Add parallel Print Page Options

ಆರೋನನು ಪ್ರಧಾನಯಾಜಕನಾಗಿದ್ದಾನೆಂದು ದೇವರು ಸಾಕ್ಷೀಕರಿಸಿದ್ದು

17 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಇಸ್ರೇಲರ ಸಂಗಡ ಮಾತಾಡಿ ಹೀಗೆ ಮಾಡಬೇಕು: ಅವರ ಕುಲಗಳ ಪ್ರತಿಯೊಬ್ಬ ಪ್ರಧಾನನಿಂದ ಒಂದೊಂದು ಕೋಲಿನ ಮೇರೆಗೆ ಹನ್ನೆರಡು ಕೋಲುಗಳನ್ನು ತೆಗೆದುಕೊಳ್ಳಬೇಕು. ಅವನವನ ಕೋಲಿನ ಮೇಲೆ ಆಯಾ ಕುಲಪ್ರಧಾನನ ಹೆಸರನ್ನು ಬರೆಯಿಸಬೇಕು. ಲೇವಿ ಕುಲದ ಕೋಲಿನ ಮೇಲೆ ಆರೋನನ ಹೆಸರನ್ನು ಬರೆಯಿಸಬೇಕು. ನೀನು ಆ ಕುಲಗಳನ್ನು ದೇವದರ್ಶನಗುಡಾರದಲ್ಲಿ ಅಂದರೆ ನಾನು ನಿನ್ನನ್ನು ಸಂಧಿಸುವ ಒಡಂಬಡಿಕೆ ಪೆಟ್ಟಿಗೆಯ ಮುಂದೆ ಇಡಬೇಕು. ನಾನು ಒಬ್ಬನನ್ನು ನನ್ನ ಯಾಜಕನನ್ನಾಗಿ ಆರಿಸಿಕೊಳ್ಳುವೆನು; ಅವನ ಕೋಲು ಚಿಗುರುವುದು, ಇಸ್ರೇಲ್ ಜನರು ನಿಮ್ಮ ವಿರುದ್ಧವಾಗಿ ಹೇಳುತ್ತಿರುವ ದೂರುಗಳನ್ನು ನಾನು ಹೀಗೆ ನಿಲ್ಲಿಸುವೆನು.”

ಅದಕ್ಕನುಸಾರವಾಗಿ ಮೋಶೆಯು ಇಸ್ರೇಲರ ಸಂಗಡ ಮಾತಾಡಲಾಗಿ ಅವರ ಕುಲಪ್ರಧಾನರೆಲ್ಲ ಅವನಿಗೆ, ಒಬ್ಬ ಕುಲಪ್ರಧಾನನಿಗೆ ಒಂದು ಕೋಲಿನಂತೆ, ಹನ್ನೆರಡು ಕೋಲುಗಳನ್ನು ಕೊಟ್ಟರು. ಅವುಗಳೊಡನೆ ಆರೋನನ ಕೋಲೂ ಇತ್ತು. ಮೋಶೆ ಆ ಕೋಲುಗಳನ್ನು ಒಡಂಬಡಿಕೆಯ ಗುಡಾರದಲ್ಲಿ ಯೆಹೋವನ ಮುಂದೆ ಇಟ್ಟನು.

ಮರುದಿನ ಮೋಶೆ ಗುಡಾರದೊಳಗೆ ಹೋಗಿ ನೋಡಲಾಗಿ ಲೇವಿಕುಲದ ಆರೋನನ ಕೋಲು ಚಿಗುರಿ ಮೊಗ್ಗುಬಿಟ್ಟು ಹೂವರಳಿ ಬಾದಾಮಿ ಹಣ್ಣುಗಳನ್ನು ಫಲಿಸಿತ್ತು. ಮೋಶೆ ಎಲ್ಲಾ ಕೋಲುಗಳನ್ನು ಯೆಹೋವನ ಸನ್ನಿಧಿಯಿಂದ ಹೊರಗೆ ತೆಗೆದುಕೊಂಡು ಬಂದು ಅವುಗಳನ್ನೆಲ್ಲಾ ಇಸ್ರೇಲರಿಗೆ ತೋರಿಸಿದನು. ಪ್ರಧಾನರು ಆ ಕೋಲುಗಳನ್ನು ನೋಡಿ, ತಮ್ಮತಮ್ಮ ಕೋಲುಗಳನ್ನು ತೆಗೆದುಕೊಂಡರು.

10 ತರುವಾಯ ಯೆಹೋವನು ಮೋಶೆಗೆ, “ಆರೋನನ ಕೋಲನ್ನು ಮತ್ತೆ ಒಡಂಬಡಿಕೆಯ ಪೆಟ್ಟಿಗೆಯ ಮುಂದಿಡು. ದಂಗೆಕೋರರಿಗೆ ಅದು ಎಚ್ಚರಿಕೆಯಾಗಿ ಅಲ್ಲೇ ಇರಬೇಕು, ಇವರು ಇನ್ನು ಮುಂದೆ ನನಗೆ ವಿರೋಧವಾಗಿ ಗುಣುಗುಟ್ಟಿ, ಮರಣಕ್ಕೆ ಗುರಿಯಾಗದಂತೆ ನೀನು ಹೀಗೆ ಮಾಡಬೇಕು” ಎಂದು ಆಜ್ಞಾಪಿಸಿದನು. 11 ಆದ್ದರಿಂದ ಯೆಹೋವನ ಅಪ್ಪಣೆಯ ಪ್ರಕಾರವೇ ಮೋಶೆ ಮಾಡಿದನು.

12 ಇಸ್ರೇಲರು ಮೋಶೆಗೆ, “ನಾವೆಲ್ಲರು ಪ್ರಾಣ ಕಳೆದುಕೊಂಡು ನಾಶವಾಗುತ್ತೇವಲ್ಲಾ, ನಮ್ಮಲ್ಲಿ ಯಾರೂ ಉಳಿಯುವುದಿಲ್ಲ. 13 ಯೆಹೋವನ ಗುಡಾರದ ಹತ್ತಿರಕ್ಕೆ ಬಂದವರೆಲ್ಲರೂ ಸಾಯುತ್ತಾರಲ್ಲಾ, ನಾವೆಲ್ಲರೂ ಹಾಗೆಯೇ ಸಾಯುತ್ತೇವೋ?” ಎಂದು ಹೇಳಿದರು.