ಕೀರ್ತನೆಗಳು 60
Kannada Holy Bible: Easy-to-Read Version
ದಾವೀದನು ಅರಾಮ್ ನಹಾರಾಯಿಮ್ ಮತ್ತು ಅರಾಮ್ ಜೋಬಾ ಎಂಬುವರೊಂದಿಗೆ ಹೋರಾಡಿದಾಗ ಮತ್ತು ಯೋವಾಬನು ಹಿಂತಿರುಗಿ ಬಂದು ಉಪ್ಪಿನ ಕಣಿವೆಯಲ್ಲಿ ಎದೋಮ್ಯರ 12,000 ಮಂದಿ ಸೈನಿಕರನ್ನು ಸೋಲಿಸಿದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.
60 ದೇವರೇ, ನೀನು ನಮ್ಮನ್ನು ಕೋಪದಿಂದ ಕೈಬಿಟ್ಟಿರುವೆ;
ನಮ್ಮನ್ನು ನಾಶಗೊಳಿಸಿರುವೆ.
ನಮ್ಮನ್ನು ಪುನರ್‌ಸ್ಥಾಪಿಸು.
2 ನೀನು ಭೂಮಿಯನ್ನು ನಡುಗಿಸಿ ಸೀಳಿಬಿಟ್ಟಿರುವೆ.
ನಮ್ಮ ದೇಶವು ಕುಸಿದುಬೀಳುತ್ತಿದೆ;
ಅದನ್ನು ಸರಿಪಡಿಸು.
3 ನೀನು ನಿನ್ನ ಜನರಿಗೆ ಅನೇಕ ಕಷ್ಟಗಳನ್ನು ಕೊಟ್ಟಿರುವೆ.
ನಾವು ಕುಡಿದವರಂತೆ ತೂರಾಡುತ್ತಾ ಬೀಳುತ್ತಿದ್ದೇವೆ.
4 ನಿನ್ನ ಆರಾಧಕರನ್ನು ನೀನು ಎಚ್ಚರಿಸುವೆ.
ಈಗ ಅವರು ಶತ್ರುಗಳಿಂದ ಪಾರಾಗಬಹುದು.
5 ನಿನ್ನ ಮಹಾಶಕ್ತಿಯಿಂದ ನಮ್ಮನ್ನು ರಕ್ಷಿಸು!
ನಮ್ಮ ಪ್ರಾರ್ಥನೆಗೆ ಉತ್ತರನೀಡಿ ನಿನ್ನ ಪ್ರಿಯರನ್ನು ರಕ್ಷಿಸು!
6 ದೇವರು ತನ್ನ ಆಲಯದೊಳಗೆ ಹೀಗೆಂದನು:
“ನಾನು ಅವರಿಗೆ ಶೆಕೆಮನ್ನು ಕೊಡುವೆನು;
ಸುಕ್ಕೋತ್ ಕಣಿವೆಯನ್ನೂ ಅವರಿಗೆ ಕೊಡುವೆನು.
7 ಗಿಲ್ಯಾದ್ ಮತ್ತು ಮನಸ್ಸೆ ನನ್ನವೇ.
ಎಫ್ರಾಯೀಮ್ ನನ್ನ ಶಿರಸ್ತ್ರಾಣ.
ಯೆಹೂದ ನನ್ನ ರಾಜದಂಡ.
8 ಮೋವಾಬ್ ನನ್ನ ಸ್ನಾನಪಾತ್ರೆ.
ಎದೋಮ್ ನನ್ನ ಪಾದರಕ್ಷೆಗಳ ಸ್ಥಳ.
ನಾನು ಫಿಲಿಷ್ಟಿಯರನ್ನು ಸೋಲಿಸಿ ಜಯಘೋಷ ಮಾಡುವೆ.”
9-10 ದೇವರೇ, ನೀನು ನಮ್ಮನ್ನು ಕೈಬಿಟ್ಟಿರುವೆ.
ನೀನು ನಮ್ಮ ಸೈನ್ಯಗಳ ಸಂಗಡ ಬರಲಿಲ್ಲ.
ಹೀಗಿರಲು, ಕೋಟೆಕೊತ್ತಲುಗಳುಳ್ಳ ಪಟ್ಟಣಕ್ಕೆ ನನ್ನನ್ನು ನಡೆಸುವವರು ಯಾರು?
ಎದೋಮಿನ ವಿರುದ್ಧ ನನ್ನನ್ನು ನಡೆಸುವವರು ಯಾರು?
11 ದೇವರೇ, ವೈರಿಗಳನ್ನು ಸೋಲಿಸಲು ನಮಗೆ ಸಹಾಯಮಾಡು!
ಜನರು ನಮಗೆ ಸಹಾಯಮಾಡಲಾರರು!
12 ದೇವರೊಬ್ಬನೇ ನಮ್ಮನ್ನು ಬಲಗೊಳಿಸಬಲ್ಲನು.
ಆತನೊಬ್ಬನೇ ನಮ್ಮ ಶತ್ರುಗಳನ್ನು ಸೋಲಿಸಬಲ್ಲನು!
Kannada Holy Bible: Easy-to-Read Version. All rights reserved. © 1997 Bible League International