ಯೋಬನು 16
Kannada Holy Bible: Easy-to-Read Version
ಎಲೀಫಜನಿಗೆ ಯೋಬನ ಉತ್ತರ
16 ಆಗ ಯೋಬನು ಹೀಗೆ ಉತ್ತರಿಸಿದನು:
2 “ನಾನು ಈ ಸಂಗತಿಗಳನ್ನು ಮೊದಲೇ ಕೇಳಿದ್ದೇನೆ,
ನೀವೆಲ್ಲರೂ ಕೀಟಲೆ ಮಾಡುವವರೇ ಹೊರತು ಸಂತೈಸುವವರಲ್ಲ.
3 ನಿಮ್ಮ ಒಣಮಾತುಗಳಿಗೆ ಕೊನೆಯಿಲ್ಲವೇ?
ನೀವು ವಾದ ಮಾಡುತ್ತಲೇ ಇರುವುದೇಕೆ?
4 ನಿಮಗೆ ನನ್ನ ಸ್ಥಿತಿಯು ಬಂದಿದ್ದರೆ
ನೀವು ಹೇಳಿದ್ದನ್ನೇ ನಾನು ಹೇಳಬಹುದಾಗಿತ್ತು.
ನಿಮಗೆ ವಿರುದ್ಧವಾಗಿ ಜ್ಞಾನದ ಮಾತುಗಳನ್ನು ಹೇಳಿ
ನಿಮ್ಮ ವಿಷಯದಲ್ಲಿ ತಲೆಯಾಡಿಸಬಹುದಾಗಿತ್ತು.
5 ಆದರೆ ನಾನು ನಿಮ್ಮನ್ನು ನನ್ನ ಮಾತುಗಳಿಂದ ಪ್ರೋತ್ಸಾಹಿಸಿ
ನಿಮ್ಮಲ್ಲಿ ನಿರೀಕ್ಷೆಯನ್ನು ಹುಟ್ಟಿಸಬಹುದಾಗಿತ್ತು.
6 “ಆದರೆ ನನ್ನ ಯಾವ ಮಾತೂ ನನ್ನ ನೋವನ್ನು ನಿವಾರಣೆ ಮಾಡಲಾರದು;
ಮೌನವಾಗಿದ್ದರೂ ಅದರಿಂದ ಪ್ರಯೋಜನವೇನೂ ಇಲ್ಲ.
7 ದೇವರೇ, ನೀನು ನನ್ನನ್ನು ನಿಶ್ಯಕ್ತನನ್ನಾಗಿ ಮಾಡಿರುವೆ.
ನನ್ನ ಇಡೀ ಕುಟುಂಬವನ್ನು ನಾಶ ಮಾಡಿರುವೆ.
8 ನೀನು ನನ್ನನ್ನು ಮುದುಡಿಹಾಕಿರುವುದು ಎಲ್ಲರಿಗೂ ಕಾಣುತ್ತಿದೆ, ನನ್ನ ದೇಹ ರೋಗಗ್ರಸ್ತವಾಗಿದೆ;
ನಾನು ವಿಕಾರವಾಗಿ ಕಾಣುತ್ತಿರುವೆ; ಜನರು ನನ್ನನ್ನು ಅಪರಾಧಿಯೆಂದು ಭಾವಿಸಿಕೊಂಡಿದ್ದಾರೆ.
9 “ದೇವರು ಕೋಪದಿಂದ
ನನ್ನ ದೇಹವನ್ನು ಸೀಳಿಹಾಕುತ್ತಿದ್ದಾನೆ.
ಆತನು ನನ್ನ ಮೇಲೆ ಹಲ್ಲು ಕಡಿಯುತ್ತಿದ್ದಾನೆ;
ನನ್ನ ಶತ್ರುವು ದ್ವೇಷದಿಂದ ನನ್ನನ್ನು ನೋಡುತ್ತಿದ್ದಾನೆ.
10 ಜನರು ನನ್ನ ಸುತ್ತಲೂ ಗುಂಪುಕೂಡಿದ್ದಾರೆ;
ಅವರು ನನ್ನ ಮುಖಕ್ಕೆ ಹೊಡೆದು ಗೇಲಿ ಮಾಡುತ್ತಿದ್ದಾರೆ.
11 ದೇವರು ನನ್ನನ್ನು ದುಷ್ಟರಿಗೆ ಕೊಟ್ಟುಬಿಟ್ಟಿದ್ದಾನೆ.
ನನಗೆ ಕೇಡುಮಾಡಲು ಕೆಡುಕರಿಗೆ ಬಿಟ್ಟುಕೊಟ್ಟಿದ್ದಾನೆ.
12 ನಾನು ಸುಖದಿಂದಿದ್ದಾಗ
ದೇವರು ನನ್ನನ್ನು ಜಜ್ಜಿಹಾಕಿದನು;
ನನ್ನ ಕತ್ತು ಹಿಡಿದು
ನನ್ನನ್ನು ಚೂರುಚೂರು ಮಾಡಿದನು!
ದೇವರು ನನ್ನನ್ನು ತನ್ನ ಗುರಿ ಅಭ್ಯಾಸಕ್ಕಾಗಿ ಉಪಯೋಗಿಸುತ್ತಿದ್ದಾನೆ.
13 ಆತನ ಬಿಲ್ಲುಗಾರರು ನನ್ನ ಸುತ್ತಲೆಲ್ಲಾ ಇದ್ದಾರೆ.
ಆತನು ನಿಷ್ಕರುಣೆಯಿಂದ ನನ್ನ ಅಂತರಂಗಗಳಿಗೆ ಬಾಣವನ್ನು ಎಸೆಯುತ್ತಾನೆ;
ನೆಲದ ಮೇಲೆ ನನ್ನ ಪಿತ್ತವನ್ನು ಸುರಿಸುತ್ತಾನೆ.
14 ನನ್ನ ಮೇಲೆ ಎಡಬಿಡದೆ ಆಕ್ರಮಣ ಮಾಡಿ
ಯುದ್ಧ ವೀರನಂತೆ ನನ್ನ ಮೇಲೆ ಓಡಿಬರುವನು.
15 “ನಾನು ಬಹು ದುಃಖಿತನಾಗಿದ್ದೇನೆ;
ಗೋಣಿತಟ್ಟನ್ನು ಸುತ್ತಿಕೊಂಡಿದ್ದೇನೆ;
ಸೋತುಹೋದೆನೆಂದು ಧೂಳಿನಲ್ಲಿಯೂ
ಬೂದಿಯಲ್ಲಿಯೂ ಕುಳಿತುಕೊಂಡಿದ್ದೇನೆ.
16 ಅತ್ತತ್ತು ನನ್ನ ಮುಖವು ಕೆಂಪಾಗಿದೆ,
ನನ್ನ ಕಣ್ಣುಗಳ ಸುತ್ತಲೂ ಸುಕ್ಕುಗಟ್ಟಿ ಕಡುಕಪ್ಪಾಗಿದೆ.
17 ನಾನು ಯಾರೊಡನೆಯೂ ಕ್ರೂರವಾಗಿ ವರ್ತಿಸಲಿಲ್ಲ.
ನನ್ನ ವಿಜ್ಞಾಪನೆಯು ನಿರ್ಮಲವಾಗಿತ್ತು.
18 “ಭೂಮಿಯೇ, ನನಗಾಗಿರುವ ಕೆಡುಕುಗಳನ್ನು ಮರೆಮಾಡಬೇಡ.
ನ್ಯಾಯಕ್ಕಾಗಿ ನಾನಿಡುವ ಮೊರೆ ನಿಂತುಹೋಗಲು ಅವಕಾಶ ಕೊಡಬೇಡ.
19 ಈಗಲೂ ಸಹ, ನನಗೆ ಸಾಕ್ಷಿ ನೀಡುವಾತನು ಪರಲೋಕದಲ್ಲಿದ್ದಾನೆ.
ನನಗೆ ಬೆಂಬಲ ನೀಡುವಾತನು ಮೇಲೋಕದಲ್ಲಿದ್ದಾನೆ.
20 ನನ್ನ ಕಣ್ಣೀರೇ ನನ್ನ ಪ್ರತಿನಿಧಿಯಾಗಿದೆ.
ನನ್ನ ಕಣ್ಣು ದೇವರ ಉತ್ತರಕ್ಕಾಗಿ ಆಕಾಂಕ್ಷೆಯಿಂದ ಎದುರುನೋಡುತ್ತಿದೆ.
21 ಒಬ್ಬನು ತನ್ನ ಸ್ನೇಹಿತನಿಗಾಗಿ ಬೇಡಿಕೊಳ್ಳುವಂತೆ
ನನ್ನ ಕಣ್ಣೀರು ನನ್ನ ಪರವಾಗಿ ದೇವರ ಮುಂದೆ ವಾದ ಮಾಡುತ್ತದೆ.
22 “ಯಾಕೆಂದರೆ ನಾನು ಮರಳಿ ಬರಲಾಗದ ಸ್ಥಳಕ್ಕೆ
ಇನ್ನು ಕೆಲವೇ ವರ್ಷಗಳಲ್ಲಿ ಹೊರಟುಹೋಗುವೆನು.
Kannada Holy Bible: Easy-to-Read Version. All rights reserved. © 1997 Bible League International