ಯೆಹೆಜ್ಕೇಲ 13
Kannada Holy Bible: Easy-to-Read Version
ಸುಳ್ಳುಪ್ರವಾದಿಗಳ ವಿರುದ್ಧ ಎಚ್ಚರಿಕೆ
13 ಯೆಹೋವನ ನುಡಿಯು ನನಗೆ ಬಂತು. ಆತನು ಹೇಳಿದ್ದೇನೆಂದರೆ, 2 “ನರಪುತ್ರನೇ, ನೀನು ಇಸ್ರೇಲಿನ ಪ್ರವಾದಿಗಳಿಗೆ ನನ್ನ ಪರವಾಗಿ ಹೇಳಬೇಕು. ಅವರು ನಿಜವಾಗಿ ನನ್ನ ಪರವಾಗಿ ಮಾತನಾಡುವುದಿಲ್ಲ. ಅವರು ಏನು ಹೇಳಬೇಕೆಂದು ಇಷ್ಟಪಡುತ್ತಾರೋ ಅದನ್ನೇ ಹೇಳುತ್ತಾರೆ. ಅದಕ್ಕಾಗಿ ನೀನು ಅವರ ಕೂಡ ಮಾತನಾಡಿ ಇಂತೆನ್ನಬೇಕು, ‘ಯೆಹೋವನ ಸಂದೇಶವನ್ನು ಕೇಳಿರಿ. 3 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ಬುದ್ಧಿಯಿಲ್ಲದ ಪ್ರವಾದಿಗಳೇ, ನಿಮಗೆ ಸಂಕಟಗಳು ಬರುವವು. ನೀವು ನಿಮ್ಮ ಸ್ವಂತ ಆತ್ಮವನ್ನು ಅನುಸರಿಸುತ್ತೀರಿ. ನೀವು ದರ್ಶನಗಳಲ್ಲಿ ಏನನ್ನೂ ಕಂಡಿಲ್ಲ.
4 “‘ಇಸ್ರೇಲರೇ, ನಿಮ್ಮ ಪ್ರವಾದಿಗಳು ಪಾಳುಬಿದ್ದ ಮನೆಗಳಲ್ಲಿ ಓಡಾಡುವ ನರಿಗಳಂತಿದ್ದಾರೆ. 5 ಗೋಡೆಗಳು ಬಿದ್ದುಹೋದ ಸ್ಥಳಗಳನ್ನು ನೀವು (ಪ್ರವಾದಿಗಳು) ಕಾವಲು ಕಾಯುವದಿಲ್ಲ. ಇಸ್ರೇಲ್ ಜನರಿಗೋಸ್ಕರ ನೀವು ಗೋಡೆಗಳನ್ನು ಕಟ್ಟುವುದಿಲ್ಲ. ಆದ್ದರಿಂದ ಯೆಹೋವನಿಂದ ದಂಡನೆಯ ದಿನವು ಬಂದಾಗ ಜನರು ಯುದ್ಧದಲ್ಲಿ ಸೋತು ಹೋಗುವರು.
6 “‘ಅವರನ್ನು ಯೆಹೋವನು ಕಳುಹಿಸಿಲ್ಲದಿದ್ದರೂ ಅವರು, “ಯೆಹೋವನು ಇದನ್ನು ಹೇಳಿದ್ದಾನೆ” ಎನ್ನುತ್ತಾರೆ. ಅವರು ಮಾಟಮಂತ್ರ ಮಾಡಿ ಇಂತಿಂಥದ್ದು ಸಂಭವಿಸುವುದು ಎಂದು ಸುಳ್ಳು ಹೇಳುತ್ತಾರೆ. ದೇವರು ನಮ್ಮನ್ನು ಕಳುಹಿಸಿದ್ದು ಎಂದು ಸುಳ್ಳು ಹೇಳುವರು. ಅವರು ತಮ್ಮ ಸುಳ್ಳು ನಿಜವಾಗುತ್ತಿರುವದನ್ನು ನೋಡಲು ಕಾಯುತ್ತಿದ್ದಾರೆ.
7 “‘ಎಲೈ ಸುಳ್ಳುಪ್ರವಾದಿಗಳೇ, ನೀವು ನೋಡಿದ ದರ್ಶನಗಳು ಸತ್ಯವಾದವುಗಳಲ್ಲ. ನೀವು ಮಂತ್ರತಂತ್ರ ಮಾಡಿ ಇಂತಿಂಥದ್ದು ಸಂಭವಿಸುವುದು ಎಂದು ಸುಳ್ಳು ಹೇಳಿದ್ದೀರಿ. ನಾನು ಮಾತಾಡಿಲ್ಲದಿದ್ದರೂ ಯೆಹೋವನೇ ಇದನ್ನು ಹೇಳಿದನೆಂದು ನೀವು ಹೇಳುತ್ತೀರಿ.’”
8 ಆದ್ದರಿಂದ ಈಗ ನನ್ನ ಒಡೆಯನಾದ ಯೆಹೋವನು ನಿಜವಾಗಿಯೂ ಮಾತನಾಡುವನು. ಆತನು ಹೇಳುವುದೇನೆಂದರೆ, “ನೀವು ಸುಳ್ಳು ಹೇಳಿದ್ದೀರಿ, ನೀವು ಸುಳ್ಳುದರ್ಶನಗಳನ್ನು ನೋಡಿದ್ದೀರಿ. ಆದ್ದರಿಂದ ನಾನು ನಿಮಗೆ ವಿರುದ್ಧವಾಗಿದ್ದೇನೆ.” ಇದು ನನ್ನ ಒಡೆಯನಾದ ಯೆಹೋವನು ಹೇಳಿದ್ದು. 9 ಯೆಹೋವನು ಹೇಳುವುದೇನೆಂದರೆ, “ಯಾವ ಪ್ರವಾದಿಗಳು ಸುಳ್ಳುದರ್ಶನವನ್ನು ನೋಡಿ ಸುಳ್ಳನ್ನು ಹೇಳಿದ್ದಾರೋ, ಅವರನ್ನು ಶಿಕ್ಷಿಸುವೆನು. ನನ್ನ ಜನರ ಮಧ್ಯೆಯಿಂದ ಅವರನ್ನು ತೆಗೆದುಬಿಡುವೆನು. ಅವರ ಹೆಸರುಗಳು ಇಸ್ರೇಲರ ವಂಶಾವಳಿ ಪಟ್ಟಿಯಲ್ಲಿ ಇರುವುದಿಲ್ಲ. ಅವರು ಇಸ್ರೇಲ್ ದೇಶಕ್ಕೆ ಹಿಂದಿರುಗಿ ಬರುವುದಿಲ್ಲ. ನಾನೇ ಒಡೆಯನಾದ ಯೆಹೋವನೆಂದು ಆಗ ನಿಮಗೆ ಗೊತ್ತಾಗುವುದು.
10 “ಮತ್ತೆಮತ್ತೆ ಆ ಸುಳ್ಳು ಪ್ರವಾದಿಗಳು ನನ್ನ ಜನರಿಗೆ ಸುಳ್ಳು ಹೇಳಿದರು. ಅವರು ಶಾಂತಿ ಇರುವದೆಂದು ಹೇಳಿದರು. ಆದರೆ ಶಾಂತಿ ಇರಲಿಲ್ಲ. ಅದು ಈ ರೀತಿಯಲ್ಲಿದೆ: ಜನರು ಬಲಹೀನವಾದ ಗೋಡೆಯನ್ನು ಕಟ್ಟುತ್ತಾರೆ; ಅದು ಬಲವಾಗಿ ಕಾಣುವಂತೆ ಮಾಡಲು ಪ್ರವಾದಿಗಳು ಅದಕ್ಕೆ ತೆಳುವಾದ ಮಡ್ಡಿ ಮಾಡುತ್ತಾರೆ. 11 ಗೋಡೆಗೆ ಮಡ್ಡಿ ಮಾಡುವವರಿಗೆ ಹೀಗೆ ಹೇಳು: ನಾನು ಆಲಿಕಲ್ಲು ಮತ್ತು ಬಲವಾದ ಮಳೆಯನ್ನು ಕಳುಹಿಸುವೆನು. ಗಾಳಿಯು ಬಲವಾಗಿ ಬೀಸಿ ಸುಂಟರಗಾಳಿಯು ಬರುವುದು. ಆಗ ಗೋಡೆಯು ಮುರಿದುಬೀಳುವುದು. 12 ಗೋಡೆಯು ಬಿದ್ದಾಗ ಜನರು ಪ್ರವಾದಿಗಳಾದ ನಿಮ್ಮನ್ನು, ‘ನೀವು ಗೋಡೆಗೆ ಹಾಕಿದ ಗಾರೆ ಏನಾಯಿತು?’” ಎಂದು ಪ್ರಶ್ನಿಸುವರು. 13 ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ, “ನಾನು ಸಿಟ್ಟುಗೊಂಡಿದ್ದೇನೆ. ಮತ್ತು ನಿಮಗೆ ವಿರುದ್ಧವಾಗಿ ಬಿರುಗಾಳಿಯನ್ನು ಕಳುಹಿಸುತ್ತೇನೆ. ನಾನು ಕೋಪಗೊಂಡಿದ್ದೇನೆ. ಆದ್ದರಿಂದ ಭಾರೀ ಮಳೆಯು ಬೀಳುವಂತೆ ಮಾಡುವೆನು. ನಾನು ಕೋಪಗೊಂಡಿದ್ದರಿಂದ ನಾಶಕರವಾದ ಆಲಿಕಲ್ಲು ಆಕಾಶದಿಂದ ಬೀಳುವಂತೆ ಮಾಡುವೆನು. 14 ನೀವು ಗೋಡೆಗೆ ಗಾರೆ ಹಾಕಿದಿರಿ. ಆದರೆ ನಾನು ಇಡೀ ಗೋಡೆಯನ್ನೆ ನಾಶಮಾಡುವೆನು. ಅದನ್ನು ನೆಲಸಮ ಮಾಡುವೆನು. ಆ ಗೋಡೆಯು ನಿಮ್ಮ ಮೇಲೆ ಬಿದ್ದು ನಿಮ್ಮನ್ನು ಕೊಲ್ಲುವುದು. ಆಗ ನಾನು ಯೆಹೋವನೆಂದು ಗೊತ್ತಾಗುವುದು. 15 ಗೋಡೆಗೆ ಗಾರೆ ಬಳಿಯುವವರ ಮೇಲೂ, ಗೋಡೆಯ ಮೇಲೂ ನನ್ನ ಕೋಪವನ್ನು ತೀರಿಸಿಕೊಳ್ಳುವೆನು. ಆಗ ನಾನು, ‘ಈಗ ಗೋಡೆ ಇಲ್ಲ. ಅದಕ್ಕೆ ಗಾರೆ ಹಾಕುವವರೂ ಇಲ್ಲ’ ಎಂದು ಹೇಳುವೆನು.
16 “ಇವೆಲ್ಲಾ ಇಸ್ರೇಲಿನ ಸುಳ್ಳು ಪ್ರವಾದಿಗಳಿಗಾಗುವದು. ಆ ಪ್ರವಾದಿಗಳು ಜೆರುಸಲೇಮಿನ ಬಗ್ಗೆ ಪ್ರವಾದಿಸಿದರು ಮತ್ತು ಶಾಂತಿಯಿಲ್ಲದಿರುವಾಗಲೂ ಶಾಂತಿಯ ದರ್ಶನಗಳನ್ನು ಕಂಡರು.” ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದನು.
17 ದೇವರು ಹೀಗೆ ನುಡಿದನು: “ನರಪುತ್ರನೇ, ಇಸ್ರೇಲಿನ ಪ್ರವಾದಿನಿಯರನ್ನು ನೋಡು. ಆ ಪ್ರವಾದಿನಿಯರು ನನ್ನ ಪರವಾಗಿ ಮಾತಾಡುತ್ತಿಲ್ಲ. ಅವರು ತಮ್ಮ ಇಚ್ಛೆಯ ಪ್ರಕಾರ ಮಾತನಾಡುತ್ತಾರೆ. ಆದ್ದರಿಂದ ನೀನು ನನ್ನ ಪರವಾಗಿ ಅವರ ವಿರುದ್ಧವಾಗಿ ಮಾತನಾಡಬೇಕು. ಅವರಿಗೆ ಈ ಮಾತುಗಳನ್ನು ಹೇಳಬೇಕು. 18 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ: ಪ್ರವಾದಿನಿಯರೇ, ನಿಮಗೆ ಕೇಡಾಗುವುದು. ಜನರು ತಮ್ಮ ತೋಳುಗಳಲ್ಲಿ ಕಟ್ಟಿಕೊಳ್ಳುವದಕ್ಕಾಗಿ ನೀವು ತಾಯಿತಿಗಳನ್ನು ಹೊಲಿದಿರಿ. ಜನರು ತಮ್ಮ ತಲೆಯ ಮೇಲೆ ಹಾಕಿಕೊಳ್ಳಲು ಮಂತ್ರದ ವಿವಿಧ ಅಳತೆಯ ಮುಸುಕುಗಳನ್ನು ನೀವು ತಯಾರಿಸುತ್ತೀರಿ. ನನ್ನ ಜನರ ಪ್ರಾಣಗಳನ್ನು ಬೇಟೆಯಾಡುವದಕ್ಕೂ ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳುವುದಕ್ಕೂ ನೀವು ಇದನ್ನು ಮಾಡುತ್ತೀರಿ. 19 ಜನರೆದುರಿನಲ್ಲಿ ನನಗೆ ನೀವು ಮಹತ್ವವನ್ನು ಕೊಡುವದಿಲ್ಲ. ಸ್ವಲ್ಪ ಬಾರ್ಲಿಗಾಗಿಯೂ ಕೆಲವು ತುಂಡು ರೊಟ್ಟಿಗಾಗಿಯೂ ನೀವು ನನಗೆ ವಿರುದ್ಧವಾಗಿ ವರ್ತಿಸುತ್ತೀರಿ. ನನ್ನ ಜನರಿಗೆ ನೀವು ಸುಳ್ಳನ್ನು ಆಡುತ್ತೀರಿ. ಅವರಿಗೆ ಸುಳ್ಳೆಂದರೆ ಬಹಳ ಪ್ರೀತಿ. ನೀವು ಸಾಯತಕ್ಕಲ್ಲದವರನ್ನು ಸಾವಿಗೀಡು ಮಾಡುತ್ತೀರಿ. ಬದುಕತಕ್ಕಲ್ಲದವರನ್ನು ಜೀವಂತವಾಗಿಡುತ್ತೀರಿ. 20 ಆದ್ದರಿಂದ ಒಡೆಯನಾದ ಯೆಹೋವನು ಹೇಳುವುದೇನೆಂದರೆ: ನೀವು ಆ ಬಟ್ಟೆಯ ತೋಳುಪಟ್ಟಿಯನ್ನು ಜನರು ಬೋನಿನಲ್ಲಿ ಸಿಲುಕಿಕೊಳ್ಳುವಂತೆ ಮಾಡುತ್ತೀರಿ. ಆದರೆ ನಾನು ಅವರನ್ನು ಸ್ವತಂತ್ರರಾಗುವಂತೆ ಮಾಡುವೆನು. ನಿಮ್ಮ ತೋಳಿನಿಂದ ಆ ಪಟ್ಟಿಯನ್ನು ಹರಿದುಹಾಕುವೆನು. ಆಗ ಜನರು ನಿಮ್ಮ ಬಂಧನದಿಂದ ವಿಮುಕ್ತರಾಗುವರು. ಬೋನಿನಲ್ಲಿ ಸಿಕ್ಕಿಕೊಂಡ ಪಕ್ಷಿಯು ಬಿಡಿಸಿದ ಕೂಡಲೇ ಹಾರಾಡುವಂತೆ ಅವರೂ ಹಾರಾಡುವರು. 21 ನಾನು ನಿಮ್ಮ ಮುಸುಕುಗಳನ್ನು ಹರಿದುಹಾಕುವೆನು. ಮತ್ತು ನಿಮ್ಮ ಹಿಡಿತದಿಂದ ಅವರನ್ನು ಬಿಡಿಸುವೆನು. ಆ ಜನರು ನಿಮ್ಮ ಉರುಲಿನಿಂದ ತಪ್ಪಿಸಿಕೊಳ್ಳುವರು. ಆಗ ನಾನೇ ಒಡೆಯನಾದ ಯೆಹೋವನು ಎಂದು ಗೊತ್ತಾಗುವುದು.
22 “‘ಪ್ರವಾದಿನಿಯರೇ, ನೀವು ಸುಳ್ಳುಗಾರ್ತಿಯರಾಗಿದ್ದೀರಿ. ನಿಮ್ಮ ಸುಳ್ಳುಗಳು ಒಳ್ಳೆಯವರಿಗೆ ದುಃಖವನ್ನು ಬರಮಾಡುವವು. ಒಳ್ಳೆಯ ವ್ಯಕ್ತಿಗಳಿಗೆ ನೋವು ಮಾಡಲು ನನಗೆ ಮನಸ್ಸಿಲ್ಲ. ದುಷ್ಟ ಜನರು ತಮ್ಮ ದುರ್ಮಾರ್ಗಗಳನ್ನು ತೊರೆದುಬಿಡದಂತೆಯೂ ತಮ್ಮ ಪ್ರಾಣಗಳನ್ನು ರಕ್ಷಿಸಿಕೊಳ್ಳದಂತೆಯೂ ನೀವು ಪ್ರೋತ್ಸಾಹಿಸುತ್ತೀರಿ. 23 ಆದ್ದರಿಂದ ನೀವು ಪ್ರಯೋಜನವಿಲ್ಲದ ದರ್ಶನವನ್ನು ಇನ್ನು ಮೇಲೆ ನೋಡುವುದಿಲ್ಲ. ನೀವು ನಿಮ್ಮ ಮಂತ್ರತಂತ್ರಗಳನ್ನು ಇನ್ನು ಮಾಡುವುದಿಲ್ಲ. ನನ್ನ ಶಕ್ತಿಯಿಂದ ನಾನು ನನ್ನ ಜನರನ್ನು ಕಾಪಾಡುತ್ತೇನೆ. ಆಗ ನಾನು ಯೆಹೋವನು ಎಂದು ನೀವು ತಿಳಿಯುವಿರಿ.’”
Kannada Holy Bible: Easy-to-Read Version. All rights reserved. © 1997 Bible League International