತೊಡಿಸು. ಹೆಣೆದ ಅಂಗಿಯನ್ನು ಮತ್ತು ಏಫೋದಿನೊಡನೆ ಧರಿಸತಕ್ಕ ದೈವನಿರ್ಣಯದ ಪದಕವನ್ನು ಅವನಿಗೆ ತೊಡಿಸು. ಬಳಿಕ ಅಂದವಾದ ನಡುಕಟ್ಟನ್ನು ಅವನಿಗೆ ಕಟ್ಟು. 6 ಅವನ ತಲೆಗೆ ಮುಂಡಾಸನ್ನು ಇಡು ಮತ್ತು ಮುಂಡಾಸಕ್ಕೆ ವಿಶೇಷವಾದ ಕಿರೀಟವನ್ನು ಕಟ್ಟಿಸು. 7 ಅಭಿಷೇಕತೈಲವನ್ನು ತೆಗೆದುಕೊಂಡು ಆರೋನನ ತಲೆಯ ಮೇಲೆ ಸುರಿ.
8 “ತರುವಾಯ ಆರೋನನ ಪುತ್ರರನ್ನು ಆ ಸ್ಥಳಕ್ಕೆ ಕರೆದುಕೊಂಡು ಬಾ. ಅವರಿಗೆ ಹೆಣೆದ ಅಂಗಿಗಳನ್ನು ತೊಡಿಸು. 9 ಬಳಿಕ ಅವರ ಸೊಂಟಗಳಿಗೆ ನಡುಕಟ್ಟುಗಳನ್ನು ಸುತ್ತಿಸು. ಅಂದಿನಿಂದ ಅವರು ಯಾಜಕರಾಗಿರುವರು. ವಿಶೇಷವಾದ ಈ ಕಟ್ಟಳೆಯು ಶಾಶ್ವತವಾಗಿರುವುದರಿಂದ ಅವರು ಯಾಜಕರಾಗಿರುವರು. ಹೀಗೆ ಆರೋನನನ್ನೂ ಅವನ ಪುತ್ರರನ್ನೂ ನೀನು ಯಾಜಕರನ್ನಾಗಿ ಮಾಡುವೆ.
10 “ತರುವಾಯ ನೀನು ಹೋರಿಯನ್ನು ದೇವದರ್ಶನಗುಡಾರದ ಎದುರಿಗೆ ತರಬೇಕು. ಆರೋನನು ಮತ್ತು ಅವನ ಪುತ್ರರು ತಮ್ಮ ಕೈಗಳನ್ನು ಹೋರಿಯ ತಲೆಯ ಮೇಲಿಡಬೇಕು. 11 ಬಳಿಕ ದೇವದರ್ಶನಗುಡಾರದ ದ್ವಾರದಲ್ಲಿ ಹೋರಿಯನ್ನು ವಧಿಸು. ಯೆಹೋವನು ಇದನ್ನು ನೋಡುವನು. 12 ತರುವಾಯ ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಯಜ್ಞವೇದಿಕೆಯ ಬಳಿಗೆ ಹೋಗು. ವೇದಿಕೆಯ ಕೊಂಬುಗಳಿಗೆ ನಿನ್ನ ಬೆರಳಿನಿಂದ ರಕ್ತವನ್ನು ಹಚ್ಚು. ಉಳಿದ ರಕ್ತವನ್ನೆಲ್ಲಾ ಯಜ್ಞವೇದಿಕೆಯ ಬುಡಕ್ಕೆ ಸುರಿದುಬಿಡು. 13 ಬಳಿಕ ಹೋರಿಯ ಒಳಗಿನ ಕೊಬ್ಬನ್ನೂ ಪಿತ್ತಕೋಶದ ಸುತ್ತಲಿರುವ ಕೊಬ್ಬನ್ನೂ ಎರಡು ಮೂತ್ರಪಿಂಡಗಳನ್ನೂ ಮತ್ತು ಅವುಗಳ ಸುತ್ತಲಿರುವ ಕೊಬ್ಬನ್ನೂ ತೆಗೆದುಬಿಡು. ಈ ಕೊಬ್ಬನ್ನು ಯಜ್ಞವೇದಿಕೆಯ ಮೇಲೆ ಹೋಮಮಾಡು. 14 ಬಳಿಕ ಹೋರಿಯ ಮಾಂಸ, ಚರ್ಮ, ಇತರ ಭಾಗಗಳನ್ನು ತೆಗೆದುಕೊಂಡು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ ಸುಟ್ಟುಬಿಡು. ಇದು ಯಾಜಕರ ಪಾಪಗಳನ್ನು ಪರಿಹರಿಸುವ ಕಾಣಿಕೆಯಾಗಿದೆ.
15 “ತರುವಾಯ ಆರೋನನಿಗೂ ಅವನ ಪುತ್ರರಿಗೂ ತಮ್ಮ ಕೈಗಳನ್ನು ಒಂದು ಟಗರಿನ ತಲೆಯ ಮೇಲೆ ಇಡಬೇಕೆಂದು ಹೇಳು. 16 ಆ ಟಗರನ್ನು ವಧಿಸಿ ಅದರ ರಕ್ತವನ್ನು ಯಜ್ಞವೇದಿಕೆಯ ನಾಲ್ಕು ಕಡೆಗಳಿಗೆ ಚೆಲ್ಲು. 17 ಬಳಿಕ ಟಗರನ್ನು ಅನೇಕ ತುಂಡುಗಳಾಗಿ ಕತ್ತರಿಸು. ಟಗರಿನ ಒಳಗಿನ ಎಲ್ಲಾ ಭಾಗಗಳನ್ನು ಮತ್ತು ಕಾಲುಗಳನ್ನು ತೊಳೆಯಬೇಕು. ಅವುಗಳನ್ನು ತಲೆಯ ಮತ್ತು ಟಗರಿನ ಇತರ ತುಂಡುಗಳೊಡನೆ ಇಡು. 18 ತರುವಾಯ ಯಜ್ಞವೇದಿಕೆಯ ಮೇಲೆ ಇಡೀ ಟಗರನ್ನು ಹೋಮಮಾಡು. ಇದು ವಿಶೇಷವಾದ ಸರ್ವಾಂಗಹೋಮವಾಗಿದೆ. ಇದು ಯೆಹೋವನಿಗೆ ಪರಿಮಳ ವಾಸನೆಯಾಗಿದ್ದು ಆತನಿಗೆ ಮೆಚ್ಚಿಕೆಕರವಾಗಿದೆ.
19 “ಮತ್ತೊಂದು ಟಗರಿನ ಮೇಲೆ ತಮ್ಮ ಕೈಗಳನ್ನಿಡಲು ಆರೋನನಿಗೂ ಅವನ ಪುತ್ರರಿಗೂ ಹೇಳು. 20 ಆ ಟಗರನ್ನು ವಧಿಸಿ ಅದರ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊ. ಆ ರಕ್ತವನ್ನು ಆರೋನ ಮತ್ತು ಅವನ ಪುತ್ರರ ಬಲಗಿವಿಯ ತುದಿಗೆ ಹಚ್ಚು. ಅದಲ್ಲದೆ ಅವರ ಬಲಗೈಗಳ ಹೆಬ್ಬೆರಳುಗಳಿಗೂ ಸ್ವಲ್ಪ ರಕ್ತವನ್ನು ಹಚ್ಚು. ಸ್ವಲ್ಪ ರಕ್ತವನ್ನು ಅವರ ಬಲಗಾಲಿನ ಹೆಬ್ಬೊಟ್ಟಿಗೂ ಹಚ್ಚು. ಬಳಿಕ ಉಳಿದ ರಕ್ತವನ್ನು ಯಜ್ಞವೇದಿಕೆಯ ನಾಲ್ಕು ಕಡೆಗಳಿಗೆ ಚೆಲ್ಲು. 21 ತರುವಾಯ ಯಜ್ಞವೇದಿಕೆಯಿಂದ ಸ್ವಲ್ಪ ರಕ್ತವನ್ನು ತೆಗೆದುಕೊ. ಅದನ್ನು ವಿಶೇಷವಾದ ಅಭೀಷೇಕತೈಲದಲ್ಲಿ ಬೆರಸಿ ಆರೋನನ ಮೇಲೆಯೂ ಅವನ ಬಟ್ಟೆಗಳ ಮೇಲೆಯೂ ಚಿಮಿಕಿಸು. ಅವನ ಪುತ್ರರ ಮತ್ತು ಅವರ ಬಟ್ಟೆಗಳ ಮೇಲೆಯೂ ಚಿಮಿಕಿಸು. ಆಗ ಅವರು ಪರಿಶುದ್ಧಗೊಳ್ಳುವರು, ಅವರ ಬಟ್ಟೆಗಳೂ ಪರಿಶುದ್ಧಗೊಳ್ಳುವವು. ಆರೋನನು ಮತ್ತು ಅವನ ಪುತ್ರರು ವಿಶೇಷವಾದ ರೀತಿಯಲ್ಲಿ ನನ್ನ ಸೇವೆ ಮಾಡುತ್ತಾರೆಂದು ಇದು ತೋರಿಸುವುದು.
22 “ಬಳಿಕ ಟಗರಿನ ಕೊಬ್ಬನ್ನೂ ತೆಗೆದುಕೊ. (ಇದು ಆರೋನನನ್ನು ಮಹಾಯಾಜಕನನ್ನಾಗಿ ಮಾಡುವ ಆಚಾರವಿಧಿಯಲ್ಲಿ ಉಪಯೋಗಿಸಲ್ಪಡುವ ಟಗರು.) ಬಾಲದ ಸುತ್ತಲಿರುವ ಕೊಬ್ಬನ್ನು, ದೇಹದ ಒಳಗಿನ ಅಂಗಗಳನ್ನು ಮುಚ್ಚಿಕೊಂಡಿರುವ ಕೊಬ್ಬನ್ನು, ಪಿತ್ತಕೋಶದ ಸುತ್ತಲಿರುವ ಕೊಬ್ಬನ್ನು, ಎರಡು ಮೂತ್ರಪಿಂಡಗಳನ್ನು ಮತ್ತು ಬಲತೊಡೆಯನ್ನು ತೆಗೆದುಕೊ. 23 ಬಳಿಕ ನೀನು ಮಾಡಿದ ಹುಳಿಯಿಲ್ಲದ ರೊಟ್ಟಿಯ ಬುಟ್ಟಿಯನ್ನು ತೆಗೆದುಕೊ. ಇದು ಯೆಹೋವನ ಮುಂದೆ ಇಟ್ಟ ಬುಟ್ಟಿಯಾಗಿದೆ. ಒಂದು ತುಂಡು ರೊಟ್ಟಿ, ಎಣ್ಣೆಯಿಂದ ಮಾಡಿದ ಒಂದು ಹೋಳಿಗೆ, ತೆಳುವಾದ ಒಂದು ಕಡುಬು ಇವುಗಳನ್ನು ಬುಟ್ಟಿಯಿಂದ ತೆಗೆದುಕೊ. 24 ಇವುಗಳನ್ನು ಆರೋನನಿಗೂ ಅವನ ಪುತ್ರರಿಗೂ ಕೊಡು. ಯೆಹೋವನ ಮುಂದೆ ಇವುಗಳನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ನಿವಾಳಿಸಬೇಕೆಂದು ಅವರಿಗೆ ಹೇಳು. ಇದು ಯೆಹೋವನಿಗೆ ವಿಶೇಷವಾದ ನೈವೇದ್ಯಾರ್ಪಣೆಯಾಗಿದೆ. 25 ಬಳಿಕ ಈ ವಸ್ತುಗಳನ್ನು ಆರೋನನ ಮತ್ತು ಅವನ ಪುತ್ರರ ಕೈಯಿಂದ ತೆಗೆದುಕೊಂಡು ಟಗರಿನ ಜೊತೆ ಯಜ್ಞವೇದಿಕೆಯ ಮೇಲಿಡು. ಈ ಸರ್ವಾಂಗಹೋಮವು ಯೆಹೋವನಿಗೆ ಸುಗಂಧಹೋಮವಾಗಿದ್ದು ಆತನನ್ನು ಮೆಚ್ಚಿಸುವುದು.
26 “ತರುವಾಯ ಟಗರಿನ ಎದೆಯ ಭಾಗವನ್ನು ತೆಗೆದುಕೊ. (ಆರೋನನನ್ನು ಮಹಾಯಾಜಕನನ್ನಾಗಿ ಮಾಡುವ ಆಚಾರವಿಧಿಯಲ್ಲಿ ಉಪಯೋಗಿಸಲ್ಪಡುವ ಟಗರು ಇದಾಗಿದೆ.) ಟಗರಿನ ಎದೆಯ ಭಾಗವನ್ನು ವಿಶೇಷ ಸಮರ್ಪಣೆಯಾಗಿ ಯೆಹೋವನ ಮುಂದೆ ನಿವಾಳಿಸಬೇಕು. ಪಶುವಿನ ಈ ಭಾಗವು ನಿನಗೆ ಸಲ್ಲತಕ್ಕ ಪಾಲು. 27 ಬಳಿಕ ಆರೋನನನ್ನು ಮಹಾಯಾಜಕನನ್ನಾಗಿ ಮಾಡಲು ನಿವಾಳಿಸಲ್ಪಟ್ಟ ಟಗರಿನ ಎದೆಯ ಭಾಗವನ್ನೂ ಯಾಜಕರ ಭಾಗವಾದ ನಿವಾಳಿಸಲ್ಪಟ್ಟ ಟಗರಿನ ತೊಡೆಯನ್ನೂ ತೆಗೆದುಕೊ. ಅವುಗಳನ್ನು ಆರೋನನಿಗೂ ಅವನ ಪುತ್ರರಿಗೂ ಕೊಡು. ಇದು ಕಾಣಿಕೆಯ ವಿಶೇಷ ಭಾಗವಾಗಿದೆ. 28 ಇಸ್ರೇಲರು ಆರೋನನಿಗೂ ಅವನ ಪುತ್ರರಿಗೂ ಈ ಭಾಗಗಳನ್ನು ಯಾವಾಗಲೂ ಕೊಡುವರು. ಇಸ್ರೇಲರು ಯೆಹೋವನಿಗೆ ಅರ್ಪಿಸುವ ಕಾಣಿಕೆಗಳಲ್ಲಿ ಈ ಭಾಗಗಳು ಯಾವಾಗಲೂ ಯಾಜಕರಿಗೆ ಸೇರಿದ್ದಾಗಿವೆ. ಅವರು ಯಾಜಕರಿಗೆ ಕೊಡುವ ಈ ಭಾಗಗಳು ಯೆಹೋವನಿಗೆ ಸಮರ್ಪಿಸಲ್ಪಟ್ಟಂತಿರುತ್ತವೆ.
29 “ಆರೋನನಿಗೋಸ್ಕರ ಮಾಡಿಸಿದ ವಿಶೇಷವಾದ ವಸ್ತ್ರಗಳನ್ನು ಅವನ ತರುವಾಯ ಅವನ ವಂಶಸ್ಥರೂ ಯಾಜಕ ಉದ್ಯೋಗಕ್ಕೆ ಆರಿಸಲ್ಪಟ್ಟಾಗ, ಅವುಗಳನ್ನು ಧರಿಸಿಕೊಳ್ಳುವರು. 30 ಆರೋನನ ತರುವಾಯ ಅವನ ಮಗನು ಮಹಾಯಾಜಕನಾಗುವನು. ಅವನು ಪವಿತ್ರಸ್ಥಳದಲ್ಲಿ ಸೇವೆಮಾಡಲು ದೇವದರ್ಶನಗುಡಾರಕ್ಕೆ ಪ್ರವೇಶಿಸಿದಂದಿನಿಂದ ಏಳು ದಿನಗಳವರೆಗೆ ಆ ವಸ್ತ್ರಗಳನ್ನು ಧರಿಸಿಕೊಂಡಿರುವನು.
31 “ಆರೋನನನ್ನು ಮಹಾಯಾಜಕನನ್ನಾಗಿ ಮಾಡಲು ಉಪಯೋಗಿಸಿದ ಟಗರಿನ ಮಾಂಸವನ್ನು ದೇವದರ್ಶನಗುಡಾರದ ಪ್ರಾಕಾರದಲ್ಲಿ ಬೇಯಿಸು. 32 ಬಳಿಕ ಆರೋನನು ಮತ್ತು ಅವನ ಪುತ್ರರು ದೇವದರ್ಶನಗುಡಾರದ ಮುಂಭಾಗದಲ್ಲಿ ಆ ಮಾಂಸವನ್ನೂ ಬುಟ್ಟಿಯಲ್ಲಿರುವ ರೊಟ್ಟಿಯನ್ನೂ ತಿನ್ನಬೇಕು. 33 ಅವರು ಯಾಜಕರಾಗಿ ಮಾಡಲ್ಪಟ್ಟಾಗ ಅವರ ಪಾಪನಿವಾರಣೆಗಾಗಿ ಇವುಗಳನ್ನು ಸಮರ್ಪಿಸಲಾಗಿತ್ತು. ಆದ್ದರಿಂದ ಆ ಸಮರ್ಪಣೆಗಳನ್ನು ಅವರು ಮಾತ್ರ ತಿನ್ನಬೇಕೇ ಹೊರತು ಬೇರೆಯವರು ತಿನ್ನಬಾರದು; ಯಾಕೆಂದರೆ ಅವು ಪರಿಶುದ್ಧವಾಗಿವೆ ಮತ್ತು ಪ್ರತ್ಯೇಕಿಸಲ್ಪಟ್ಟವುಗಳಾಗಿವೆ. 34 ಟಗರಿನ ಮಾಂಸ ಅಥವಾ ರೊಟ್ಟಿಯೇನಾದರೂ ಮರುದಿನ ಮುಂಜಾನೆಯವರೆಗೆ ಉಳಿದರೆ, ಅದನ್ನು ಸುಟ್ಟುಬಿಡಬೇಕು. ನೀವು ಆ ರೊಟ್ಟಿಯನ್ನಾಗಲಿ ಮಾಂಸವನ್ನಾಗಲಿ ತಿನ್ನಬಾರದು. ಯಾಕೆಂದರೆ ಅದನ್ನು ವಿಶೇಷವಾದ ಸಂದರ್ಭದಲ್ಲಿ ವಿಶೇಷವಾದ ರೀತಿಯಲ್ಲಿ ಮಾತ್ರ ತಿನ್ನಬೇಕು.
35 “ನಾನು ನಿನಗೆ ಆಜ್ಞಾಪಿಸಿದ ಇವುಗಳನ್ನೆಲ್ಲ ಆರೋನ ಮತ್ತು ಅವನ ಪುತ್ರರಿಗೋಸ್ಕರ ಮಾಡು. ಅವರನ್ನು ಯಾಜಕರನ್ನಾಗಿ ನೇಮಿಸುವ ಸಮಾರಂಭವು ಏಳು ದಿನಗಳವರೆಗೆ ನಡೆಯಬೇಕು. 36 ಏಳು ದಿನಗಳವರೆಗೆ ಪ್ರತಿದಿನ ಒಂದು ಹೋರಿಯನ್ನು ವಧಿಸು. ಇದು ಆರೋನನ ಮತ್ತು ಅವನ ಪುತ್ರರ ಪಾಪನಿವಾರಣೆಯ ಸಮರ್ಪಣೆಯಾಗಿರುವುದು. ಅದಲ್ಲದೆ ಯಜ್ಞವೇದಿಕೆಯನ್ನು ಪರಿಶುದ್ಧಗೊಳಿಸಲು ಅದರ ಮೇಲೆ ದೋಷಪರಿಹಾರಕ ಯಜ್ಞವನ್ನು ಸಮರ್ಪಿಸಿ ಅದನ್ನು ದೇವರ ಸೇವೆಗೋಸ್ಕರ ಅಭಿಷೇಕಿಸಬೇಕು. 37 ಹೀಗೆ ಏಳು ದಿನಗಳವರೆಗೆ ಯಜ್ಞವೇದಿಕೆಯನ್ನು ಶುದ್ಧಗೊಳಿಸಿ ಪವಿತ್ರಗೊಳಿಸಬೇಕು. ಆ ಸಮಯದಲ್ಲಿ ಯಜ್ಞವೇದಿಕೆಯು ಮಹಾಪವಿತ್ರವಾಗಿರುವುದು. ಯಜ್ಞವೇದಿಕೆಗೆ ಸೋಂಕಿದ ವಸ್ತುಗಳೆಲ್ಲವೂ ಪವಿತ್ರವಾಗುವುದು.
38 “ಯಜ್ಞವೇದಿಕೆಯ ಮೇಲೆ ಪ್ರತಿದಿನ ಯಜ್ಞವನ್ನು ಸಮರ್ಪಿಸಬೇಕು. ಒಂದು ವರ್ಷದ ಎರಡು ಕುರಿಮರಿಗಳನ್ನು ನೀನು ವಧಿಸಬೇಕು. 39 ಮುಂಜಾನೆ ಒಂದು ಕುರಿಮರಿಯನ್ನು ಮತ್ತು ಸಾಯಂಕಾಲ ಮತ್ತೊಂದು ಕುರಿಮರಿಯನ್ನು ಸಮರ್ಪಿಸಬೇಕು. 40 ನೀನು ಮೊದಲಿನ ಕುರಿಮರಿಯನ್ನು ವಧಿಸುವಾಗ ಮೂರು ಸೇರು ಶ್ರೇಷ್ಠ ಗೋಧಿ ಹಿಟ್ಟನ್ನೂ ಸಮರ್ಪಿಸು. ಆ ಹಿಟ್ಟನ್ನು ಒಂದೂವರೆ ಸೇರು ದ್ರಾಕ್ಷಾರಸದೊಂದಿಗೆ ಬೆರೆಸು. 41 ನೀನು ಸಾಯಂಕಾಲದಲ್ಲಿ ಮತ್ತೊಂದು ಕುರಿಮರಿಯನ್ನು ವಧಿಸುವಾಗಲೂ ಮೂರು ಸೇರು ಶ್ರೇಷ್ಠ ಗೋಧಿಯನ್ನೂ ಅರ್ಧ ಸೇರು ದ್ರಾಕ್ಷಾರಸವನ್ನೂ ಸಮರ್ಪಿಸು. ಇದು ಯೆಹೋವನಿಗೆ ಸುಗಂಧಹೋಮವಾಗಿರುವುದು.
42 “ನೀನು ಪ್ರತಿದಿನ ಈ ಸರ್ವಾಂಗಹೋಮವನ್ನು ಸಮರ್ಪಣೆಯಾಗಿ ಅರ್ಪಿಸಬೇಕು. ದೇವದರ್ಶನಗುಡಾರದ ದ್ವಾರದಲ್ಲಿ ಯೆಹೋವನ ಮುಂದೆ ಇದನ್ನು ಮಾಡು. ನೀನು ಸಮರ್ಪಣೆಯನ್ನು ಮಾಡುವಾಗ ಯೆಹೋವನಾದ ನಾನು ಅಲ್ಲಿ ನಿನ್ನನ್ನು ಸಂಧಿಸಿ ನಿನ್ನೊಡನೆ ಮಾತಾಡುವೆನು. 43 ಆ ಸ್ಥಳದಲ್ಲಿ ನಾನು ಇಸ್ರೇಲರನ್ನು ಸಂಧಿಸುವೆನು. ನನ್ನ ಪ್ರಭಾವದಿಂದ ಆ ಸ್ಥಳವು ಪವಿತ್ರವಾಗುವುದು.
44 “ಅಲ್ಲದೆ ನಾನು ದೇವದರ್ಶನಗುಡಾರವನ್ನೂ ಯಜ್ಞವೇದಿಕೆಯನ್ನೂ ಪವಿತ್ರಗೊಳಿಸುವೆನು. ಆರೋನನನ್ನೂ ಅವನ ಪುತ್ರರನ್ನೂ ಪವಿತ್ರಗೊಳಿಸುವೆನು; ಆಗ ಅವರು ಯಾಜಕರಾಗಿ ನನಗೆ ಸೇವೆಮಾಡಲು ಶಕ್ತರಾಗುವರು. 45 ನಾನು ಇಸ್ರೇಲರ ಮಧ್ಯದಲ್ಲಿ ವಾಸಿಸುವೆನು ಮತ್ತು ಅವರ ದೇವರಾಗಿರುವೆನು. 46 ನಾನು ಅವರ ದೇವರಾದ ಯೆಹೋವನಾಗಿದ್ದೇನೆಂದು ಜನರು ತಿಳಿದುಕೊಳ್ಳುವರು. ಅವರ ಮಧ್ಯದಲ್ಲಿ ವಾಸಮಾಡುವುದಕ್ಕಾಗಿ ಈಜಿಪ್ಟಿನಿಂದ ಅವರನ್ನು ಕರೆದುಕೊಂಡು ಬಂದವನು ನಾನೇ ಎಂದು ಅವರು ತಿಳಿದುಕೊಳ್ಳುವರು. ನಾನು ಅವರ ದೇವರಾಗಿರುವ ಯೆಹೋವನೇ.”
ಧೂಪವೇದಿಕೆ
30 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಜಾಲೀಮರದಿಂದ ಧೂಪವೇದಿಕೆಯನ್ನು ಮಾಡಿಸು. 2 ಈ ಧೂಪವೇದಿಕೆಯು ಚೌಕವಾಗಿ ಒಂದು ಮೊಳ ಉದ್ದ, ಒಂದು ಮೊಳ ಅಗಲ, ಎರಡು ಮೊಳ ಎತ್ತರ ಇರಬೇಕು. ಅದರ ನಾಲ್ಕು ಮೂಲೆಗಳಲ್ಲೂ ಕೊಂಬುಗಳಿರಬೇಕು. ಈ ಕೊಂಬುಗಳು ಧೂಪವೇದಿಕೆಯ ಅವಿಭಾಜ್ಯ ಭಾಗವಾಗಿರಬೇಕು. 3 ಧೂಪವೇದಿಕೆಯ ಮೇಲ್ಭಾಗವನ್ನೂ ಎಲ್ಲಾ ಪಾರ್ಶ್ವಗಳನ್ನೂ ಅದರ ಕೊಂಬುಗಳನ್ನೂ ಶುದ್ಧಬಂಗಾರದ ತಗಡಿನಿಂದ ಹೊದಿಸಬೇಕು ಮತ್ತು ಸುತ್ತಲೂ ಚಿನ್ನದ ಕಟ್ಟನ್ನು ಕಟ್ಟಿಸಬೇಕು. 4 ಧೂಪವೇದಿಕೆಯ ಎದುರುಬದುರಾಗಿರುವ ಎರಡು ಗೋಡೆಗಳಲ್ಲಿ ಕಟ್ಟಿನ ಕೆಳಗೆ ಎರಡು ಚಿನ್ನದ ಬಳೆಗಳನ್ನು ಮಾಡಿಸು. ಧೂಪವೇದಿಕೆಯನ್ನು ಹೊರುವ ಕೋಲುಗಳನ್ನು ಈ ಬಳೆಗಳು ಹಿಡಿದುಕೊಂಡಿರುತ್ತವೆ. 5 ಕೋಲುಗಳನ್ನು ಜಾಲೀಮರದಿಂದ ಮಾಡಿಸು. ಚಿನ್ನದ ತಗಡಿನಿಂದ ಆ ಕೋಲುಗಳನ್ನು ಹೊದಿಸು. 6 ವಿಶೇಷ ಪರದೆಯ (ಒಡಂಬಡಿಕೆಯ ಪೆಟ್ಟಿಗೆಯನ್ನು ಆವರಿಸಿಕೊಂಡಿರುವ) ಮುಂಭಾಗದಲ್ಲಿ ಧೂಪವೇದಿಕೆಯನ್ನು ಇಡು. ಧೂಪವೇದಿಕೆಯು ಒಡಂಬಡಿಕೆ ಪೆಟ್ಟಿಗೆಯ ಕೃಪಾಸನದ ಮುಂಭಾಗದಲ್ಲಿರುವುದು. ಇದು ನಾನು ನಿನ್ನನ್ನು ಸಂಧಿಸುವ ಸ್ಥಳವಾಗಿದೆ.
7 “ಆರೋನನು ಪ್ರತಿಮುಂಜಾನೆ ಧೂಪವೇದಿಕೆಯ ಮೇಲೆ ಸುಗಂಧದ್ರವ್ಯಗಳ ಧೂಪವನ್ನು ಉರಿಸಬೇಕು. ಅವನು ದೀಪಗಳನ್ನು ಸರಿಪಡಿಸಲು ಬರುವಾಗ ಇದನ್ನು ಮಾಡುವನು. 8 ತಿರುಗಿ ಸಾಯಂಕಾಲದಲ್ಲಿ ಧೂಪವನ್ನು ಉರಿಸಬೇಕು. ಇದು ಸಾಯಂಕಾಲಗಳಲ್ಲಿ ಅವನು ದೀಪಗಳನ್ನು ಹೊತ್ತಿಸುವ ಸಮಯವಾಗಿರುತ್ತದೆ. ಹೀಗೆ ಪ್ರತಿದಿನ ಯೆಹೋವನ ಮುಂದೆ ನಿತ್ಯವಾದ ಧೂಪಸಮರ್ಪಣೆ ಇರುವುದು. 9 ಈ ಧೂಪವೇದಿಕೆಯನ್ನು ಬೇರೆ ವಿಧದ ಧೂಪಸಮರ್ಪಣೆಗಾಗಲಿ ಸರ್ವಾಂಗಹೋಮವನ್ನು ಅರ್ಪಿಸುವುದಕ್ಕಾಗಲಿ ಯಾವುದೇ ಧಾನ್ಯಸಮರ್ಪಣೆಗಾಗಲಿ ಪಾನದ್ರವ್ಯಸಮರ್ಪಣೆಗಾಗಲಿ ಉಪಯೋಗಿಸಬಾರದು.
10 “ಆರೋನನು ವರ್ಷಕ್ಕೊಮ್ಮೆ ಯೆಹೋವನಿಗೆ ವಿಶೇಷ ಯಜ್ಞವನ್ನು ಸಮರ್ಪಿಸಬೇಕು. ಜನರ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ಆರೋನನು ದೋಷಪರಿಹಾರಕ ಯಜ್ಞದ ರಕ್ತವನ್ನು ಉಪಯೋಗಿಸುವನು. ಆರೋನನು ಇದನ್ನು ಈ ಯಜ್ಞವೇದಿಕೆಯ ಕೊಂಬುಗಳಲ್ಲಿ ಮಾಡುವನು. ಆ ದಿನವು ದೋಷಪರಿಹಾರಕ ದಿನವೆಂದು ಕರೆಯಲ್ಪಡುವುದು. ಯೆಹೋವನಿಗೆ ಇದು ಅತೀ ಪರಿಶುದ್ಧವಾದ ವಿಶೇಷ ದಿನವಾಗಿದೆ.”
ದೇವಾಲಯದ ತೆರಿಗೆ
11 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 12 “ಇಸ್ರೇಲರನ್ನು ಲೆಕ್ಕಿಸು. ಹೀಗಾಗಿ ಎಷ್ಟು ಮಂದಿ ಜನರಿರುತ್ತಾರೆಂದು ನೀನು ತಿಳಿದುಕೊಳ್ಳುವೆ. ಪ್ರತಿಸಾರಿ ಇದನ್ನು ಮಾಡಿದಾಗ, ಪ್ರತಿಯೊಬ್ಬನು ತನಗೋಸ್ಕರವಾಗಿ ಯೆಹೋವನಿಗೆ ತೆರಿಗೆಯನ್ನು ಕೊಡಬೇಕು. ಆಗ ಜನರಿಗೆ ಯಾವ ಕೇಡುಗಳೂ ಉಂಟಾಗುವುದಿಲ್ಲ. 13 ಲೆಕ್ಕಿಸಲ್ಪಟ್ಟ ಪ್ರತಿಯೊಬ್ಬನು ಅಧಿಕೃತ ಅಳತೆಗನುಸಾರವಾಗಿರುವ ಅರ್ಧಶೆಕೆಲ್ ಕಪ್ಪಕಾಣಿಕೆಯನ್ನು ಕೊಡಬೇಕು. ಈ ಅರ್ಧಶೆಕೆಲ್ ಯೆಹೋವನಿಗೆ ಕಾಣಿಕೆಯಾಗಿರುತ್ತದೆ. 14 ಲೆಕ್ಕಿಸಲ್ಪಟ್ಟವರಲ್ಲಿ ಇಪ್ಪತ್ತು ವರ್ಷದವರೂ ಅದಕ್ಕೆ ಮೇಲ್ಪಟ್ಟವರೂ ಈ ಕಾಣಿಕೆಯನ್ನು ಯೆಹೋವನಿಗೆ ಕೊಡಬೇಕು. 15 ಐಶ್ವರ್ಯವಂತರು ಅರ್ಧಶೆಕೆಲಿಗಿಂತ ಹೆಚ್ಚು ಕೊಡಬಾರದು; ಬಡವರು ಅರ್ಧಶೆಕೆಲಿಗಿಂತ ಕಡಿಮೆ ಕೊಡಬಾರದು. ಜನರೆಲ್ಲರೂ ಈ ಕಾಣಿಕೆಯನ್ನು ಯೆಹೋವನಿಗೆ ಅರ್ಪಿಸಬೇಕು. ಇದು ನಿಮ್ಮ ಪ್ರಾಣರಕ್ಷಣೆಯ ತೆರಿಗೆಯಾಗಿದೆ. 16 ಇಸ್ರೇಲರಿಂದ ಈ ಹಣವನ್ನು ಒಟ್ಟುಗೂಡಿಸಬೇಕು. ದೇವದರ್ಶನಗುಡಾರದ ಸೇವೆಗಾಗಿ ಹಣವನ್ನು ಉಪಯೋಗಿಸಬೇಕು. ಯೆಹೋವನು ತನ್ನ ಜನರನ್ನು ಜ್ಞಾಪಿಸಿಕೊಳ್ಳುವುದಕ್ಕಾಗಿ ಈ ಕಪ್ಪವು ಒಂದು ಮಾರ್ಗವಾಗಿದೆ. ಅವರು ತಮ್ಮ ಪ್ರಾಣರಕ್ಷಣೆಗಾಗಿ ಹಣವನ್ನು ಕೊಡುತ್ತಿರುವರು.”
ಗಂಗಾಳ
17 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 18 “ತಾಮ್ರದ ಗಂಗಾಳವನ್ನು ಮಾಡಿ ಅದನ್ನು ತಾಮ್ರದ ಪೀಠದ ಮೇಲಿಡು. ತೊಳೆದುಕೊಳ್ಳುವುದಕ್ಕೆ ನೀವು ಇದನ್ನು ಉಪಯೋಗಿಸುವಿರಿ. ಗಂಗಾಳವನ್ನು ದೇವದರ್ಶನಗುಡಾರ ಮತ್ತು ಯಜ್ಞವೇದಿಕೆಯ ನಡುವೆ ಇಡು. ಗಂಗಾಳದಲ್ಲಿ ನೀರನ್ನು ತುಂಬಿಸು. 19 ಆರೋನನು ಮತ್ತು ಅವನ ಪುತ್ರರು ಈ ಗಂಗಾಳದಲ್ಲಿರುವ ನೀರಿನಿಂದ ತಮ್ಮ ಕೈಕಾಲುಗಳನ್ನು ತೊಳೆದುಕೊಳ್ಳಬೇಕು. 20 ಪ್ರತಿಸಾರಿ ದೇವದರ್ಶನಗುಡಾರಕ್ಕೆ ಪ್ರವೇಶಿಸುವಾಗ ಅಥವಾ ಯೆಹೋವನಿಗಾಗಿ ಸರ್ವಾಂಗಹೋಮಗಳನ್ನು ಅರ್ಪಿಸಲು ಯಜ್ಞವೇದಿಕೆಯ ಹತ್ತಿರಕ್ಕೆ ಬರುವಾಗ ಅವರು ನೀರಿನಿಂದ ತೊಳೆದುಕೊಳ್ಳಬೇಕು. ಆಗ ಅವರು ಸಾಯುವುದಿಲ್ಲ. 21 ಅವರು ತಮ್ಮ ಕೈಕಾಲುಗಳನ್ನು ತೊಳೆದುಕೊಳ್ಳುವುದರಿಂದ ಅವರು ಸಾಯುವುದಿಲ್ಲ. ಆರೋನನಿಗೂ ಅವನ ಸಂತತಿಯವರಿಗೂ ಇದು ಶಾಶ್ವತವಾದ ನಿಯಮ. ತಲೆಮಾರುಗಳವರೆಗೆ ಆರೋನನ ಸಂತತಿಯವರಿಗೆಲ್ಲಾ ಇದೇ ಕಟ್ಟಳೆಯಿರುವುದು.”
ಅಭಿಷೇಕತೈಲ
22 ತರುವಾಯ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 23 “ಶ್ರೇಷ್ಠವಾದ ಸುಗಂಧದ್ರವ್ಯಗಳನ್ನು ಮಾಡಿಸು. ಹನ್ನೆರಡು ಪೌಂಡುಗಳಷ್ಟು ಅಚ್ಚ ರಕ್ತಬೋಳ, ಅದರ ಅರ್ಧದಷ್ಟು ಅಂದರೆ ಆರು ಪೌಂಡು ಸುವಾಸನೆಯುಳ್ಳ ದಾಲ್ಚಿನ್ನಿ, ಹನ್ನೆರಡು ಪೌಂಡುಗಳಷ್ಟು ಸುವಾಸನೆಯುಳ್ಳ ಬಜೆ, 24 ಮತ್ತು ಹನ್ನೆರಡು ಪೌಂಡುಗಳಷ್ಟು ಲವಂಗಚಕ್ಕೆಯನ್ನು ತೆಗೆದುಕೊಂಡು ಬಾ. ಇವುಗಳನ್ನೆಲ್ಲ ಅಧಿಕೃತ ಅಳತೆಮಾಪಕದಿಂದ ಅಳತೆಮಾಡು. ಒಂದು ಗ್ಯಾಲನ್ ಆಲಿವ್ ಎಣ್ಣೆಯನ್ನೂ ತೆಗೆದುಕೊಂಡು ಬಾ.
25 “ಸುವಾಸನೆಯುಳ್ಳ ಪವಿತ್ರ ಅಭಿಷೇಕತೈಲವನ್ನು ಮಾಡಲು ಇವುಗಳನ್ನೆಲ್ಲ ಒಟ್ಟಿಗೆ ಬೆರೆಸು. 26 ದೇವದರ್ಶನಗುಡಾರವನ್ನು ಮತ್ತು ಒಡಂಬಡಿಕೆಯ ಪೆಟ್ಟಿಗೆಯನ್ನು ಅಭಿಷೇಕಿಸಲು ಈ ತೈಲವನ್ನು ಉಪಯೋಗಿಸು. 27 ಈ ತೈಲವನ್ನು ಮೇಜಿನ ಮೇಲಿರುವ ಎಲ್ಲಾ ಉಪಕರಣಗಳ ಮೇಲೆ ಸುರಿ. ಈ ತೈಲವನ್ನು ದೀಪಸ್ತಂಭ ಮತ್ತು ಅದರ ಉಪಕರಣಗಳೆಲ್ಲದರ ಮೇಲೆ ಸುರಿ. ಆ ಯಜ್ಞವೇದಿಕೆಯ ಮೇಲಿರುವ ಅದರ ಉಪಕರಣಗಳ ಮೇಲೆಯೂ ಈ ತೈಲವನ್ನು ಸುರಿ. ತೈಲವನ್ನು ಧೂಪವೇದಿಕೆಯ ಮೇಲೆ ಸುರಿ. 28 ದೇವರಿಗೆ ಬೆಂಕಿಯ ಮೂಲಕ ಅರ್ಪಿಸುವ ಹೋಮಗಳ ಮೇಲೆಯೂ ತೈಲವನ್ನು ಸುರಿ. ಈ ತೈಲವನ್ನು ಗಂಗಾಳದ ಮೇಲೆಯೂ ಮತ್ತು ಗಂಗಾಳದ ಕೆಳಗಿರುವ ಪೀಠದ ಮೇಲೆಯೂ ಸುರಿ. 29 ಆಗ ನೀನು ಈ ಉಪಕರಣಗಳನ್ನೆಲ್ಲ ಪವಿತ್ರಗೊಳಿಸುವೆ. ಅವುಗಳು ಯೆಹೋವನಿಗೆ ಬಹು ವಿಶೇಷವಾಗಿವೆ. ಅವುಗಳಿಗೆ ಸೋಂಕಿದ್ದೆಲ್ಲವೂ ಪವಿತ್ರವಾಗುತ್ತವೆ.
30 “ಆರೋನನನ್ನು ಮತ್ತು ಅವನ ಪುತ್ರರನ್ನು ಈ ತೈಲದಿಂದ ಅಭಿಷೇಕಿಸು. ಅವರು ವಿಶೇಷವಾದ ರೀತಿಯಲ್ಲಿ ನನ್ನ ಸೇವೆಮಾಡುತ್ತಾರೆಂದು ಇದು ತೋರಿಸುವುದು. ಆಗ ಅವರು ಅಭಿಷೇಕಿಸಲ್ಪಟ್ಟ ಯಾಜಕರಾಗಿ ನನ್ನ ಸೇವೆಮಾಡಬಹುದು. 31 ಅಭಿಷೇಕತೈಲವು ಪವಿತ್ರವಾದದ್ದು. ಅದನ್ನು ಯಾವಾಗಲೂ ನನಗಾಗಿ ಮಾತ್ರವೇ ಉಪಯೋಗಿಸಬೇಕೆಂದು ಇಸ್ರೇಲರಿಗೆ ಹೇಳು. 32 ಯಾರೂ ಇದನ್ನು ಸಾಮಾನ್ಯವಾದ ಸುಗಂಧ ವಾಸನೆಯುಳ್ಳ ತೈಲವಾಗಿ ಉಪಯೋಗಿಸಬಾರದು. ಈ ವಿಶೇಷವಾದ ತೈಲವನ್ನು ಮಾಡುವ ರೀತಿಯಲ್ಲಿ ಸಾಮಾನ್ಯವಾದ ಸುಗಂಧತೈಲವನ್ನು ಮಾಡಬಾರದು. ಈ ತೈಲವು ಪವಿತ್ರವಾದದ್ದು. ಇದು ನಿಮಗೆ ಬಹಳ ವಿಶೇಷವಾದದ್ದಾಗಿರಬೇಕು. 33 ಯಾವನಾದರೂ ಸುಗಂಧತೈಲವನ್ನು ಈ ಪವಿತ್ರತೈಲದಂತೆ ಮಾಡಿ ಯಾಜಕನಲ್ಲದ ಒಬ್ಬನಿಗೆ ಅದನ್ನು ಕೊಟ್ಟರೆ, ಅವನನ್ನು ಅವನ ಕುಲದಿಂದ ಬಹಿಷ್ಕರಿಸಬೇಕು.”
ಧೂಪ
34 ಬಳಿಕ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ನೀನು ಹಾಲುಮಡ್ಡಿ, ಗುಗ್ಗುಲ, ಗಂಧದ ಚೆಕ್ಕೆ ಎಂಬ ಸುಗಂಧ ದ್ರವ್ಯಗಳನ್ನು ಸಮವಾಗಿ ತೆಗೆದುಕೊ. 35 ಸುವಾಸನೆಯುಳ್ಳ ಧೂಪವನ್ನು ಮಾಡುವುದಕ್ಕೆ ಈ ಸುಗಂಧ ದ್ರವ್ಯಗಳನ್ನು ಒಟ್ಟಾಗಿ ಬೆರೆಸು. ಸುಗಂಧದ್ರವ್ಯಕಾರನು ಮಾಡುವ ಪ್ರಕಾರವೇ ಇದನ್ನು ಮಾಡು. ಈ ಧೂಪಕ್ಕೆ ಉಪ್ಪನ್ನು ಬೆರೆಸು. ಉಪ್ಪು ಅದನ್ನು ಶುದ್ಧಗೊಳಿಸುವುದು. 36 ಸ್ವಲ್ಪ ಧೂಪವನ್ನು ಅರೆದು ಪುಡಿ ಮಾಡು. ಈ ಪುಡಿಯನ್ನು ದೇವದರ್ಶನಗುಡಾರದಲ್ಲಿರುವ ಒಡಂಬಡಿಕೆ ಪೆಟ್ಟಿಗೆಯ ಮುಂದೆ ನಾನು ನಿನಗೆ ದರ್ಶನ ಕೊಡುವ ಸ್ಥಳದಲ್ಲಿಡು. ಈ ಧೂಪದ ಪುಡಿಯನ್ನು ಅದರ ವಿಶೇಷ ಉದ್ದೇಶಕ್ಕಾಗಿ ಮಾತ್ರವೇ ಉಪಯೋಗಿಸಬೇಕು. ಅದು ಅತಿ ಪರಿಶುದ್ಧವಾದದ್ದು. 37 ನೀನು ಈ ಧೂಪವನ್ನು ಯೆಹೋವನಿಗಾಗಿ ವಿಶೇಷವಾದ ರೀತಿಯಲ್ಲಿ ಮಾತ್ರ ಉಪಯೋಗಿಸಬೇಕು. ನೀನು ಈ ಧೂಪವನ್ನು ವಿಶೇಷವಾದ ರೀತಿಯಲ್ಲಿ ತಯಾರಿಸಬೇಕು. ಈ ರೀತಿ ವಿಶೇಷವಾಗಿ ಬೇರೆ ಯಾವ ಧೂಪವನ್ನೂ ಮಾಡಬಾರದು. 38 ಸುವಾಸನೆಗೋಸ್ಕರ ಒಬ್ಬನು ತನಗಾಗಿ ಸ್ವಲ್ಪ ಧೂಪವನ್ನು ಈ ರೀತಿಯಲ್ಲಿ ಮಾಡಿದರೆ ಅವನನ್ನು ಅವನ ಕುಲದಿಂದ ಬಹಿಷ್ಕರಿಸಬೇಕು.”
ಬೆಚಲೇಲ್ ಮತ್ತು ಒಹೊಲೀಯಾಬ
31 ತರುವಾಯ ಯೆಹೋವನು ಮೋಶೆಗೆ ಹೀಗೆಂದನು: 2 “ನಾನು ಯೆಹೂದ ಕುಲದಿಂದ ಊರಿಯ ಮಗನಾದ ಬೆಚಲೇಲನನ್ನು ಆರಿಸಿಕೊಂಡಿದ್ದೇನೆ. ಊರಿಯು ಹೂರನ ಮಗನು. 3 ನಾನು ಬೆಚಲೇಲನನ್ನು ದೇವರಾತ್ಮಭರಿತನನ್ನಾಗಿ ಮಾಡಿದ್ದೇನೆ. ನಾನು ಅವನಿಗೆ ಎಲ್ಲಾ ಬಗೆಯ ಕೆಲಸಗಳನ್ನು ಮಾಡಲು ನಿಪುಣತೆಯನ್ನೂ ಜ್ಞಾನವನ್ನೂ ಅನುಗ್ರಹಿಸಿದ್ದೇನೆ. 4 ಬೆಚಲೇಲನು ಬಹಳ ಉತ್ತಮ ಚಿತ್ರಕಾರನಾಗಿದ್ದಾನೆ. ಬೆಳ್ಳಿಬಂಗಾರಗಳ ಮತ್ತು ತಾಮ್ರದ ವಸ್ತುಗಳನ್ನು ಅವನು ಮಾಡಬಲ್ಲನು. 5 ಅವನು ರತ್ನಗಳನ್ನು ಕೆತ್ತಿ ಅಂದವಾದ ಆಭರಣಗಳನ್ನು ಮಾಡಬಲ್ಲನು ಮತ್ತು ಮರಗೆಲಸವನ್ನು ಮಾಡಬಲ್ಲನು. ಅವನು ಎಲ್ಲಾ ತರದ ಕೆಲಸಗಳನ್ನು ಮಾಡಬಲ್ಲನು. 6 ಅವನೊಂದಿಗೆ ಕೆಲಸ ಮಾಡಲು ನಾನು ಒಹೊಲೀಯಾಬನನ್ನು ಆರಿಸಿಕೊಂಡಿದ್ದೇನೆ. ಒಹೊಲೀಯಾಬನು ದಾನ್ ಕುಲದ ಅಹೀಸಾಮಾಕನ ಮಗನು. ನಾನು ನಿನಗೆ ಆಜ್ಞಾಪಿಸಿದ್ದೆಲ್ಲವನ್ನು ಮಾಡುವುದಕ್ಕೆ ಬೇರೆ ಕೆಲಸಗಾರರಿಗೆಲ್ಲಾ ನಿಪುಣತೆಯನ್ನು ಅನುಗ್ರಹಿಸಿದ್ದೇನೆ:
7 ದೇವದರ್ಶನಗುಡಾರ,
ಒಡಂಬಡಿಕೆ ಪೆಟ್ಟಿಗೆ,
ಕೃಪಾಸನ, ಗುಡಾರದ ಎಲ್ಲಾ ಉಪಕರಣಗಳು,
8 ಮೇಜು ಮತ್ತು ಅದರ ಮೇಲಿನ ವಸ್ತುಗಳು,
ಬಂಗಾರದ ದೀಪಸ್ತಂಭ ಮತ್ತು ಅದರ ಉಪಕರಣಗಳು,
9 ಧೂಪವೇದಿಕೆ, ಯಜ್ಞವೇದಿಕೆ ಮತ್ತು ಅವುಗಳ ಉಪಕರಣಗಳು,
ಗಂಗಾಳ ಮತ್ತು ಅದರ ಪೀಠ.
10 ಮಹಾಯಾಜಕನಾದ ಆರೋನನ ಎಲ್ಲಾ ವಿಶೇಷ ಬಟ್ಟೆಗಳು,
ಆರೋನನ ಪುತ್ರರು ಯಾಜಕರಾಗಿ ಸೇವೆ ಮಾಡುವಾಗ ಧರಿಸಿಕೊಳ್ಳತಕ್ಕ ಎಲ್ಲಾ ಬಟ್ಟೆಗಳು.
11 ಸುವಾಸನೆಯುಳ್ಳ ಅಭಿಷೇಕತೈಲ,
ಪವಿತ್ರ ಸ್ಥಳದಲ್ಲಿ ಉಪಯೋಗಿಸುವ ಸುವಾಸನೆಯುಳ್ಳ ಧೂಪ.
ನಾನು ನಿನಗೆ ಆಜ್ಞಾಪಿಸಿದ ರೀತಿಯಲ್ಲೇ ಈ ಕೆಲಸಗಾರರು ಈ ವಸ್ತುಗಳನ್ನೆಲ್ಲಾ ಮಾಡತಕ್ಕದ್ದು.”
ಸಬ್ಬತ್
12 ತರುವಾಯ ಯೆಹೋವನು ಮೋಶೆಗೆ ಹೀಗೆಂದನು: 13 “ಇದನ್ನು ಇಸ್ರೇಲರಿಗೆ ಹೇಳು: ‘ನೀವು ನನ್ನ ವಿಶೇಷವಾದ ಸಬ್ಬತ್ ದಿನವನ್ನು ಖಂಡಿತವಾಗಿ ಆಚರಿಸಬೇಕು. ಯೆಹೋವನಾದ ನಾನು ನಿಮ್ಮನ್ನು ನನ್ನ ವಿಶೇಷ ಜನರನ್ನಾಗಿ ಮಾಡಿರುವುದಕ್ಕೆ ಇದು ಗುರುತಾಗಿದೆ.
14 “‘ಸಬ್ಬತ್ ದಿನವನ್ನು ವಿಶೇಷ ದಿನವೆಂದು ಪರಿಗಣಿಸಿ ಆಚರಿಸಿರಿ. ಆ ದಿನವನ್ನು ಬೇರೆ ದಿನದಂತೆ ಪರಿಗಣಿಸಿ ನಡೆಯುವವನಿಗೆ ಮರಣದಂಡನೆಯಾಗಬೇಕು. ಸಬ್ಬತ್ ದಿನದಲ್ಲಿ ಯಾವನಾದರೂ ಕೆಲಸಮಾಡಿದರೆ ಅವನನ್ನು ಬಹಿಷ್ಕರಿಸಬೇಕು. 15 ಕೆಲಸ ಮಾಡುವುದಕ್ಕೆ ವಾರದಲ್ಲಿ ಬೇರೆ ಆರು ದಿನಗಳಿವೆ. ಆದರೆ ಏಳನೆಯ ದಿನವು ವಿಶ್ರಾಂತಿಯ ಬಹು ವಿಶೇಷವಾದ ದಿನವಾಗಿದೆ. ಯೆಹೋವನನ್ನು ಸನ್ಮಾನಿಸಲು ಅದೊಂದು ವಿಶೇಷ ದಿನವಾಗಿದೆ. ಸಬ್ಬತ್ತಿನ ಸಮಯದಲ್ಲಿ ಕೆಲಸಮಾಡುವವನು ಕೊಲ್ಲಲ್ಪಡಬೇಕು. 16 ಇಸ್ರೇಲರು ಸಬ್ಬತ್ ದಿನವನ್ನು ಜ್ಞಾಪಿಸಿಕೊಂಡು ಅದನ್ನು ವಿಶೇಷ ದಿನವನ್ನಾಗಿ ಮಾಡಿಕೊಳ್ಳತಕ್ಕದ್ದು. ಅವರು ಇದನ್ನು ಎಂದೆಂದೂ ಮಾಡತಕ್ಕದ್ದು. ಇದು ಎಂದೆಂದಿಗೂ ಮುಂದುವರಿಯುವ ಒಡಂಬಡಿಕೆ. 17 ಸಬ್ಬತ್ ನನಗೂ ಮತ್ತು ಇಸ್ರೇಲರಿಗೂ ನಡುವೆ ಎಂದೆಂದೂ ಇರುವ ಸೂಚನೆಯಾಗಿರುವುದು.’” ಯೆಹೋವನು ಆರು ದಿನಗಳಲ್ಲಿ ಕೆಲಸಮಾಡಿ ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು. ಏಳನೆಯ ದಿನದಲ್ಲಿ ಕೆಲಸ ಮಾಡದೆ ವಿಶ್ರಮಿಸಿಕೊಂಡನು.
18 ಹೀಗೆ, ಯೆಹೋವನು ಮೋಶೆಯೊಡನೆ ಸೀನಾಯಿ ಬೆಟ್ಟದಲ್ಲಿ ಮಾತಾಡುವುದನ್ನು ಮುಗಿಸಿದನು. ಬಳಿಕ ಯೆಹೋವನು ಒಡಂಬಡಿಕೆ ಬರೆಯಲ್ಪಟ್ಟಿದ್ದ ಎರಡು ಕಲ್ಲಿನ ಹಲಿಗೆಗಳನ್ನು ಮೋಶೆಗೆ ಕೊಟ್ಟನು. ಅವು ದೇವರ ಬೆರಳಿನಿಂದ ಲಿಖಿತವಾಗಿತ್ತು.
ಚಿನ್ನದ ಬಸವ
32 ಬಹಳ ಸಮಯ ದಾಟಿಹೋದರೂ ಮೋಶೆ ಬೆಟ್ಟದಿಂದ ಕೆಳಗಿಳಿಯಲಿಲ್ಲವಾದ್ದರಿಂದ ಇಸ್ರೇಲರು ಆರೋನನ ಬಳಿಗೆ ಒಟ್ಟಾಗಿ ಬಂದು, “ನೋಡು, ಮೋಶೆಯು ನಮ್ಮನ್ನು ಈಜಿಪ್ಟಿನಿಂದ ಹೊರಗೆ ಕರೆದುಕೊಂಡು ಬಂದನು. ಆದರೆ ಅವನಿಗೇನಾಯಿತೋ ನಮಗೆ ತಿಳಿಯದು. ಆದ್ದರಿಂದ ನಮ್ಮನ್ನು ಮುನ್ನಡೆಸಲು ಕೆಲವು ದೇವರುಗಳನ್ನು ಮಾಡಿಕೊಡು” ಎಂದು ಹೇಳಿದರು.
2 ಆರೋನನು ಅವರಿಗೆ, “ನಿಮ್ಮ ಹೆಂಡತಿಯ ಮತ್ತು ಗಂಡು ಹೆಣ್ಣುಮಕ್ಕಳಲ್ಲಿರುವ ಚಿನ್ನದ ಓಲೆಗಳನ್ನು ತಂದು ನನಗೆ ಕೊಡಿರಿ” ಎಂದು ಹೇಳಿದನು.
3 ಆದ್ದರಿಂದ ಅವರೆಲ್ಲರೂ ತಮ್ಮ ಚಿನ್ನದ ಓಲೆಗಳನ್ನು ತಂದುಕೊಟ್ಟರು. 4 ಆರೋನನು ಬಸವನ ಮೂರ್ತಿಯನ್ನು ಚಿನ್ನದಿಂದ ಎರಕಹೊಯ್ಯಿಸಿದನು.
ಬಳಿಕ ಅವರು, “ಇಸ್ರೇಲರೇ, ನಿಮ್ಮ ದೇವರುಗಳು ಇಲ್ಲಿವೆ! ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ದೇವರುಗಳು ಇವುಗಳೇ” ಎಂದು ಹೇಳಿದರು.
5 ಆರೋನನು ಇವೆಲ್ಲವನ್ನು ನೋಡಿ, ಬಸವನ ಮುಂದೆ ಒಂದು ಯಜ್ಞವೇದಿಕೆಯನ್ನು ಕಟ್ಟಿಸಿದನು. ಬಳಿಕ, “ನಾಳೆ ಯೆಹೋವನನ್ನು ಸನ್ಮಾನಿಸಲು ಒಂದು ವಿಶೇಷ ಹಬ್ಬವಿರುವುದು” ಎಂದು ಪ್ರಕಟಿಸಿದನು.
6 ಮರುದಿನ ಮುಂಜಾನೆ ಜನರೆಲ್ಲರೂ ಬೇಗನೆ ಎದ್ದು ತಮ್ಮ ಪಶುಗಳನ್ನು ವಧಿಸಿ ಸರ್ವಾಂಗಹೋಮಗಳನ್ನಾಗಿಯೂ ಸಮಾಧಾನಯಜ್ಞಗಳನ್ನಾಗಿಯೂ ಅರ್ಪಿಸಿ ತಿನ್ನುವುದಕ್ಕೂ ಕುಡಿಯುವುದಕ್ಕೂ ಕುಳಿತುಕೊಂಡರು. ಬಳಿಕ ಎದ್ದು ಕುಣಿದಾಡಿದರು ಮತ್ತು ಕೂಗಾಡಿದರು.
7 ಅದೇ ಸಮಯದಲ್ಲಿ ಯೆಹೋವನು ಮೋಶೆಗೆ, “ಬೆಟ್ಟದಿಂದ ಇಳಿದುಹೋಗು. ನೀನು ಈಜಿಪ್ಟಿನಿಂದ ಕರೆದುಕೊಂಡು ಬಂದ ನಿನ್ನ ಜನರು ಭಯಂಕರವಾದ ಪಾಪ ಮಾಡಿದ್ದಾರೆ. 8 ನಾನು ಅವರಿಗೆ ಆಜ್ಞಾಪಿಸಿದವುಗಳಿಗೆ ಬಹುಬೇಗನೆ ಅವಿಧೇಯರಾಗಿದ್ದಾರೆ. ಚಿನ್ನವನ್ನು ಕರಗಿಸಿ ಅದರಿಂದ ಬಸವನನ್ನು ಮಾಡಿಕೊಂಡು ಅದನ್ನು ಪೂಜಿಸುತ್ತಾ ಅದಕ್ಕೆ ಯಜ್ಞಗಳನ್ನು ಸಮರ್ಪಿಸುತ್ತಿದ್ದಾರೆ. ‘ಇಸ್ರೇಲರೇ ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ದೇವರುಗಳು ಇವುಗಳು’ ಎಂದು ಜನರು ಹೇಳುತ್ತಿದ್ದಾರೆ” ಎಂದನು.
9 ಯೆಹೋವನು ಮೋಶೆಗೆ, “ನಾನು ಈ ಜನರನ್ನು ನೋಡಿದ್ದೇನೆ. ಅವರು ಬಹಳ ಮೊಂಡರೆಂದು ನಾನು ಬಲ್ಲೆನು. ಅವರು ಯಾವಾಗಲೂ ನಿನಗೆ ವಿರೋಧವಾಗಿ ದಂಗೆ ಏಳುವರು. 10 ಆದ್ದರಿಂದ ನಾನು ಅವರನ್ನು ಕೋಪದಿಂದ ನಾಶಮಾಡಿಬಿಡುತ್ತೇನೆ. ನನ್ನನ್ನು ತಡೆಯಬೇಡ. ಬಳಿಕ ನಾನು ನಿನ್ನಿಂದ ಒಂದು ಮಹಾಜನಾಂಗವನ್ನು ಉಂಟುಮಾಡುವೆನು” ಎಂದು ಹೇಳಿದನು.
11 ಆದರೆ ಮೋಶೆಯು ತನ್ನ ದೇವರಾದ ಯೆಹೋವನಿಗೆ, “ಯೆಹೋವನೇ, ನಿನ್ನ ಕೋಪವು ನಿನ್ನ ಜನರನ್ನು ನಾಶಮಾಡದಿರಲಿ. ನಿನ್ನ ಮಹಾಶಕ್ತಿಯಿಂದಲೂ ಬಲದಿಂದಲೂ ಈ ಜನರನ್ನು ಈಜಿಪ್ಟಿನಿಂದ ಹೊರಗೆ ಕರೆದುಕೊಂಡು ಬಂದೆಯಲ್ಲಾ. 12 ಆದರೆ ನೀನು ನಿನ್ನ ಜನರನ್ನು ನಾಶಮಾಡಿದರೆ, ಈಜಿಪ್ಟಿನವರು, ‘ಯೆಹೋವನು ತನ್ನ ಜನರಿಗೆ ಕೇಡನ್ನು ಮಾಡುವುದಕ್ಕಾಗಿಯೇ ಈಜಿಪ್ಟಿನಿಂದ ಕರೆದುಕೊಂಡು ಹೋದನು. ಆತನು ಅವರನ್ನು ಬೆಟ್ಟಗಳಲ್ಲಿ ಕೊಲ್ಲಬೇಕೆಂದಿದ್ದನು; ತನ್ನ ಜನರನ್ನು ಭೂಮಿಯಿಂದ ನಿರ್ಮೂಲ ಮಾಡಬೇಕೆಂದಿದ್ದನು’ ಎಂದು ಹೇಳುವರು. ಆದ್ದರಿಂದ ನಿನ್ನ ಜನರ ಮೇಲೆ ಕೋಪಗೊಳ್ಳಬೇಡ. ನಿನ್ನ ಕೋಪವನ್ನು ಬಿಟ್ಟುಬಿಡು. ನಿನ್ನ ಜನರನ್ನು ನಾಶಮಾಡಬೇಡ. 13 ನಿನ್ನ ಸೇವೆಮಾಡಿದ ಅಬ್ರಹಾಮನನ್ನು, ಇಸಾಕನನ್ನು, ಯಾಕೋಬನನ್ನು ಜ್ಞಾಪಿಸಿಕೊ. ನೀನು ನಿನ್ನ ಹೆಸರನ್ನು ಉಪಯೋಗಿಸಿ ಆ ಜನರಿಗೆ ವಾಗ್ದಾನವನ್ನು ಮಾಡಿದೆ. ‘ನಾನು ನಿನ್ನ ಸಂತತಿಯವರನ್ನು ಆಕಾಶದ ನಕ್ಷತ್ರಗಳಷ್ಟು ಮಾಡುವೆನು. ನಾನು ವಾಗ್ದಾನ ಮಾಡಿದಂತೆ ಈ ದೇಶವನ್ನೆಲ್ಲಾ ನಿನ್ನ ಸಂತತಿಗಳವರಿಗೆ ಕೊಡುವೆನು. ಈ ದೇಶ ಎಂದೆಂದಿಗೂ ಅವರದಾಗಿರುವುದು’ ಎಂದು ನೀನು ನಿನ್ನ ಹೆಸರಿನಲ್ಲಿ ವಾಗ್ದಾನ ಮಾಡಿದೆಯಲ್ಲಾ” ಅಂದನು.
14 ಆದ್ದರಿಂದ ಯೆಹೋವನು ಜನರಿಗಾಗಿ ಮರುಕಪಟ್ಟು ತನ್ನ ಮನಸ್ಸನ್ನು ಮಾರ್ಪಡಿಸಿಕೊಂಡನು; ತಾನು ಹೇಳಿದ್ದ ಕೇಡನ್ನು ಮಾಡಲಿಲ್ಲ; ತನ್ನ ಜನರನ್ನು ನಾಶಮಾಡಲಿಲ್ಲ.
15 ಬಳಿಕ ಮೋಶೆ ಬೆಟ್ಟದಿಂದಿಳಿದು ಬಂದನು. ಮೋಶೆಯೊಡನೆ ಆಜ್ಞಾಶಾಸನಗಳ ಎರಡು ಕಲ್ಲಿನ ಹಲಿಗೆಗಳಿದ್ದವು. ಈ ಆಜ್ಞಾಶಾಸನಗಳ ಕಲ್ಲುಗಳ ಮುಂದೆಯೂ ಹಿಂದೆಯೂ ಬರೆಯಲ್ಪಟ್ಟಿದ್ದವು. 16 ಯೆಹೋವನು ತಾನೇ ಆ ಕಲ್ಲುಗಳನ್ನು ಮಾಡಿ ಅವುಗಳ ಮೇಲೆ ಬರೆದಿದ್ದನು.
17 ಇಸ್ರೇಲರ ಗದ್ದಲವನ್ನೂ ಕೂಗಾಟವನ್ನೂ ಯೆಹೋಶುವನು ಕೇಳಿ ಮೋಶೆಗೆ, “ಪಾಳೆಯದ ಕಡೆಯಿಂದ ಯುದ್ಧದ ಧ್ವನಿ ಕೇಳಿಬರುತ್ತಿದೆ” ಅಂದನು.
18 ಅದಕ್ಕೆ ಮೋಶೆ, “ಅದು ಸೈನ್ಯದ ಜಯಧ್ವನಿಯಲ್ಲ. ಅದು ಸೋಲಿನಿಂದ ಕೂಗುವ ಸೈನ್ಯದ ಧ್ವನಿಯೂ ಅಲ್ಲ. ನಾನು ಕೇಳುತ್ತಿರುವುದು ಉತ್ಸವದ ಧ್ವನಿ” ಎಂದು ಉತ್ತರಿಸಿದನು.
19 ಮೋಶೆಯು ಪಾಳೆಯದ ಹತ್ತಿರಕ್ಕೆ ಬಂದನು. ಅವನು ಚಿನ್ನದ ಬಸವನನ್ನೂ ಜನರ ನರ್ತನವನ್ನೂ ನೋಡಿ ಬಹುಕೋಪಗೊಂಡು ಕಲ್ಲಿನ ಹಲಿಗೆಗಳನ್ನು ನೆಲದ ಮೇಲೆ ಬಿಸಾಡಿಬಿಟ್ಟನು; ಅವು ಚೂರುಚೂರಾಗಿ ಒಡೆದುಹೋದವು. 20 ಬಳಿಕ ಮೋಶೆಯು ಆ ಬಸವನ ಮೂರ್ತಿಯನ್ನು ಬೆಂಕಿಯಲ್ಲಿ ಕರಗಿಸಿ ಅದರ ಚಿನ್ನವನ್ನು ಧೂಳಿನಂತೆ ಅರೆದು ನೀರಿಗೆ ಹಾಕಿ ಆ ನೀರನ್ನು ಇಸ್ರೇಲರಿಗೆ ಕುಡಿಸಿದನು.
21 ಮೋಶೆಯು ಆರೋನನಿಗೆ, “ಈ ಜನರು ನಿನಗೇನು ಮಾಡಿದರು? ಇಂಥಾ ಕೆಟ್ಟ ಪಾಪವನ್ನು ಮಾಡುವಂತೆ ಯಾಕೆ ಅವರನ್ನು ನಡಿಸಿದೆ?” ಎಂದು ಹೇಳಿದನು.
22 ಆರೋನನು, “ಕೋಪಗೊಳ್ಳಬೇಡ. ಇವರು ಯಾವಾಗಲೂ ಪಾಪಮಾಡಲು ಸಿದ್ಧರಾಗಿರುವುದು ನಿನಗೆ ಗೊತ್ತೇ ಇದೆ. 23 ಅವರು ನನಗೆ, ‘ಮೋಶೆಯು ನಮ್ಮನ್ನು ಈಜಿಪ್ಟಿನಿಂದ ಹೊರಗೆ ನಡೆಸಿದನು. ಆದರೆ ಅವನಿಗೇನಾಯಿತೋ ನಮಗೆ ತಿಳಿಯದು. ಆದ್ದರಿಂದ ನಮ್ಮನ್ನು ಮುನ್ನಡೆಸಲು ದೇವರುಗಳನ್ನು ಮಾಡಿಕೊಡು’ ಎಂದು ಕೇಳಿದರು. 24 ಆದ್ದರಿಂದ ನಾನು ಅವರಿಗೆ, ‘ನಿಮ್ಮಲ್ಲಿ ಚಿನ್ನದ ಆಭರಣಗಳಿದ್ದರೆ ನನಗೆ ಕೊಡಿರಿ’ ಎಂದು ಹೇಳಿದೆನು. ಅವರು ಆಭರಣಗಳನ್ನು ನನಗೆ ತಂದುಕೊಟ್ಟರು. ನಾನು ಅವುಗಳನ್ನು ಬೆಂಕಿಯಲ್ಲಿ ಕರಗಿಸಿ ಈ ಬಸವನ ಮೂರ್ತಿಯನ್ನು ಎರಕಹೊಯ್ದೆನು” ಎಂದು ಉತ್ತರಿಸಿದನು.
25 ಜನರು ಅಂಕೆತಪ್ಪಿ ತಮ್ಮ ಇಷ್ಟಬಂದಂತೆ ಮಾಡುವುದಕ್ಕೆ ಆರೋನನು ಅವರನ್ನು ಬಿಟ್ಟುಬಿಟ್ಟಿರುವುದು ಮೋಶೆಗೆ ತಿಳಿಯಿತು. ಜನರು ಕ್ರಮವಿಲ್ಲದೆ ಸ್ವೇಚ್ಛೆಯಿಂದ ನಡೆಯುತ್ತಿದ್ದರು; ಅವರ ಮೂರ್ಖತನವು ಅವರ ವಿರೋಧಿಗಳಿಗೆ ಎದ್ದುಕಾಣುತ್ತಿತ್ತು! 26 ಆದ್ದರಿಂದ ಪಾಳೆಯದ ದ್ವಾರದಲ್ಲಿ ಮೋಶೆಯು ನಿಂತು, “ಯೆಹೋವನ ಪಕ್ಷದವರು ನನ್ನ ಬಳಿಗೆ ಬರಬೇಕು” ಎಂದು ಹೇಳಿದನು. ಲೇವಿ ಕುಲದವರೆಲ್ಲಾ ಮೋಶೆಯ ಬಳಿಗೆ ಬಂದರು.
27 ಆಗ ಮೋಶೆ ಅವರಿಗೆ, “ಇಸ್ರೇಲರ ದೇವರಾದ ಯೆಹೋವನು ಹೇಳುವುದನ್ನು ನಿಮಗೆ ತಿಳಿಸುತ್ತೇನೆ: ‘ನಿಮ್ಮಲ್ಲಿ ಪ್ರತಿಯೊಬ್ಬನು ಕತ್ತಿಯನ್ನು ತೆಗೆದುಕೊಂಡು ಪಾಳೆಯದ ಒಂದು ಕೊನೆಯಿಂದ ಇನ್ನೊಂದು ಕೊನೆಯವರೆಗೆ ಹೋಗಿ ಜನರನ್ನು ಶಿಕ್ಷಿಸಬೇಕು. ನಿಮ್ಮ ಸಹೋದರರಾಗಿದ್ದರೂ ಸ್ನೇಹಿತರಾಗಿದ್ದರೂ ಅಥವಾ ನೆರೆಯವರಾಗಿದ್ದರೂ ಸರಿ, ಕೊಲ್ಲಿರಿ’” ಎಂದು ಹೇಳಿದನು.
28 ಲೇವಿಕುಲದವರು ಮೋಶೆಯ ಮಾತಿಗೆ ವಿಧೇಯರಾದರು. ಅಂದು ಇಸ್ರೇಲರಲ್ಲಿ ಸುಮಾರು ಮೂರು ಸಾವಿರ ಮಂದಿ ಸತ್ತರು. 29 ಆಗ ಮೋಶೆಯು ಅವರಿಗೆ, “ಇಂದು ನೀವು ಯೆಹೋವನಿಗೆ ಮೀಸಲಾದ ಜನರಾದಿರಿ; ಯಾಕೆಂದರೆ ನೀವು ನಿಮ್ಮ ಸ್ವಂತ ಗಂಡುಮಗನಿಗೂ ಸಹೋದರನಿಗೂ ವಿರೋಧವಾದಿರಿ. ಇಂದು ಆತನು ನಿಮ್ಮನ್ನು ಆಶೀರ್ವದಿಸಿದ್ದಾನೆ” ಅಂದನು.
30 ಮರುದಿನ ಮುಂಜಾನೆ ಮೋಶೆಯು ಜನರಿಗೆ, “ನೀವು ಭಯಂಕರವಾದ ಪಾಪವನ್ನು ಮಾಡಿದ್ದೀರಿ. ಆದರೆ ಈಗ ನಾನು ಯೆಹೋವನ ಬಳಿಗೆ ಹೋಗಿ, ಆತನು ನಿಮ್ಮ ಪಾಪಗಳನ್ನು ಕ್ಷಮಿಸುವಂತೆ ನಾನೇನಾದರೂ ಮಾಡಬಹುದೊ ಎಂದು ವಿಚಾರಿಸುತ್ತೇನೆ” ಎಂದನು. 31 ಅಂತೆಯೇ ಮೋಶೆಯು ಯೆಹೋವನ ಬಳಿಗೆ ಮರಳಿ ಹೋಗಿ, “ದಯವಿಟ್ಟು ಆಲಿಸು! ಈ ಜನರು ಬಹಳ ಕೆಟ್ಟ ಪಾಪವನ್ನು ಮಾಡಿದ್ದಾರೆ. ಚಿನ್ನದಿಂದ ಮೂರ್ತಿಯನ್ನು ಮಾಡಿಕೊಂಡಿದ್ದಾರೆ. 32 ಅವರ ಈ ಪಾಪವನ್ನು ಕ್ಷಮಿಸು. ನೀನು ಅವರನ್ನು ಕ್ಷಮಿಸುವುದಿಲ್ಲವಾದರೆ ನಿನ್ನ ಜೀವಭಾದ್ಯರ ಪಟ್ಟಿಯ ಪುಸ್ತಕದಿಂದ ನನ್ನ ಹೆಸರನ್ನು ಅಳಿಸಿಬಿಡು” ಎಂದು ಪ್ರಾರ್ಥಿಸಿದನು.
33 ಆದರೆ ಯೆಹೋವನು ಮೋಶೆಗೆ, “ನನಗೆ ವಿರೋಧವಾಗಿ ಪಾಪಮಾಡುವ ಜನರ ಹೆಸರನ್ನು ಮಾತ್ರವೇ ನನ್ನ ಪುಸ್ತಕದಿಂದ ಅಳಿಸುತ್ತೇನೆ. 34 ಆದ್ದರಿಂದ ಈಗ ಕೆಳಗಿಳಿದು ನಾನು ನಿನಗೆ ಹೇಳುವಲ್ಲಿಗೆ ಜನರನ್ನು ನಡಿಸು. ನನ್ನ ದೂತನು ನಿನ್ನ ಮುಂದೆ ಹೋಗಿ ನಿನ್ನನ್ನು ನಡಿಸುವನು. ಪಾಪಮಾಡಿದ ಜನರನ್ನು ಶಿಕ್ಷಿಸುವ ಸಮಯ ಬಂದಾಗ ಅವರು ಶಿಕ್ಷಿಸಲ್ಪಡುವರು” ಎಂದು ಹೇಳಿದನು. 35 ಆದ್ದರಿಂದ ಯೆಹೋವನು ಜನರಿಗೆ ಭಯಂಕರವಾದ ವ್ಯಾದಿಯನ್ನು ಬರಮಾಡಿದನು. ಅವರು ಆರೋನನಿಂದ ಬಸವನನ್ನು ಮಾಡಿಸಿಕೊಂಡದ್ದೇ ಇದಕ್ಕೇ ಕಾರಣ.
“ನಾನು ನಿಮ್ಮೊಂದಿಗೆ ಬರುವುದಿಲ್ಲ”
33 ತರುವಾಯ ಯೆಹೋವನು ಮೋಶೆಗೆ, “ನೀನು ಮತ್ತು ಈಜಿಪ್ಟಿನಿಂದ ನೀನು ಕರೆದುಕೊಂಡು ಬಂದ ಜನರು ಈ ಸ್ಥಳವನ್ನು ಬಿಡಬೇಕು. ನಾನು ಅಬ್ರಹಾಮನಿಗೆ, ಇಸಾಕನಿಗೆ ಮತ್ತು ಯಾಕೋಬನಿಗೆ ವಾಗ್ದಾನ ಮಾಡಿದ ದೇಶಕ್ಕೆ ಹೋಗಿ. ನಾನು ಅವರಿಗೆ ‘ನಿಮ್ಮ ನಂತರ ಜೀವಿಸುವ ನಿಮ್ಮ ಸಂತತಿಯವರಿಗೆ ಆ ದೇಶವನ್ನು ಕೊಡುವೆನು’ ಎಂದು ನಾನು ಅವರಿಗೆ ವಾಗ್ದಾನ ಮಾಡಿದ್ದೇನೆ. 2 ನಿಮ್ಮ ಮುಂದೆ ಹೋಗುವುದಕ್ಕೆ ನಾನು ಒಬ್ಬ ದೂತನನ್ನು ಕಳುಹಿಸುವೆನು. ಕಾನಾನ್ಯರನ್ನು, ಅಮೋರಿಯರನ್ನು, ಹಿತ್ತಿಯರನ್ನು, ಪೆರಿಜೀಯರನ್ನು, ಹಿವ್ವಿಯರನ್ನು ಮತ್ತು ಯೆಬೂಸಿಯರನ್ನು ನಾನು ಸೋಲಿಸುವೆನು. ನಿಮ್ಮ ದೇಶದಿಂದ ಅವರನ್ನು ಬಲವಂತದಿಂದ ಅಟ್ಟಿಬಿಡುವೆನು. 3 ಆದ್ದರಿಂದ ಸಮೃದ್ಧಿಕರವಾದ ಆ ದೇಶಕ್ಕೆ ಹೋಗಿರಿ. ಆದರೆ ನಾನು ನಿಮ್ಮೊಂದಿಗೆ ಬರುವುದಿಲ್ಲ. ನೀವು ನನ್ನ ಆಜ್ಞೆಗೆ ವಿಧೇಯರಾಗದೆ ನನ್ನನ್ನು ಕೋಪಗೊಳಿಸುತ್ತೀರಿ. ನಾನು ನಿಮ್ಮೊಂದಿಗೆ ಬಂದರೆ, ದಾರಿಯಲ್ಲಿ ನಿಮ್ಮನ್ನು ಸಂಹರಿಸುವೆನು” ಎಂದು ಹೇಳಿದನು.
4 ಈ ದುಃಖದ ಸಮಾಚಾರವನ್ನು ಕೇಳಿ ಜನರು ನೊಂದುಕೊಂಡರು. ಅವರಲ್ಲಿ ಒಬ್ಬರಾದರೂ ತಮ್ಮ ಆಭರಣಗಳನ್ನು ಧರಿಸಿಕೊಳ್ಳಲಿಲ್ಲ. 5 ಯೆಹೋವನು ಮೋಶೆಗೆ, “ಇಸ್ರೇಲರಿಗೆ ಹೀಗೆಂದು ಹೇಳು: ನೀವು ಅವಿಧೇಯರಾದ ಜನರಾಗಿದ್ದೀರಿ. ನಾನು ನಿಮ್ಮೊಡನೆ ಕ್ಷಣಹೊತ್ತು ಸಂಚರಿಸಿದರೆ, ನಿಮ್ಮನ್ನು ಸಂಹರಿಸುವೆನು. ಆದ್ದರಿಂದ ನಿಮ್ಮೆಲ್ಲಾ ಆಭರಣಗಳನ್ನು ತೆಗೆದುಬಿಡಿರಿ. ನೀವು ಮಾಡಬೇಕಾದದ್ದನ್ನು ನಾನೇ ತಿಳಿಸುವೆನು!” ಎಂದು ಹೇಳಿದನು. 6 ಇಸ್ರೇಲರು ಹೋರೆಬ್ ಬೆಟ್ಟದಲ್ಲಿದ್ದಾಗ ಆಭರಣಗಳನ್ನು ಧರಿಸಿಕೊಳ್ಳುವುದನ್ನು ಬಿಟ್ಟುಬಿಟ್ಟರು.
ತಾತ್ಕಾಲಿಕ ದೇವದರ್ಶನಗುಡಾರ
7 ಮೋಶೆಯು ಗುಡಾರವನ್ನು ಪಾಳೆಯದ ಹೊರಗೆ ಸ್ವಲ್ಪದೂರ ತೆಗೆದುಕೊಂಡು ಹೋಗುತ್ತಿದ್ದನು. ಮೋಶೆಯು ಅದನ್ನು, “ದೇವದರ್ಶನದ ಗುಡಾರ” ಎಂದು ಕರೆದನು. ಯೆಹೋವನಿಂದ ಉತ್ತರವನ್ನು ಕೇಳಬೇಕೆಂದು ಬಯಸುವ ವ್ಯಕ್ತಿಯು ಪಾಳೆಯದ ಹೊರಗಿದ್ದ ದೇವದರ್ಶನ ಗುಡಾರಕ್ಕೆ ಹೋಗುತ್ತಿದ್ದನು. 8 ಮೋಶೆಯು ಆ ಗುಡಾರದೊಳಗೆ ಹೋಗುವಾಗ ಜನರೆಲ್ಲರೂ ಅವನನ್ನು ಗಮನಿಸುತ್ತಿದ್ದರು. ಜನರು ತಮ್ಮ ಡೇರೆಗಳ ದ್ವಾರಗಳಲ್ಲಿ ನಿಂತುಕೊಂಡು ಮೋಶೆಯು ದೇವದರ್ಶನಗುಡಾರಕ್ಕೆ ಪ್ರವೇಶಿಸುವವರೆಗೆ ಅವನನ್ನು ಗಮನಿಸುತ್ತಿದ್ದರು. 9 ಮೋಶೆಯು ಗುಡಾರದೊಳಕ್ಕೆ ಹೋದಾಗ ಎತ್ತರವಾದ ಮೇಘಸ್ತಂಭವು ಯಾವಾಗಲೂ ಕೆಳಗಿಳಿಯುತ್ತಿತ್ತು. ಆ ಮೇಘಸ್ತಂಭವು ಗುಡಾರದ ದ್ವಾರದಲ್ಲಿ ನಿಲ್ಲುತ್ತಿತ್ತು. ಹೀಗೆ ಯೆಹೋವನು ಮೋಶೆಯೊಡನೆ ಮಾತಾಡುತ್ತಿದ್ದನು. 10 ಗುಡಾರದ ದ್ವಾರದಲ್ಲಿ ಮೇಘಸ್ತಂಭವಿರುವುದನ್ನು ಜನರು ನೋಡಿದಾಗ, ಅವರು ತಮ್ಮ ಸ್ವಂತ ಡೇರೆಗಳ ದ್ವಾರದಲ್ಲಿ ತಲೆಬಾಗಿ ಯೆಹೋವನನ್ನು ಆರಾಧಿಸುತ್ತಿದ್ದರು.
11 ಯೆಹೋವನು ಮೋಶೆಯೊಂದಿಗೆ ಮುಖಾಮುಖಿಯಾಗಿ ಮಾತಾಡುತ್ತಿದ್ದನು. ಒಬ್ಬನು ತನ್ನ ಸ್ನೇಹಿತನೊಂದಿಗೆ ಮಾತಾಡುವಂತೆ ಯೆಹೋವನು ಮೋಶೆಯೊಂದಿಗೆ ಮಾತಾಡುತ್ತಿದ್ದನು. ಯೆಹೋವನೊಂದಿಗೆ ಮಾತಾಡಿದ ನಂತರ ಮೋಶೆಯು ಪಾಳೆಯಕ್ಕೆ ಮರಳಿ ಹೋಗುತ್ತಿದ್ದನು. ನೂನನ ಮಗನೂ ಯೌವನಸ್ಥನೂ ಆಗಿದ್ದ ಯೆಹೋಶುವನು ಮೋಶೆಯ ಸಹಾಯಕನಾಗಿದ್ದನು. ಮೋಶೆಯು ಗುಡಾರವನ್ನು ಬಿಟ್ಟುಹೋದಾಗ ಯೆಹೋಶುವನು ಗುಡಾರದಲ್ಲಿಯೇ ಇರುತ್ತಿದ್ದನು.
ಮೋಶೆಯು ಯೆಹೋವನ ಮಹಿಮೆಯನ್ನು ನೋಡುವನು
12 ಮೋಶೆಯು ಯೆಹೋವನಿಗೆ, “ಈ ಜನರನ್ನು ಮುನ್ನಡೆಸಬೇಕೆಂದು ನೀನು ನನಗೆ ಹೇಳಿರುವೆ. ಆದರೆ ನನ್ನೊಂದಿಗೆ ಯಾರನ್ನು ಕಳುಹಿಸುತ್ತೀಯೆಂದು ನೀನು ಹೇಳಲಿಲ್ಲ. ನೀನು ನನಗೆ, ‘ನಾನು ನಿನ್ನನ್ನು ಚೆನ್ನಾಗಿ ಬಲ್ಲೆನು. ನಾನು ನಿನ್ನನ್ನು ಮೆಚ್ಚಿದ್ದೇನೆ’ ಎಂದು ಹೇಳಿದೆ. 13 ನಾನು ನಿನ್ನನ್ನು ನಿಜವಾಗಿಯೂ ಮೆಚ್ಚಿಸಿರುವುದಾದರೆ, ನಾನು ನಿನ್ನನ್ನು ತಿಳಿದುಕೊಳ್ಳುವಂತೆ ನಿನ್ನ ಮಾರ್ಗಗಳನ್ನು ಬೋಧಿಸು. ಆಗ ನಾನು ನಿನ್ನನ್ನು ಯಾವಾಗಲೂ ಮೆಚ್ಚಿಸಲು ಸಾಧ್ಯವಾಗುವುದು. ಇವರೆಲ್ಲರೂ ನಿನ್ನ ಜನರೆಂದು ಜ್ಞಾಪಕಮಾಡಿಕೊ” ಎಂದು ವಿಜ್ಞಾಪಿಸಿದನು.
14 ಯೆಹೋವನು “ನಾನೇ ನಿಮ್ಮೊಡನೆ ಬರುವೆನು. ನಾನೇ ನಿಮ್ಮನ್ನು ಮುನ್ನಡೆಸುವೆನು”[m] ಎಂದು ಉತ್ತರಿಸಿದನು.
15 ಆಗ ಮೋಶೆ ಯೆಹೋವನಿಗೆ, “ನೀನು ನಮ್ಮೊಂದಿಗೆ ಬರದಿದ್ದರೆ, ಈ ಸ್ಥಳದಿಂದ ನಮ್ಮನ್ನು ಕಳುಹಿಸಬೇಡ. 16 ಮಾತ್ರವಲ್ಲದೆ ನನಗೂ ಈ ಜನರಿಗೂ ನಿನ್ನ ದಯೆ ದೊರಕಿದೆಯೆಂದು ನಾವು ತಿಳಿದುಕೊಳ್ಳುವುದಾದರೂ ಹೇಗೆ? ನೀನು ನಮ್ಮೊಡನೆ ಬಂದರೆ, ಆಗ ನಾವು ಇದನ್ನು ಖಚಿತವಾಗಿ ತಿಳಿದುಕೊಳ್ಳುವೆವು. ನೀನು ನಮ್ಮೊಡನೆ ಬಾರದಿದ್ದರೆ, ಆಗ ನಮಗೂ ಭೂಮಿಯ ಮೇಲಿರುವ ಇತರ ಜನರಿಗೂ ಯಾವ ವ್ಯತ್ಯಾಸವಿರುವುದಿಲ್ಲ” ಎಂದು ಹೇಳಿದನು.
17 ಆಗ ಯೆಹೋವನು ಮೋಶೆಗೆ, “ನಿನ್ನ ಕೋರಿಕೆಯನ್ನು ಅನುಗ್ರಹಿಸುತ್ತೇನೆ. ನಾನು ನಿನ್ನನ್ನು ಮೆಚ್ಚಿಕೊಂಡದ್ದರಿಂದಲೇ ಇದನ್ನು ಮಾಡುತ್ತೇನೆ. ನಾನು ನಿನ್ನನ್ನು ಚೆನ್ನಾಗಿ ಬಲ್ಲೆನು” ಅಂದನು.
18 ಬಳಿಕ ಮೋಶೆ, “ಈಗ ದಯವಿಟ್ಟು ನಿನ್ನ ಮಹಿಮೆಯನ್ನು ನನಗೆ ತೋರಿಸು” ಅಂದನು.
19 ಆಗ ಯೆಹೋವನು “ನನ್ನ ನಾಮದ ಮಹತ್ವವನ್ನು ನಿನ್ನ ಮುಂದೆ ದಾಟಿಹೋಗುವಂತೆ ಮಾಡುವೆನು. ನಾನೇ ಯೆಹೋವನು. ನಿನಗೆ ಕೇಳಿಸುವಂತೆ ನನ್ನ ಹೆಸರನ್ನು ಪ್ರಕಟಿಸುವೆನು. ನಾನು ಆರಿಸಿಕೊಂಡ ಜನರಿಗೆ ದಯೆಯನ್ನೂ ಪ್ರೀತಿಯನ್ನೂ ಅನುಗ್ರಹಿಸುವೆನು. 20 ನನ್ನನ್ನು ಯಾರೂ ಮುಖಾಮುಖಿಯಾಗಿ ಕಾಣಲು ಸಾಧ್ಯವಿಲ್ಲ. ನನ್ನನ್ನು ನೋಡಿದ ಯಾವನೂ ಬದುಕಲಾರನು.
21 “ಇಲ್ಲಿ ಒಂದು ಬಂಡೆ ಇದೆ. ನೀನು ಆ ಬಂಡೆಯ ಮೇಲೆ ನಿಂತುಕೊ. 22 ನನ್ನ ಮಹಿಮೆಯು ಆ ಸ್ಥಳದ ಮೂಲಕ ದಾಟಿಹೋಗುವುದು. ನಾನು ನಿನ್ನನ್ನು ಆ ಬಂಡೆಯ ದೊಡ್ಡದಾದ ಬಿರುಕಿನಲ್ಲಿ ಇರಿಸುವೆನು; ನಾನು ದಾಟಿ ಹೋಗುವಾಗ ನನ್ನ ಕೈಯಿಂದ ನಿನ್ನನ್ನು ಮುಚ್ಚುವೆನು. 23 ಬಳಿಕ ನನ್ನ ಕೈಯನ್ನು ತೆಗೆಯುವೆನು. ಆಗ ನೀನು ನನ್ನ ಹಿಂಭಾಗವನ್ನು ನೋಡುವೆ; ಆದರೆ ನನ್ನ ಮುಖವು ನಿನಗೆ ಕಾಣಿಸದು” ಎಂದು ಉತ್ತರಕೊಟ್ಟನು.
ಹೊಸ ಕಲ್ಲಿನ ಹಲಿಗೆಗಳು
34 ತರುವಾಯ ಯೆಹೋವನು ಮೋಶೆಗೆ, “ಒಡೆದುಹೋದ ಮೊದಲಿನ ಎರಡು ಕಲ್ಲಿನ ಹಲಿಗೆಗಳಂತೆ ಇನ್ನೆರಡು ಕಲ್ಲಿನ ಹಲಿಗೆಗಳನ್ನು ಮಾಡು. ಮೊದಲಿನ ಕಲ್ಲುಗಳಲ್ಲಿ ಬರೆದಿದ್ದ ಮಾತುಗಳನ್ನೇ ನಾನು ಈ ಕಲ್ಲುಗಳ ಮೇಲೆ ಬರೆಯುವೆನು. 2 ನಾಳೆ ಮುಂಜಾನೆ ಸೀನಾಯಿ ಬೆಟ್ಟಕ್ಕೇರಿ ಬಾ. ಬೆಟ್ಟದ ಮೇಲೆ ನನ್ನೆದುರಿನಲ್ಲಿ ನಿಂತುಕೊ. 3 ನಿನ್ನೊಂದಿಗೆ ಯಾರೂ ಬರಕೂಡದು. ಬೆಟ್ಟದ ಯಾವ ಸ್ಥಳದಲ್ಲಿಯೂ ಯಾರೂ ಕಾಣಿಸಬಾರದು. ನಿಮ್ಮ ಪಶುಗಳಾಗಲಿ ಕುರಿಮಂದೆಗಳಾಗಲಿ ಬೆಟ್ಟದ ಬುಡದಲ್ಲಿ ಹುಲ್ಲು ಮೇಯಕೂಡದು” ಎಂದು ಹೇಳಿದನು.
4 ಆದ್ದರಿಂದ ಮೋಶೆ ಮೊದಲಿನ ಎರಡು ಕಲ್ಲುಗಳಂತೆ ಇನ್ನೆರಡು ಕಲ್ಲಿನ ಹಲಿಗೆಗಳನ್ನು ಮಾಡಿದನು. ಬಳಿಕ ಮರುದಿನ ಮುಂಜಾನೆ ಬೇಗನೆ ಸೀನಾಯಿ ಬೆಟ್ಟವನ್ನೇರಿದನು. ಯೆಹೋವನು ಆಜ್ಞಾಪಿಸಿದಂತೆ ಮೋಶೆಯು ಪ್ರತಿಯೊಂದನ್ನು ಮಾಡಿದನು. ಮೋಶೆಯು ಎರಡು ಕಲ್ಲಿನ ಹಲಿಗೆಗಳನ್ನು ಹಿಡಿದುಕೊಂಡು ಹೋದನು. 5 ಮೋಶೆಯು ಬೆಟ್ಟವನ್ನೇರಿ ಹೋದನಂತರ ಯೆಹೋವನು ಮೇಘದಲ್ಲಿ ಅವನ ಬಳಿಗೆ ಇಳಿದುಬಂದನು. ಯೆಹೋವನು ಮೋಶೆಯೊಡನೆ ಅಲ್ಲಿ ನಿಂತನು ಮತ್ತು ಮೋಶೆಯು ಯೆಹೋವನ ಹೆಸರನ್ನು ಕರೆದನು.[n] 6 ಯೆಹೋವನು ಮೋಶೆಯ ಮುಂದೆ ಹಾದುಹೋಗುತ್ತಾ, “ದೇವರಾದ ಯೆಹೋವನು ದಯೆಯೂ ಕನಿಕರವೂ ಉಳ್ಳ ದೇವರಾಗಿದ್ದಾನೆ. ಯೆಹೋವನು ಕೋಪಗೊಳ್ಳುವುದರಲ್ಲಿ ನಿಧಾನವಾಗಿದ್ದಾನೆ. ಯೆಹೋವನು ಮಹಾ ಪ್ರೀತಿಸ್ವರೂಪನಾಗಿದ್ದಾನೆ. ಯೆಹೋವನು ಭರವಸೆಗೆ ಯೋಗ್ಯನಾಗಿದ್ದಾನೆ. 7 ಯೆಹೋವನು ಸಾವಿರಾರು ತಲೆಗಳವರೆಗೆ ತನ್ನ ದಯೆ ತೋರಿಸುತ್ತಾನೆ. ಜನರು ಮಾಡುವ ಪಾಪಗಳನ್ನು ಯೆಹೋವನು ಕ್ಷಮಿಸುತ್ತಾನೆ. ಆದರೆ ಅಪರಾಧಿಗಳನ್ನು ಶಿಕ್ಷಿಸುವುದಕ್ಕೆ ಆತನು ಮರೆಯುವುದಿಲ್ಲ. ಯೆಹೋವನು ಅಪರಾಧಿಗಳನ್ನು ಶಿಕ್ಷಿಸುವನು ಮತ್ತು ಅವರ ಅಪರಾಧದ ಫಲವು ಅವರ ಮಕ್ಕಳ ಮೇಲೂ ಮೊಮ್ಮಕ್ಕಳ ಮೇಲೂ ಮತ್ತು ಮರಿಮೊಮ್ಮಕ್ಕಳ ಮೇಲೂ ಬರುವಂತೆ ಮಾಡುವನು” ಎಂದು ಹೇಳಿದನು.
8 ಕೂಡಲೆ ಮೋಶೆಯು ನೆಲದ ಮೇಲೆ ಅಡ್ಡಬಿದ್ದು ಯೆಹೋವನನ್ನು ಆರಾಧಿಸಿದನು. 9 ಮೋಶೆಯು, “ಯೆಹೋವನೇ, ನಿನ್ನ ದಯೆ ನನಗೆ ದೊರಕುವುದಾದರೆ, ದಯವಿಟ್ಟು ನಮ್ಮೊಂದಿಗೆ ಬಾ. ಇವರು ಅವಿಧೇಯರಾದ ಜನರೆಂದು ನಾನು ಬಲ್ಲೆನು. ಆದರೆ ನಮ್ಮ ಪಾಪಗಳನ್ನು ಕ್ಷಮಿಸು. ನಮ್ಮನ್ನು ನಿನ್ನ ಜನರನ್ನಾಗಿ ಸ್ಪೀಕರಿಸು” ಎಂದು ಬೇಡಿಕೊಂಡನು.
10 ಆಗ ಯೆಹೋವನು, “ನಾನು ನಿಮ್ಮೊಂದಿಗೆ ಈ ಒಡಂಬಡಿಕೆಯನ್ನು ಮಾಡುತ್ತಿದ್ದೇನೆ. ಭೂಲೋಕದಲ್ಲಿ ಎಲ್ಲಿಯೇ ಆಗಲಿ ಯಾವ ಜನಾಂಗದಲ್ಲಿಯೇ ಆಗಲಿ ಹಿಂದೆಂದೂ ನಡೆಯದಂತ ಮಹತ್ಕಾರ್ಯಗಳನ್ನು ಮಾಡುವೆನು. ಎಲ್ಲಾ ಜನರು ಮತ್ತು ನಿನ್ನೊಂದಿಗಿರುವ ಜನರು ಇವುಗಳನ್ನು ನೋಡಿ ಯೆಹೋವನಾದ ನಾನೇ ಮಹಾ ಮಹಿಮಸ್ವರೂಪನೆಂದು ತಿಳಿದುಕೊಳ್ಳುವರು. 11 ನಾನು ಈ ದಿನ ಕೊಡುವ ಆಜ್ಞೆಗಳಿಗೆ ವಿಧೇಯರಾಗಿರಿ. ನಿಮ್ಮ ವೈರಿಗಳಾದ ಅಮೋರಿಯರನ್ನು, ಕಾನಾನ್ಯರನ್ನು, ಹಿತ್ತಿಯರನ್ನು, ಪೆರಿಜೀಯರನ್ನು, ಹಿವ್ವಿಯರನ್ನು ಮತ್ತು ಯೆಬೂಸಿಯರನ್ನು ನಾನು ಹೊರಗಟ್ಟುವೆನು. 12 ಎಚ್ಚರಿಕೆಯಾಗಿರಿ! ನೀವು ಹೋಗುತ್ತಿರುವ ದೇಶದಲ್ಲಿರುವ ಜನರೊಂದಿಗೆ ಯಾವ ಒಪ್ಪಂದವನ್ನೂ ಮಾಡಿಕೊಳ್ಳಬೇಡಿರಿ. ನೀವು ಆ ಜನರೊಂದಿಗೆ ಒಪ್ಪಂದ ಮಾಡಿಕೊಂಡರೆ, ಅದು ನಿಮಗೆ ಕೇಡನ್ನು ಬರಮಾಡುವುದು. 13 ಅವರ ವೇದಿಕೆಗಳನ್ನು ನಾಶಮಾಡಿರಿ. ಅವರು ಪೂಜಿಸುವ ಕಲ್ಲುಗಳನ್ನು ಒಡೆದು ಹಾಕಿರಿ. ಅವರ ವಿಗ್ರಹಗಳನ್ನು ಕಡಿದು ಹಾಕಿರಿ. 14 ಬೇರೆ ಯಾವ ದೇವರನ್ನೂ ಪೂಜಿಸಬೇಡಿರಿ. ನಾನೇ ಯೆಹೋವನು. ‘ಸ್ವಗೌರವವನ್ನು ಕಾಪಾಡಿಕೊಳ್ಳುವವನು’ ಎಂಬುದೇ ನನ್ನ ಹೆಸರು.
15 “ಎಚ್ಚರಿಕೆಯಾಗಿರಿ, ಆ ದೇಶದಲ್ಲಿ ವಾಸಿಸುವ ಜನರೊಂದಿಗೆ ಯಾವ ಒಪ್ಪಂದವನ್ನೂ ಮಾಡಿಕೊಳ್ಳಬೇಡಿರಿ. ಇಲ್ಲವಾದರೆ ಅವರು ತಮ್ಮ ದೇವರುಗಳನ್ನು ಪೂಜಿಸುವಾಗ ನೀವು ಅವರೊಂದಿಗೆ ಸೇರಿಕೊಳ್ಳುವಿರಿ. ಅವರೊಂದಿಗೆ ಸೇರಿಕೊಳ್ಳುವಂತೆ ನಿಮ್ಮನ್ನು ಆಹ್ವಾನಿಸುವರು; ಅವರ ಯಜ್ಞಾರ್ಪಣೆಗಳನ್ನು ತಿನ್ನುವಿರಿ. 16 ನೀವು ಅವರ ಪುತ್ರಿಯರಲ್ಲಿ ಕೆಲವರನ್ನು ನಿಮ್ಮ ಪುತ್ರರಿಗೆ ಹೆಂಡತಿಯರಾಗುವುದಕ್ಕೆ ಆರಿಸಿಕೊಳ್ಳುವಿರಿ. ಅವರ ಪುತ್ರಿಯರು ಸುಳ್ಳುದೇವರುಗಳ ಸೇವೆ ಮಾಡುತ್ತಾರೆ. ನಿಮ್ಮ ಪುತ್ರರನ್ನೂ ಅವರು ಅದೇ ಸೇವೆಗೆ ನಡೆಸುತ್ತಾರೆ.
17 “ವಿಗ್ರಹಗಳನ್ನು ಮಾಡಿಕೊಳ್ಳಬೇಡಿರಿ.
18 “ಹುಳಿಯಿಲ್ಲದ ರೊಟ್ಟಿಯ ಹಬ್ಬವನ್ನು ಆಚರಿಸಿರಿ. ನಾನು ನಿಮಗೆ ಮೊದಲು ಆಜ್ಞಾಪಿಸಿದಂತೆ ಹುಳಿಯಿಲ್ಲದ ರೊಟ್ಟಿಯನ್ನು ಏಳು ದಿನಗಳವರೆಗೆ ತಿನ್ನಿರಿ. ನಾನು ಆರಿಸಿಕೊಂಡ ಅಬೀಬ್ ಮಾಸದಲ್ಲಿ ಇದನ್ನು ಮಾಡಿರಿ. ಯಾಕೆಂದರೆ ಆ ತಿಂಗಳಲ್ಲಿ ನೀವು ಈಜಿಪ್ಟಿನಿಂದ ಬಿಡುಗಡೆ ಹೊಂದಿದಿರಿ.
19 “ಸ್ತ್ರೀಯಲ್ಲಿ ಹುಟ್ಟಿದ ಮೊದಲಿನ ಮಗು ಯಾವಾಗಲೂ ನನಗೆ ಸೇರಿದ್ದು. ನಿಮ್ಮ ದನಕುರಿಗಳಲ್ಲಿ ಹುಟ್ಟಿದ ಮೊದಲ ಮರಿಗಳು ನನಗೆ ಸೇರಿದವುಗಳಾಗಿವೆ. 20 ಚೊಚ್ಚಲಾಗಿ ಹುಟ್ಟಿದ ಕತ್ತೆಯನ್ನು ನೀವು ಇಟ್ಟುಕೊಳ್ಳಲು ಬಯಸಿದರೆ, ಆಗ ನೀವು ಕುರಿಮರಿಯನ್ನು ಕೊಟ್ಟು ಅದನ್ನು ಬಿಡಿಸಿಕೊಳ್ಳಬಹುದು. ಆದರೆ ನೀವು ಅದನ್ನು ಕೊಂಡುಕೊಳ್ಳದಿದ್ದರೆ, ಅದರ ಕುತ್ತಿಗೆಯನ್ನು ಮುರಿದು ಕೊಂದುಬಿಡಬೇಕು. ನೀವು ನಿಮ್ಮ ಎಲ್ಲಾ ಚೊಚ್ಚಲು ಗಂಡುಮಕ್ಕಳನ್ನು ನನ್ನಿಂದ ಕೊಂಡುಕೊಳ್ಳಬೇಕು. ಯಾವ ವ್ಯಕ್ತಿಯೂ ಕಾಣಿಕೆಯಿಲ್ಲದೆ, ನನ್ನ ಸನ್ನಿಧಿಗೆ ಬರಕೂಡದು.
21 “ನೀವು ವಾರದಲ್ಲಿ ಆರುದಿನ ಕೆಲಸ ಮಾಡುವಿರಿ. ಆದರೆ ಏಳನೆಯ ದಿನದಲ್ಲಿ ನೀವು ವಿಶ್ರಮಿಸಿಕೊಳ್ಳಬೇಕು. ನೀವು ಬಿತ್ತುವ ಮತ್ತು ಕೊಯ್ಯುವ ಸಮಯದಲ್ಲಿಯೂ ವಿಶ್ರಮಿಸಿಕೊಳ್ಳಬೇಕು.
22 “ವಾರಗಳ ಹಬ್ಬವನ್ನು ಆಚರಿಸಿರಿ. ಈ ಹಬ್ಬಕ್ಕಾಗಿ ಗೋಧಿಬೆಳೆಯ ಪ್ರಥಮ ಕಾಳನ್ನು ಉಪಯೋಗಿಸಿರಿ ಮತ್ತು ವರ್ಷಾಂತ್ಯದಲ್ಲಿ ಸುಗ್ಗಿಹಬ್ಬವನ್ನು ಆಚರಿಸಿರಿ.
23 “ವರ್ಷದಲ್ಲಿ ಮೂರುಸಲ ನಿಮ್ಮಲ್ಲಿರುವ ಗಂಡಸರೆಲ್ಲರೂ, ಇಸ್ರೇಲರ ದೇವರಾಗಿರುವ ಒಡೆಯನಾದ ಯೆಹೋವನ ಸನ್ನಿಧಿಯಲ್ಲಿ ಸೇರಬೇಕು.
24 “ನೀವು ದೇಶದೊಳಕ್ಕೆ ಹೋದಾಗ, ನಾನು ನಿಮ್ಮ ವೈರಿಗಳನ್ನು ಆ ದೇಶದಿಂದ ಹೊರಗಟ್ಟುವೆನು. ನಾನು ನಿಮ್ಮ ಮೇರೆಗಳನ್ನು ವಿಸ್ತರಿಸುವೆನು. ನಿಮಗೆ ಹೆಚ್ಚೆಚ್ಚಾಗಿ ಭೂಮಿ ದೊರೆಯುವುದು. ಪ್ರತಿ ವರ್ಷ ಮೂರುಸಲ ನೀವು ನಿಮ್ಮ ದೇವರಾದ ಯೆಹೋವನ ಸನ್ನಿಧಿಗೆ ಹೋಗುವಿರಿ. ಆ ಸಮಯದಲ್ಲಿ ಯಾರೂ ನಿಮ್ಮಿಂದ ಭೂಮಿಯನ್ನು ಅಪಹರಿಸಲು ಪ್ರಯತ್ನಿಸುವುದಿಲ್ಲ.
25 “ನೀವು ಯಜ್ಞಮಾಡುವಾಗ ಆ ಯಜ್ಞಪಶುವಿನ ರಕ್ತದೊಡನೆ ಹುಳಿಹಿಟ್ಟನ್ನು ಸಮರ್ಪಿಸಬಾರದು;
“ಪಸ್ಕ ಭೋಜನದ ಮಾಂಸದಲ್ಲಿ ಏನನ್ನೂ ಮರುದಿನದ ಮುಂಜಾನೆಯವರೆಗೆ ಉಳಿಸಬಾರದು.
26 “ನೀವು ಕೊಯ್ಯುವ ಪ್ರಥಮವಾದ ಬೆಳೆಗಳನ್ನು ಯೆಹೋವನಿಗೆ ಕೊಡಿರಿ. ಅವುಗಳನ್ನು ನಿಮ್ಮ ದೇವರಾದ ಯೆಹೋವನ ಆಲಯಕ್ಕೆ ತನ್ನಿರಿ.
“ಆಡುಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಎಂದಿಗೂ ಬೇಯಿಸಬಾರದು.”
27 ಬಳಿಕ ಯೆಹೋವನು ಮೋಶೆಗೆ, “ನಾನು ನಿನಗೆ ಹೇಳಿದ ಸಂಗತಿಗಳನ್ನೆಲ್ಲಾ ಬರೆ. ಆ ಸಂಗತಿಗಳು ನಾನು ನಿನ್ನೊಂದಿಗೆ ಮತ್ತು ಇಸ್ರೇಲರೊಂದಿಗೆ ಮಾಡಿದ ಒಡಂಬಡಿಕೆಯಾಗಿದೆ” ಎಂದು ಹೇಳಿದನು.
28 ಮೋಶೆಯು ಅಲ್ಲಿ ಯೆಹೋವನೊಂದಿಗೆ ಹಗಲಿರುಳು ನಲವತ್ತು ದಿನಗಳಿದ್ದನು. ಆ ದಿನಗಳಲ್ಲಿ ಅವನು ಆಹಾರವನ್ನಾಗಲಿ ನೀರನ್ನಾಗಲಿ ಸೇವಿಸಲಿಲ್ಲ. ಮೋಶೆಯು ಒಡಂಬಡಿಕೆಯ ವಾಕ್ಯಗಳನ್ನು ಅಂದರೆ ದಶಾಜ್ಞೆಗಳನ್ನು ಎರಡು ಕಲ್ಲಿನ ಹಲಿಗೆಗಳ ಮೇಲೆ ಬರೆದನು.
ಮೋಶೆಯ ಹೊಳೆಯುವ ಮುಖ
29 ತರುವಾಯ ಮೋಶೆಯು ಸೀನಾಯಿ ಬೆಟ್ಟದಿಂದ ಇಳಿದು ಬಂದನು. ಒಡಂಬಡಿಕೆಯ ವಾಕ್ಯಗಳು ಬರೆಯಲ್ಪಟ್ಟಿದ್ದ ಎರಡು ಕಲ್ಲಿನ ಹಲಿಗೆಗಳನ್ನು ಅವನು ಹಿಡಿದುಕೊಂಡಿದ್ದನು. ಯೆಹೋವನು ಅವನೊಡನೆ ಮಾತಾಡಿದ್ದರಿಂದ ಅವನ ಮುಖವು ಹೊಳೆಯುತ್ತಿತ್ತು. ಆದರೆ ಮೋಶೆಗೆ ಇದು ತಿಳಿದಿರಲಿಲ್ಲ. 30 ಮೋಶೆಯ ಮುಖವು ಶುಭ್ರವಾಗಿ ಹೊಳೆಯುತ್ತಿರುವುದನ್ನು ಆರೋನನೂ ಇಸ್ರೇಲರೆಲ್ಲರೂ ನೋಡಿದರು. ಆದ್ದರಿಂದ ಅವನ ಬಳಿಗೆ ಹೋಗಲು ಅವರು ಭಯಪಟ್ಟರು. 31 ಆದರೆ ಮೋಶೆ ಅವರನ್ನು ಕರೆದನು. ಆದ್ದರಿಂದ ಆರೋನನೂ ಜನನಾಯಕರೆಲ್ಲರೂ ಮೋಶೆಯ ಬಳಿಗೆ ಹೋದರು. ಮೋಶೆಯು ಅವರೊಡನೆ ಮಾತಾಡಿದನು. 32 ಅದಾದನಂತರ, ಇಸ್ರೇಲರೆಲ್ಲರೂ ಮೋಶೆಯ ಬಳಿಗೆ ಬಂದರು. ಯೆಹೋವನು ಸೀನಾಯಿ ಬೆಟ್ಟದಲ್ಲಿ ತನಗೆ ಕೊಟ್ಟ ಆಜ್ಞೆಗಳನ್ನು ಮೋಶೆಯು ಅವರಿಗೆ ಕೊಟ್ಟನು.
33 ಮೋಶೆಯು ಜನರೊಡನೆ ಮಾತಾಡಿ ಮುಗಿಸಿದಾಗ, ತನ್ನ ಮುಖದ ಮೇಲೆ ಮುಸುಕನ್ನು ಹಾಕಿಕೊಂಡನು.
Footnotes
- 20:16 ನೀವು … ಹೇಳಬಾರದು ಅಥವಾ “ನೀವು ನಿಮ್ಮ ನೆರೆಯವರ ವಿರುದ್ಧ ಸಾಕ್ಷಿಯಾಗಿರಬಾರದು.”
- 20:25 ಉಳಿ ಅಕ್ಷರಶಃ, “ಕತ್ತಿ.”
- 21:6 ದೇವರ ಸನ್ನಿಧಿ ನ್ಯಾಯಾಧಿಪತಿಗಳನ್ನು “ದೇವರು” ಎಂದು ಕರೆಯಲಾಗುತ್ತಿತ್ತು. ಯಜಮಾನನು ಗುಲಾಮನನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುತ್ತಾನೆ ಎಂಬರ್ಥವನ್ನು ಕೊಡುತ್ತದೆ.
- 22:8 ದೇವರು ಕೆಲವೊಮ್ಮೆ ನ್ಯಾಯಾಧಿಪತಿಗಳನ್ನು ದೇವರು ಎಂದು ಕರೆಯಲಾಗುತ್ತಿತ್ತು.
- 22:20 ನಾಶ ಕೈಮೀರಿಹೋದ ವಸ್ತುಗಳನ್ನಾಗಲಿ ವ್ಯಕ್ತಿಗಳನ್ನಾಗಲಿ ಯೆಹೋವನ ದಂಡನೆಗೆ ಒಪ್ಪಿಸುವುದನ್ನು ಇದು ಸೂಚಿಸುತ್ತದೆ. ಅನೇಕ ಸಲ, ಇದು ಸಂಪೂರ್ಣ ನಾಶದಿಂದಾಗಲಿ ಮರಣಶಿಕ್ಷೆಯಿಂದಾಗಲಿ ಕೊನೆಗೊಳ್ಳುತ್ತಿತ್ತು.
- 23:19 ಆಲಯ ಪವಿತ್ರಗುಡಾರ ದೇವರನ್ನು ಭೇಟಿಯಾಗಲು ಜನರು ಇಲ್ಲಿಗೆ ಹೋಗಬೇಕಾಗಿತ್ತು. ನೋಡಿರಿ: ವಿಮೋಚನ. 25:8,9
- 23:20 ದೂತ ದೇವದೂತ.
- 23:21 ಶಕ್ತಿ ಇರುತ್ತದೆ ಹೀಬ್ರೂವಿನಲ್ಲಿ: ನನ್ನ ಹೆಸರು ಆತನಲ್ಲಿರುವುದರಿಂದ.
- 23:28 ಹೆದ್ದುಂಬಿ ಕಣಜದ ಹುಳ. ದುಂಬಿಯಂತೆ ಕೊಂಡಿಯಿರುವ ಹುಳ. ಇದು ನಿಜವಾದ ಹೆದ್ದುಂಬಿಯಿರಬಹುದು ಅಥವಾ ಇದು ದೇವರ ದೂತನು ಅಥವಾ ಅತನ ಮಹಾಶಕ್ತಿಯೆಂಬ ಅರ್ಥ ಕೊಡಬಹುದು.
- 25:5 ಉತ್ತಮ ತೊಗಲು ಕಡಲು ಹಂದಿಯ ಅಥವಾ ಕಡಲು ದನದ ತೊಗಲು.
- 25:25 ಮೂರು ಇಂಚು ಅಕ್ಷರಶಃ, “ಒಂದು ತೋಷಹ.”
- 25:39 ಎಪ್ಪತ್ತೈದು ಪೌಂಡು ಅಕ್ಷರಶಃ, “ಒಂದು ಪಿಕಾರ್, ಅಥವಾ ಮೂರು ಸಾವಿರ ತೊಲೆ.”
- 33:14 ಮುನ್ನಡೆಸುವೆನು ಅಥವಾ “ವಿಶ್ರಾಂತಿ ಕೊಡುವೆನು.”
- 34:5 ಯೆಹೋವನು … ಕರೆದನು ಮೋಶೆ ಯೆಹೋವನನ್ನು ಆರಾಧಿಸಿದನು ಎಂದಾಗಲಿ ಯೆಹೋವನು ತನ್ನ ಹೆಸರನ್ನು ಮೋಶೆಗೆ ಪ್ರಕಟಿಸಿಕೊಂಡನು ಎಂದಾಗಲಿ ಇದು ಅರ್ಥಕೊಡಬಲ್ಲದು.
Kannada Holy Bible: Easy-to-Read Version. All rights reserved. © 1997 Bible League International