ಯೆಹೋಶುವನು 18
Kannada Holy Bible: Easy-to-Read Version
ಉಳಿದ ಭೂಮಿಯ ಹಂಚುವಿಕೆ
18 ಇಸ್ರೇಲರೆಲ್ಲರು ಶೀಲೋವಿನಲ್ಲಿ ಒಟ್ಟಾಗಿ ಸೇರಿದರು. ಆ ಸ್ಥಳದಲ್ಲಿ ಅವರು ದೇವದರ್ಶನ ಗುಡಾರವನ್ನು ನಿಲ್ಲಿಸಿದರು. ಇಸ್ರೇಲರು ಆ ದೇಶವನ್ನು ಸ್ವಾಧೀನ ಮಾಡಿಕೊಂಡಿದ್ದರು. ಅವರು ಆ ದೇಶದ ಎಲ್ಲ ಶತ್ರುಗಳನ್ನು ಸೋಲಿಸಿದ್ದರು. 2 ಆದರೂ ದೇವರು ವಾಗ್ದಾನ ಮಾಡಿದ ಭೂಮಿಯನ್ನು ಇಸ್ರೇಲರ ಏಳು ಕುಲಗಳು ಇನ್ನೂ ಪಡೆದಿರಲಿಲ್ಲ.
3 ಆದ್ದರಿಂದ ಯೆಹೋಶುವನು ಇಸ್ರೇಲರಿಗೆ, “ನೀವು ನಿಮ್ಮ ಭೂಮಿಯನ್ನು ಪಡೆದುಕೊಳ್ಳಲು ಅಷ್ಟು ದೀರ್ಘಕಾಲದವರೆಗೆ ಏಕೆ ಕಾಯುತ್ತೀರಿ? ನಿಮ್ಮ ಪೂರ್ವಿಕರ ದೇವರಾದ ಯೆಹೋವನು ಈ ಭೂಮಿಯನ್ನು ನಿಮಗೆ ಕೊಟ್ಟಿದ್ದಾನೆ. 4 ಆದ್ದರಿಂದ ಪ್ರತಿಯೊಂದು ಕುಲದಿಂದ ಮೂರು ಮೂರು ಜನರನ್ನು ಆರಿಸಬೇಕು. ಭೂಮಿಯನ್ನು ಪರಿಶೀಲಿಸಲು ನಾನು ಅವರನ್ನು ಕಳುಹಿಸುತ್ತೇನೆ. ಅವರು ಭೂಮಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅದರ ನಕ್ಷೆಯನ್ನು ಮಾಡಿ ನನ್ನ ಬಳಿಗೆ ತೆಗೆದುಕೊಂಡು ಬರಲಿ. 5 ಅವರು ಆ ಭೂಮಿಯನ್ನು ಏಳು ಭಾಗಗಳಾಗಿ ವಿಂಗಡಿಸಲಿ. ಯೆಹೂದದ ಜನರು ದಕ್ಷಿಣದಲ್ಲಿ ತಮ್ಮ ಭೂಮಿಯನ್ನು ಇಟ್ಟುಕೊಳ್ಳಲಿ. ಯೋಸೇಫನ ಜನರು ಉತ್ತರದಲ್ಲಿ ತಮ್ಮ ಭೂಮಿಯನ್ನು ಇಟ್ಟುಕೊಳ್ಳಲಿ. 6 ಆದರೆ ನೀವು ಒಂದು ನಕ್ಷೆಯನ್ನು ಮಾಡಿ ಭೂಮಿಯನ್ನು ಏಳು ಭಾಗಗಳಾಗಿ ವಿಂಗಡಿಸಬೇಕು. ಆ ನಕ್ಷೆಯನ್ನು ನನ್ನ ಬಳಿಗೆ ತೆಗೆದುಕೊಂಡು ಬನ್ನಿ. ಯಾವ ಕುಲದವರು ಯಾವ ಭೂಮಿಯನ್ನು ತೆಗೆದುಕೊಳ್ಳಬೇಕೆಂಬುದನ್ನು ನಮ್ಮ ದೇವರಾದ ಯೆಹೋವನು ನಿರ್ಣಯಿಸಲಿ. 7 ಲೇವಿಯ ಕುಲದವರಿಗೆ ಭೂಮಿಯಲ್ಲಿ ಪಾಲು ದೊರೆಯುವುದಿಲ್ಲ. ಯಾಜಕರಾಗಿ ಯೆಹೋವನ ಸೇವೆ ಮಾಡುವುದೇ ಅವರ ಪಾಲು. ಗಾದ್ಯರು, ರೂಬೇನ್ಯರು ಮತ್ತು ಮನಸ್ಸೆ ಕುಲದ ಅರ್ಧಜನರು ವಾಗ್ದಾನ ಮಾಡಲಾದ ಭೂಮಿಯನ್ನು ಈಗಾಗಲೇ ಪಡೆದುಕೊಂಡಿದ್ದಾರೆ. ಅವರು ಜೋರ್ಡನ್ ನದಿಯ ಪೂರ್ವದಿಕ್ಕಿನಲ್ಲಿದ್ದಾರೆ. ಯೆಹೋವನ ಸೇವಕನಾದ ಮೋಶೆಯು ಈಗಾಗಲೇ ಆ ಭೂಮಿಯನ್ನು ಅವರಿಗೆ ಕೊಟ್ಟಿದ್ದಾನೆ” ಎಂದನು.
8 ಆದ್ದರಿಂದ ಭೂಮಿಯನ್ನು ಪರಿಶೀಲಿಸಲು ಆರಿಸಲ್ಪಟ್ಟ ಜನರಿಗೆ ಯೆಹೋಶುವನು, “ಹೋಗಿ, ಭೂಮಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿರಿ; ಅದರ ನಕ್ಷೆಗಳನ್ನು ತೆಗೆಯಿರಿ. ಆಮೇಲೆ ಶೀಲೋವಿನಲ್ಲಿ ನಾನಿರುವ ಸ್ಥಳಕ್ಕೆ ಬನ್ನಿ. ಆಗ ನಾನು ಚೀಟುಹಾಕುತ್ತೇನೆ. ಯೆಹೋವನು ನಿಮ್ಮ ಪಾಲುಗಳನ್ನು ಕೊಡಲಿ” ಅಂದನು.
9 ಅಂತೆಯೇ ಅವರು ಹೋಗಿ ಭೂಮಿಯನ್ನು ಚೆನ್ನಾಗಿ ಪರಿಶೀಲಿಸಿದರು; ಯೆಹೋಶುವನಿಗಾಗಿ ನಕ್ಷೆಗಳನ್ನು ತೆಗೆದರು. ಅವರು ಪ್ರತಿಯೊಂದು ಹಳ್ಳಿಯನ್ನು ಪರಿಶೀಲಿಸಿದರು. ಭೂಮಿಯನ್ನು ಏಳು ಭಾಗಗಳಾಗಿ ವಿಂಗಡಿಸಿದರು. ಅವರು ನಕ್ಷೆಗಳನ್ನು ತೆಗೆದು ಯೆಹೋಶುವನ ಬಳಿಗೆ ಶೀಲೋವಿಗೆ ಹಿಂತಿರುಗಿ ಹೋದರು. 10 ಯೆಹೋಶುವನು ಅವರಿಗಾಗಿ ಶೀಲೋವಿನಲ್ಲಿ ಯೆಹೋವನ ಮುಂದೆ ಚೀಟುಹಾಕಿದನು. ಹೀಗೆ ಯೆಹೋಶುವನು ಭೂಮಿಯನ್ನು ಹಂಚಿದನು; ಪ್ರತಿಯೊಂದು ಕುಲಕ್ಕೆ ಅದರ ಭೂಭಾಗವನ್ನು ಕೊಟ್ಟನು.
ಬೆನ್ಯಾಮೀನ್ ಕುಲದವರಿಗೆ ಭೂಮಿ
11 ಬೆನ್ಯಾಮೀನ್ ಕುಲದವರಿಗೆ ಯೆಹೂದ್ಯರ ಮತ್ತು ಯೋಸೇಫ್ಯರ ಪ್ರಾಂತ್ಯಗಳ ಮಧ್ಯದಲ್ಲಿರುವ ಭೂಮಿಯನ್ನು ಕೊಡಲಾಯಿತು. ಬೆನ್ಯಾಮೀನ್ ಕುಲದ ಪ್ರತಿಯೊಂದು ಗೋತ್ರವು ತಮ್ಮ ಭೂಮಿಯನ್ನು ಪಡೆದುಕೊಂಡಿತು. ಇದು ಬೆನ್ಯಾಮೀನ್ ಕುಲದವರಿಗೆ ಆರಿಸಲ್ಪಟ್ಟ ಭೂಮಿಯಾಗಿತ್ತು. 12 ಅದರ ಉತ್ತರದಿಕ್ಕಿನ ಮೇರೆಯು ಜೋರ್ಡನ್ ನದಿಯಿಂದ ಆರಂಭವಾಗುತ್ತದೆ. ಅದು ಜೆರಿಕೊವಿನ ಉತ್ತರ ಅಂಚಿನೊಂದಿಗೆ ಹೊರಟು ಪಶ್ಚಿಮದ ಬೆಟ್ಟಪ್ರದೇಶದೊಳಗೆ ಹೋಗುತ್ತದೆ. ಆ ಸೀಮೆಯು ಬೇತಾವೆನಿನ ಪೂರ್ವದಿಕ್ಕಿಗೆ ಅತಿಸಮೀಪದಲ್ಲಿ ಮುಂದುವರೆದು 13 ದಕ್ಷಿಣದಲ್ಲಿರುವ ಬೇತೇಲ್ ಎಂಬ ಲೂಜಿಗೆ ಹೋಗುತ್ತದೆ. ಅಲ್ಲಿಂದ ಇಳಿದು ಅಟಾರೋತದ್ದಾರ್‌ಗೆ ಹೋಗುತ್ತದೆ. ಅಟಾರೋತದ್ದಾರ್ ಕೆಳಗಿನ ಬೇತ್‌ಹೋರೋನಿನ ದಕ್ಷಿಣದಲ್ಲಿರುವ ಬೆಟ್ಟದ ಮೇಲೆ ಇದೆ. 14 ಬೇತ್‌ಹೋರೋನಿನ ದಕ್ಷಿಣದಲ್ಲಿರುವ ಬೆಟ್ಟದಿಂದ ಆ ಸೀಮೆಯು ದಕ್ಷಿಣಕ್ಕೆ ತಿರುಗಿಕೊಂಡು ಆ ಬೆಟ್ಟದ ಪಶ್ಚಿಮಭಾಗದ ಜೊತೆಗೆ ಮುಂದುವರೆಯುತ್ತದೆ. ಆ ಸೀಮೆಯು ಕಿರ್ಯತ್ಯಾರೀಮ್ ಎಂಬ ಕಿರ್ಯತ್‌ಬಾಳ್‌ಗೆ ಹೋಗುತ್ತದೆ. ಈ ಪಟ್ಟಣವು ಯೆಹೂದ್ಯರಿಗೆ ಸೇರಿದ್ದು. ಇದು ಪಶ್ಚಿಮದಿಕ್ಕಿನ ಸೀಮೆಯಾಗಿತ್ತು.
15 ದಕ್ಷಿಣದಿಕ್ಕಿನ ಮೇರೆಯು ಕಿರ್ಯತ್ಯಾರೀಮಿನ ಹತ್ತಿರದಿಂದ ಪ್ರಾರಂಭವಾಗಿ ನೆಪ್ತೋಹ ನದಿಯವರೆಗೆ ಹೋಗುತ್ತದೆ. 16 ಅಲ್ಲಿಂದ ಆ ಮೇರೆಯು ರೆಫಾಯಿಮ್ ತಗ್ಗಿನ ಉತ್ತರದಲ್ಲಿರುವ ಬೆನ್‌ಹಿನ್ನೋಮ್ ತಗ್ಗಿನ ಹತ್ತಿರ ಆ ಬೆಟ್ಟದ ಬುಡಕ್ಕೆ ಇಳಿಯುತ್ತದೆ. ಆ ಮೇರೆಯು ಹಿನ್ನೋಮ್ ತಗ್ಗಿನಿಂದ ಯೆಬೂಸಿಯ ಪಟ್ಟಣದ ದಕ್ಷಿಣದವರೆಗೆ ಮುಂದುವರೆಯುತ್ತದೆ. ಅಲ್ಲಿಂದ ಅದು ಏನ್‌ರೋಗೆಲಿಗೆ ಬರುತ್ತದೆ. 17 ಅಲ್ಲಿಂದ ಆ ಸೀಮೆಯು ಉತ್ತರಕ್ಕೆ ತಿರುಗಿ ಏನ್‌ಷೆಮೆಸ್‌ಗೆ ಹೋಗುತ್ತದೆ. ಅದು ಗೆಲೀಲೋತದವರೆಗೆ ಮುಂದುವರೆಯುತ್ತದೆ. (ಬೆಟ್ಟಗಳಲ್ಲಿರುವ ಅದುಮ್ಮೀಮ್ ಎಂಬ ಇಕ್ಕಟ್ಟಾದ ಮಾರ್ಗದ ಸಮೀಪದಲ್ಲಿದೆ ಗೆಲೀಲೋತ್.) ಆ ಸೀಮೆಯು ರೂಬೇನನ ಮಗನಾದ ಬೋಹನನ ಹೆಸರಿನ ಮಹಾಬಂಡೆಗೆ ಹೋಗುತ್ತದೆ. 18 ಆ ಸೀಮೆಯು ಬೇತ್‌ಅರಾಬ ಉತ್ತರಭಾಗಕ್ಕೆ ಮುಂದುವರೆದು ಅಲ್ಲಿಂದ ಅದು ಜೋರ್ಡನ್ ಕಣಿವೆಗೆ ಇಳಿಯುತ್ತದೆ. 19 ಅಲ್ಲಿಂದ ಆ ಮೇರೆಯು ಬೇತ್‌ಹೊಗ್ಲಾವಿನ ಉತ್ತರಭಾಗದಲ್ಲಿ ಮುಂದುವರೆದು ಲವಣಸಮುದ್ರದ ಉತ್ತರ ದಡದಲ್ಲಿ ಮುಕ್ತಾಯಗೊಳ್ಳುತ್ತದೆ. ಜೋರ್ಡನ್ ನದಿಯು ಸಮುದ್ರಕ್ಕೆ ಸೇರುವುದು ಇಲ್ಲಿಯೇ. ಇದು ದಕ್ಷಿಣದಿಕ್ಕಿನ ಸೀಮೆ.
20 ಜೋರ್ಡನ್ ನದಿಯು ಅವರ ಪೂರ್ವದಿಕ್ಕಿನ ಮೇರೆ. ಬೆನ್ಯಾಮೀನ್ ಗೋತ್ರಗಳ ಸ್ವಾಸ್ತ್ಯದ ಸುತ್ತಲಿನ ಮೇರೆಯು ಇದೇ. 21 ಬೆನ್ಯಾಮೀನ್ ಗೋತ್ರಗಳಿಗೆ ದೊರಕಿದ ಪಟ್ಟಣಗಳು: ಜೆರಿಕೊ, ಬೇತ್‌ಹೊಗ್ಲಾ, ಏಮೆಕ್ಕೆಚ್ಚೀಚ್, 22 ಬೇತ್‌ಅರಾಬಾ, ಚೆಮಾರಯಿಮ್, ಬೇತೇಲ್, 23 ಅವ್ವೀಮ್, ಪಾರಾ, ಒಫ್ರಾ, 24 ಅಮ್ಮೋನ್ಯ, ಕೆಫೆರ್, ಒಫ್ನೀ ಮತ್ತು ಗೆಬಾ ಎಂಬ ಹನ್ನೆರಡು ನಗರಗಳು ಮತ್ತು ಅವುಗಳ ಸುತ್ತಮುತ್ತಲಿನ ಎಲ್ಲ ಹೊಲಗದ್ದೆಗಳು.
25 ಬೆನ್ಯಾಮೀನ್ ಗೋತ್ರದವರು ಹದಿನಾಲ್ಕು ಊರುಗಳನ್ನು ಮತ್ತು ಅವುಗಳ ಸುತ್ತಮುತ್ತಲಿನ ಎಲ್ಲಾ ಹೊಲಗದ್ದೆಗಳನ್ನು ಪಡೆದುಕೊಂಡರು. ಆ ಊರುಗಳು ಇಂತಿವೆ: ಗಿಬ್ಯೋನ್, ರಾಮಾ, ಬೇರೋತ್, 26 ಮಿಚ್ಪೆ, ಕೆಫೀರಾ, ಮೋಚಾ, 27 ರೆಕೆಮ್, ಇರ್ಫೇಲ್, ತರಲಾ, 28 ಚೇಲ, ಎಲೆಫ್, ಜೆರುಸಲೇಮ್ ಎಂದು ಕರೆಯಲ್ಪಡುವ ಯೆಬೂಸಿಯರ ಪಟ್ಟಣ, ಗಿಬೆಯತ್ ಮತ್ತು ಕಿರ್ಯತ್. ಬೆನ್ಯಾಮೀನ್ ಗೋತ್ರಗಳವರು ಈ ಪ್ರದೇಶಗಳನ್ನೆಲ್ಲ ಪಡೆದುಕೊಂಡರು.
Kannada Holy Bible: Easy-to-Read Version. All rights reserved. © 1997 Bible League International