ಯೋಹಾನ 21
Kannada Holy Bible: Easy-to-Read Version
ಏಳು ಮಂದಿ ಶಿಷ್ಯರಿಗೆ ಯೇಸುವಿನ ದರ್ಶನ
21 ತರುವಾಯ, ಯೇಸು ತನ್ನ ಶಿಷ್ಯರಿಗೆ ತಿಬೇರಿಯ (ಗಲಿಲಾಯ) ಸರೋವರದ ಬಳಿ ಕಾಣಿಸಿಕೊಂಡನು. ಅದು ಹೀಗೆ ನಡೆಯಿತು: 2 ಕೆಲವು ಶಿಷ್ಯರು ಒಟ್ಟಾಗಿ ಸೇರಿದ್ದರು. ಅವರು ಯಾರೆಂದರೆ, ಸೀಮೋನ್ ಪೇತ್ರ, ದಿದುಮನೆಂಬ ತೋಮ, ಗಲಿಲಾಯಕ್ಕೆ ಸೇರಿದ ಕಾನಾ ಊರಿನವನಾದ ನತಾನಿಯೇಲ, ಜೆಬೆದಾಯನ ಇಬ್ಬರು ಗಂಡುಮಕ್ಕಳು ಮತ್ತು ಇನ್ನಿಬ್ಬರು ಶಿಷ್ಯರು. 3 ಪೇತ್ರನು ಅವರಿಗೆ, “ನಾನು ಮೀನು ಹಿಡಿಯಲು ಹೋಗುತ್ತಿದ್ದೇನೆ” ಎಂದನು.
ಉಳಿದ ಶಿಷ್ಯರು, “ನಾವೂ ನಿನ್ನೊಂದಿಗೆ ಬರುತ್ತೇವೆ” ಎಂದು ಹೇಳಿದರು. ಅಂತೆಯೇ ಶಿಷ್ಯರೆಲ್ಲಾ ಹೊರಟು ದೋಣಿಯನ್ನು ಹತ್ತಿದರು. ಅವರು ರಾತ್ರಿಯೆಲ್ಲಾ ಬಲೆ ಬೀಸಿದರೂ ಒಂದು ಮೀನೂ ಸಿಗಲಿಲ್ಲ.
4 ಅಂದು ಮುಂಜಾನೆಯಾದಾಗ, ಯೇಸು ತೀರದಲ್ಲಿ ನಿಂತುಕೊಂಡಿದ್ದನು. ಆದರೆ ಆತನೇ ಯೇಸು ಎಂಬುದು ಶಿಷ್ಯರಿಗೆ ಗೊತ್ತಿರಲಿಲ್ಲ. 5 ಆಗ ಆತನು ತನ್ನ ಶಿಷ್ಯರಿಗೆ, “ಮಕ್ಕಳೇ, ನಿಮಗೆ ಮೀನು ಸಿಕ್ಕಿತೋ?” ಎಂದು ಕೇಳಿದನು.
ಶಿಷ್ಯರು, “ಇಲ್ಲ” ಎಂದು ಉತ್ತರಕೊಟ್ಟರು.
6 ಯೇಸು, “ನಿಮ್ಮ ದೋಣಿಯ ಬಲಭಾಗದಲ್ಲಿ ನಿಮ್ಮ ಬಲೆ ಬೀಸಿರಿ. ಅಲ್ಲಿ ಕೆಲವು ಮೀನುಗಳು ಸಿಕ್ಕುತ್ತವೆ” ಎಂದು ಹೇಳಿದನು. ಶಿಷ್ಯರು ಹಾಗೆಯೇ ಮಾಡಿದರು. ಬಹಳ ಮೀನುಗಳು ಸಿಕ್ಕಿಕೊಂಡದ್ದರಿಂದ ಅವರು ಬಲೆಯನ್ನು ದೋಣಿಯೊಳಗೆ ಎಳೆದುಕೊಳ್ಳಲಾಗಲಿಲ್ಲ.
7 ಯೇಸುವಿನ ಪ್ರೀತಿಯ ಶಿಷ್ಯನು ಪೇತ್ರನಿಗೆ, “ಆ ಮನುಷ್ಯನು ಪ್ರಭುವೇ!” ಎಂದು ಹೇಳಿದನು. ಕೂಡಲೇ ಪೇತ್ರನು ತನ್ನ ಅಂಗಿಯನ್ನು ಹಾಕಿಕೊಂಡು, ನೀರಿಗೆ ಧುಮುಕಿದನು. (ಪೇತ್ರನು ಮೀನು ಹಿಡಿಯುವುದಕ್ಕಾಗಿ ತನ್ನ ಅಂಗಿಯನ್ನು ಬಿಚ್ಚಿಟ್ಟಿದ್ದನು.) 8 ಉಳಿದ ಶಿಷ್ಯರು ದೋಣಿಯಲ್ಲಿ ತೀರಕ್ಕೆ ಹೋದರು. ಅವರು ಬಲೆತುಂಬ ಮೀನುಗಳನ್ನು ದಡಕ್ಕೆ ಎಳೆದುಕೊಂಡು ಹೋದರು. ಅವರು ದಡದಿಂದ ಬಹುದೂರದಲ್ಲೇನೂ ಇರಲಿಲ್ಲ. ಕೇವಲ ಮುನ್ನೂರು ಅಡಿಗಳಷ್ಟು ದೂರದಲ್ಲಿದ್ದರು. 9 ಶಿಷ್ಯರು ದೋಣಿಯಿಂದ ಇಳಿದು ದಡಕ್ಕೆ ಹೋದಾಗ, ಬೆಂಕಿಯ ಕೆಂಡಗಳನ್ನು ಕಂಡರು. ಬೆಂಕಿಯ ಮೇಲೆ ಮೀನುಗಳಿದ್ದವು ಮತ್ತು ಕೆಲವು ರೊಟ್ಟಿಗಳೂ ಅಲ್ಲಿದ್ದವು. 10 ಬಳಿಕ ಯೇಸು, “ನೀವು ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿರಿ” ಎಂದು ಹೇಳಿದನು.
11 ಸೀಮೋನ್ ಪೇತ್ರನು ದೋಣಿಯೊಳಕ್ಕೆ ಹೋಗಿ ಬಲೆಯನ್ನು ದಡಕ್ಕೆ ಎಳೆದುಕೊಂಡು ಬಂದನು. ಬಲೆಯು ದೊಡ್ಡ ಮೀನುಗಳಿಂದ ತುಂಬಿತ್ತು. ಅದರಲ್ಲಿ 153 ಮೀನುಗಳಿದ್ದವು. ಅವು ಬಹಳ ಭಾರವಾಗಿದ್ದರೂ ಬಲೆಯು ಹರಿದುಹೋಗಲಿಲ್ಲ. 12 ಯೇಸು ಅವರಿಗೆ, “ಬಂದು ಊಟ ಮಾಡಿ” ಎಂದು ಹೇಳಿದನು. ಶಿಷ್ಯರಲ್ಲಿ ಒಬ್ಬರಾದರೂ, “ನೀನು ಯಾರು?” ಎಂದು ಆತನನ್ನು ಕೇಳಲಿಲ್ಲ. ಆತನು ಪ್ರಭುವೆಂದು ಅವರಿಗೆ ತಿಳಿದಿತ್ತು. 13 ಯೇಸುವು ಸಮೀಪಕ್ಕೆ ಬಂದು ರೊಟ್ಟಿಯನ್ನು ಮತ್ತು ಮೀನುಗಳನ್ನು ತೆಗೆದುಕೊಂಡು ಅವರಿಗೆ ಕೊಟ್ಟನು.
14 ಯೇಸು ಪುನರುತ್ಥಾನ ಹೊಂದಿದ ಮೇಲೆ ತನ್ನ ಶಿಷ್ಯರಿಗೆ ಕಾಣಿಸಿಕೊಂಡದ್ದು ಇದು ಮೂರನೆಯ ಸಲ.
ಪೇತ್ರನೊಂದಿಗೆ ಯೇಸುವಿನ ಸಂಭಾಷಣೆ
15 ಅವರು ಊಟಮಾಡಿದ ಮೇಲೆ, ಯೇಸು ಸೀಮೋನ್ ಪೇತ್ರನಿಗೆ, “ಯೋಹಾನನ ಮಗನಾದ ಸೀಮೋನನೇ, ಇಲ್ಲಿರುವ ಇವರು ನನ್ನನ್ನು ಪ್ರೀತಿಸುವುದಕ್ಕಿಂತಲೂ ಹೆಚ್ಚಾಗಿ ನೀನು ನನ್ನನ್ನು ಪ್ರೀತಿಸುವೆಯೋ?” ಎಂದು ಕೇಳಿದನು.
ಪೇತ್ರನು, “ಹೌದು ಪ್ರಭುವೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂಬುದು ನಿನಗೆ ಗೊತ್ತಿದೆ” ಎಂದನು.
ಯೇಸು ಪೇತ್ರನಿಗೆ, “ನನ್ನ ಕುರಿಮರಿಗಳನ್ನು[a] ಮೇಯಿಸು” ಎಂದನು.
16 ಎರಡನೆಯ ಸಾರಿ ಯೇಸು ಪೇತ್ರನಿಗೆ, “ಯೋಹಾನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುವೆಯೋ?” ಎಂದು ಕೇಳಿದನು.
ಪೇತ್ರನು, “ಹೌದು, ಪ್ರಭುವೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂಬುದು ನಿನಗೆ ಗೊತ್ತಿದೆ” ಎಂದನು.
ಯೇಸು ಪೇತ್ರನಿಗೆ, “ನನ್ನ ಕುರಿಗಳನ್ನು ಕಾಯಿ” ಎಂದನು.
17 ಯೇಸು ಮೂರನೆಯ ಸಾರಿ, “ಯೋಹಾನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುವೆಯೋ?” ಎಂದು ಕೇಳಿದನು.
ಯೇಸು, “ನೀನು ನನ್ನನ್ನು ಪ್ರೀತಿಸುವೆಯೋ?” ಎಂದು ಮೂರು ಸಾರಿ ಕೇಳಿದ್ದರಿಂದ ಪೇತ್ರನಿಗೆ ದುಃಖವಾಯಿತು. ಪೇತ್ರನು, “ಪ್ರಭುವೇ, ನಿನಗೆ ಪ್ರತಿಯೊಂದೂ ತಿಳಿದಿದೆ. ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂಬುದು ನಿನಗೆ ಗೊತ್ತಿದೆ” ಎಂದನು.
ಯೇಸು ಪೇತ್ರನಿಗೆ, “ನನ್ನ ಕುರಿಗಳನ್ನು ಮೇಯಿಸು. 18 ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ನೀನು ಯೌವನಸ್ಥನಾಗಿದ್ದಾಗ, ನಡುಕಟ್ಟಿಕೊಂಡು ನಿನಗೆ ಇಷ್ಟವಾದ ಕಡೆಗೆಲ್ಲಾ ಹೋದೆ. ಆದರೆ ನೀನು ಮುದುಕನಾದಾಗ, ನಿನ್ನ ಕೈಗಳನ್ನು ಚಾಚುವೆ ಮತ್ತು ಬೇರೊಬ್ಬನು ನಿನ್ನ ನಡುಕಟ್ಟಿ ನಿನಗೆ ಇಷ್ಟವಿಲ್ಲದ ಕಡೆಗೆ ನಿನ್ನನ್ನು ನಡೆಸಿಕೊಂಡು ಹೋಗುವನು” ಎಂದು ಹೇಳಿದನು. 19 (ದೇವರನ್ನು ಮಹಿಮೆಪಡಿಸುವುದಕ್ಕಾಗಿ ಪೇತ್ರನು ಯಾವ ರೀತಿ ಸಾಯುತ್ತಾನೆ ಎಂಬುದನ್ನು ಸೂಚಿಸಲು ಯೇಸು ಹೀಗೆ ಹೇಳಿದನು.) ಬಳಿಕ ಯೇಸು ಪೇತ್ರನಿಗೆ, “ನನ್ನನ್ನು ಹಿಂಬಾಲಿಸು!” ಎಂದನು.
20 ಪೇತ್ರನು ಹಿಂತಿರುಗಿ ನೋಡಿದಾಗ, ಯೇಸುವಿನ ಪ್ರೀತಿಯ ಶಿಷ್ಯನು ತಮ್ಮ ಹಿಂದೆ ನಡೆದುಕೊಂಡು ಬರುತ್ತಿರುವುದನ್ನು ಕಂಡನು. (ರಾತ್ರಿಭೋಜನದ ಸಮಯದಲ್ಲಿ ಯೇಸುವಿನ ಎದೆಯ ಕಡೆಗೆ ಬಾಗಿ, “ಪ್ರಭುವೇ, ನಿನಗೆ ದ್ರೋಹ ಮಾಡುವವನು ಯಾರು?” ಎಂದು ಕೇಳಿದ ಶಿಷ್ಯನೇ ಇವನು.) 21 ಪೇತ್ರನು ತಮ್ಮ ಹಿಂದೆ ಬರುತ್ತಿದ್ದ ಈ ಶಿಷ್ಯನನ್ನು ಕಂಡಾಗ ಯೇಸುವಿಗೆ, “ಪ್ರಭುವೇ, ಇವನ ವಿಷಯವೇನು?” ಎಂದು ಕೇಳಿದನು.
22 ಯೇಸು, “ನಾನು ಬರುವ ತನಕ ಅವನು ಜೀವದಿಂದ ಇರಬೇಕೆಂಬುದು ನನ್ನ ಇಷ್ಟವಾಗಿದ್ದರೆ ಅದರಿಂದ ನಿನಗೇನು? ನೀನು ನನ್ನನ್ನು ಹಿಂಬಾಲಿಸು!” ಎಂದು ಉತ್ತರಕೊಟ್ಟನು.
23 ಆದ್ದರಿಂದ ಸಹೋದರರ (ಶಿಷ್ಯರ) ಮಧ್ಯೆ ಒಂದು ಕಥೆಯೇ ಹರಡಿಕೊಂಡಿತು. ಯೇಸುವಿನ ಪ್ರೀತಿಯ ಈ ಶಿಷ್ಯನು ಸಾಯುವುದಿಲ್ಲವೆಂದು ಅವರು ಹೇಳುತ್ತಿದ್ದರು. ಆದರೆ ಅವನು ಸಾಯುವುದಿಲ್ಲವೆಂದು ಯೇಸು ಹೇಳಲಿಲ್ಲ. “ನಾನು ಬರುವ ತನಕ ಅವನು ಜೀವದಿಂದ ಇರಬೇಕೆಂಬುದು ನನ್ನ ಇಷ್ಟವಾಗಿದ್ದರೆ ಅದರಿಂದ ನಿನಗೇನು?” ಎಂದಷ್ಟೇ ಆತನು ಹೇಳಿದ್ದನು.
24 ಈ ಸಂಗತಿಗಳನ್ನು ಈಗ ಬರೆದಿರುವವನು ಮತ್ತು ಇವುಗಳ ವಿಷಯವಾಗಿ ಈಗ ಸಾಕ್ಷಿ ಹೇಳಿರುವ ಶಿಷ್ಯನು ಅವನೇ. ಅವನು ಹೇಳುವುದು ಸತ್ಯವೆಂದು ನಮಗೆ ಗೊತ್ತಿದೆ.
25 ಯೇಸು ಇತರ ಅನೇಕ ಕಾರ್ಯಗಳನ್ನು ಮಾಡಿದನು. ಅವುಗಳಲ್ಲಿ ಪ್ರತಿಯೊಂದನ್ನೂ ಬರೆಯುವುದಾದರೆ, ಬರೆಯಲ್ಪಡುವ ಪುಸ್ತಕಗಳನ್ನು ಇಡೀ ಪ್ರಪಂಚವೇ ಹಿಡಿಸಲಾರದೆಂದು ನಾನು ನೆನಸುತ್ತೇನೆ.
Footnotes
- 21:15 ಕುರಿಮರಿಗಳನ್ನು ಅಂದರೆ ಯೇಸುವಿನ ಹಿಂಬಾಲಕರು.
Kannada Holy Bible: Easy-to-Read Version. All rights reserved. © 1997 Bible League International