ನ್ಯಾಯಸ್ಥಾಪಕರು 17
Kannada Holy Bible: Easy-to-Read Version
ಮೀಕನ ವಿಗ್ರಹಗಳು
17 ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿ ಮೀಕ ಎಂಬ ಮನುಷ್ಯನಿದ್ದನು. 2 ಮೀಕನು ತನ್ನ ತಾಯಿಗೆ, “ಅಮ್ಮಾ, ಯಾರೋ ನಿನ್ನ ಇಪ್ಪತ್ತೆಂಟು ತೊಲೆ ಬೆಳ್ಳಿಯನ್ನು ಕದ್ದಿದ್ದರಲ್ಲಾ, ನಿನಗೆ ನೆನಪಿದೆಯಾ? ನೀನು ಅದರ ಸಲುವಾಗಿ ಶಾಪಹಾಕುವದನ್ನು ನಾನು ಕೇಳಿದ್ದೆ. ನಾನು ಅದನ್ನು ತೆಗೆದುಕೊಂಡಿದ್ದೆ. ಇಗೋ ಆ ಬೆಳ್ಳಿ ನನ್ನ ಹತ್ತಿರ ಇದೆ” ಎಂದು ಹೇಳಿದನು.
ಅವನ ತಾಯಿಯು ಅವನಿಗೆ, “ಮಗನೇ, ಯೆಹೋವನು ನಿನ್ನನ್ನು ಆಶೀರ್ವದಿಸಲಿ” ಎಂದು ಹರಸಿದಳು.
3 ಮೀಕನು ಇಪ್ಪತ್ತೆಂಟು ತೊಲೆ ಬೆಳ್ಳಿಯನ್ನು ತನ್ನ ತಾಯಿಗೆ ಕೊಟ್ಟನು. ಆಗ ಅವಳು, “ನಾನು ಈ ಬೆಳ್ಳಿಯನ್ನು ಯೆಹೋವನಿಗೆ ವಿಶೇಷ ಹರಕೆಯಾಗಿ ಕೊಡುವೆನು. ಇದನ್ನು ನಾನು ನನ್ನ ಮಗನಿಗೆ ಕೊಡುವೆನು, ಅವನು ಅದರಿಂದ ಒಂದು ವಿಗ್ರಹವನ್ನು ಮಾಡಿಸಿ ಅದಕ್ಕೆ ಬೆಳ್ಳಿಯ ಹೊದಿಕೆಯನ್ನು ಹಾಕಿಸುವನು” ಎಂದು ಹೇಳಿ ಆ ಬೆಳ್ಳಿಯನ್ನು ಮಗನ ಕೈಯಲ್ಲಿ ಕೊಟ್ಟಳು.
4 ಆದರೆ ಮೀಕನು ಆ ಬೆಳ್ಳಿಯನ್ನು ತನ್ನ ತಾಯಿಗೆ ಹಿಂದಿರುಗಿಸಿದನು. ಅವಳು ಸುಮಾರು ಐದು ತೊಲೆಯಷ್ಟು ಬೆಳ್ಳಿಯ ನಾಣ್ಯಗಳನ್ನು ಒಬ್ಬ ಅಕ್ಕಸಾಲಿಗನಿಗೆ ಕೊಟ್ಟಳು. ಆ ಅಕ್ಕಸಾಲಿಗನು ಅದರಿಂದ ಒಂದು ವಿಗ್ರಹವನ್ನು ಮಾಡಿ ಅದಕ್ಕೆ ಬೆಳ್ಳಿಯ ಹೊದಿಕೆ ಹಾಕಲು ಉಪಯೋಗಿಸಿದನು. ಆ ವಿಗ್ರಹವನ್ನು ಮೀಕನ ಮನೆಯಲ್ಲಿ ಇಡಲಾಯಿತು. 5 ವಿಗ್ರಹಗಳನ್ನು ಪೂಜಿಸುವುದಕ್ಕಾಗಿ ಮೀಕನಿಗೆ ಒಂದು ಮಂದಿರವಿತ್ತು. ಮೀಕನು ಏಫೋದನ್ನೂ ವಿಗ್ರಹಗಳನ್ನೂ ಪೂಜಿಸಲು ತನ್ನ ಒಬ್ಬ ಮಗನನ್ನು ಅರ್ಚಕನನ್ನಾಗಿ ನೇಮಿಸಿದನು. 6 (ಆ ಕಾಲದಲ್ಲಿ ಇಸ್ರೇಲರಿಗೆ ಅರಸನಿರಲಿಲ್ಲ. ಪ್ರತಿಯೊಬ್ಬರೂ ತಮಗೆ ಸರಿ ತೋರಿದಂತೆ ನಡೆದುಕೊಳ್ಳುತ್ತಿದ್ದರು.)
7 ಲೇವಿಯ ಕುಲದ ಒಬ್ಬ ತರುಣನಿದ್ದನು. ಅವನು ಯೆಹೂದದ ಬೆತ್ಲೆಹೇಮಿನವನಾಗಿದ್ದು ಯೆಹೂದ್ಯರ ಸಂಗಡ ವಾಸಮಾಡುತ್ತಿದ್ದನು. 8 ಆ ತರುಣನು ಯೆಹೂದ ಪ್ರದೇಶದ ಬೆತ್ಲೆಹೇಮನ್ನು ಬಿಟ್ಟು ವಾಸಮಾಡಲು ಬೇರೆ ಸ್ಥಳವನ್ನು ಹುಡುಕುತ್ತಿದ್ದನು. ಅವನು ಪ್ರಯಾಣ ಮಾಡುತ್ತಾ ಮೀಕನ ಮನೆಗೆ ಬಂದನು. ಮೀಕನ ಮನೆಯು ಎಫ್ರಾಯೀಮ್ ಬೆಟ್ಟಪ್ರದೇಶದಲ್ಲಿತ್ತು. 9 ಮೀಕನು ಅವನನ್ನು, “ನೀನು ಎಲ್ಲಿಂದ ಬಂದಿರುವೆ?” ಎಂದು ಕೇಳಿದನು.
ಆ ತರುಣನು, “ನಾನು ಯೆಹೂದ ಪ್ರದೇಶದ ಬೆತ್ಲೆಹೇಮಿನವನಾದ ಲೇವಿಯನು. ನಾನು ವಾಸಮಾಡುವುದಕ್ಕೆ ಒಂದು ಸ್ಥಳವನ್ನು ಹುಡುಕುತ್ತಿದ್ದೇನೆ” ಎಂದು ಹೇಳಿದನು.
10 ಆಗ ಮೀಕನು ಅವನಿಗೆ, “ನಮ್ಮಲ್ಲಿಯೇ ಇರು. ನಮಗೆ ತಂದೆಯೂ ಯಾಜಕನೂ ಆಗಿರು. ನಾನು ನಿನಗೆ ಪ್ರತಿವರ್ಷ ನಾಲ್ಕು ಔನ್ಸ್ ಬೆಳ್ಳಿಯನ್ನೂ ಊಟವನ್ನೂ ವಸ್ತ್ರಗಳನ್ನೂ ಕೊಡುತ್ತೇನೆ” ಎಂದು ಹೇಳಿದನು.
ಮೀಕನು ಹೇಳಿದಂತೆ ಆ ಲೇವಿಯು ಮಾಡಿದನು. 11 ಆ ತರುಣ ಲೇವಿಯು ಮೀಕನಲ್ಲಿಯೇ ಇರಲು ಒಪ್ಪಿಕೊಂಡನು. ಆ ತರುಣನು ಮೀಕನ ಒಬ್ಬ ಮಗನಂತೆಯೇ ಆದನು. 12 ಮೀಕನು ಅವನನ್ನು ತಮಗೆ ಯಾಜಕನಾಗಬೇಕೆಂದು ಕೇಳಿಕೊಂಡನು. ಆದ್ದರಿಂದ ಆ ತರುಣನು ಯಾಜಕನಾಗಿ ಮೀಕನ ಮನೆಯಲ್ಲಿಯೇ ವಾಸಮಾಡಿದನು. 13 ಮೀಕನು ತನ್ನೊಳಗೆ, “ಯೆಹೋವನು ನನಗೆ ಕೃಪೆ ತೋರುವನು. ಏಕೆಂದರೆ ನನ್ನ ಮನೆಯಲ್ಲಿ ಲೇವಿಕುಲದ ಒಬ್ಬನು ಯಾಜಕನಾಗಿದ್ದಾನೆ” ಎಂದುಕೊಂಡನು.
Kannada Holy Bible: Easy-to-Read Version. All rights reserved. © 1997 Bible League International