ಕೀರ್ತನೆಗಳು 71
Kannada Holy Bible: Easy-to-Read Version
71 ಯೆಹೋವನೇ, ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ;
ಎಂದಿಗೂ ಆಶಾಭಂಗಪಡಿಸಬೇಡ.
2 ನೀನು ನೀತಿವಂತನಾಗಿರುವುದರಿಂದ ನನ್ನನ್ನು ರಕ್ಷಿಸುವೆ; ಬಿಡುಗಡೆಮಾಡುವೆ.
ನನಗೆ ಕಿವಿಗೊಟ್ಟು ನನ್ನನ್ನು ರಕ್ಷಿಸು.
3 ನೀನೇ ನನ್ನ ಸಂರಕ್ಷಣೆಯ ಆಶ್ರಯಗಿರಿಯಾಗಿರು.
ನನ್ನನ್ನು ರಕ್ಷಿಸಲು ಆಜ್ಞಾಪಿಸು.
ನೀನೇ ನನ್ನ ಬಂಡೆಯೂ ಕೋಟೆಯೂ ಆಗಿರುವೆ.
4 ನನ್ನ ದೇವರೇ, ದುಷ್ಟರಿಂದಲೂ
ಕ್ರೂರವಾದ ಕೆಟ್ಟವರಿಂದಲೂ ನನ್ನನ್ನು ರಕ್ಷಿಸು.
5 ನನ್ನ ಒಡೆಯನೇ, ನನ್ನ ಬಾಲ್ಯದಿಂದಲೂ
ನೀನೇ ನನ್ನ ನಿರೀಕ್ಷೆಯೂ ಭರವಸವೂ ಆಗಿರುವೆ.
6 ನಾನು ಹುಟ್ಟಿದಂದಿನಿಂದಲೂ ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ.
ನಾನು ಜನಿಸಿದಂದಿನಿಂದಲೂ ನೀನೇ ನನಗೆ ಆಧಾರವಾಗಿರುವೆ.
ನಾನು ನಿನ್ನನ್ನು ಕೊಂಡಾಡುತ್ತಲೇ ಇರುವೆನು.
7 ನಾನು ಅನೇಕರಿಗೆ ಮಾದರಿಯಾಗಿದ್ದೇನೆ.
ಯಾಕೆಂದರೆ ನೀನೇ ನನ್ನ ಶಕ್ತಿಗೆ ಆಧಾರ.
8 ದಿನವೆಲ್ಲಾ ನಿನ್ನ ಅದ್ಭುತಕಾರ್ಯಗಳ ಬಗ್ಗೆ ನಿನ್ನನ್ನು ಸ್ತುತಿಸಿ ಕೊಂಡಾಡುವೆನು.
9 ವೃದ್ಧಾಪ್ಯದಲ್ಲಿ ನನ್ನನ್ನು ತಳ್ಳಿಬಿಡಬೇಡ.
ಬಲವು ಕುಂದಿ ಹೋಗುತ್ತಿರುವಾಗ ಕೈಬಿಡಬೇಡ.
10 ನನ್ನ ಶತ್ರುಗಳು ಒಟ್ಟುಗೂಡಿ
ನನ್ನನ್ನು ಕೊಲ್ಲಲು ಆಲೋಚಿಸಿಕೊಂಡಿದ್ದಾರೆ.
11 “ದೇವರು ಅವನನ್ನು ಕೈಬಿಟ್ಟಿದ್ದಾನೆ; ಬೆನ್ನಟ್ಟಿ ಅವನನ್ನು ಹಿಡಿಯಿರಿ;
ಅವನಿಗೆ ಸಹಾಯಕರೇ ಇಲ್ಲ” ಎಂದು ಅವರು ಹೇಳಿಕೊಳ್ಳುತ್ತಿದ್ದಾರೆ.
12 ದೇವರೇ, ನನಗೆ ದೂರವಾಗಿರಬೇಡ.
ನನ್ನ ದೇವರೇ, ಬೇಗನೇ ನನ್ನನ್ನು ರಕ್ಷಿಸು!
13 ನನ್ನ ಶತ್ರುಗಳನ್ನು ಸೋಲಿಸಿ
ಅವರನ್ನು ಸಂಪೂರ್ಣವಾಗಿ ನಾಶಮಾಡು!
ನನಗೆ ಕೇಡುಮಾಡಬೇಕೆಂದಿರುವ ಅವರಿಗೆ
ನಾಚಿಕೆಯೂ ಅವಮಾನವೂ ಆವರಿಸಿಕೊಳ್ಳಲಿ.
14 ನಾನಂತೂ ನಿನ್ನಲ್ಲೇ ಭರವಸವಿಟ್ಟಿರುವೆ.
ನಿನ್ನನ್ನು ಹೆಚ್ಚೆಚ್ಚಾಗಿ ಕೊಂಡಾಡುತ್ತಿರುವೆ.
15 ನಿನ್ನ ಒಳ್ಳೆಯತನವನ್ನೂ ರಕ್ಷಣೆಯನ್ನೂ
ನಾನು ಹಗಲೆಲ್ಲಾ ಹೇಳುತ್ತಲೇ ಇರುವೆನು.
ಅವು ವರ್ಣಿಸಲಸಾಧ್ಯವಾಗಿವೆ.
16 ನನ್ನ ಒಡೆಯನಾದ ಯೆಹೋವನೇ, ನಿನ್ನ ಘನತೆಯ ಕುರಿತು ಹೇಳುತ್ತಲೇ ಇರುವೆನು.
ನಿನ್ನೊಬ್ಬನ ಒಳ್ಳೆಯತನವನ್ನು ಕುರಿತು ಮಾತಾಡುತ್ತಲೇ ಇರುವೆನು.
17 ದೇವರೇ, ಬಾಲ್ಯದಿಂದಲೂ ನೀನೇ ನನಗೆ ಉಪದೇಶಕನಾಗಿರುವೆ.
ನಿನ್ನ ಅದ್ಭುತಕಾರ್ಯಗಳ ಕುರಿತು ಇಂದಿನವರೆಗೂ ಪ್ರಚುರಪಡಿಸುತ್ತಿದ್ದೇನೆ.
18 ನಾನು ವೃದ್ಧನಾಗಿರುವೆ; ನನ್ನ ಕೂದಲೂ ನರೆತುಹೋಗಿದೆ.
ನನ್ನ ದೇವರೇ, ನನ್ನನ್ನು ಕೈಬಿಡಬೇಡ.
ನಿನ್ನ ಬಲವನ್ನೂ ಪ್ರತಾಪವನ್ನೂ ಮುಂದಿನ ತಲೆಮಾರುಗಳವರಿಗೆಲ್ಲಾ ಪ್ರಕಟಿಸುವೆನು.
19 ದೇವರೇ, ನಿನ್ನ ನೀತಿಯು ಆಕಾಶಕ್ಕಿಂತಲೂ ಉನ್ನತವಾಗಿದೆ.
ನೀನು ಅದ್ಭುತಕಾರ್ಯಗಳನ್ನು ಮಾಡಿರುವೆ.
ದೇವರೇ, ನಿನ್ನಂಥ ದೇವರು ಬೇರೆಲ್ಲೂ ಇಲ್ಲ.
20 ನನ್ನನ್ನು ಅನೇಕ ಕಷ್ಟಹಿಂಸೆಗಳಿಗೆ ಗುರಿಮಾಡಿದಾತನು ನೀನೇ.
ಆದರೆ ಅವೆಲ್ಲವುಗಳಿಂದ ನೀನು ನನ್ನನ್ನು ರಕ್ಷಿಸಿ ಜೀವಂತವಾಗಿ ಉಳಿಸಿದೆ.
ಆಪತ್ತುಗಳಿಂದ ನಾನೆಷ್ಟೇ ಮುಳುಗಿಹೋಗಿದ್ದರೂ ಮೇಲೆತ್ತಿದಾತನು ನೀನೇ.
21 ನೀನು ನನ್ನ ಘನತೆಯನ್ನು ಮೊದಲಿಗಿಂತಲೂ ಹೆಚ್ಚಿಸುವೆ.
ನೀನೇ ನನ್ನನ್ನು ಸಂತೈಸುವೆ.
22 ನಾನು ಹಾರ್ಪ್‌ವಾದ್ಯವನ್ನು ನುಡಿಸುತ್ತಾ ನಿನ್ನನ್ನು ಕೊಂಡಾಡುವೆನು.
ನನ್ನ ದೇವರೇ, ನಿನ್ನ ನಂಬಿಕೆಗಸ್ತಿಕೆಯನ್ನು ಕೊಂಡಾಡುವೆನು.
ಇಸ್ರೇಲಿನ ಪರಿಶುದ್ಧನೇ, ಲೈರ್‌ವಾದ್ಯವನ್ನು ನುಡಿಸುತ್ತಾ ನಿನ್ನನ್ನು ಭಜಿಸುವೆನು.
23 ನೀನು ನನ್ನನ್ನು ರಕ್ಷಿಸಿದ್ದರಿಂದ ನನ್ನ ಪ್ರಾಣವು ಉಲ್ಲಾಸಗೊಂಡಿದೆ.
ನನ್ನ ತುಟಿಗಳಿಂದ ನಿನ್ನನ್ನು ಹಾಡಿ ಕೊಂಡಾಡುವೆನು.
24 ನನ್ನ ನಾಲಿಗೆಯು ನಿನ್ನ ಒಳ್ಳೆಯತನದ ಬಗ್ಗೆ ಹಾಡುತ್ತಲೇ ಇರುವುದು.
ನನ್ನನ್ನು ಕೊಲ್ಲಬೇಕೆಂದಿರುವವರು ಸೋತುಹೋಗಿ ಅವಮಾನಕ್ಕೀಡಾಗುವರು.
Kannada Holy Bible: Easy-to-Read Version. All rights reserved. © 1997 Bible League International