ಜ್ಞಾನೋಕ್ತಿಗಳು 5
Kannada Holy Bible: Easy-to-Read Version
ವ್ಯಭಿಚಾರಕ್ಕೆ ದೂರವಾಗಿರು
5 ನನ್ನ ಮಗನೇ, ನನ್ನ ಜ್ಞಾನೋಪದೇಶವನ್ನು ಕೇಳು. ನನ್ನ ವಿವೇಕದ ಮಾತುಗಳಿಗೆ ಗಮನಕೊಡು. 2 ಆಗ ನೀನು ಯೋಗ್ಯವಾಗಿ ನಡೆದುಕೊಳ್ಳುವೆ; ತಿಳುವಳಿಕೆಯಿಂದ ಮಾತಾಡುವೆ. 3 ಮತ್ತೊಬ್ಬನ ಹೆಂಡತಿಯ ಮಾತುಗಳು ಜೇನಿನಂತೆ ಸಿಹಿಯಾಗಿವೆ; ಎಣ್ಣೆಗಿಂತ ನಯವಾಗಿವೆ. 4 ಆದರೆ ಕೊನೆಗೆ ಆಕೆಯು ವಿಷದಂತೆ ಕಹಿಯಾಗುವಳು; ಖಡ್ಗದಂತೆ ತೀಕ್ಷ್ಣವಾಗುವಳು. 5 ಆಕೆಯ ಹೆಜ್ಜೆಗಳು ಮರಣದ ಕಡೆಗೆ ಹೋಗುತ್ತವೆ. ಆಕೆ ನಿನ್ನನ್ನು ನೇರವಾಗಿ ಪಾತಾಳಕ್ಕೆ ನಡೆಸುತ್ತಾಳೆ! 6 ಆಕೆಯನ್ನು ಹಿಂಬಾಲಿಸಬೇಡ! ಆಕೆ ನೀತಿಮಾರ್ಗವನ್ನು ಬಿಟ್ಟುಹೋಗಿದ್ದಾಳೆ; ಅದು ಆಕೆಗೆ ಗೊತ್ತೇ ಇಲ್ಲ. ಎಚ್ಚರಿಕೆಯಿಂದಿರು! ಜೀವ ಮಾರ್ಗವನ್ನು ಹಿಂಬಾಲಿಸು!
7 ಹೀಗಿರಲು, ನನ್ನ ಮಗನೇ, ನನಗೆ ಕಿವಿಗೊಡು, ನನ್ನ ಮಾತುಗಳನ್ನು ಮರೆಯಬೇಡ. 8 ವ್ಯಭಿಚಾರಿಣಿಯಿಂದ ದೂರವಾಗಿರು. ಅವಳ ಮನೆಯ ಬಾಗಿಲ ಸಮೀಪಕ್ಕೂ ಹೋಗಬೇಡ. 9 ಒಂದುವೇಳೆ ನೀನು ಹೋದರೆ, ನಿನ್ನ ಮೇಲೆ ಜನರಿಗಿರುವ ಗೌರವವನ್ನು ಕಳೆದುಕೊಳ್ಳುವಿ; ಕ್ರೂರಿಗಳಿಂದ ಯೌವನದಲ್ಲಿಯೇ ಸಾವಿಗೀಡಾಗುವಿ. 10 ನಿನಗೆ ಗೊತ್ತಿಲ್ಲದವರು ನಿನ್ನ ಐಶ್ವರ್ಯವನ್ನೆಲ್ಲಾ ತೆಗೆದುಕೊಳ್ಳುವರು; ನೀನು ದುಡಿದು ಸಂಪಾದಿಸಿದ್ದನ್ನು ಬೇರೆಯವರು ಪಡೆದುಕೊಳ್ಳುವರು. 11 ಕೊನೆಯಲ್ಲಿ, ನಿನ್ನ ಆರೋಗ್ಯವೆಲ್ಲಾ ಕೆಟ್ಟುಹೋಗಿ ನಿನ್ನಲ್ಲಿರುವುದನ್ನೆಲ್ಲಾ ಕಳೆದುಕೊಂಡು ನೀನು ಗೋಳಾಡುವಿ. 12-13 ಆಗ ನೀನು, “ನಾನೇಕೆ ನನ್ನ ತಂದೆತಾಯಿಗಳ ಮಾತನ್ನು ಕೇಳಲಿಲ್ಲ? ನಾನೇಕೆ ನನ್ನ ಉಪದೇಶಕರ ಮಾತಿಗೆ ಕಿವಿಗೊಡಲಿಲ್ಲ? ನಾನು ಅವರ ಸದುಪದೇಶವನ್ನು ದ್ವೇಷಿಸಿದ್ದರಿಂದಲೂ ಅವರ ಬುದ್ಧಿಮಾತನ್ನು ತಳ್ಳಿಬಿಟ್ಟಿದ್ದರಿಂದಲೂ 14 ನಾನು ಜನರೆಲ್ಲರ ಎದುರಿನಲ್ಲಿ ನಾಚಿಕೆಗೀಡಾಗಿದ್ದೇನೆ” ಎಂದು ಹೇಳುವಿ.
15 ನಿನ್ನ ಸ್ವಂತ ಹೆಂಡತಿಗೆ ನಂಬಿಗಸ್ತನಾಗಿರು; ನಿನ್ನ ಪ್ರೀತಿಯು ಆಕೆಗೆ ಮಾತ್ರ ಸಲ್ಲಲಿ. 16 ಬೇರೆ ಸ್ತ್ರೀಯರಲ್ಲಿ ನೀನು ಮಕ್ಕಳನ್ನು ಪಡೆಯುವುದು ಒಳ್ಳೆಯದಲ್ಲ. 17 ನಿನ್ನ ಮಕ್ಕಳು ನಿನ್ನವರೇ ಆಗಿರಲಿ; ಪರರು ನಿನ್ನೊಂದಿಗೆ ಪಾಲುಗಾರರಾಗದಿರಲಿ. 18 ಆದ್ದರಿಂದ ಯೌವನಪ್ರಾಯದಲ್ಲಿ ನೀನು ಮದುವೆಮಾಡಿಕೊಂಡ ಸ್ತ್ರೀಯೊಡನೆ ಸಂತೋಷಿಸು. 19 ಆಕೆ ಸುಂದರವಾದ ಜಿಂಕೆಯಂತೆಯೂ ಅಂದವಾದ ಕಾಡುಮೇಕೆಯಂತೆಯೂ ಇದ್ದಾಳೆ. ಆಕೆಯ ಸ್ತನಗಳು ನಿನ್ನನ್ನು ಸಂಪೂರ್ಣವಾಗಿ ತೃಪ್ತಿಪಡಿಸಲಿ. ಆಕೆಯ ಪ್ರೀತಿಯಲ್ಲೇ ಲೀನವಾಗಿರು. 20 ಪರಸ್ತ್ರೀಯಲ್ಲಿ ಮೋಹಗೊಂಡು ಆಕೆಯನ್ನು ಅಪ್ಪಿಕೊಳ್ಳಬೇಡ.
21 ಮನುಷ್ಯನ ಮಾರ್ಗಗಳು ಯೆಹೋವನಿಗೆ ಕಾಣುತ್ತಲೇ ಇವೆ; ಯೆಹೋವನು ಅವುಗಳನ್ನು ಪರೀಕ್ಷಿಸುತ್ತಾನೆ. 22 ಕೆಡುಕನ ದುಷ್ಕೃತ್ಯಗಳು ಅವನನ್ನೇ ಹಿಡಿಯುತ್ತವೆ. ಅವನ ಪಾಪಗಳು ಹಗ್ಗದಂತೆ ಅವನನ್ನೇ ಬಂಧಿಸುತ್ತವೆ. 23 ಅವನು ಬುದ್ಧಿವಾದವನ್ನು ತಿರಸ್ಕರಿಸಿದ್ದರಿಂದ ಸಾಯುವನು; ತನ್ನ ಅತಿಮೂರ್ಖತನದಿಂದ ದಾರಿತಪ್ಪುವನು.
Kannada Holy Bible: Easy-to-Read Version. All rights reserved. © 1997 Bible League International