Add parallel Print Page Options

ರಚನೆಗಾರ: ದಾವೀದ.

32 ಯಾವನ ಪಾಪಗಳು ಕ್ಷಮಿಸಲ್ಪಟ್ಟಿವೆಯೋ
    ಯಾವನ ದ್ರೋಹಗಳು ಅಳಿಸಲ್ಪಟ್ಟಿವೆಯೋ
    ಅವನೇ ಧನ್ಯನು.
ಯೆಹೋವನು ಯಾವನನ್ನು ದೋಷಿಯೆಂದು ಹೇಳುವುದಿಲ್ಲವೋ
    ಯಾವನು ತನ್ನ ಗುಪ್ತಪಾಪಗಳನ್ನು ಅಡಗಿಸಿಟ್ಟುಕೊಳ್ಳುವುದಿಲ್ಲವೋ
    ಅವನೇ ಧನ್ಯನು.

ನಾನು ನನ್ನ ಪಾಪವನ್ನು ಅರಿಕೆಮಾಡದೆ ಇದ್ದಾಗ
    ದಿನವೆಲ್ಲ್ಲಾ ಪಾಪದಿಂದ ನರಳಬೇಕಾಯಿತು;
    ವೇದನೆಯಿಂದ ನನ್ನ ಎಲುಬುಗಳೇ ಸವೆದು ಹೋಗುವಂತಾಯಿತು.
ಹಗಲಿರುಳು ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿತ್ತು.
    ನಾನು ಬೇಸಿಗೆಯಲ್ಲಿ ಒಣಗಿಹೋದ ಭೂಮಿಯಂತಾದೆನು.

ಆಗ ನಾನು ನನ್ನ ಪಾಪಗಳನ್ನೆಲ್ಲ ಯೆಹೋವನಿಗೆ ಅರಿಕೆಮಾಡಲು ನಿರ್ಧರಿಸಿದೆನು.
    ಯೆಹೋವನೇ, ನಾನು ನನ್ನ ಪಾಪಗಳನ್ನು ಅರಿಕೆಮಾಡಿಕೊಂಡಾಗ, ನನ್ನ ಯಾವ ದೋಷವನ್ನೂ ನಿನಗೆ ಮರೆಮಾಡಲಿಲ್ಲ.
    ನೀನು ನನ್ನ ಪಾಪಗಳನ್ನು ಕ್ಷಮಿಸಿದೆ.
ದೇವರೇ, ಈ ಕಾರಣದಿಂದಲೇ ನಿನ್ನ ಭಕ್ತರು ನಿನ್ನಲ್ಲಿ ಪ್ರಾರ್ಥಿಸಲಿ.
    ಆಪತ್ತುಗಳು ಮಹಾಪ್ರವಾಹದಂತೆ ಬಂದರೂ ಅವರನ್ನು ಮುಟ್ಟಲಾರವು.
ನೀನು ನನಗೆ ಆಶ್ರಯದುರ್ಗವಾಗಿರುವೆ.
    ಇಕ್ಕಟ್ಟುಗಳಲ್ಲಿ ನೀನು ನನ್ನನ್ನು ಸುತ್ತುವರಿದು ಕಾಪಾಡುವೆ.
ಆದ್ದರಿಂದ ನಿನ್ನ ರಕ್ಷಣೆಯ ಕುರಿತು ಹಾಡಿಕೊಂಡಾಡುವೆ.
ಯೆಹೋವನು ಹೀಗೆನ್ನುತ್ತಾನೆ: “ನಿನಗೆ ಜೀವಮಾರ್ಗವನ್ನು ಉಪದೇಶಿಸಿ
    ಮಾರ್ಗದರ್ಶನ ನೀಡುವೆನು;
    ನಿನ್ನನ್ನು ಕಾಪಾಡಿ ನಿನಗೆ ಮಾರ್ಗದರ್ಶಿಯಾಗಿರುವೆನು.
ಆದ್ದರಿಂದ ಕುದುರೆಯಂತಾಗಲಿ ಹೇಸರಕತ್ತೆಯಂತಾಗಲಿ ಮೂಢರಾಗಿರಬೇಡಿ.
    ಬಾರು, ಕಡಿವಾಣಗಳಿಲ್ಲದಿದ್ದರೆ ಅವು ನಿಮ್ಮ ಅಧೀನಕ್ಕೆ ಬರುವುದಿಲ್ಲ.”

10 ಕೆಡುಕರಿಗೆ ಅನೇಕ ಕೇಡುಗಳಾಗುತ್ತವೆ.
    ಆದರೆ ಯೆಹೋವನಲ್ಲಿ ಭರವಸವಿಟ್ಟಿರುವವರನ್ನು ಆತನ ಶಾಶ್ವತವಾದ ಪ್ರೀತಿಯು ಆವರಿಸಿಕೊಳ್ಳುವುದು.
11 ನೀತಿವಂತರೇ, ಹರ್ಷಿಸಿರಿ; ಯೆಹೋವನಲ್ಲಿ ಆನಂದಿಸಿರಿ.
    ಶುದ್ಧಹೃದಯವುಳ್ಳವರೇ, ಉಲ್ಲಾಸಿಸಿರಿ.