ಜ್ಞಾನೋಕ್ತಿಗಳು 9
Kannada Holy Bible: Easy-to-Read Version
ಜ್ಞಾನ ಮತ್ತು ಮೂರ್ಖತನ
9 ಜ್ಞಾನವೆಂಬಾಕೆ ತನ್ನ ಮನೆಯನ್ನು ಕಟ್ಟಿಕೊಂಡಿದ್ದಾಳೆ. ಆಕೆ ಅದಕ್ಕೆ ಏಳು ಕಂಬಗಳನ್ನು ಹಾಕಿದ್ದಾಳೆ. 2 ಜ್ಞಾನವೆಂಬಾಕೆ ಮಾಂಸದ ಅಡಿಗೆಯನ್ನೂ ದ್ರಾಕ್ಷಾರಸವನ್ನೂ ತಯಾರಿಸಿದ್ದಾಳೆ. ಆಕೆ ತನ್ನ ಮೇಜಿನ ಮೇಲೆ ಆಹಾರವನ್ನು ಇಟ್ಟಿದ್ದಾಳೆ. 3 ಆಮೇಲೆ ಆಕೆ, ತನ್ನ ಸೇವಕಿಯರನ್ನು ಕಳುಹಿಸಿ ನಗರದ ಎತ್ತರವಾದ ಸ್ಥಳದಿಂದ, 4 “ಕಲಿತುಕೊಳ್ಳಬೇಕಾಗಿರುವ ಜನರೇ, ಬನ್ನಿರಿ” ಎಂದು ಕೂಗುತ್ತಾಳೆ. ಆಕೆಯು ಬುದ್ಧಿಹೀನರಿಗೆ, 5 “ಬನ್ನಿರಿ, ನನ್ನ ಜ್ಞಾನದ ಆಹಾರವನ್ನು ತಿನ್ನಿರಿ. ನಾನು ತಯಾರಿಸಿರುವ ದ್ರಾಕ್ಷಾರಸವನ್ನು ಕುಡಿಯಿರಿ. 6 ನಿಮ್ಮ ಮೂರ್ಖ ಮಾರ್ಗಗಳನ್ನು ತೊರೆದುಬಿಡಿ. ಆಗ ನಿಮಗೆ ಜೀವವು ದೊರೆಯುವುದು. ವಿವೇಕಮಾರ್ಗದಲ್ಲಿ ಮುಂದೆ ಸಾಗಿರಿ” ಎಂದು ಆಕೆ ಹೇಳಿದಳು.
7 ನೀನು ಅಹಂಕಾರಿಗೆ ಅವನ ತಪ್ಪನ್ನು ತಿಳಿಸಲು ಪ್ರಯತ್ನಿಸಿದರೆ ಅವನು ನಿನ್ನನ್ನೇ ಖಂಡಿಸುವನು. ನೀನು ಕೆಡುಕನಿಗೆ ಅವನ ತಪ್ಪನ್ನು ತಿಳಿಸಿದರೆ ಅವನು ನಿನ್ನನ್ನೇ ಗೇಲಿಮಾಡುವನು. 8 ದುರಾಭಿಮಾನಿಯನ್ನು ಗದರಿಸಬೇಡ; ಅವನು ನಿನ್ನನ್ನೇ ದ್ವೇಷ ಮಾಡುವನು. ಆದರೆ ನೀನು ಜ್ಞಾನಿಯನ್ನು ಗದರಿಸಿದರೆ ಅವನು ನಿನ್ನನ್ನು ಪ್ರೀತಿಸುವನು. 9 ನೀನು ಜ್ಞಾನಿಗೆ ಉಪದೇಶಿಸಿದರೆ ಅವನು ಮತ್ತಷ್ಟು ಜ್ಞಾನಿಯಾಗುವನು. ನೀನು ನೀತಿವಂತನಿಗೆ ಬೋಧಿಸಿದರೆ, ಅವನು ಮತ್ತಷ್ಟು ತಿಳುವಳಿಕೆಯನ್ನು ಪಡೆದುಕೊಳ್ಳುವನು.
10 ಯೆಹೋವನಲ್ಲಿ ಭಯಭಕ್ತಿಯಿಂದಿರುವುದೇ ಜ್ಞಾನದ ಮೂಲ. ಯೆಹೋವನ ತಿಳುವಳಿಕೆಯನ್ನು ಪಡೆದುಕೊಳ್ಳುವುದೇ ವಿವೇಕದ ಮೂಲ. 11 ನೀನು ಜ್ಞಾನಿಯಾಗಿದ್ದರೆ, ಬಹುಕಾಲ ಬದುಕುವೆ. 12 ನೀನು ಜ್ಞಾನಿಯಾಗಿದ್ದರೆ ನಿನ್ನ ಜ್ಞಾನವು ನಿನಗೇ ಲಾಭಕರ. ಆದರೆ ನೀನು ದುರಾಭಿಮಾನದಿಂದ ಬೇರೆಯವರನ್ನು ಗೇಲಿಮಾಡಿದರೆ ನಿನ್ನನ್ನೇ ಕಷ್ಟಕ್ಕೆ ಗುರಿಮಾಡಿಕೊಳ್ಳುವೆ.
ಅಜ್ಞಾನಿಯೆಂಬ ಹೆಂಗಸು
13 ಅಜ್ಞಾನವೆಂಬಾಕೆಯು ಬಾಯಿಬಡುಕಿ; ಮಂದಮತಿ ಮತ್ತು ಮೂಢಳು, 14 ಅವಳು ತನ್ನ ಮನೆಯ ಬಾಗಿಲ ಬಳಿಯಲ್ಲಿ ನಗರದ ಎತ್ತರವಾದ ಸ್ಥಳಗಳಲ್ಲಿ ಕುಳಿತಿದ್ದಾಳೆ. 15 ತಮ್ಮ ಕೆಲಸಕಾರ್ಯಗಳ ನಿಮಿತ್ತ ಹಾದುಹೋಗುವ ಜನರನ್ನು, 16 “ಕಲಿತುಕೊಳ್ಳಬೇಕಾಗಿರುವ ಜನರೇ ಬನ್ನಿ” ಎಂದು ಕೂಗಿಕರೆಯುತ್ತಾಳೆ. ಅವಳು ಮೂಢರನ್ನು ಸಹ ಕರೆದು, 17 “ನೀವು ಕದ್ದ ನೀರು ಸ್ವಂತ ನೀರಿಗಿಂತಲೂ ಹೆಚ್ಚು ರುಚಿಯಾಗಿರುವುದು. ನೀವು ಕದ್ದ ರೊಟ್ಟಿ ತಯಾರಿಸಿದ ರೊಟ್ಟಿಗಿಂತಲೂ ಹೆಚ್ಚು ರುಚಿಯಾಗಿರುವುದು” ಎಂದು ಹೇಳುವಳು. 18 ಆದರೆ ಆ ಮೂಢರಿಗೆ, ಅವಳ ಮನೆ ಕೇವಲ ದೆವ್ವಗಳಿಂದ ತುಂಬಿರುವುದಾಗಲಿ ಆಕೆಯ ಅತಿಥಿಗಳು ಅಗಾಧವಾದ ಪಾತಾಳದಲ್ಲಿ ಬಿದ್ದಿರುವುದಾಗಲಿ ತಿಳಿದಿಲ್ಲ.
Kannada Holy Bible: Easy-to-Read Version. All rights reserved. © 1997 Bible League International