ಜ್ಞಾನೋಕ್ತಿಗಳು 17
Kannada Holy Bible: Easy-to-Read Version
17 ಜಗಳದ ಮನೆಯಲ್ಲಿ ಮೃಷ್ಠಾನ್ನ ತಿನ್ನುವುದಕ್ಕಿಂತಲೂ ಸಮಾಧಾನದ ಮನೆಯಲ್ಲಿ ಒಣರೊಟ್ಟಿಯನ್ನು ತಿನ್ನುವುದೇ ಮೇಲು.
2 ಜ್ಞಾನಿಯಾದ ಸೇವಕನು ತನ್ನ ಯಜಮಾನನ ಅಯೋಗ್ಯ ಮಗನನ್ನೇ ತನ್ನ ಹತೋಟಿಯಲ್ಲಿಟ್ಟುಕೊಳ್ಳುವನು; ಅವನ ಸಹೋದರರೊಂದಿಗೂ ಆಸ್ತಿಯಲ್ಲಿ ಪಾಲು ಹೊಂದುವನು.
3 ಜನರು ಬೆಳ್ಳಿಬಂಗಾರವನ್ನು ಬೆಂಕಿಗೆ ಹಾಕಿ ಶುದ್ಧಮಾಡುವರು. ಆದರೆ ಮನುಷ್ಯರ ಹೃದಯಗಳನ್ನು ಶುದ್ಧಮಾಡುವವನು ಯೆಹೋವನೇ.
4 ಕೆಟ್ಟಮಾತುಗಳಿಗೆ ಕಿವಿಗೊಡುವವನು ಕೆಡುಕನಿಗೆ ಸಮಾನ. ಚಾಡಿಗೆ ಕಿವಿಗೊಡುವವನು ಸುಳ್ಳುಗಾರನಿಗೆ ಸಮಾನ.
5 ಬಡವನನ್ನು ಗೇಲಿಮಾಡಿದರೆ ಅವನನ್ನು ನಿರ್ಮಿಸಿದ ದೇವರಿಗೇ ಅವಮಾನಮಾಡಿದಂತಾಗುವುದು. ಬೇರೊಬ್ಬನ ದುರಾವಸ್ಥೆಯಲ್ಲಿ ಸಂತೋಷಪಡುವವರಿಗೆ ದಂಡನೆಯು ಖಂಡಿತ.
6 ಮೊಮ್ಮಕ್ಕಳು ವೃದ್ಧರಿಗೆ ಸಂತೋಷ. ಮಕ್ಕಳಿಗೆ ತಮ್ಮ ತಂದೆತಾಯಿಗಳ ಬಗ್ಗೆ ಹೆಮ್ಮೆ.
7 ವಾಕ್ಚಾತುರ್ಯವು ಮೂಢನಿಗೆ ವಿರುದ್ಧ; ಸುಳ್ಳು ಮಾತು ಗಣ್ಯನಿಗೆ ಇನ್ನೂ ವಿರುದ್ಧ.
8 ಲಂಚವು ಅದೃಷ್ಟ ಎಂದು ಭಾವಿಸಿಕೊಳ್ಳುವವರಿಗೆ, ಅವರು ಹೋದಲ್ಲೆಲ್ಲಾ ಅದೇ ಕಾರ್ಯಸಾಧಕದಂತೆ ಕಾಣುತ್ತದೆ.
9 ನಿನಗೆ ತಪ್ಪು ಮಾಡಿದವನನ್ನು ನೀನು ಕ್ಷಮಿಸಿದರೆ ನೀನು ಸ್ನೇಹಿತನಾಗುವಿ. ಆದರೆ ನೀನು ಆ ವಿಷಯವನ್ನು ಬೇರೆಯವರಿಗೆ ಮತ್ತೆ ಹೇಳಿದರೆ ನಿಮ್ಮ ಗೆಳೆತನವು ಒಡೆದು ಹೋಗುವುದು.
10 ಮೂಢನಿಗೆ ಮನವರಿಕೆ ಮಾಡಲು ನೂರು ಏಟುಗಳು ಬೇಕಾದರೂ ಜ್ಞಾನಿಗೆ ಒಂದೇ ಗದರಿಕೆಯು ಸಾಕು.
11 ದುಷ್ಟನಿಗೆ ದೇವರ ವಿರುದ್ಧ ದಂಗೆ ಏಳುವುದಕ್ಕೆ ಇಷ್ಟ. ಕೊನೆಯಲ್ಲಿ ದೇವರು ತನ್ನ ದೂತನನ್ನು ಕಳುಹಿಸಿ ಅವನನ್ನು ದಂಡಿಸುವನು.
12 ಮೂಢಕಾರ್ಯಗಳಲ್ಲಿ ನಿರತನಾಗಿರುವ ಮೂಢನನ್ನು ಭೇಟಿಯಾಗುವುದಕ್ಕಿಂತ ತನ್ನ ಮರಿಗಳನ್ನು ಕಳೆದುಕೊಂಡು ಕೋಪದಿಂದಿರುವ ತಾಯಿಕರಡಿಗೆ ಎದುರಾಗುವುದೇ ಮೇಲು.
13 ನಿನಗೆ ಉಪಕಾರ ಮಾಡುವವರಿಗೆ ಅಪಕಾರ ಮಾಡಬೇಡ. ಇಲ್ಲವಾದರೆ ನಿನ್ನ ಜೀವಮಾನವೆಲ್ಲಾ ಕಷ್ಟಪಡುವೆ.
14 ವಾದವು ಜಲಾಶಯದ ಕಟ್ಟೆಯಲ್ಲಿ ಮಾಡುವ ರಂಧ್ರಕ್ಕೆ ಸಮಾನ. ಅದು ಹೆಚ್ಚೆಚ್ಚು ದೊಡ್ಡದಾಗುವುದಕ್ಕಿಂತ ಮೊದಲೇ ನಿಲ್ಲಿಸು.
15 ನಿರಪರಾಧಿಗಾಗುವ ದಂಡನೆಯೂ ಅಪರಾಧಿಗಾಗುವ ಬಿಡುಗಡೆಯೂ ಯೆಹೋವನಿಗೆ ಅಸಹ್ಯ.
16 ಮೂಢನಲ್ಲಿ ಹಣವಿದ್ದರೂ ಪ್ರಯೋಜನವಿಲ್ಲ. ಯಾಕೆಂದರೆ ಜ್ಞಾನವನ್ನು ಪಡೆದುಕೊಳ್ಳುವುದಕ್ಕೆ ಅವನ ಹಣ ನಿಷ್ಪ್ರಯೋಜಕ.
17 ಸ್ನೇಹಿತನು ಯಾವಾಗಲೂ ಪ್ರೀತಿಸುವನು. ಕಷ್ಟದ ಸಮಯಗಳಲ್ಲಿ ಸಹೋದರನು ಸಹಾಯಮಾಡುವನು.
18 ಮೂಢನು ಬೇರೊಬ್ಬನ ಸಾಲಕ್ಕೆ ಜಾಮೀನುಗಾರನಾಗುವನು.
19 ಜಗಳದಲ್ಲಿ ಸಂತೋಷಿಸುವವನು ಪಾಪದಲ್ಲಿಯೂ ಸಂತೋಷಿಸುವನು. ಜಂಬಕೊಚ್ಚಿಕೊಳ್ಳುವುದು ಕೇಡನ್ನು ಕರೆಯುವುದಕ್ಕೆ ಸಮಾನ.
20 ಕೆಡುಕನಿಗೆ ಲಾಭವೆಂದೂ ಆಗದು. ಸುಳ್ಳುಗಾರನಿಗೆ ತೊಂದರೆಯೇ ಗತಿ.
21 ಮೂಢಮಗನನ್ನು ಪಡೆದಿರುವ ತಂದೆಗೆ ಬಹು ವ್ಯಥೆ. ಅವನ ತಂದೆಯು ಸಂತೋಷದಿಂದರಲಾರನು.
22 ಸಂತೋಷವು ಒಳ್ಳೆಯ ಔಷಧಿಯಂತಿದೆ. ಆದರೆ ದುಃಖವು ಕಾಯಿಲೆಯಂತಿದೆ.
23 ದುಷ್ಟನು ನ್ಯಾಯ ದೊರೆಯದಂತೆ ಮಾಡಲು ಗುಟ್ಟಾಗಿ ಲಂಚ ತೆಗೆದುಕೊಳ್ಳುವನು.
24 ವಿವೇಕಿಯು ಜ್ಞಾನದ ಮೇಲೆ ಮನಸ್ಸಿಡುತ್ತಾನೆ. ಆದರೆ ಮೂಢನು ಬಹುದೂರದ ಸ್ಥಳಗಳ ಬಗ್ಗೆ ಕನಸು ಕಾಣುತ್ತಲೇ ಇರುವನು.
25 ಮೂಢಮಗನಿಂದ ತಂದೆಗೆ ದುಃಖ; ಹೆತ್ತತಾಯಿಗೆ ವ್ಯಥೆ.
26 ನಿರಪರಾಧಿಯನ್ನು ಶಿಕ್ಷಿಸುವುದು ತಪ್ಪು. ನ್ಯಾಯವಂತರಾದ ನಾಯಕರಿಗೆ ಹೊಡೆಯುವುದು ತಪ್ಪು.
27 ಜ್ಞಾನಿಯು ಎಚ್ಚರಿಕೆಯಿಂದ ಮಾತಾಡುವನು. ವಿವೇಕಿಯು ಬೇಗನೆ ಕೋಪಗೊಳ್ಳುವುದಿಲ್ಲ.
28 ಮೌನವಾಗಿದ್ದರೆ ಮೂಢನು ಸಹ ಜ್ಞಾನಿಯಂತೆ ಕಾಣುವನು; ಮಾತಾಡದಿದ್ದರೆ ವಿವೇಕಿಯಂತೆ ಕಾಣುವನು.
Kannada Holy Bible: Easy-to-Read Version. All rights reserved. © 1997 Bible League International