Add parallel Print Page Options

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

129 ನನ್ನ ಜೀವಮಾನವೆಲ್ಲಾ ನನಗೆ ಅನೇಕ ಶತ್ರುಗಳಿದ್ದರು.
    ಇಸ್ರೇಲೇ, ಆ ಶತ್ರುಗಳ ಬಗ್ಗೆ ನಮಗೆ ಹೇಳು.
ನನ್ನ ಜೀವಮಾನವೆಲ್ಲಾ ನನಗೆ ಅನೇಕ ಶತ್ರುಗಳಿದ್ದರು.
    ಆದರೆ ಅವರೆಂದೂ ಗೆಲ್ಲಲಿಲ್ಲ.
ನನ್ನ ಬೆನ್ನಿನ ಮೇಲೆ ಹೊಡೆದು
    ಹೊಲವನ್ನು ಉಳುವಂತೆ ಗಾಯ ಮಾಡಿದರು.
ಆದರೆ ನೀತಿಸ್ವರೂಪನಾದ ಯೆಹೋವನು ಹಗ್ಗಗಳನ್ನು ಕತ್ತರಿಸಿ
    ಆ ದುಷ್ಟರಿಂದ ನನ್ನನ್ನು ಬಿಡುಗಡೆ ಮಾಡಿದನು.
ಚೀಯೋನನ್ನು ದ್ವೇಷಿಸಿದ ಜನರು ಸೋತುಹೋದರು.
ಅವರು ಹೋರಾಟವನ್ನು ನಿಲ್ಲಿಸಿ ಓಡಿಹೋದರು.
ಅವರು ಮನೆಯ ಮೇಲೆ ಬೆಳೆಯುವ ಹುಲ್ಲಿನಂತಿದ್ದರು.
    ಅದು ಬೆಳೆಯುವುದಕ್ಕಿಂತ ಮೊದಲೇ ಒಣಗಿಹೋಗುವುದು.
ಅದನ್ನು ಕೊಯ್ಯುವವನ ಹಿಡಿಯೂ ತುಂಬುವುದಿಲ್ಲ
    ಸಿವುಡು ಕಟ್ಟುವವನ ಉಡಿಲೂ ತುಂಬುವುದಿಲ್ಲ.
ಅವರ ಸಮೀಪದಲ್ಲಿ ನಡೆದುಹೋಗುವವರು,
    “ಯೆಹೋವನು ನಿಮ್ಮನ್ನು ಆಶೀರ್ವದಿಸಲಿ” ಎಂದು ಹೇಳುವುದಿಲ್ಲ.
“ಯೆಹೋವನ ಹೆಸರಿನಲ್ಲಿ ನಿಮಗೆ ಆಶೀರ್ವಾದವಾಗಲಿ”
    ಎಂದು ಜನರು ಅವರನ್ನು ಆಶೀರ್ವದಿಸುವುದಿಲ್ಲ.