Add parallel Print Page Options

ರಚನೆಗಾರ: ದಾವೀದ.

101 ಆತನ ಪ್ರೀತಿಯನ್ನೂ ನೀತಿಯನ್ನೂ ಹಾಡಿಹರಸುವೆನು.
    ಯೆಹೋವನೇ, ನಿನಗೆ ಗಾಯನ ಮಾಡುವೆನು.
ನಾನು ಎಚ್ಚರಿಕೆಯಿಂದ ಪರಿಶುದ್ಧನಾಗಿ ಜೀವಿಸುವೆನು;
    ನನ್ನ ಮನೆಯಲ್ಲೂ ಪರಿಶುದ್ಧನಾಗಿರುವೆನು.
    ನೀನು ನನ್ನ ಬಳಿಗೆ ಬರುವುದು ಯಾವಾಗ?
ನನ್ನ ಎದುರಿನಲ್ಲಿ ಯಾವ ವಿಗ್ರಹಗಳೂ ಇಲ್ಲ.
    ನಿನಗೆ ದ್ರೋಹಮಾಡುವವರು ನನಗೆ ಅಸಹ್ಯ.
    ನಾನು ಅವರಂತೆ ಮಾಡುವುದಿಲ್ಲ!
ನಾನು ನಿನಗೆ ಯಥಾರ್ಥನಾಗಿರುವೆನು;
    ದುಷ್ಕೃತ್ಯಗಳನ್ನು ಮಾಡುವುದಿಲ್ಲ.
ನೆರೆಯವನ ಕುರಿತು ಗುಟ್ಟಾಗಿ
    ಚಾಡಿ ಹೇಳುವವನನ್ನು ನಾನು ತಡೆಯುವೆನು.
ಗರ್ವಪಡುವುದಕ್ಕಾಗಲಿ ತಮ್ಮನ್ನೇ ಉತ್ತಮರೆಂದು ಭಾವಿಸಿಕೊಳ್ಳುವುದಕ್ಕಾಗಲಿ
    ನಾನು ಅವರಿಗೆ ಅವಕಾಶ ಕೊಡುವುದಿಲ್ಲ.

ನಂಬಿಗಸ್ತರಿಗಾಗಿ ದೇಶದಲ್ಲೆಲ್ಲಾ ಹುಡುಕಿ ನೋಡುತ್ತೇನೆ.
    ನನ್ನ ಸೇವೆಗೆ ಅವರನ್ನೇ ನೇಮಿಸಿಕೊಳ್ಳುವೆನು.
    ಪರಿಶುದ್ಧರು ಮಾತ್ರ ನನ್ನ ಸೇವಕರಾಗಿರಲು ಸಾಧ್ಯ.
ನನ್ನ ಮನೆಯಲ್ಲಿ ವಾಸಿಸುವ ಸುಳ್ಳುಗಾರರಿಗೆ ಅವಕಾಶ ಕೊಡುವುದಿಲ್ಲ.
    ನನ್ನ ಸಮೀಪದಲ್ಲಿ ಇರುವುದಕ್ಕೂ ನಾನು ಅವರಿಗೆ ಆಸ್ಪದ ಕೊಡುವುದಿಲ್ಲ.
ಈ ದೇಶದಲ್ಲಿರುವ ದುಷ್ಟರನ್ನು ನಾನು ನಾಶಮಾಡುತ್ತೇನೆ.
    ಯೆಹೋವನ ಪಟ್ಟಣದಿಂದ ಕೆಡುಕರನ್ನು ಓಡಿಸುತ್ತೇನೆ.