ವಿಮೋಚನಕಾಂಡ 3
Kannada Holy Bible: Easy-to-Read Version
ಉರಿಯುವ ಪೊದೆ
3 ಮೋಶೆಯ ಮಾವನ ಹೆಸರು ಇತ್ರೋನನು. ಇತ್ರೋನನು ಮಿದ್ಯಾನಿನ ಯಾಜಕನಾಗಿದ್ದನು. ಮೋಶೆಯು ಇತ್ರೋನನ ಕುರಿಗಳಿಗೆ ಕುರುಬನಾಗಿದ್ದನು. ಒಂದು ದಿನ, ಮೋಶೆಯು ಕುರಿಗಳನ್ನು ಮರುಭೂಮಿಯ ಪಶ್ಚಿಮಭಾಗಕ್ಕೆ ನಡೆಸಿಕೊಂಡು ದೇವರ ಬೆಟ್ಟವೆಂದು ಕರೆಯಲ್ಪಡುವ ಸೀನಾಯಿ ಎಂಬ ಹೋರೇಬ್ ಬೆಟ್ಟಕ್ಕೆ ಹೋದನು. 2 ಆ ಬೆಟ್ಟದಲ್ಲಿ ಯೆಹೋವನ ದೂತನು ಮೋಶೆಗೆ ಉರಿಯುವ ಪೊದೆಯಲ್ಲಿ ಕಾಣಿಸಿಕೊಂಡನು.
ಪೊದೆಯು ಉರಿಯುತ್ತಿದ್ದರೂ ಸುಟ್ಟು ಹೋಗದಿರುವುದನ್ನು ಮೋಶೆ ಗಮನಿಸಿದನು. 3 ಪೊದೆಯು ಉರಿಯುತ್ತಿದ್ದರೂ ಸುಟ್ಟುಹೋಗದಿರುವುದಕ್ಕೆ ಕಾರಣವೇನೆಂದು ತಿಳಿದುಕೊಳ್ಳಲು ಮೋಶೆಯು ಪೊದೆಯ ಸಮೀಪಕ್ಕೆ ಹೋಗತೊಡಗಿದನು.
4 ಮೋಶೆಯು ಪೊದೆಯನ್ನು ನೋಡಲು ಬರುತ್ತಿರುವುದನ್ನು ಯೆಹೋವನು ನೋಡಿದನು. ದೇವರು ಆ ಪೊದೆಯೊಳಗಿಂದ, “ಮೋಶೆ, ಮೋಶೆ!” ಎಂದು ಕರೆದನು.
ಅದಕ್ಕೆ ಮೋಶೆ, “ಇಗೋ ಇದ್ದೇನೆ” ಅಂದನು.
5 ಆಗ ಯೆಹೋವನು, “ಇನ್ನೂ ಹತ್ತಿರ ಬರಬೇಡ. ನಿನ್ನ ಪಾದರಕ್ಷೆಗಳನ್ನು ತೆಗೆದುಹಾಕು. ಏಕೆಂದರೆ ನೀನು ನಿಂತಿರುವ ಸ್ಥಳವು ಪರಿಶುದ್ಧ ಭೂಮಿಯಾಗಿದೆ. 6 ನಾನು ನಿನ್ನ ಪೂರ್ವಿಕರ ದೇವರು, ನಾನು ಅಬ್ರಹಾಮನ ದೇವರು, ನಾನು ಇಸಾಕನ ದೇವರು, ನಾನು ಯಾಕೋಬನ ದೇವರು” ಎಂದು ಹೇಳಿದನು.
ದೇವರನ್ನು ನೋಡುವುದಕ್ಕೆ ಭಯಪಟ್ಟು ಮೋಶೆ ತನ್ನ ಮುಖವನ್ನು ಮುಚ್ಚಿಕೊಂಡನು.
7 ಆಗ ಯೆಹೋವನು, “ನನ್ನ ಜನರು ಈಜಿಪ್ಟಿನಲ್ಲಿ ಅನುಭವಿಸುತ್ತಿರುವ ಕಷ್ಟಗಳನ್ನು ನೋಡಿದ್ದೇನೆ. ಅಧಿಕಾರಿಗಳು ಅವರನ್ನು ಹಿಂಸಿಸುವಾಗ ಅವರು ಇಟ್ಟ ಮೊರೆಯನ್ನು ಕೇಳಿದ್ದೇನೆ. ಅವರ ದುಃಖವನ್ನೆಲ್ಲಾ ಬಲ್ಲೆನು. 8 ಈಗ ನಾನು ಇಳಿದುಹೋಗಿ ಈಜಿಪ್ಟಿನವರಿಂದ ನನ್ನ ಜನರನ್ನು ರಕ್ಷಿಸುವೆನು. ನಾನು ಅವರನ್ನು ಆ ದೇಶದಿಂದ ಬಿಡುಗಡೆ ಮಾಡಿ ಒಳ್ಳೆಯದಾದ ಮತ್ತು ವಿಶಾಲವಾದ ದೇಶಕ್ಕೆ ಅವರನ್ನು ನಡೆಸುವೆನು. ಅದು ಸಮೃದ್ಧಿಕರವಾದ ದೇಶ.[a] ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು ಮತ್ತು ಯೆಬೂಸಿಯರು ವಾಸವಾಗಿರುವ ದೇಶ ಅದಾಗಿದೆ. 9 ನಾನು ಇಸ್ರೇಲರ ಮೊರೆಯನ್ನು ಕೇಳಿದ್ದೇನೆ. ಈಜಿಪ್ಟಿನವರು ಅವರಿಗೆ ಕೊಡುವ ಹಿಂಸೆಯನ್ನು ನೋಡಿದ್ದೇನೆ. 10 ಆದ್ದರಿಂದ ನಾನು ನಿನ್ನನ್ನು ಫರೋಹನ ಬಳಿಗೆ ಕಳುಹಿಸುತ್ತಿದ್ದೇನೆ. ಹೋಗು! ನನ್ನ ಜನರಾದ ಇಸ್ರೇಲರನ್ನು ಈಜಿಪ್ಟಿನಿಂದ ಬಿಡುಗಡೆ ಮಾಡು!” ಎಂದು ಹೇಳಿದನು.
11 ಅದಕ್ಕೆ ಮೋಶೆಯು ಯೆಹೋವನಿಗೆ, “ನಾನು ಮಹಾ ವ್ಯಕ್ತಿಯೇನಲ್ಲ! ಫರೋಹನ ಸನ್ನಿಧಾನಕ್ಕೆ ಹೋಗುವುದಕ್ಕೂ ಇಸ್ರೇಲರನ್ನು ಈಜಿಪ್ಟಿನಿಂದ ಬಿಡಿಸಿಕೊಂಡು ಬರುವುದಕ್ಕೂ ನಾನೆಷ್ಟರವನು?” ಎಂದು ಹೇಳಿದನು.
12 ಅದಕ್ಕೆ ದೇವರು “ನೀನು ಇದನ್ನು ಮಾಡಬಹುದು; ಯಾಕೆಂದರೆ ನಾನೇ ನಿನ್ನೊಂದಿಗೆ ಇರುವೆನು. ನಿನ್ನನ್ನು ಕಳುಹಿಸಿದವನು ನಾನೇ ಎಂಬುದಕ್ಕೆ ಇದೇ ಸಾಕ್ಷಿಯಾಗಿರುವುದು. ನೀನು ಇಸ್ರೇಲರನ್ನು ಈಜಿಪ್ಟಿನಿಂದ ಬಿಡಿಸಿಕೊಂಡು ಬಂದಮೇಲೆ, ನೀವು ಈ ಬೆಟ್ಟದ ಬಳಿ ನನ್ನನ್ನು ಆರಾಧಿಸುವಿರಿ” ಎಂದು ಹೇಳಿದನು.
13 ಆಗ ಮೋಶೆಯು ದೇವರಿಗೆ, “ನಾನು ಇಸ್ರೇಲರ ಬಳಿಗೆ ಹೋಗಿ ‘ನಿಮ್ಮ ಪೂರ್ವಿಕರ ದೇವರು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ’ ಎಂದು ಹೇಳಿದರೆ, ಅವರು ‘ಆತನ ಹೆಸರೇನು?’ ಎಂದು ಕೇಳುವರು. ಆಗ ನಾನು ಅವರಿಗೆ ಏನು ಹೇಳಬೇಕು?” ಎಂದು ಕೇಳಿದನು.
14 ಆಗ ದೇವರು ಮೋಶೆಗೆ, “ನಾನು ‘ಇರುವಾತನೇ’ ಆಗಿದ್ದೇನೆ. ನೀನು ಇಸ್ರೇಲರ ಬಳಿಗೆ ಹೋದಾಗ ‘ಇರುವಾತನೇ’ ಎಂಬವನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ ಎಂದು ಹೇಳು” ಅಂದನು. 15 ಇದಲ್ಲದೆ ದೇವರು ಮೋಶೆಗೆ, “ನೀನು ಇಸ್ರೇಲರಿಗೆ, ‘ನಿಮ್ಮ ಪೂರ್ವಿಕರ ದೇವರೂ ಅಬ್ರಹಾಮನ ದೇವರೂ ಇಸಾಕನ ದೇವರೂ ಯಾಕೋಬನ ದೇವರೂ ಆಗಿರುವ ಯೆಹೋವನು ನಿಮ್ಮಲ್ಲಿಗೆ ನನ್ನನ್ನು ಕಳುಹಿಸಿದ್ದಾನೆ. ಇದೇ ನನ್ನ ಶಾಶ್ವತವಾದ ಹೆಸರು; ತಲತಲಾಂತರಕ್ಕೂ ನನ್ನನ್ನು ಸ್ಮರಿಸಬೇಕಾದ ಹೆಸರು ಇದೇ ಎಂದು ಹೇಳಬೇಕು’” ಅಂದನು.
16 ಇದಲ್ಲದೆ ಯೆಹೋವನು ಅವನಿಗೆ, “ನೀನು ಹೋಗಿ ಇಸ್ರೇಲರ ನಾಯಕರನ್ನು ಒಟ್ಟುಗೂಡಿಸಿ ಅವರಿಗೆ, ‘ನಿಮ್ಮ ಪೂರ್ವಿಕರ ದೇವರಾದ ಯೆಹೋವನು ನನಗೆ ಕಾಣಿಸಿಕೊಂಡನು. ಅಬ್ರಹಾಮನ, ಇಸಾಕನ, ಯಾಕೋಬನ ದೇವರು ಹೇಳುವುದೇನೆಂದರೆ, ಈಜಿಪ್ಟಿನಲ್ಲಿ ನಿಮಗೆ ಸಂಭವಿಸಿದವುಗಳನ್ನು ನಾನು ಲಕ್ಷ್ಯವಿಟ್ಟು ನೋಡಿದ್ದೇನೆ. 17 ಈಜಿಪ್ಟಿನಲ್ಲಿ ನೀವು ಅನುಭವಿಸುತ್ತಿರುವ ಸಂಕಟಗಳಿಂದ ಬಿಡಿಸಬೇಕೆಂದು ತೀರ್ಮಾನಿಸಿದ್ದೇನೆ. ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು ಮತ್ತು ಯೆಬೂಸಿಯರು ವಾಸವಾಗಿರುವ ಸಮೃದ್ಧಿಕರವಾದ ದೇಶಕ್ಕೆ ನಾನು ನಿಮ್ಮನ್ನು ನಡೆಸುವೆನು!’ ಎಂದು ಹೇಳು.
18 “ಹಿರಿಯರು ನಿನಗೆ ಕಿವಿಗೊಡುವರು. ಆಗ ನೀನು ಮತ್ತು ಹಿರಿಯರು ಈಜಿಪ್ಟಿನ ರಾಜನ ಬಳಿಗೆ ಹೋಗಿ, ‘ಇಬ್ರಿಯರ ದೇವರಾದ ಯೆಹೋವನು ನಮಗೆ ಕಾಣಿಸಿಕೊಂಡನು. ಆದ್ದರಿಂದ ನಾವು ಮರುಭೂಮಿಯಲ್ಲಿ ಮೂರು ದಿನ ಪ್ರಯಾಣ ಮಾಡಿ ನಮ್ಮ ದೇವರಾದ ಯೆಹೋವನಿಗೆ ಯಜ್ಞಗಳನ್ನು ಸಮರ್ಪಿಸಬೇಕು’ ಎಂದು ಹೇಳಿರಿ.
19 “ಆದರೆ ಈಜಿಪ್ಟಿನ ರಾಜನು ನಿಮ್ಮನ್ನು ಹೋಗಗೊಡಿಸುವುದಿಲ್ಲ ಎಂಬುದು ನನಗೆ ಗೊತ್ತಿದೆ. 20 ಆದ್ದರಿಂದ ನಾನು ಕೈಚಾಚಿ ಈಜಿಪ್ಟಿನ ವಿರುದ್ಧ ಮಹತ್ಕಾರ್ಯಗಳನ್ನು ಮಾಡಿ ಅನೇಕ ವಿಧದಲ್ಲಿ ಅದನ್ನು ಬಾಧಿಸುವೆನು. ಆಗ ಅವನು ನಿಮ್ಮನ್ನು ಹೋಗಗೊಡಿಸುವನು. 21 ಈಜಿಪ್ಟಿನ ಜನರು ಇಸ್ರೇಲರಿಗೆ ದಯೆ ತೋರುವಂತೆ ಮಾಡುವೆನು. ಇಸ್ರೇಲರು ಈಜಿಪ್ಟನ್ನು ಬಿಟ್ಟು ಹೊರಡುವಾಗ ಈಜಿಪ್ಟಿನವರು ಅವರಿಗೆ ಉಡುಗೊರೆಗಳನ್ನು ಕೊಡುವರು.
22 “ಪ್ರತಿಯೊಬ್ಬ ಇಬ್ರಿಯ ಸ್ತ್ರೀಯು ಈಜಿಪ್ಟಿನ ನೆರೆಯವರನ್ನಾಗಲಿ ಅಥವಾ ತನ್ನ ಮನೆಯಲ್ಲಿ ವಾಸಿಸುತ್ತಿರುವ ಯಾವುದೇ ಸ್ತ್ರೀಯನ್ನಾಗಲಿ ಕೇಳಿದರೆ ಅವರು ಆಕೆಗೆ ಉಡುಗೊರೆಗಳನ್ನು ಕೊಡುವರು. ನಿನ್ನ ಜನರು ಬೆಳ್ಳಿಬಂಗಾರಗಳನ್ನು, ಶ್ರೇಷ್ಠವಾದ ಬಟ್ಟೆಗಳನ್ನು ಪಡೆಯುವರು. ನೀವು ಈಜಿಪ್ಟನ್ನು ಬಿಡುವಾಗ ಆ ಉಡುಗೊರೆಗಳನ್ನು ನಿಮ್ಮ ಮಕ್ಕಳಿಗೆ ತೊಡಿಸುವಿರಿ. ಈ ರೀತಿಯಲ್ಲಿ ನೀವು ಈಜಿಪ್ಟಿನವರ ಐಶ್ವರ್ಯವನ್ನು ತೆಗೆದುಕೊಂಡು ಹೋಗುವಿರಿ” ಅಂದನು.
Footnotes
- 3:8 ಅದು … ದೇಶ ಅಕ್ಷರಶಃ, “ಹಾಲೂ ಜೇನೂ ಹರಿಯುವ ದೇಶ.”
Kannada Holy Bible: Easy-to-Read Version. All rights reserved. © 1997 Bible League International