ಯೆಹೋಶುವನು 16
Kannada Holy Bible: Easy-to-Read Version
ಎಫ್ರಾಯೀಮ್ ಮತ್ತು ಮನಸ್ಸೆ ಕುಲದವರಿಗೆ ಸ್ವಾಸ್ತ್ಯಗಳು
16 ಯೋಸೇಫನ ಕುಟುಂಬದವರು ಈ ಸ್ವಾಸ್ತ್ಯವನ್ನು ಪಡೆದುಕೊಂಡರು. ಅವರ ಸ್ವಾಸ್ತ್ಯವು ಜೋರ್ಡನ್ ನದಿಯಿಂದ (ಜೆರಿಕೊ ಹತ್ತಿರ) ಆರಂಭವಾಗಿ ಜೆರಿಕೊವಿನ ಹಳ್ಳಗಳ ಉದ್ದಕ್ಕೂ ಮುಂದುವರೆದಿದೆ. (ಇದು ಜೆರಿಕೊವಿನ ಪೂರ್ವದಲ್ಲಿದೆ.) ಆ ಸೀಮೆಯು ಜೆರಿಕೊವಿನಿಂದ ಬೇತೇಲಿನ ಬೆಟ್ಟಪ್ರದೇಶಕ್ಕೆ ಮುಂದುವರೆಯುತ್ತದೆ. 2 ಲೂಜ್ ಎಂದು ಕರೆಯುವ ಬೇತೇಲಿನಿಂದ ಅಟಾರೋತಿನಲ್ಲಿ ಅರ್ಕೀಯರ ಸೀಮೆಗೆ ಹೋಗುತ್ತದೆ. 3 ಅಲ್ಲಿಂದ ಪಶ್ಚಿಮದಿಕ್ಕಿನಲ್ಲಿರುವ ಯಪ್ಲೇಟ್ಯರ ಪ್ರಾಂತ್ಯದ ಸೀಮೆಗೆ ಮುಟ್ಟಿ ಅಲ್ಲಿಂದ ಕೆಳಗಿನ ಬೇತ್‌ಹೋರೋನ್ ಕಡೆಗೆ ಮುಂದುವರೆಯುತ್ತದೆ. ಅಲ್ಲಿಂದ ಗೆಜೆರಿಗೆ ಹೋಗಿ ಮೆಡಿಟರೆನಿಯನ್ ಸಮುದ್ರದತ್ತ ಮುಂದುವರೆಯುತ್ತದೆ.
4 ಯೋಸೇಫನ ಮಕ್ಕಳಾದ ಮನಸ್ಸೆ ಕುಲದವರು ಮತ್ತು ಎಫ್ರಾಯೀಮ್ ಕುಲದವರು ತಮ್ಮ ಪಾಲಿನ ಸ್ವಾಸ್ತ್ಯವನ್ನು ಪಡೆದರು.
5 ಎಫ್ರಾಯೀಮ್ ಕುಲದವರಿಗೆ ಕೊಟ್ಟ ಸ್ವಾಸ್ತ್ಯವು ಇಂತಿದೆ: ಅವರ ಸ್ವಾಸ್ತ್ಯದ ಪೂರ್ವದಿಕ್ಕಿನ ಸೀಮೆಯು ಮೇಲಿನ ಬೇತ್‌ಹೋರೋನಿನ ಹತ್ತಿರ ಇದ್ದ ಅಟಾರೋತದ್ದಾರಿನಿಂದ ಆರಂಭವಾಗುತ್ತದೆ. 6 ಅದರ ಪಶ್ಚಿಮದಿಕ್ಕಿನ ಸೀಮೆಯು ಮಿಕ್ಮೆತಾತ್‌ನಿಂದ ಆರಂಭವಾಗಿ ಪೂರ್ವದ ಕಡೆಗೆ ತಿರುಗಿಕೊಂಡು ತಾನತ್ ಶೀಲೋ ಎಂಬಲ್ಲಿಗೆ ಹೋಗಿ ಯಾನೋಹ ಊರಿನ ಪೂರ್ವದಿಕ್ಕಿನಲ್ಲಿ ಮುಂದುವರಿಯುತ್ತದೆ. 7 ಅಲ್ಲಿಂದ ಆ ಸೀಮೆಯು ಯಾನೋಹ ಮಾರ್ಗವಾಗಿ ಅಟಾರೋತ್, ನಾರಾ ಎಂಬ ಊರುಗಳ ಮೇಲೆ ಇಳಿಯುತ್ತದೆ. ಆ ಸೀಮೆಯು ಜೆರಿಕೊವಿನವರೆಗೆ ಮುನ್ನಡೆದು ಜೋರ್ಡನ್ ನದಿಯ ಹತ್ತಿರ ಮುಗಿಯುತ್ತದೆ. 8 ಆ ಮೇರೆಯು ತಪ್ಪೂಹದಿಂದ ಪಶ್ಚಿಮದ ಕಡೆಗೆ ಹೋಗುವ ಕಾನಾ ನದಿಗೆ ಹೋಗಿ ಸಮುದ್ರದಲ್ಲಿ ಕೊನೆಗೊಳ್ಳುತ್ತದೆ. ಈ ಪ್ರದೇಶವನ್ನು ಎಫ್ರಾಯೀಮ್ ಕುಲದವರಿಗೆ ಅವರ ಕುಟುಂಬಗಳಿಗನುಸಾರವಾಗಿ ಕೊಡಲಾಗಿತ್ತು. 9 ಎಫ್ರಾಯೀಮಿನ ಹಲವಾರು ಗಡಿಯ ಗ್ರಾಮಗಳು ಮನಸ್ಸೆ ಕುಲದವರ ಪ್ರದೇಶದೊಳಗೆ ಸೇರಿಕೊಂಡಿದ್ದವು. ಆದರೂ ಎಫ್ರಾಯೀಮ್ ಜನರು ಆ ಊರುಗಳನ್ನು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳನ್ನು ತಮ್ಮ ಸ್ವತ್ತಾಗಿ ಮಾಡಿಕೊಂಡಿದ್ದರು. 10 ಆದರೆ ಎಫ್ರಾಯೀಮಿನ ಜನರಿಗೆ ಗೆಜೆರಿನಲ್ಲಿದ್ದ ಕಾನಾನ್ಯರನ್ನು ಅಲ್ಲಿಂದ ಹೊರದೂಡುವುದು ಸಾಧ್ಯವಾಗಲಿಲ್ಲ. ಅದಕ್ಕಾಗಿ ಇಂದಿಗೂ ಕಾನಾನ್ಯರು ಎಫ್ರಾಯೀಮ್ ಜನರೊಂದಿಗೆ ಇರುತ್ತಾರೆ. ಆದರೆ ಕಾನಾನ್ಯರು ಎಫ್ರಾಯೀಮ್ ಜನರ ದಾಸರಾಗಿದ್ದಾರೆ.
Kannada Holy Bible: Easy-to-Read Version. All rights reserved. © 1997 Bible League International