Add parallel Print Page Options

93 ಯೆಹೋವನೇ ರಾಜನು.
    ಆತನು ವೈಭವವನ್ನೂ ಬಲವನ್ನೂ ವಸ್ತ್ರದಂತೆ ಧರಿಸಿಕೊಂಡಿದ್ದಾನೆ.
ಆತನು ಸಿದ್ಧನಾಗಿರುವುದರಿಂದ ಇಡೀ ಪ್ರಂಪಚವೇ ಸುರಕ್ಷಿತವಾಗಿರುವುದು.
    ಅದು ಕದಲುವುದೇ ಇಲ್ಲ.
ದೇವರೇ, ಆದಿಯಿಂದಲೂ ನಿನ್ನ ರಾಜ್ಯವು ಶಾಶ್ವತವಾಗಿದೆ.
    ಆದಿಯಿಂದಲೂ ಇರುವಾತನು ನೀನೊಬ್ಬನೇ!
ಯೆಹೋವನೇ, ನದಿಗಳ ಶಬ್ದವು ಮೊರೆಯುತ್ತಿದೆ.
    ರಭಸದಿಂದ ಬಡಿಯುತ್ತಿರುವ ಅಲೆಗಳು ಭೋರ್ಗರೆಯುತ್ತಿವೆ.
ಬಿರುಸಾಗಿ ಬಡಿಯುತ್ತಿರುವ ಸಮುದ್ರದ ಅಲೆಗಳು ಭೋರ್ಗರೆಯುತ್ತಾ ಪ್ರಬಲವಾಗಿವೆ.
    ಆದರೆ ಉನ್ನತದಲ್ಲಿರುವ ಯೆಹೋವನು ಅದಕ್ಕಿಂತ ಎಷ್ಟೋ ಬಲಿಷ್ಠನಾಗಿದ್ದಾನೆ.
ಯೆಹೋವನೇ, ನಿನ್ನ ಕಟ್ಟಳೆಗಳು ಶಾಶ್ವತವಾಗಿವೆ.
    ನಿನ್ನ ಪವಿತ್ರಾಲಯವು ಬಹುಕಾಲದವರೆಗೆ ಇರುತ್ತದೆ.