ಅರಣ್ಯಕಾಂಡ 30
Kannada Holy Bible: Easy-to-Read Version
ವಿಶೇಷ ಹರಕೆಗಳು
30 ಮೋಶೆಯು ಇಸ್ರೇಲರ ಕುಲಪ್ರಧಾನರಿಗೆ ಹೇಳಿದ್ದೇನೆಂದರೆ: ಯೆಹೋವನು ಹೀಗೆ ಆಜ್ಞಾಪಿಸಿದ್ದಾನೆ:
2 “ಯಾವನಾದರೂ ಯೆಹೋವನಿಗೆ ಇಂಥದ್ದನ್ನು ಕೊಡುತ್ತೇನೆಂದು ಹರಕೆ ಮಾಡಿದರೆ ಅಥವಾ ತಾನು ಇಂಥದ್ದನ್ನು ಮಾಡುವುದಿಲ್ಲ ಎಂದು ಆಣೆಯಿಟ್ಟುಕೊಂಡರೆ, ಅವನು ತನ್ನ ಮಾತನ್ನು ಮೀರದೆ ತಾನು ಹೇಳಿದಂತೆಯೇ ನೆರವೇರಿಸಬೇಕು.
3 “ಇನ್ನೂ ತನ್ನ ತಂದೆಯ ಮನೆಯಲ್ಲಿರುವ ಯುವತಿಯು ಯೆಹೋವನಿಗೆ ಇಂಥದ್ದನ್ನು ಕೊಡುತ್ತೇನೆಂದು ಹರಕೆ ಮಾಡಿಕೊಂಡರೆ ಅಥವಾ ಇಂಥದ್ದನ್ನು ಮಾಡುವುದಿಲ್ಲ ಎಂದು ಆಣೆಯಿಟ್ಟುಕೊಂಡರೆ, 4 ಅವಳ ತಂದೆಯು ಅವಳ ಹರಕೆಯನ್ನಾಗಲಿ ಆಣೆಯನ್ನಾಗಲಿ ಕೇಳಿಯೂ ಅದರ ಬಗ್ಗೆ ಅವಳಿಗೆ ಏನೂ ಹೇಳದಿದ್ದರೆ, ಆಕೆಯು ಅಂಥಾ ಹರಕೆಯನ್ನೂ ಆಣೆಯನ್ನೂ ನೆರವೇರಿಸಲೇಬೇಕು. 5 ಆದರೆ ತಂದೆಯು ಆ ಸಂಗತಿಯನ್ನು ತಿಳಿದ ದಿನವೇ ಅದನ್ನು ಆಕ್ಷೇಪಿಸಿದರೆ, ಆಕೆಯು ಮಾಡಿದ ಹರಕೆಯನ್ನಾಗಲಿ ಇಟ್ಟುಕೊಂಡ ಆಣೆಯನ್ನಾಗಲಿ ನೆರವೇರಿಸಬೇಕಿಲ್ಲ. ತಂದೆಯು ಆಕ್ಷೇಪಿಸಿದ್ದರಿಂದ ಯೆಹೋವನು ಅವಳನ್ನು ಕ್ಷಮಿಸುವನು.
6 “ಆದರೆ ಅವಳು ತನ್ನ ಹರಕೆಯನ್ನಾಗಲಿ ಆಣೆಯನ್ನಾಗಲಿ ನೆರವೇರಿಸಿಲ್ಲದಿರುವಾಗಲೇ ಮದುವೆಯಾದರೆ, 7 ಗಂಡನು ಅದರ ಬಗ್ಗೆ ತಿಳಿದ ದಿನದಂದು ಆಕೆಗೆ ಅದರ ಬಗ್ಗೆ ಏನೂ ಹೇಳದಿದ್ದರೆ, ಆಕೆ ತಾನು ಮಾಡಿದ ಹರಕೆಯನ್ನಾಗಲಿ ಆಣೆಯನ್ನಾಗಲಿ ನೆರವೇರಿಸಬೇಕು. 8 ಆದರೆ ಗಂಡನು ಅದನ್ನು ಕೇಳಿದ ದಿನವೇ ಆಕ್ಷೇಪಿಸಿದರೆ, ಆಕೆಯು ಮಾಡಿದ ಹರಕೆಯನ್ನಾಗಲಿ ಆಣೆಯನ್ನಾಗಲಿ ನೆರವೇರಿಸಬೇಕಿಲ್ಲ. ಯೆಹೋವನು ಅವಳನ್ನು ಕ್ಷಮಿಸುವನು.
9 “ವಿಧವೆಯಾಗಲಿ ವಿವಾಹವಿಚ್ಛೇಧನ ಹೊಂದಿದ ಸ್ತ್ರೀಯಾಗಲಿ ತಾನು ಮಾಡಿದ ಪ್ರತಿಯೊಂದು ಹರಕೆಯನ್ನೂ ಆಣೆಯನ್ನೂ ನೆರವೇರಿಸಲೇಬೇಕು.
10 “ವಿವಾಹಿತ ಸ್ತ್ರೀಯು ಅಂಥಾ ಹರಕೆಯನ್ನಾಗಲಿ ಪ್ರಮಾಣವನ್ನಾಗಲಿ ಮಾಡಿದಾಗ, 11 ಅವಳ ಗಂಡನು ತಿಳಿದು ಅಡ್ಡಿಮಾಡದೆ ಏನೂ ಹೇಳದಿದ್ದರೆ ಆಕೆಯು ಆ ಹರಕೆಗಳನ್ನೂ ಆಣೆಗಳನ್ನೂ ನೆರವೇರಿಸಬೇಕು. 12 ಆದರೆ ಗಂಡನು ಅವುಗಳನ್ನು ತಿಳಿದಾಗಲೇ ರದ್ದುಗೊಳಿಸಿದರೆ, ಅವಳ ಎಲ್ಲ ಹರಕೆಗಳಿಗೆ ಮತ್ತು ಆಣೆಗಳಿಗೆ ಬೆಲೆಯಿರುವುದಿಲ್ಲ. ಯಾಕೆಂದರೆ ಗಂಡನು ಅವುಗಳನ್ನು ರದ್ದುಪಡಿಸಿದನು. ಆದ್ದರಿಂದ ಯೆಹೋವನು ಆಕೆಯನ್ನು ಕ್ಷಮಿಸುತ್ತಾನೆ. 13 ಹೆಂಡತಿ ಮಾಡಿದ ಹರಕೆಯನ್ನೂ ಆಣೆಯನ್ನೂ ಸ್ಥಿರಪಡಿಸುವುದಕ್ಕಾಗಲಿ ರದ್ದುಪಡಿಸುವುದಕ್ಕಾಗಲಿ ಗಂಡನಿಗೆ ಅಧಿಕಾರವಿರುವುದು. 14 ಆದರೆ ಅವಳ ಗಂಡನು ಅದನ್ನು ಕೇಳಿದ ದಿನದಿಂದ ಅದರ ಬಗ್ಗೆ ಆಕ್ಷೇಪಿಸದಿದ್ದರೆ, ಅವನು ಅವಳ ಎಲ್ಲಾ ಹರಕೆಗಳನ್ನು ಮತ್ತು ಆಣೆಗಳನ್ನು ಸ್ಥಿರಪಡಿಸಿದ್ದಾನೆ. ಯಾಕೆಂದರೆ ಅವನು ಅದರ ಬಗ್ಗೆ ಕೇಳಿದ ದಿನದಂದು ಅವಳಿಗೆ ಏನೂ ಹೇಳಲಿಲ್ಲ. 15 ಆದರೆ ಅವನು ಅವುಗಳ ಬಗ್ಗೆ ಕೇಳಿ ಸ್ವಲ್ಪ ದಿನಗಳಾದ ಮೇಲೆ ಆಕೆಯ ಹರಕೆಗಳನ್ನಾಗಲಿ ಆಣೆಗಳನ್ನಾಗಲಿ ರದ್ದುಪಡಿಸಿದರೆ, ಆಕೆಯ ಹರಕೆಯನ್ನು ಮುರಿದದ್ದಕ್ಕಾಗಿ ಅವನು ಶಿಕ್ಷೆಯನ್ನು ಅನುಭವಿಸುವನು.”
16 ಗಂಡಹೆಂಡತಿಯರ ಬಗ್ಗೆ ಮತ್ತು ತಂದೆಯೊಡನೆ ಇನ್ನೂ ಮನೆಯಲ್ಲಿರುವ ಮಗಳ ವಿಷಯದಲ್ಲಿ ಯೆಹೋವನು ಮೋಶೆಗೆ ಈ ಆಜ್ಞೆಗಳನ್ನು ಕೊಟ್ಟನು.
Kannada Holy Bible: Easy-to-Read Version. All rights reserved. © 1997 Bible League International