ಕೀರ್ತನೆಗಳು 92
Kannada Holy Bible: Easy-to-Read Version
ಸಬ್ಬತ್ ದಿನದ ಸ್ತುತಿಗೀತೆ.
92 ಯೆಹೋವನೇ, ನಿನ್ನನ್ನು ಸ್ತುತಿಸುವುದೂ
ಮಹೋನ್ನತನಾದ ದೇವರೇ, ನಿನ್ನ ಹೆಸರನ್ನು ಕೊಂಡಾಡುವುದೂ ಯುಕ್ತವಾಗಿದೆ.
2-3 ಹತ್ತು ತಂತಿವಾದ್ಯಗಳನ್ನೂ ಹಾರ್ಪ್ ಮತ್ತು ಲೈರ್ ವಾದ್ಯಗಳನ್ನೂ ನುಡಿಸುತ್ತಾ
ನಿನ್ನ ಪ್ರೀತಿಯ ಕುರಿತು ಮುಂಜಾನೆಯಲ್ಲಿಯೂ
ನಿನ್ನ ನಂಬಿಗಸ್ತಿಕೆಯ ಕುರಿತು ರಾತ್ರಿಯಲ್ಲಿಯೂ ಹಾಡುವುದು ಯುಕ್ತವಾಗಿದೆ.
4 ಯೆಹೋವನೇ, ನಿನ್ನ ಕಾರ್ಯಗಳಿಂದ ನಮ್ಮನ್ನು ನಿಜವಾಗಿಯೂ ಸಂತೋಷಗೊಳಿಸಿರುವೆ.
ಅವುಗಳ ಕುರಿತು ನಾವು ಹರ್ಷದಿಂದ ಹಾಡುವೆವು.
5 ಯೆಹೋವನೇ, ನೀನು ಅಂತಹ ಮಹಾಕಾರ್ಯಗಳನ್ನು ಮಾಡಿರುವೆ.
ನಿನ್ನ ಆಲೋಚನೆಗಳನ್ನು ಗ್ರಹಿಸಿಕೊಳ್ಳಲು ನಮ್ಮಿಂದಾಗದು.
6 ನಿನಗೆ ಹೋಲಿಸಿದರೆ, ಜನರು ದಡ್ಡ ಪ್ರಾಣಿಗಳಂತಿದ್ದಾರೆ.
ನಾವು ಯಾವುದನ್ನೂ ಅರ್ಥಮಾಡಿಕೊಳ್ಳಲಾಗದ ಮೂಢರಂತಿದ್ದೇವೆ.
7 ದುಷ್ಟರು ಹುಲ್ಲಿನಂತೆಯೂ
ಕೆಡುಕರು ಹೂವಿನಂತೆಯೂ ಬದುಕಿ ಸಾಯುವರು.
ಅವರ ನಿರರ್ಥಕ ಕಾರ್ಯಗಳು ನಿತ್ಯ ನಾಶವಾಗುತ್ತವೆ.
8 ಯೆಹೋವನೇ, ನೀನಾದರೋ ಸದಾಕಾಲ ಸನ್ಮಾನ ಹೊಂದುವೆ.
9 ಯೆಹೋವನೇ, ನಿನ್ನ ಶತ್ರುಗಳೆಲ್ಲ ನಾಶವಾಗುವರು;
ಕೆಟ್ಟಕಾರ್ಯಗಳನ್ನು ಮಾಡುವ ಅವರೆಲ್ಲರೂ ನಾಶವಾಗುವರು.
10 ನನ್ನನ್ನಾದರೋ ನೀನು ಕಾಡುಕೋಣ ಬಲಿಷ್ಠನನ್ನಾಗಿ ಮಾಡಿರುವೆ.
ನಿನ್ನ ಚೈತನ್ಯ ತೈಲವನ್ನು ನನ್ನ ಮೇಲೆ ಸುರಿದಾತನು ನೀನೇ.
11 ವೈರಿಗಳು ನನ್ನ ಸುತ್ತಲೂ ಸೇರಿಬಂದಿದ್ದಾರೆ.
ಅವರು ಆಕ್ರಮಣಕ್ಕೆ ಸಿದ್ಧವಾಗಿರುವ ಬಲಿಷ್ಠವಾದ ಹೋರಿಗಳಂತಿದ್ದಾರೆ.
ಅವರು ನನ್ನ ಬಗ್ಗೆ ಹೇಳುತ್ತಿರುವುದೂ ನನಗೆ ಕೇಳುತ್ತಿದೆ.
12-13 ನೀತಿವಂತರಾದರೋ ಯೆಹೋವನ ಆಲಯದಲ್ಲಿ
ಬೆಳೆಯುತ್ತಿರುವ ಲೆಬನೋನಿನ ದೇವದಾರು ವೃಕ್ಷದಂತಿರುವರು.
ನೀತಿವಂತರಾದರೋ ನಮ್ಮ ದೇವಾಲಯದ ಅಂಗಳದಲ್ಲಿ
ಮೊಗ್ಗು ಬಿಡುತ್ತಿರುವ ಖರ್ಜೂರದ ಮರಗಳಂತಿರುವರು.
14 ಅವರು ಮುಪ್ಪಿನಲ್ಲಿಯೂ ಪುಷ್ಟಿಯಾಗಿ ಬೆಳೆದಿರುವ
ಎಲೆಮರಗಳಂತೆ ಫಲಿಸುವರು.
15 ಯೆಹೋವನು ಒಳ್ಳೆಯವನೆಂಬುವುದಕ್ಕೆ
ಅವರು ದೃಷ್ಟಾಂತವಾಗಿರುವರು.
ಆತನೇ ನನ್ನ ಬಂಡೆ.
ಆತನು ಎಂದಿಗೂ ತಪ್ಪು ಮಾಡನು.
Kannada Holy Bible: Easy-to-Read Version. All rights reserved. © 1997 Bible League International