ಯೆಹೆಜ್ಕೇಲ 37
Kannada Holy Bible: Easy-to-Read Version
ಒಣಗಿದ ಎಲುಬುಗಳ ದರ್ಶನ
37 ಯೆಹೋವನ ಶಕ್ತಿಯು ನನ್ನ ಮೇಲೆ ಬಂದಿತು. ಯೆಹೋವನ ಆತ್ಮವು ನನ್ನನ್ನು ನಗರದೊಳಗಿಂದ ಎತ್ತಿಕೊಂಡು ತಗ್ಗಿನ ಮಧ್ಯಕ್ಕೆ ಕೊಂಡೊಯ್ದನು. ಆ ಬಯಲಿನ ತುಂಬಾ ಒಣಗಿದ ಎಲುಬುಗಳು ತುಂಬಿದ್ದವು. 2 ಆ ಬಯಲಿನ ನೆಲದ ಮೇಲೆ ಅನೇಕಾನೇಕ ಒಣ ಎಲುಬುಗಳು ಬಿದ್ದುಕೊಂಡಿದ್ದವು. ಯೆಹೋವನು ನನ್ನನ್ನು ಆ ಎಲುಬುಗಳ ನಡುವೆ ನಡೆಯುವಂತೆ ಮಾಡಿದನು. ಆ ಎಲುಬುಗಳು ತೀರಾ ಒಣಗಿಹೋಗಿರುವುದನ್ನು ನಾನು ನೋಡಿದೆನು.
3 ಆಗ ನನ್ನ ಒಡೆಯನಾದ ಯೆಹೋವನು ನನ್ನೊಡನೆ ಹೀಗೆ ಹೇಳಿದನು, “ನರಪುತ್ರನೇ, ಈ ಎಲುಬುಗಳಿಗೆ ತಿರುಗಿ ಜೀವ ಬಂದೀತೋ?”
ಅದಕ್ಕೆ ನಾನು, “ನನ್ನ ಒಡೆಯನಾದ ಯೆಹೋವನೇ, ನೀನೇ ಬಲ್ಲೆ. ಈ ಪ್ರಶ್ನೆಗೆ ಉತ್ತರ ನಿನಗೇ ಗೊತ್ತಿದೆ” ಎಂದು ಉತ್ತರಿಸಿದೆನು.
4 ಆಗ ಯೆಹೋವನು, “ನನ್ನ ಪರವಾಗಿ ಆ ಎಲುಬುಗಳೊಂದಿಗೆ ಮಾತನಾಡು. ಅವುಗಳಿಗೆ ಹೀಗೆ ಹೇಳು: ‘ಒಣಗಿದ ಎಲುಬುಗಳೇ, ಯೆಹೋವನ ಮಾತನ್ನು ಕೇಳಿರಿ. 5 ನನ್ನ ಒಡೆಯನಾದ ಯೆಹೋವನು ಹೀಗೆ ಹೇಳಿದ್ದಾನೆ, ನಾನು ನಿಮಗೆ ಉಸಿರನ್ನು[a] ಬರುವಂತೆ ಮಾಡುವೆನು. ಆಗ ನೀವು ಜೀವಂತರಾಗುವಿರಿ. 6 ನಾನು ನಿಮ್ಮಲ್ಲಿ ಸ್ನಾಯುಗಳನ್ನೂ ನರಗಳನ್ನೂ ಬರಮಾಡುವೆನು. ಆಮೇಲೆ ನಿಮ್ಮನ್ನು ಚರ್ಮದಿಂದ ಹೊದಿಸುವೆನು. ಆಮೇಲೆ ನಿಮ್ಮಲ್ಲಿ ಶ್ವಾಸವನ್ನಿಟ್ಟು ನಿಮಗೆ ಜೀವ ಬರುವಂತೆ ಮಾಡುವೆನು. ಆಗ ನಾನು ಒಡೆಯನಾದ ಯೆಹೋವನು ಎಂದು ನೀವು ತಿಳಿದುಕೊಳ್ಳುವಿರಿ.’”
7 ನಾನು ಎಲುಬುಗಳೊಂದಿಗೆ ಯೆಹೋವನ ಪರವಾಗಿ ಮಾತನಾಡಿದೆನು. ನಾನು ಮಾತನಾಡುತ್ತಾ ಇರುವಾಗಲೇ ಒಂದು ದೊಡ್ಡ ಶಬ್ದವನ್ನು ಕೇಳಿದೆನು. ಎಲುಬುಗಳು ಅಲ್ಲಾಡತೊಡಗಿದವು ಮತ್ತು ಒಂದಕ್ಕೊಂದು ಜೋಡಿಸಲ್ಪಟ್ಟವು. 8 ನನ್ನ ಕಣ್ಣೆದುರಿನಲ್ಲೇ ಅವುಗಳಿಗೆ ಸ್ನಾಯುಗಳು, ನರಗಳು ಬಂದವು; ಮತ್ತು ಚರ್ವವು ಅವುಗಳನ್ನು ಮುಚ್ಚಿತು. ಆದರೆ ಆ ಶರೀರ ಚಲಿಸಲಿಲ್ಲ. ಯಾಕೆಂದರೆ ಅದರಲ್ಲಿ ಶ್ವಾಸವಿರಲಿಲ್ಲ.
9 ಆಗ ನನ್ನ ಒಡೆಯನಾದ ಯೆಹೋವನು ಹೇಳಿದ್ದೇನೆಂದರೆ, “ನನ್ನ ಪರವಾಗಿ ಗಾಳಿಯೊಂದಿಗೆ ಮಾತನಾಡು. ನರಪುತ್ರನೇ, ಗಾಳಿಯೊಂದಿಗೆ ಮಾತನಾಡು. ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ, ‘ಗಾಳಿಯೇ, ಎಲ್ಲಾ ದಿಕ್ಕುಗಳಿಂದ ಬಂದು ಈ ಸತ್ತ ಶರೀರಗಳ ಮೇಲೆ ಊದು. ಅವರ ಮೇಲೆ ಗಾಳಿ ಊದು. ಆಗ ಅವುಗಳಿಗೆ ಜೀವ ಬರುವದು.’”
10 ನಾನು ಯೆಹೋವನ ಪರವಾಗಿ ಗಾಳಿಗೆ ಆತನು ಹೇಳಿದಂತೆಯೇ ಹೇಳಿದೆನು. ಆಗ ನಿರ್ಜೀವ ದೇಹಗಳೊಳಗೆ ಶ್ವಾಸವು ಹೊಕ್ಕಿತು. ಅವುಗಳಿಗೆ ಜೀವಬಂದು ನಿಂತುಕೊಂಡವು. ಅಲ್ಲಿ ಅನೇಕ ಜನರಿದ್ದರು. ಒಂದು ದೊಡ್ಡ ಸೈನ್ಯದ ತರಹ ಜನಸಮೂಹವು ಅಲ್ಲಿತ್ತು.
11 ಆಗ ಒಡೆಯನಾದ ಯೆಹೋವನು ನನಗೆ ಹೇಳಿದ್ದೇನೆಂದರೆ, “ನರಪುತ್ರನೇ, ಈ ಎಲುಬುಗಳು ಇಸ್ರೇಲ್ ಜನಾಂಗ. ‘ನಮ್ಮ ಎಲುಬುಗಳು ಒಣಗಿಹೋಗಿವೆ. ನಮ್ಮ ನಿರೀಕ್ಷೆಯು ಮುಗಿದುಹೋಯಿತು. ನಾವು ಸಂಪೂರ್ಣವಾಗಿ ನಾಶವಾಗಿ ಹೋಗಿದ್ದೇವೆ’ ಎಂದು ಇಸ್ರೇಲರು ಹೇಳುತ್ತಾರೆ. 12 ಆದ್ದರಿಂದ ನನ್ನ ಪರವಾಗಿ ಅವರೊಂದಿಗೆ ಮಾತನಾಡು. ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆಂದು ಹೇಳು: ‘ನನ್ನ ಜನರೇ, ನಾನು ನಿಮ್ಮ ಸಮಾಧಿಗಳನ್ನು ತೆರೆದು ನಿಮ್ಮನ್ನು ಹೊರತಂದು ನಿಮ್ಮ ಸ್ವದೇಶವಾದ ಇಸ್ರೇಲಿಗೆ ನಿಮ್ಮನ್ನು ಬರಮಾಡುವೆನು. 13 ನನ್ನ ಜನರೇ, ನಿಮ್ಮನ್ನು ಸಮಾಧಿಯೊಳಗಿಂದ ಎಬ್ಬಿಸಿ ತರುವೆನು. ಆಗ ನಾನೇ ಯೆಹೋವನೆಂದು ನೀವು ತಿಳಿಯುವಿರಿ. 14 ನಾನು ನನ್ನ ಆತ್ಮವನ್ನು ನಿಮ್ಮಲ್ಲಿ ಇಡುವೆನು, ಆಗ ನೀವು ತಿರುಗಿ ಜೀವ ಹೊಂದುವಿರಿ. ಅನಂತರ ನಿಮ್ಮನ್ನು ನಿಮ್ಮ ಸ್ವದೇಶಕ್ಕೆ ಬರಮಾಡುವೆನು. ಆಗ ನಾನೇ ಯೆಹೋವನೆಂದು ನೀವು ತಿಳಿಯುವಿರಿ. ನಾನು ಹೇಳಿದ್ದೆಲ್ಲ ಸಂಭವಿಸುತ್ತದೆ ಎಂದು ಆಗ ನಿಮಗೆ ತಿಳಿದು ಬರುವದು.’” ಇದು ಯೆಹೋವನ ನುಡಿ.
ಯೆಹೂದ ಮತ್ತು ಇಸ್ರೇಲ್ ಒಂದಾಗುವದು
15 ಯೆಹೋವನ ಸಂದೇಶವು ನನಗೆ ತಿರುಗಿ ಬಂತು. ಆತನು ಹೇಳಿದ್ದೇನೆಂದರೆ: 16 “ನರಪುತ್ರನೇ, ಒಂದು ದಂಡವನ್ನು ತೆಗೆದುಕೊಂಡು ಅದರ ಮೇಲೆ, ‘ಈ ದಂಡವು ಯೆಹೂದನಿಗೂ ಅವನ ಸ್ನೇಹಿತರಾದ ಇಸ್ರೇಲರಿಗೂ ಸೇರಿದ್ದು’ ಎಂದು ಬರೆ. ಆಮೇಲೆ ಇನ್ನೊಂದು ದಂಡವನ್ನು ತೆಗೆದುಕೊಂಡು ಅದರ ಮೇಲೆ, ‘ಎಫ್ರಾಯಿಮನ ಈ ದಂಡವು ಯೋಸೇಫನಿಗೂ ಅವನ ಸ್ನೇಹಿತರಾದ ಇಸ್ರೇಲರಿಗೂ ಸೇರಿದ್ದು’ ಎಂದು ಬರೆ. 17 ಆಮೇಲೆ ಆ ಎರಡೂ ದಂಡಗಳನ್ನು ನಿನ್ನ ಕೈಯಲ್ಲಿ ಕೂಡಿಸು. ಆಗ ಅದು ಒಂದೇ ದಂಡವಾಗುವದು.
18 “ನಿನ್ನ ಜನರು ಅದು ಏನು ಎಂದು ವಿವರಿಸಲು ಹೇಳುವರು. 19 ಅವರಿಗೆ ಹೀಗೆ ಹೇಳು: ಒಡೆಯನಾದ ಯೆಹೋವನು ಹೇಳುವುದೇನೆಂದರೆ, ‘ನಾನು ಯೋಸೇಫನ ದಂಡವನ್ನು ಎಫ್ರಾಯೀಮ್ ಮತ್ತು ಅವನ ಸ್ನೇಹಿತರಾದ ಇಸ್ರೇಲರ ಕೈಯಿಂದ ತೆಗೆದುಕೊಂಡು ಅದನ್ನು ಯೆಹೂದದ ದಂಡದೊಂದಿಗೆ ಇಟ್ಟು ಒಂದೇ ದಂಡವಾಗುವಂತೆ ಮಾಡುವೆನು. ಅವು ನನ್ನ ಕೈಯಲ್ಲಿ ಒಂದೇ ದಂಡವಾಗುತ್ತವೆ.’
20 “ಆ ದಂಡಗಳನ್ನು ಕೈಯಲ್ಲಿ ಹಿಡಿದುಕೊಂಡು ನಿನ್ನೆದುರಿಗೆ ಚಾಚು. ನೀನು ಅವುಗಳ ಮೇಲೆ ಹೆಸರು ಬರೆದಿರುವೆ. 21 ಯೆಹೋವನು ಹೀಗೆ ಹೇಳುತ್ತಾನೆ ಎಂದು ಆ ಜನರಿಗೆ ಹೇಳು: ‘ನಾನು ಇಸ್ರೇಲ್ ಜನರನ್ನು ಅವರು ಚದರಿದ ದೇಶಗಳಿಂದಲೂ ಸುತ್ತಲಿರುವ ದೇಶಗಳಿಂದಲೂ ಅವರನ್ನು ಒಟ್ಟುಗೂಡಿಸಿ ಅವರ ಸ್ವದೇಶಕ್ಕೆ ತರುವೆನು. 22 ಇಸ್ರೇಲಿನ ಪರ್ವತ ರಾಜ್ಯದಲ್ಲಿ ಅವರನ್ನು ಒಂದು ಜನಾಂಗವನ್ನಾಗಿ ಮಾಡುವೆನು. ಅವರೆಲ್ಲರಿಗೂ ಒಬ್ಬನೇ ರಾಜನಿರುವನು. ಅವರು ಇನ್ನು ಮುಂದೆ ಎರಡು ರಾಜ್ಯಗಳಾಗುವದಿಲ್ಲ. 23 ಅವರು ಇನ್ನು ಮೇಲೆ ವಿಗ್ರಹಗಳಿಂದ ತಮ್ಮನ್ನು ಹೊಲೆ ಮಾಡಿಕೊಳ್ಳುವದಿಲ್ಲ. ಅವರು ಪಾಪಮಾಡಿ ಸಿಕ್ಕಿಬಿದ್ದ ದೇವದ್ರೋಹದಿಂದೆಲ್ಲಾ ನಾನು ಅವರನ್ನು ಉದ್ಧರಿಸುವೆನು. ನಾನು ಅವರನ್ನು ತೊಳೆದು ಶುದ್ಧಮಾಡುವೆನು. ಅವರು ನನ್ನ ಜನರಾಗಿರುವರು. ನಾನು ಅವರ ದೇವರಾಗಿರುವೆನು.
24 “‘ನನ್ನ ಸೇವಕನಾದ ದಾವೀದನು ಅವರ ರಾಜನಾಗುವನು. ಅವರೆಲ್ಲರಿಗೆ ಒಬ್ಬನೇ ಕುರುಬನಿರುವನು. ನಾನು ಹೇಳಿದ ಮಾತುಗಳಿಗೆ ಅವರು ವಿಧೇಯರಾಗುವರು; ನನ್ನ ಕಟ್ಟಳೆ ನಿಯಮಗಳಲ್ಲಿ ಅವರು ಬಾಳುವರು. 25 ನಾನು ನನ್ನ ಸೇವಕನಾದ ಯಾಕೋಬನಿಗೆ ಕೊಟ್ಟಿರುವ ದೇಶದಲ್ಲಿ ಅವರು ವಾಸಿಸುವರು. ನಿಮ್ಮ ಪೂರ್ವಿಕರು ಆ ಪ್ರಾಂತ್ಯದಲ್ಲಿ ವಾಸವಾಗಿದ್ದರು. ನನ್ನ ಜನರು ಅಲ್ಲಿಯೇ ವಾಸಮಾಡುವರು. ಅವರೂ ಅವರ ಮಕ್ಕಳೂ ಮೊಮ್ಮಕ್ಕಳೂ ಅಲ್ಲಿ ನಿತ್ಯಕಾಲಕ್ಕೂ ಜೀವಿಸುವರು. ನನ್ನ ಸೇವಕನಾದ ದಾವೀದನು ಅವರ ನಿತ್ಯಕಾಲದ ರಾಜನು. 26 ನಾನು ಸಮಾಧಾನದ ಒಡಂಬಡಿಕೆಯನ್ನು ಅವರ ಜೊತೆ ಮಾಡುವೆನು. ಇದು ನಿರಂತರದ ಒಡಂಬಡಿಕೆಯಾಗಿರುವದು. ನಾನು ಅವರ ಸ್ವದೇಶವನ್ನು ಹಿಂತಿರುಗಿಸಿ ಕೊಡುವೆನು. ಅವರನ್ನು ಅಭಿವೃದ್ಧಿಪಡಿಸಿ ಹೆಚ್ಚಿಸುವೆನು ಮತ್ತು ಅವರ ಮಧ್ಯೆ ನನ್ನ ಪವಿತ್ರ ಸ್ಥಳವನ್ನು ಇರಿಸುವೆನು. ಇದು ನಿರಂತರವಾದ ಒಡಂಬಡಿಕೆ. 27 ನನ್ನ ಪವಿತ್ರಗುಡಾರ ಅವರೊಂದಿಗಿರುವದು. ಹೌದು, ಅವರು ನನ್ನ ಜನರಾಗಿರುವರು. ನಾನು ಅವರ ದೇವರಾಗಿರುವೆನು. 28 ಇತರ ದೇಶಗಳವರು ನಾನು ಯೆಹೋವನೆಂದು ತಿಳಿಯುವರು. ಇಸ್ರೇಲರನ್ನು ನನ್ನ ವಿಶೇಷ ಜನರೆಂದು ಅವರಿಗೆ ತಿಳಿದುಬರುವದು. ಯಾಕೆಂದರೆ ಅವರ ಮಧ್ಯೆ ನನ್ನ ಪರಿಶುದ್ಧ ಸ್ಥಾನವನ್ನು ನಿರಂತರಕ್ಕೂ ಇರಿಸುವೆನು.’”
Footnotes
- 37:5 ಉಸಿರು ಅಥವಾ ಆತ್ಮ.
Kannada Holy Bible: Easy-to-Read Version. All rights reserved. © 1997 Bible League International