ಕೀರ್ತನೆಗಳು 139
Kannada Holy Bible: Easy-to-Read Version
ಸ್ತುತಿಗೀತೆ. ರಚನೆಗಾರ: ದಾವೀದ.
139 ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ
ಸಂಪೂರ್ಣವಾಗಿ ತಿಳಿದುಕೊಂಡಿರುವೆ.
2 ನಾನು ಕುಳಿತುಕೊಳ್ಳುವುದೂ ಎದ್ದೇಳುವುದೂ ನಿನಗೆ ತಿಳಿದಿದೆ.
ನೀನು ಬಹುದೂರದಿಂದಲೇ ನನ್ನ ಆಲೋಚನೆಗಳನ್ನು ತಿಳಿದಿರುವೆ.
3 ನಾನು ಎಲ್ಲಿಗೇ ಹೋಗುತ್ತಿದ್ದರೂ ಎಲ್ಲೇ ಮಲಗಿದ್ದರೂ ನಿನಗೆ ತಿಳಿದಿರುತ್ತದೆ.
ನನ್ನ ಕಾರ್ಯಗಳೆಲ್ಲಾ ನಿನಗೆ ತಿಳಿದಿದೆ.
4 ಯೆಹೋವನೇ, ನನ್ನ ಬಾಯಿಂದ ಮಾತುಗಳು ಹೊರಡುವುದಕ್ಕಿಂತ ಮೊದಲೇ
ನಾನು ಹೇಳಬೇಕೆಂದಿರುವುದು ನಿನಗೆ ತಿಳಿದಿದೆ.
5 ನೀನು ನನ್ನ ಸುತ್ತಲೂ ಆವರಿಸಿರುವೆ;
ನಿನ್ನ ಹಸ್ತವನ್ನು ನನ್ನ ಮೇಲೆ ಇಟ್ಟಿರುವೆ.
6 ನನ್ನ ವಿಷಯವಾಗಿ ನನಗಿಂತಲೂ ನಿನಗೆ ಎಷ್ಟೋ ಹೆಚ್ಚಾಗಿ ತಿಳಿದಿರುವುದು ನನ್ನನ್ನು ಆಶ್ಚರ್ಯಗೊಳಿಸಿದೆ,
ಅದನ್ನು ಗ್ರಹಿಸಿಕೊಳ್ಳುವುದಕ್ಕೂ ನನ್ನಿಂದಾಗದು.
7 ನಾನು ನಿನ್ನ ಆತ್ಮದಿಂದ ತಪ್ಪಿಸಿಕೊಳ್ಳಲು ಎಲ್ಲಿಗೆ ಓಡಿಹೋಗಲಿ!
ನಿನ್ನ ಕಣ್ಣಿಗೆ ಮರೆಯಾಗಲು ಎಲ್ಲಿಗೆ ಹೋಗಲಿ?
8 ನಾನು ಪರಲೋಕಕ್ಕೆ ಏರಿಹೋದರೆ ಅಲ್ಲಿಯೂ ನೀನಿರುವೆ.
ಪಾತಾಳಕ್ಕೆ ಇಳಿದುಹೋದರೆ ಅಲ್ಲಿಯೂ ನೀನಿರುವೆ.
9 ಪೂರ್ವದಿಕ್ಕಿನಲ್ಲಿ ಸೂರ್ಯನು ಉದಯಿಸುವ ಸ್ಥಳಕ್ಕೆ ಹೋದರೆ ಅಲ್ಲಿಯೂ ನೀನಿರುವೆ
ಪಶ್ಚಿಮದಿಕ್ಕಿನಲ್ಲಿ ಸಮದ್ರದ ಕಟ್ಟಕಡೆಗೆ ಹೋದರೆ ಅಲ್ಲಿಯೂ ನೀನಿರುವೆ.
10 ಅಲ್ಲಿಯೂ ನಿನ್ನ ಕೈ ನನ್ನನ್ನು ನಡೆಸುವುದು.
ನಿನ್ನ ಬಲಗೈ ನನ್ನನ್ನು ಭದ್ರವಾಗಿ ಹಿಡಿದಿರುವುದು.
11 ನಾನು ನನ್ನನ್ನು ನಿನ್ನಿಂದ ಮರೆಮಾಡಿಕೊಳ್ಳಲು ಪ್ರಯತ್ನಿಸಿ,
“ಹಗಲು ಹೋಗಿ ಕತ್ತಲಾಯಿತು,
ಖಂಡಿತವಾಗಿ ಕಾರ್ಗತ್ತಲೆಯು ನನ್ನನ್ನು ಮರೆಮಾಡುವುದು” ಎಂದೆನ್ನಬಹುದು.
12 ಆದರೆ ಕಾರ್ಗತ್ತಲೆಯೂ ನಿನಗೆ ಕತ್ತಲೆಯಲ್ಲ.
ಕಾರ್ಗತ್ತಲೆಯು ನಿನಗೆ ಹಗಲಿನಂತೆ ಪ್ರಕಾಶಮಾನವಾಗಿರುವುದು.
13 ನನ್ನ ಅಂತರೀಂದ್ರಿಯಗಳನ್ನು ಸೃಷ್ಟಿಮಾಡಿದವನೂ ನೀನೇ.
ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನೇ.
14 ನಿನ್ನ ಎಲ್ಲಾ ಅದ್ಭುತಕಾರ್ಯಗಳಿಗಾಗಿ ನಿನಗೆ ಕೃತಜ್ಞತಾಸ್ತುತಿ ಮಾಡುವೆನು.
ನಿನ್ನ ಕಾರ್ಯಗಳು ಅದ್ಭುತಕರವಾಗಿವೆಯೆಂದು ನಾನು ಗ್ರಹಿಸಿಕೊಂಡಿರುವೆ.
15 ನನ್ನ ವಿಷಯವೆಲ್ಲಾ ನಿನಗೆ ಗೊತ್ತಿದೆ.
ತಾಯಿಗರ್ಭದಲ್ಲಿ ನನ್ನ ದೇಹ ರೂಪಗೊಳ್ಳುತ್ತಿದ್ದಾಗ ನನ್ನ ಎಲುಬುಗಳು ಬೆಳೆಯುವುದನ್ನೂ ನೀನು ನೋಡಿದೆ.
16 ನನ್ನ ದೇಹದ ಅಂಗಾಂಗಗಳು ಬೆಳೆಯುವುದನ್ನೂ ನೀನು ಗಮನಿಸಿದೆ.
ನನ್ನ ಆಯುಷ್ಕಾಲದ ಮೊದಲನೆ ದಿನ ಆರಂಭವಾಗುವುದಕ್ಕಿಂತ ಮೊದಲೇ ಅದರ ಎಲ್ಲಾ ದಿನಗಳು ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟವು.
17 ದೇವರೇ, ನಿನ್ನ ಆಲೋಚನೆಗಳು ನನಗೆ ಎಷ್ಟೋ ಮುಖ್ಯವಾಗಿವೆ.
ಅವು ಅಸಂಖ್ಯಾತವಾಗಿವೆ.
18 ಅವುಗಳನ್ನು ಎಣಿಸುವುದಾದರೆ, ಸಮುದ್ರದ ಮರಳಿಗಿಂತಲೂ ಹೆಚ್ಚಾಗಿವೆ.
ನಾನು ಎಚ್ಚರಗೊಂಡಾಗ ಮುಂಚಿನಂತೆ ನಿನ್ನೊಂದಿಗೇ ಇರುವೆನು.
19 ಯೆಹೋವನೇ, ದುಷ್ಟರನ್ನು ಸಂಹರಿಸು.
ಆ ಕೊಲೆಗಾರರನ್ನು ನನ್ನಿಂದ ದೂರಮಾಡು.
20 ಆ ದುಷ್ಟರು ನಿನ್ನನ್ನು ದೂಷಿಸುತ್ತಾರೆ.
ಅಯೋಗ್ಯಕ್ಕಾಗಿ ನಿನ್ನ ಹೆಸರನ್ನು ಹೇಳುತ್ತಾರೆ.
21 ಯೆಹೋವನೇ, ನಿನ್ನನ್ನು ದ್ವೇಷಿಸುವವರನ್ನು ನಾನೂ ದ್ವೇಷಿಸುವೆನು.
ನಿನ್ನನ್ನು ವಿರೋಧಿಸುವವರನ್ನು ನಾನೂ ವಿರೋಧಿಸುವೆನು.
22 ನಾನು ಅವರನ್ನು ಸಂಪೂರ್ಣವಾಗಿ ದ್ವೇಷಿಸುವೆನು!
ನಿನ್ನ ವೈರಿಗಳನ್ನು ನನ್ನ ವೈರಿಗಳೆಂದೇ ಪರಿಗಣಿಸಿದ್ದೇನೆ.
23 ದೇವರೇ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ.
ನನ್ನನ್ನು ಶೋಧಿಸಿ ನನ್ನ ಆಲೋಚನೆಗಳನ್ನು ಗ್ರಹಿಸಿಕೋ.
24 ನನ್ನಲ್ಲಿ ದುರಾಲೋಚನೆಗಳಿದ್ದರೆ ಕಂಡುಕೊ.
ನನ್ನನ್ನು ಸನಾತನ ಮಾರ್ಗದಲ್ಲಿ ನಡೆಸು.
Kannada Holy Bible: Easy-to-Read Version. All rights reserved. © 1997 Bible League International