ಧರ್ಮೋಪದೇಶಕಾಂಡ 13
Kannada Holy Bible: Easy-to-Read Version
ಸುಳ್ಳು ಪ್ರವಾದಿಗಳು
13 “ಒಬ್ಬ ಪ್ರವಾದಿಯಾಗಲಿ ಕನಸಿನ ಅರ್ಥ ಹೇಳುವವನಾಗಲಿ ನಿಮ್ಮ ಬಳಿಗೆ ಬಂದು ನಿಮಗೊಂದು ಸೂಚಕಕಾರ್ಯವನ್ನಾಗಲಿ ಅದ್ಭುತಕಾರ್ಯವನ್ನಾಗಲಿ ಮಾಡಿತೋರಿಸುತ್ತೇನೆ ಎಂದು ಹೇಳಿದರೂ ಹೇಳಬಹುದು. 2 ಅವನು ಅದ್ಭುತಕಾರ್ಯಗಳನ್ನು ಮಾಡಿತೋರಿಸಬಹುದು. ಆಮೇಲೆ ಅವನು ನಿಮಗೆ ಗೊತ್ತಿಲ್ಲದ ದೇವರನ್ನು ಅನುಸರಿಸಲು ನಿಮಗೆ ಹೇಳಬಹುದು. 3 ಅಂಥ ಮನುಷ್ಯನಿಗೆ ಕಿವಿಗೊಡಬೇಡಿ. ದೇವರು ನಿಮ್ಮನ್ನು ಪರೀಕ್ಷೆ ಮಾಡುತ್ತಿದ್ದಾನೆ. ನಿಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪ್ರೀತಿಸುತ್ತೀರೋ ಇಲ್ಲವೋ ಎಂದು ನಿಮ್ಮನ್ನು ಪರೀಕ್ಷಿಸುವನು. 4 ನೀವು ನಿಮ್ಮ ದೇವರಾದ ಯೆಹೋವನನ್ನು ಅನುಸರಿಸಬೇಕು, ಗೌರವಿಸಬೇಕು, ಆತನ ಆಜ್ಞೆಗಳಿಗೆ ವಿಧೇಯರಾಗಬೇಕು. ಆತನು ಹೇಳಿದಂತೆ ನಡೆಯಬೇಕು ಮತ್ತು ಆತನನ್ನು ತೊರೆದುಬಿಡದೆ ಸೇವಿಸಬೇಕು. 5 ಅಂಥ ಪ್ರವಾದಿ ಅಥವಾ ಕನಸಿನ ಅರ್ಥ ಹೇಳುವವನನ್ನು ಕೊಂದು ಹಾಕಬೇಕು. ಯಾಕೆಂದರೆ ಅವನು ಯೆಹೋವನನ್ನು ತೊರೆಯಲು ಪ್ರೇರೇಪಿಸಿದನಲ್ಲಾ? ದೇವರಾದ ಯೆಹೋವನೇ ನಿಮ್ಮನ್ನು ಈಜಿಪ್ಟಿನಿಂದ ಬಿಡಿಸಿದವನು. ಆತನು ನಿಮಗೆ ಹೇಳಿದ ನಿಯಮಗಳಿಗೆ ವಿರುದ್ಧವಾಗಿ ನಡೆಯಲು ಪ್ರೇರೇಪಿಸುವವನನ್ನು ಕೊಲ್ಲಬೇಕು; ನಿಮ್ಮ ಮಧ್ಯದಿಂದ ಅಂಥ ದುಷ್ಟತನವನ್ನು ತೆಗೆದುಹಾಕಬೇಕು.
6 “ನಿಮ್ಮ ಹತ್ತಿರದ ಸಂಬಂಧಿಕರಲ್ಲಿ ಯಾರಾದರೂ ಇತರ ದೇವರುಗಳನ್ನು ಅನುಸರಿಸಲು ನಿಮ್ಮನ್ನು ಗುಪ್ತವಾಗಿ ಒತ್ತಾಯ ಮಾಡಬಹುದು. ಅವರು ನಿಮ್ಮ ಸ್ವಂತ ಸಹೋದರನಾಗಿರಬಹುದು, ನಿಮ್ಮ ಮಕ್ಕಳಾಗಿರಬಹುದು, ನಿಮ್ಮ ಹೆಂಡತಿಯಾಗಿರಬಹುದು, ಅಥವಾ ಆಪ್ತಗೆಳೆಯನಾಗಿರಬಹುದು. ಅವರು ಬಂದು, ‘ಬಾ, ನಾವು ಬೇರೆ ದೇವರನ್ನು ಹಿಂಬಾಲಿಸೋಣ’ (ಈ ದೇವರನ್ನು ನೀವಾಗಲಿ ನಿಮ್ಮ ಪೂರ್ವಿಕರಾಗಲಿ ತಿಳಿದಿರಲಿಲ್ಲ. 7 ಅವು ನಿಮ್ಮ ಸುತ್ತಮುತ್ತಲಿರುವ ಬೇರೆ ದೇಶಗಳಲ್ಲಿ ವಾಸವಾಗಿರುವ ಜನರ ದೇವರುಗಳು, ಅವುಗಳಲ್ಲಿ ಕೆಲವು ಹತ್ತಿರದವುಗಳಾಗಿವೆ; ಕೆಲವು ದೂರದವುಗಳಾಗಿವೆ.) 8 ಎಂದರೆ ಆ ವ್ಯಕ್ತಿಯ ಸಲಹೆಗೆ ನೀವು ಒಪ್ಪಬಾರದು. ಅವನಿಗೆ ಕಿವಿಗೊಡಬೇಡಿ; ಅವನಿಗೆ ಕನಿಕರತೋರಬೇಡಿ; ಅವನು ಸ್ವತಂತ್ರನಾಗಿ ಹೋಗಲು ಬಿಡಬೇಡಿ; ಅವನನ್ನು ಸಂರಕ್ಷಿಸಬೇಡಿ. 9-10 ನೀವು ಅವನನ್ನು ಕೊಂದುಹಾಕಬೇಕು. ನೀವು ಕಲ್ಲೆಸೆದು ಅವನನ್ನು ಸಾಯಿಸಬೇಕು. ನೀವು ಅವನ ಮೇಲೆ ಮೊದಲನೆ ಕಲ್ಲನ್ನು ಎಸೆಯಬೇಕು. ಈಜಿಪ್ಟಿನ ದಾಸತ್ವದಿಂದ ನಿಮ್ಮನ್ನು ಬಿಡಿಸಿಕೊಂಡು ಬಂದ ನಿಮ್ಮ ದೇವರಾದ ಯೆಹೋವನಿಗೆ ವಿರುದ್ಧವಾಗಿ ನಡೆದುಕೊಳ್ಳುವಂತೆ ನಿಮ್ಮನ್ನು ಪ್ರೇರೇಪಿಸಿದವನು ಅವನೇ ಅಲ್ಲವೇ? 11 ಆಗ ಇಸ್ರೇಲಿನ ಎಲ್ಲಾ ಜನರಲ್ಲಿ ಭಯವುಂಟಾಗಿ ಅಂಥಾ ಕೆಟ್ಟ ಕೆಲಸವನ್ನು ಎಂದಿಗೂ ಮಾಡುವುದಿಲ್ಲ.
12 “ನಿಮ್ಮ ದೇವರಾದ ಯೆಹೋವನು ನಿಮ್ಮ ವಾಸಕ್ಕಾಗಿ ನಿಮಗೆ ಪಟ್ಟಣಗಳನ್ನು ಕೊಟ್ಟಿದ್ದಾನೆ. ಒಂದುವೇಳೆ, ಆ ಪಟ್ಟಣಗಳಲ್ಲಿ ಯಾವುದಾದರೊಂದರ ಬಗ್ಗೆ ನೀವು ಕೆಟ್ಟ ಸುದ್ದಿಯನ್ನು ಕೇಳಬಹುದು. 13 ನಿಮ್ಮ ಸ್ವಂತ ದೇಶದಲ್ಲಿರುವ ಕೆಲವು ಕೆಟ್ಟ ಜನರು ಕೆಟ್ಟದ್ದನ್ನು ಮಾಡಲು ತಮ್ಮ ಪಟ್ಟಣದ ಜನರನ್ನು ಒತ್ತಾಯಪಡಿಸುತ್ತಿದ್ದಾರೆಂದು ನೀವು ಕೇಳಬಹುದು. ಅವರು ತಮ್ಮ ಪಟ್ಟಣದ ಜನರಿಗೆ, ‘ನಾವು ಹೋಗಿ ಬೇರೆ ದೇವರುಗಳ ಸೇವೆಮಾಡೋಣ’ ಎಂದು ಹೇಳಬಹುದು. (ಈ ದೇವರುಗಳನ್ನು ನೀವು ಹಿಂದೆಂದೂ ತಿಳಿದಿಲ್ಲ.) 14 ನೀವು ಇಂಥ ಸುದ್ದಿಯನ್ನು ಕೇಳಿದರೆ, ಅದು ಸತ್ಯವೇ ಎಂಬುದನ್ನು ತಿಳಿದುಕೊಳ್ಳಲು ನಿಮ್ಮಿಂದಾದಷ್ಟು ಪ್ರಯತ್ನಿಸಬೇಕು. ಅದು ಸತ್ಯವೆಂಬುದು ನಿಮಗೆ ತಿಳಿದುಬಂದರೆ ಮತ್ತು ಅಂಥ ಭಯಂಕರ ಸಂಗತಿಯು ನಿಜವಾಗಿಯೂ ಸಂಭವಿಸಿತೆಂದು ನೀವು ರುಜುವಾತುಪಡಿಸಲು ಶಕ್ತರಾಗಿದ್ದರೆ, 15 ನೀವು ಆ ಪಟ್ಟಣದ ಜನರನ್ನು ದಂಡಿಸಬೇಕು; ಅವರೆಲ್ಲರನ್ನೂ ಕೊಲ್ಲಬೇಕು; ಅವರ ಎಲ್ಲಾ ಪಶುಗಳನ್ನು ಸಹ ಕೊಲ್ಲಬೇಕು. ಆ ಪಟ್ಟಣವನ್ನು ಸಂಪೂರ್ಣವಾಗಿ ನಾಶಮಾಡಬೇಕು. 16 ನೀವು ಆ ಪಟ್ಟಣದಲ್ಲಿದ್ದ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ಪಟ್ಟಣದ ಮಧ್ಯದಲ್ಲಿ ತಂದುಹಾಕಿ ಅದಕ್ಕೆ ಬೆಂಕಿಹೊತ್ತಿಸಿ ಇಡೀ ಪಟ್ಟಣವನ್ನು ಬೆಂಕಿಯಿಂದ ಸುಡಬೇಕು. ಇದು ದೇವರಾದ ಯೆಹೋವನಿಗೆ ಸರ್ವಾಂಗಹೋಮವಾಗುವುದು. ಆ ಪಟ್ಟಣವು ಕಲ್ಲುಗಳ ರಾಶಿಯಾಗಿ ಪರಿಣಮಿಸುವುದು ಮತ್ತು ಯಾರೂ ಆ ಪಟ್ಟಣವನ್ನು ಮತ್ತೆ ಕಟ್ಟಬಾರದು. 17 ಆ ಪಟ್ಟಣದಲ್ಲಿರುವ ಪ್ರತಿಯೊಂದು ವಸ್ತು ನಾಶವಾಗಬೇಕು. ಅದರಲ್ಲಿ ಯಾವುದನ್ನಾದರೂ ನೀವು ನಿಮ್ಮ ಉಪಯೋಗಕ್ಕೆ ಇಟ್ಟುಕೊಳ್ಳಬಾರದು. ನೀವು ಹೀಗೆ ಮಾಡಿದರೆ ಯೆಹೋವನು ನಿಮ್ಮ ಮೇಲೆ ಸಿಟ್ಟುಗೊಳ್ಳುವುದಿಲ್ಲ. ಆತನು ನಿಮ್ಮ ಮೇಲೆ ದಯೆತೋರಿಸುವನು. ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದ ಪ್ರಕಾರ ನಿಮ್ಮ ದೇಶವನ್ನು ವಿಸ್ತಾರ ಮಾಡುವನು. 18 ನಿಮ್ಮ ದೇವರಾದ ಯೆಹೋವನಿಗೆ ನೀವು ಕಿವಿಗೊಟ್ಟರೆ, ನಾನು ನಿಮಗೆ ಕೊಡುವ ಆತನ ಎಲ್ಲಾ ಆಜ್ಞೆಗಳಿಗೆ ವಿಧೇಯರಾದರೆ ಇದು ಸಂಭವಿಸುವುದು. ನಿಮ್ಮ ದೇವರಾದ ಯೆಹೋವನು ಸರಿಯೆಂದು ಹೇಳುವ ಕಾರ್ಯಗಳನ್ನೇ ನೀವು ಮಾಡಬೇಕು.
Kannada Holy Bible: Easy-to-Read Version. All rights reserved. © 1997 Bible League International