Add parallel Print Page Options

ಇಸ್ರೇಲಿನ 1,44,000 ಜನರು

ಇದಾದ ಮೇಲೆ ನಾಲ್ಕು ಮಂದಿ ದೇವದೂತರು ಭೂಮಿಯ ನಾಲ್ಕು ಮೂಲೆಗಳಲ್ಲಿ ನಿಂತಿರುವುದನ್ನು ನಾನು ನೋಡಿದೆನು. ಗಾಳಿಯು ಭೂಮಿಯ ಮೇಲಾಗಲಿ ಸಮುದ್ರದ ಮೇಲಾಗಲಿ ಮರದ ಮೇಲಾಗಲಿ ಬೀಸದಂತೆ ಅವರು ಭೂಮಿಯ ನಾಲ್ಕು ದಿಕ್ಕುಗಳ ಗಾಳಿಯನ್ನು ತಡೆಹಿಡಿದಿದ್ದರು. ನಂತರ ಬೇರೊಬ್ಬ ದೇವದೂತನು ಪೂರ್ವದಿಕ್ಕಿನ ಕಡೆಯಿಂದ ಬರುತ್ತಿರುವುದನ್ನು ನಾನು ನೋಡಿದೆನು. ಜೀವಸ್ವರೂಪನಾದ ದೇವರ ಮುದ್ರೆಯು ಈ ದೇವದೂತನ ಬಳಿಯಿತ್ತು. ಈ ದೇವದೂತನು ನಾಲ್ಕುಮಂದಿ ದೇವದೂತರನ್ನು ಗಟ್ಟಿಯಾದ ಧ್ವನಿಯಲ್ಲಿ ಕರೆದನು. ಭೂಮಿಗೆ ಮತ್ತು ಸಮುದ್ರಕ್ಕೆ ತೊಂದರೆ ಮಾಡುವುದಕ್ಕೆ ಅಧಿಕಾರವನ್ನು ದೇವರು ಈ ನಾಲ್ವರು ದೇವದೂತರಿಗೆ ನೀಡಿದ್ದನು. ಆ ದೇವದೂತನು ಈ ನಾಲ್ವರು ದೇವದೂತರಿಗೆ, “ನಮ್ಮ ದೇವರ ಸೇವೆಮಾಡುವ ಜನರ ಹಣೆಯ ಮೇಲೆ ಮುದ್ರೆ ಒತ್ತುವ ತನಕ ಭೂಮಿಗಾಗಲಿ ಸಮುದ್ರಕ್ಕಾಗಲಿ ಮರಗಳಿಗಾಗಲಿ ತೊಂದರೆಯನ್ನು ಮಾಡಬೇಡಿ” ಎಂದು ಕೂಗಿ ಹೇಳಿದನು.

ನಂತರ, ಮುದ್ರೆ ಒತ್ತಿಸಿಕೊಂಡವರ ಸಂಖ್ಯೆ ನನಗೆ ಕೇಳಿಬಂತು. ಅವರ ಒಟ್ಟು ಸಂಖ್ಯೆ 1,44,000 ಮಂದಿ. ಅವರು ಇಸ್ರೇಲರ ಹನ್ನೆರಡು ಕುಲಗಳಿಗೆ ಸೇರಿದವರಾಗಿದ್ದರು.

ಯೂದನ ಕುಲದಿಂದ12,000
ರೂಬೇನನ ಕುಲದಿಂದ12,000
ಗಾದನ ಕುಲದಿಂದ12,000
ಆಶೇರನ ಕುಲದಿಂದ12,000
ನಫ್ತಾಲಿಯ ಕುಲದಿಂದ12,000
ಮನಸ್ಸೆಯ ಕುಲದಿಂದ12,000
ಸಿಮೆಯೋನನ ಕುಲದಿಂದ12,000
ಲೇವಿಯ ಕುಲದಿಂದ12,000
ಇಸ್ಸಾಕಾರನ ಕುಲದಿಂದ12,000
ಜೆಬುಲೋನನ ಕುಲದಿಂದ12,000
ಯೋಸೇಫನ ಕುಲದಿಂದ12,000
ಬೆನ್ಯಾಮೀನನ ಕುಲದಿಂದ12,000

ಜನರ ಮಹಾಸಮೂಹ

ಬಳಿಕ ನಾನು ನೋಡಿದಾಗ, ಜನರ ಮಹಾಸಮೂಹವನ್ನು ಕಂಡೆನು. ಅವರು ಎಣಿಸಲಾಗದಷ್ಟು ಅಸಂಖ್ಯಾತರಾಗಿದ್ದರು. ಅವರಲ್ಲಿ ಸಕಲ ಜನಾಂಗ, ಕುಲ, ಪ್ರಜೆಗಳವರೂ ಲೋಕದ ಸಕಲ ಭಾಷೆಗಳನ್ನಾಡುವವರೂ ಇದ್ದರು. ಈ ಜನರು ಸಿಂಹಾಸನದ ಮುಂದೆ ಮತ್ತು ಕುರಿಮರಿಯ (ಯೇಸು) ಮುಂದೆ ನಿಂತಿದ್ದರು. ಅವರೆಲ್ಲರೂ ಬಿಳಿ ನಿಲುವಂಗಿಗಳನ್ನು ಧರಿಸಿಕೊಂಡು ಖರ್ಜೂರದ ಗರಿಗಳನ್ನು ತಮ್ಮ ಕೈಗಳಲ್ಲಿ ಹಿಡಿದಿದ್ದರು. 10 ಅವರು ಗಟ್ಟಿಯಾದ ಧ್ವನಿಯಲ್ಲಿ, “ಸಿಂಹಾಸನದ ಮೇಲೆ ಕುಳಿತುಕೊಳ್ಳುವ ನಮ್ಮ ಪ್ರಭುವಿಗೆ ಮತ್ತು ಕುರಿಮರಿಯಾದಾತನಿಗೆ ಜಯವು ಲಭಿಸಿತು” ಎಂದು ಕೂಗಿದರು. 11 ಹಿರಿಯರು ಅಲ್ಲಿದ್ದರು ಮತ್ತು ನಾಲ್ಕು ಜೀವಿಗಳು ಅಲ್ಲಿದ್ದವು. ಅವರ ಸುತ್ತಲೂ ಮತ್ತು ಸಿಂಹಾಸನದ ಸುತ್ತಲೂ ದೇವದೂತರೆಲ್ಲಾ ನಿಂತಿದ್ದರು. ದೇವದೂತರು ಸಿಂಹಾಸನದ ಮುಂದೆ ಮೊಣಕಾಲೂರಿ ದೇವರನ್ನು ಆರಾಧಿಸಿದರು. 12 ಅವರು, “ಆಮೆನ್! ನಮ್ಮ ದೇವರಿಗೆ ಸ್ತೋತ್ರವೂ ಪ್ರಭಾವವೂ ಜ್ಞಾನವೂ ಕೃತಜ್ಞತಾಸುತ್ತಿಯೂ ಗೌರವವೂ ಅಧಿಕಾರವೂ ಮತ್ತು ಬಲವೂ ಯುಗಯುಗಾಂತರಗಳಲ್ಲಿಯೂ ಇರಲಿ. ಆಮೆನ್!” ಎಂದರು.

13 ಆಗ ಹಿರಿಯರಲ್ಲೊಬ್ಬನು, “ಬಿಳಿ ನಿಲುವಂಗಿಗಳನ್ನು ಧರಿಸಿಕೊಂಡಿರುವ ಈ ಜನರು ಯಾರು! ಅವರು ಎಲ್ಲಿಂದ ಬಂದವರು?” ಎಂದು ನನ್ನನ್ನು ಕೇಳಿದನು.

14 “ಸ್ವಾಮೀ, ಅವರು ಯಾರೆಂಬುದು ನಿಮಗೆ ತಿಳಿದಿದೆ” ಎಂದು ನಾನು ಉತ್ತರಿಸಿದೆನು.

ಆಗ ಹಿರಿಯನು, “ಈ ಜನರು ಭೀಕರ ಸಂಕಟವನ್ನು ಅನುಭವಿಸಿ ಬಂದವರು. ಅವರು ಕುರಿಮರಿಯಾದಾತನ ರಕ್ತದಿಂದ ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡಿದ್ದಾರೆ.[a] ಈಗ ಅವರು ಶುಭ್ರವಾಗಿದ್ದಾರೆ ಮತ್ತು ಬಿಳುಪಾಗಿದ್ದಾರೆ. 15 ಆದ್ದರಿಂದ ಈ ಜನರು ಈಗ ದೇವರ ಸಿಂಹಾಸನದ ಮುಂದೆ ಇದ್ದಾರೆ. ಅವರು ದೇವರನ್ನು ಆತನ ಆಲಯದಲ್ಲಿ ಹಗಲಿರುಳು ಆರಾಧಿಸುತ್ತಾರೆ. ಸಿಂಹಾಸನದ ಮೇಲೆ ಕುಳಿತಿರುವಾತನು ಅವರನ್ನು ಸಂರಕ್ಷಿಸುತ್ತಾನೆ. 16 ಆ ಜನರಿಗೆ ಮತ್ತೆ ಹಸಿವೆಯಾಗಲಿ ಬಾಯಾರಿಕೆಯಾಗಲಿ ಸೂರ್ಯನ ತಾಪವಾಗಲಿ ಇರುವುದಿಲ್ಲ. ಅವರನ್ನು ಯಾವ ತಾಪವೂ ಸುಡುವುದಿಲ್ಲ. 17 ಸಿಂಹಾಸನದ ಮಧ್ಯೆ ಇರುವ ಕುರಿಮರಿಯಾದಾತನು ಅವರ ಕುರುಬನಾಗಿರುತ್ತಾನೆ. ಆತನು ಅವರನ್ನು ಜೀವ ನೀಡುವ ನೀರಿನ ಬುಗ್ಗೆಗಳ ಬಳಿಗೆ ಕರೆದೊಯ್ಯುತ್ತಾನೆ. ಅವರ ಕಣ್ಣುಗಳಿಂದ ತೊಟ್ಟಿಕ್ಕುವ ಕಣ್ಣೀರನ್ನೆಲ್ಲ ದೇವರು ಒರಸಿಹಾಕುತ್ತಾನೆ” ಎಂದು ಹೇಳಿದನು.

Footnotes

  1. 7:14 ನಿಲುವಂಗಿಗಳನ್ನು ತೊಳೆದುಕೊಂಡಿದ್ದಾರೆ ತಮ್ಮ ಪಾಪಗಳು ಕ್ಷಮಿಸಲ್ಪಡುವುದಕ್ಕಾಗಿ ಅವರು ಯೇಸುವಿನಲ್ಲಿ ನಂಬಿಕೆಯನ್ನಿಟ್ಟಿದ್ದಾರೆ ಎಂದರ್ಥ.