ಯೋಬನು 10
Kannada Holy Bible: Easy-to-Read Version
10 ಯೋಬನು ತನ್ನ ಮಾತನ್ನು ಮುಂದುವರಿಸಿದನು:
“ನನ್ನ ಜೀವಿತವೇ ನನಗೆ ಅಸಹ್ಯವಾಗಿದೆ.
ಹೃದಯ ಬಿಚ್ಚಿ ಮೊರೆಯಿಡುವೆನು; ಮನೋವ್ಯಥೆಯಿಂದ ನುಡಿಯುವೆನು.
2 ನಾನು ದೇವರಿಗೆ ಹೀಗೆ ಹೇಳುತ್ತೇನೆ: ‘ನನ್ನನ್ನು ಖಂಡಿಸದೆ ಹೇಳು! ನಾನೇನು ತಪ್ಪುಮಾಡಿರುವೆ?
ನನಗೆ ವಿರೋಧವಾಗಿ ನಿನ್ನಲ್ಲಿರುವ ದೂರುಗಳೇನು?
3 ದೇವರೇ, ನನ್ನನ್ನು ನೋಯಿಸುವುದು ನಿನಗೆ ಸಂತೋಷವೇ?
ನಿನ್ನ ಸೃಷ್ಟಿಯ ಬಗ್ಗೆ ನೀನು ಚಿಂತಿಸದಂತೆ ತೋರುತ್ತಿದೆ.
ದುಷ್ಟರ ಆಲೋಚನೆಗಳಲ್ಲಿ ನಿನಗೆ ಸಂತೋಷವೇ?
4 ದೇವರೇ, ನಿನಗೆ ಮನುಷ್ಯರ ಕಣ್ಣುಗಳಿವೆಯೋ?
ಮನುಷ್ಯರು ನೋಡುವಂತೆ ನೀನು ನೋಡುವಿಯೋ?
5 ನಿನ್ನ ಜೀವಿತದ ದಿನಗಳು ನಮ್ಮಂತೆ ಕೊಂಚವಲ್ಲ.
ನಿನ್ನ ವರ್ಷಗಳು ಮನುಷ್ಯನ ವರ್ಷಗಳಂತೆ ಕೊಂಚವಲ್ಲ.
6 ನೀನು ನನ್ನ ತಪ್ಪಿಗಾಗಿ ನೋಡುವೆ;
ನನ್ನ ಪಾಪಕ್ಕಾಗಿ ಅವಸರದಿಂದ ಹುಡುಕುವೆ.
7 ಆದರೆ ನಾನು ನಿರಪರಾಧಿಯೆಂದು ನಿನಗೆ ಗೊತ್ತದೆ.
ಆದರೆ ಯಾರೂ ನನ್ನನ್ನು ನಿನ್ನ ಶಕ್ತಿಯಿಂದ ಬಿಡಿಸಲಾರರು!
8 ನನ್ನನ್ನು ಸೃಷ್ಟಿಸಿದ್ದೂ ನನ್ನ ದೇಹವನ್ನು ರೂಪಿಸಿದ್ದೂ ನಿನ್ನ ಕೈಗಳೇ.
ಈಗ ಮನಸ್ಸು ಬೇರೆಮಾಡಿಕೊಂಡು ನೀನು ನನ್ನನ್ನು ನಾಶಮಾಡುತ್ತಿರುವೆ!
9 ದೇವರೇ, ನೀನು ನನ್ನನ್ನು ಜೇಡಿಮಣ್ಣಿನಂತೆ ಮಾಡಿರುವೆ ಎಂಬುದನ್ನು ಜ್ಞಾಪಿಸಿಕೋ.
ಈಗ ನನ್ನನ್ನು ಮತ್ತೆ ಧೂಳನ್ನಾಗಿ ಯಾಕೆ ಮಾರ್ಪಡಿಸುತ್ತಿರುವೆ?
10 ನೀನು ನನ್ನನ್ನು ಹಾಲಿನಂತೆ ಸುರಿದುಬಿಟ್ಟಿರುವೆ;
ಬೆಣ್ಣೆ ಮಾಡುವವನಂತೆ ನನ್ನನ್ನು ಕಡೆದು ಮಾರ್ಪಡಿಸಿರುವೆ.[a]
11 ನೀನು ನನ್ನನ್ನು ಎಲುಬುಗಳಿಂದಲೂ ನರಗಳಿಂದಲೂ ಹೆಣೆದು
ಮಾಂಸಚರ್ಮಗಳಿಂದ ಹೊದಿಸಿರುವೆ.
12 ನೀನು ನನಗೆ ಜೀವವನ್ನು ಕೊಟ್ಟು ದಯೆತೋರಿರುವೆ.
ನೀನು ನನ್ನನ್ನು ಪರಿಪಾಲಿಸಿ ನನ್ನ ಆತ್ಮವನ್ನು ಕಾಪಾಡಿದೆ.
13 ಆದರೆ ನಿನ್ನ ಹೃದಯದಲ್ಲಿ ಮರೆಮಾಡಿಕೊಂಡಿದ್ದು ಇದನ್ನೇ;
ನಿನ್ನ ಹೃದಯದಲ್ಲಿ ನೀನು ರಹಸ್ಯವಾಗಿ ಆಲೋಚಿಸಿದ್ದೂ ಇದನ್ನೇ.
ಹೌದು, ನಿನ್ನ ಮನಸ್ಸಿನಲ್ಲಿ ಇದೇ ಇತ್ತೆಂದು ನನಗೆ ಗೊತ್ತಿದೆ:
14 ನಾನು ಪಾಪ ಮಾಡಿದರೆ ನೀನು ನನ್ನನ್ನು ಗಮನಿಸುವೆ;
ನಾನು ಮಾಡಿದ ತಪ್ಪಿಗಾಗಿ ನನ್ನನ್ನು ಶಿಕ್ಷಿಸುವೆ.
15 ನಾನು ದೋಷಿಯಾಗಿದ್ದರೆ,
ನನ್ನ ಗತಿಯನ್ನು ಏನು ಹೇಳಲಿ?
ನಾನು ಸನ್ಮಾರ್ಗಿಯಾಗಿದ್ದರೂ
ನನ್ನ ಶ್ರಮೆಗಳನ್ನು ನೋಡುತ್ತಾ
ಅವಮಾನದಿಂದ
ನನ್ನ ತಲೆಯೆತ್ತಲಾರೆ.
16 ನಾನು ತಲೆಯೆತ್ತಿದರೆ
ನೀನು ಸಿಂಹದಂತೆ ನನ್ನನ್ನು ಬೇಟೆಯಾಡುವೆ;
ನಿನ್ನ ಶಕ್ತಿಯನ್ನು ನನಗೆ ವಿರೋಧವಾಗಿ ಮತ್ತೆ ತೋರಿಸುವೆ.
17 ನನ್ನನ್ನು ದೋಷಿಯೆಂದು ನಿರೂಪಿಸಲು
ನಿನ್ನ ಬಳಿಯಲ್ಲಿ ಯಾರಾದರೊಬ್ಬರು ಇದ್ದೇ ಇರುವರು.
ನಿನ್ನ ಕೋಪವು ನನಗೆ ವಿರೋಧವಾಗಿ ಹೆಚ್ಚೆಚ್ಚಾಗುವುದು.
ನೀನು ನನಗೆ ವಿರೋಧವಾಗಿ ಹೊಸ ಸೈನ್ಯಗಳನ್ನು ತರುವೆ.
18 ದೇವರೇ, ನಾನು ಜನಿಸಲು ನೀನೇಕೆ ಅವಕಾಶ ಕೊಟ್ಟೆ?
ಯಾರೂ ನನ್ನನ್ನು ನೋಡುವುದಕ್ಕಿಂತ ಮೊದಲೇ ನಾನು ಸತ್ತುಹೋಗಬೇಕಿತ್ತು.
19 ಎಂದೂ ಜೀವಿಸಿಲ್ಲದ ವ್ಯಕ್ತಿಯಂತೆ ನಾನಿರಬೇಕಿತ್ತು.
ನನ್ನ ತಾಯಿಯ ಗರ್ಭದಿಂದ ನನ್ನನ್ನು ನೇರವಾಗಿ ಸಮಾಧಿಗೆ ಹೊತ್ತುಕೊಂಡು ಹೋಗಬೇಕಿತ್ತು.
20 ನನ್ನ ಜೀವಿತವು ಬಹುಮಟ್ಟಿಗೆ ಮುಗಿದುಹೋಗಿದೆ.
ಆದ್ದರಿಂದ ನನ್ನನ್ನು ಒಬ್ಬಂಟಿಗನನ್ನಾಗಿ ಬಿಟ್ಟುಬಿಡು!
21 ಯಾರೂ ಮರಳಿ ಬರಲಾಗದಂಥ ಕತ್ತಲೆಯ ಸ್ಥಳಕ್ಕೂ ಮರಣಾಂಧಕಾರದ ಸ್ಥಳಕ್ಕೂ
ಹೋಗುವ ಮೊದಲೇ ನನಗಿರುವ ಅಲ್ಪಕಾಲವನ್ನು ಆನಂದಿಸಲು ಅವಕಾಶಕೊಡು.
22 ಆ ಸ್ಥಳವು ಕತ್ತಲೆಯಿಂದಲೂ ಮರಣಾಂಧಕಾರದಿಂದಲೂ ಗಲಿಬಿಲಿಯಿಂದಲೂ ಕೂಡಿದೆ.
ಅಲ್ಲಿನ ಬೆಳಕು ಸಹ ಕತ್ತಲೆಯೇ!’”
Footnotes
- 10:10 ನೀನು … ಮಾರ್ಪಡಿಸಿರುವೆ ಇಲ್ಲಿ ಯೋಬನು ತನ್ನ ತಾಯಿಯ ಗರ್ಭದಲ್ಲಿ ತಾನು ಗರ್ಭಧರಿಸಿದ್ದನ್ನು ಉದಾಹರಿಸಿ ಹೇಳುತ್ತಿದ್ದಾನೆ. ಹಾಲನ್ನು ಕಡೆದು ಬೆಣ್ಣೆ ಮಾಡುವಂತೆ ಎಂಬ ರೂಪಕವನ್ನು ಬಳಸಿದ್ದಾನೆ.
Kannada Holy Bible: Easy-to-Read Version. All rights reserved. © 1997 Bible League International