ಕೀರ್ತನೆಗಳು 62
Kannada Holy Bible: Easy-to-Read Version
ರಚನೆಗಾರ: ದಾವೀದ.
62 ನನ್ನ ಮನಸ್ಸು ದೇವರನ್ನೇ ನಂಬಿ ಶಾಂತವಾಗಿರುವುದು.
ಆತನಿಂದಲೇ ನನಗೆ ರಕ್ಷಣೆಯಾಗುವುದು.
2 ಆತನು ನನಗೆ ಬಂಡೆಯೂ ರಕ್ಷಣೆಯೂ ಕೋಟೆಯೂ ಆಗಿದ್ದಾನೆ.
ನಾನೆಂದಿಗೂ ಕದಲೆನು.
3 ಇನ್ನೆಷ್ಟರವರೆಗೆ ನೀವು ನನ್ನ ಮೇಲೆ ಆಕ್ರಮಣ ಮಾಡುವಿರಿ?
ನಾನು ಬಾಗಿದ ಗೋಡೆಯಂತೆಯೂ
ಬೀಳಲಿರುವ ಪ್ರಾಕಾರದಂತೆಯೂ ಇದ್ದೇನೆ.
4 ನನ್ನನ್ನು ಉನ್ನತಸ್ಥಾನದಿಂದ ಕೆಳಗಿಳಿಸಬೇಕೆಂದು
ಅವರು ಕುತಂತ್ರ ಮಾಡುತ್ತಿದ್ದಾರೆ.
ನನ್ನ ಕುರಿತು ಸುಳ್ಳಾಡುವುದು ಅವರಿಗೆ ಸಂತೋಷ.
ಬಾಯಿಂದ ಆಶೀರ್ವದಿಸಿ, ಹೃದಯದಲ್ಲಿ ಶಪಿಸುವರು.
5 ನನ್ನ ಮನವೇ, ದೇವರನ್ನೇ ನಂಬಿ ಶಾಂತವಾಗಿರು.
ನನ್ನ ನಿರೀಕ್ಷೆ ದೇವರಲ್ಲಿಯೇ.
6 ಆತನೇ ನನಗೆ ಬಂಡೆಯೂ
ರಕ್ಷಣೆಯೂ ಆಶ್ರಯದುರ್ಗವೂ ಆಗಿದ್ದಾನೆ.
7 ನನ್ನ ರಕ್ಷಣೆಯೂ ಮಾನವೂ ದೇವರೇ.
ಆತನೇ ನನಗೆ ಭದ್ರವಾದ ದುರ್ಗವೂ ಆಶ್ರಯಸ್ಥಾನವೂ ಆಗಿದ್ದಾನೆ.
8 ಜನರೇ, ಯಾವಾಗಲೂ ದೇವರನ್ನೇ ನಂಬಿಕೊಂಡಿರಿ.
ನಿಮ್ಮ ಕಷ್ಟಗಳನ್ನೆಲ್ಲಾ ಆತನಿಗೆ ಹೇಳಿಕೊಳ್ಳಿರಿ.
ಆತನೇ ನಮ್ಮ ಆಶ್ರಯಸ್ಥಾನ.
9 ಸಾಮಾನ್ಯ ಜನರು ಕೇವಲ ಉಸಿರಷ್ಟೇ.
ಶ್ರೇಷ್ಠರು ಕೇವಲ ಕ್ಷಣಕಾಲವಷ್ಟೇ.
ತೂಗಿನೋಡಿದರೆ ಅವರು ಕೇವಲ ಶೂನ್ಯ;
ಉಸಿರಿಗಿಂತಲೂ ಹಗುರ.
10 ಅನ್ಯಾಯದಿಂದ ಸಂಪಾದಿಸಿದ್ದರಲ್ಲಿ ನಂಬಿಕೆ ಇಡಬೇಡಿ.
ಕದ್ದವಸ್ತುಗಳಲ್ಲಿ ಜಂಬಪಡಬೇಡಿ.
ಐಶ್ವರ್ಯವು ಅಧಿಕವಾಗುತ್ತಿದ್ದರೂ
ಅದರಲ್ಲಿ ಮನಸ್ಸಿಡಬೇಡಿ.
11 “ಶಕ್ತಿಯೂ ದೇವರಿಂದಲೇ”
ಎಂದು ದೇವರು ನುಡಿದಿದ್ದಾನೆ.
12 ನನ್ನ ಒಡೆಯನೇ, ನೀನು ಪ್ರೀತಿಸ್ವರೂಪನಾಗಿರುವೆ.
ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವವನು ನೀನೇ.
Kannada Holy Bible: Easy-to-Read Version. All rights reserved. © 1997 Bible League International