ವಿಮೋಚನಕಾಂಡ 9
Kannada Holy Bible: Easy-to-Read Version
ಹೊಲದ ಪ್ರಾಣಿಗಳ ವ್ಯಾಧಿ
9 ಆಗ ಯೆಹೋವನು ಮೋಶೆಗೆ, “ನೀನು ಫರೋಹನ ಬಳಿಗೆ ಹೋಗಿ ಅವನಿಗೆ ಹೀಗೆ ಹೇಳು: ‘ಇಬ್ರಿಯರ ದೇವರಾದ ಯೆಹೋವನು ಹೇಳುವುದೇನೆಂದರೆ, ನನ್ನನ್ನು ಆರಾಧಿಸುವುದಕ್ಕೆ ನನ್ನ ಜನರು ಹೋಗಲಿ. 2 ನೀನು ಅವರನ್ನು ಬಿಡದೆ ಇನ್ನೂ ತಡೆದರೆ, 3 ನಾನು ಕೈಯೆತ್ತಿ ಹೊಲಗಳಲ್ಲಿರುವ ನಿನ್ನ ಪಶುಗಳನ್ನೂ ನಿನ್ನ ಎಲ್ಲಾ ಕುದುರೆಗಳನ್ನೂ ಕತ್ತೆಗಳನ್ನೂ ಒಂಟೆಗಳನ್ನೂ ದನಕರುಗಳನ್ನೂ ಕುರಿಗಳನ್ನೂ ಘೋರವ್ಯಾದಿಯಿಂದ ಸಾಯಿಸುವೆನು. 4 ಆದರೆ ಇಸ್ರೇಲರ ಪಶುಗಳಿಗೂ ಈಜಿಪ್ಟಿನವರ ಪಶುಗಳಿಗೂ ವ್ಯತ್ಯಾಸ ಮಾಡುವೆನು. ಇಸ್ರೇಲರ ಯಾವ ಪಶುವೂ ಸಾಯುವುದಿಲ್ಲ. 5 ಇದು ನಡೆಯತಕ್ಕ ಕಾಲವನ್ನು ನಿರ್ಣಯಿಸಿ ನಾಳೆಯೇ ಇದನ್ನು ಕಾರ್ಯರೂಪಕ್ಕೆ ತರುವೆನು’ ಎಂದು ಹೇಳಬೇಕು” ಅಂದನು.
6 ಮರುದಿನ ಯೆಹೋವನು ಈ ಕಾರ್ಯವನ್ನು ಮಾಡಿದನು. ಈಜಿಪ್ಟಿನ ಹೊಲಗಳಲ್ಲಿದ್ದ ಪಶುಗಳೆಲ್ಲಾ ಸತ್ತುಹೋದವು; ಆದರೆ ಇಸ್ರೇಲರಿಗೆ ಸೇರಿದ ಯಾವ ಪಶುವೂ ಸಾಯಲಿಲ್ಲ. 7 ಇಸ್ರೇಲರ ಯಾವ ಪಶುವಾದರೂ ಸತ್ತಿದೆಯೋ ಎಂದು ತಿಳಿದುಕೊಳ್ಳಲು ಫರೋಹನು ಜನರನ್ನು ಕಳುಹಿಸಿದನು. ಇಸ್ರೇಲರ ಪಶುಗಳಲ್ಲಿ ಒಂದಾದರೂ ಸತ್ತಿರಲಿಲ್ಲ. ಆದರೂ ಫರೋಹನು ತನ್ನ ಹೃದಯವನ್ನು ಕಠಿಣಪಡಿಸಿಕೊಂಡದ್ದರಿಂದ ಇಸ್ರೇಲರನ್ನು ಹೋಗಗೊಡಿಸಲಿಲ್ಲ.
ಹುಣ್ಣುಗಳು
8 ಯೆಹೋವನು ಮೋಶೆ ಆರೋನರಿಗೆ, “ನೀವು ಒಲೆಯ ಬೂದಿಯನ್ನು ಕೈತುಂಬ ತೆಗೆದುಕೊಳ್ಳಿರಿ. ಮೋಶೆಯು ಅದನ್ನು ಫರೋಹನ ಮುಂದೆ ಗಾಳಿಯಲ್ಲಿ ತೂರಲಿ. 9 ಅದು ಧೂಳಾಗಿ ಈಜಿಪ್ಟಿನಲ್ಲೆಲ್ಲಾ ಹರಡಿಕೊಳ್ಳುವುದು; ಈ ಧೂಳು ಈಜಿಪ್ಟಿನಲ್ಲಿರುವ ಮನುಷ್ಯರನ್ನಾಗಲಿ ಪಶುಗಳನ್ನಾಗಲಿ ತಾಗಿದಾಗ ಅವರ ಚರ್ಮದ ಮೇಲೆ ಹುಣ್ಣುಗಳಾಗುತ್ತವೆ” ಎಂದು ಹೇಳಿದನು.
10 ಆದ್ದರಿಂದ ಮೋಶೆ ಆರೋನರು ಒಲೆಯಿಂದ ಬೂದಿಯನ್ನು ತೆಗೆದುಕೊಂಡು ಹೋಗಿ ಫರೋಹನ ಮುಂದೆ ನಿಂತುಕೊಂಡರು. ಅವರು ಬೂದಿಯನ್ನು ಗಾಳಿಯಲ್ಲಿ ತೂರಿದಾಗ ಜನರ ಮೇಲೂ ಪ್ರಾಣಿಗಳ ಮೇಲೂ ಹುಣ್ಣುಗಳಾಗತೊಡಗಿದವು. 11 ಮೋಶೆಯ ಈ ಕಾರ್ಯವನ್ನು ವಿಫಲಗೊಳಿಸಲು ಮಾಂತ್ರಿಕರಿಗೆ ಸಾಧ್ಯವಾಗಲಿಲ್ಲ. ಯಾಕೆಂದರೆ ಈಜಿಪ್ಟಿನ ಎಲ್ಲಾ ಜನರಂತೆ ಮಾಂತ್ರಿಕರ ಮೇಲೆಯೂ ಹುಣ್ಣುಗಳಾದವು. 12 ಆದರೆ ಯೆಹೋವನು ಫರೋಹನ ಹೃದಯವನ್ನು ಕಠಿಣಗೊಳಿಸಿದ್ದರಿಂದ ಫರೋಹನು ಮೋಶೆ ಆರೋನರ ಮಾತನ್ನು ಕೇಳಲಿಲ್ಲ. ಯೆಹೋವನು ಹೇಳಿದಂತೆಯೇ ಇದಾಯಿತು.
ಆಲಿಕಲ್ಲು
13 ಬಳಿಕ ಯೆಹೋವನು ಮೋಶೆಗೆ, “ಮುಂಜಾನೆ ಎದ್ದು ಫರೋಹನ ಬಳಿಗೆ ಹೋಗಿ, ಅವನಿಗೆ, ‘ಇಬ್ರಿಯರ ದೇವರಾದ ಯೆಹೋವನು ಹೀಗೆನ್ನುತ್ತಾನೆ: ನನ್ನನ್ನು ಆರಾಧಿಸಲು ನನ್ನ ಜನರು ಹೋಗಲಿ! 14 ಇಲ್ಲವಾದರೆ, ನಾನು ನಿನ್ನ ವಿರುದ್ಧವಾಗಿಯೂ ನಿನ್ನ ಅಧಿಕಾರಿಗಳ ವಿರುದ್ಧವಾಗಿಯೂ ನಿನ್ನ ಜನರ ವಿರುದ್ಧವಾಗಿಯೂ ನನ್ನ ಪೂರ್ಣಶಕ್ತಿಯಿಂದ ಉಪದ್ರವಗಳನ್ನು ಕಳುಹಿಸುವೆನು. ಆಗ ನನ್ನಂಥ ದೇವರು ಲೋಕದಲ್ಲಿ ಇಲ್ಲವೇ ಇಲ್ಲವೆಂದು ನೀನು ತಿಳಿದುಕೊಳ್ಳುವೆ. 15 ನಾನು ನನ್ನ ಶಕ್ತಿಯಿಂದ ನಿನಗೂ ನಿನ್ನ ಜನರಿಗೂ ವ್ಯಾಧಿಯನ್ನು ಬರಮಾಡಿ ನಿಮ್ಮನ್ನು ನಿರ್ಮೂಲ ಮಾಡಬಹುದಿತ್ತು. 16 ಆದರೆ, ನನ್ನ ಶಕ್ತಿಯನ್ನು ನಿನಗೆ ತೋರಿಸಬೇಕೆಂದೂ ಲೋಕದ ಜನರೆಲ್ಲರು ನನ್ನ ಬಗ್ಗೆ ತಿಳಿದುಕೊಳ್ಳಬೇಕೆಂದೂ ನಾನು ನಿನ್ನನ್ನು ಇನ್ನೂ ಉಳಿಸಿದ್ದೇನೆ. 17 ಆದರೂ ನೀನು ನನ್ನ ಜನರಿಗೆ ವಿರುದ್ಧವಾಗಿರುವೆ; ಅವರಿಗೆ ಸ್ವತಂತ್ರವನ್ನು ಕೊಡದಿರುವೆ. 18 ಆದ್ದರಿಂದ ನಾಳೆ ಇದೇ ಸಮಯಕ್ಕೆ ಸರಿಯಾಗಿ ಭೀಕರವಾದ ಆಲಿಕಲ್ಲಿನ ಮಳೆಯನ್ನು ಸುರಿಸುವೆನು. ಈಜಿಪ್ಟ್ ರಾಜ್ಯವು ಸ್ಥಾಪನೆಯಾದಂದಿನಿಂದ ಇಂಥ ಆಲಿಕಲ್ಲಿನ ಮಳೆ ಬಿದ್ದಿಲ್ಲ. 19 ಈಗ ನೀನು ನಿನ್ನ ಪಶುಗಳನ್ನೂ ನಿನ್ನ ಹೊಲದಲ್ಲಿರುವ ನಿನ್ನ ಪ್ರತಿಯೊಂದನ್ನೂ ಸುರಕ್ಷಿತವಾದ ಸ್ಥಳದಲ್ಲಿ ಇರಿಸಬೇಕು. ಮನೆಯೊಳಗಿರದೆ ಹೊಲದಲ್ಲಿರುವ ಮನುಷ್ಯರೂ ಪಶುಗಳೂ ಆಲಿಕಲ್ಲಿನ ಮಳೆಗೆ ಸಿಕ್ಕಿಕೊಂಡು ಸಾಯುವರು’ ಎಂದು ಹೇಳಬೇಕು” ಅಂದನು.
20 ಫರೋಹನ ಅಧಿಕಾರಿಗಳಲ್ಲಿ ಕೆಲವರು ಯೆಹೋವನ ಸಂದೇಶಕ್ಕೆ ಕಿವಿಗೊಟ್ಟು ತಮ್ಮ ಎಲ್ಲಾ ಪಶುಗಳನ್ನೂ ಗುಲಾಮರನ್ನೂ ಮನೆಯೊಳಗೆ ಸೇರಿಸಿಕೊಂಡರು. 21 ಆದರೆ ಇತರರು ಯೆಹೋವನ ಸಂದೇಶವನ್ನು ನಿರ್ಲಕ್ಷ್ಯಮಾಡಿ ತಮ್ಮ ಎಲ್ಲಾ ಗುಲಾಮರನ್ನೂ ಪಶುಗಳನ್ನೂ ಹೊಲಗಳಲ್ಲಿಯೇ ಬಿಟ್ಟರು.
22 ಯೆಹೋವನು ಮೋಶೆಗೆ, “ನಿನ್ನ ಕೈಯನ್ನು ಆಕಾಶದ ಕಡೆಗೆ ಚಾಚು; ಆಗ ಈಜಿಪ್ಟಿನಲ್ಲೆಲ್ಲಾ ಆಲಿಕಲ್ಲಿನ ಮಳೆ ಬೀಳತೊಡಗುವುದು. ಆಲಿಕಲ್ಲಿನ ಮಳೆಯು ಜನರ, ಪ್ರಾಣಿಗಳ ಮತ್ತು ಈಜಿಪ್ಟಿನ ಹೊಲಗಳಲ್ಲಿರುವ ಎಲ್ಲಾ ಸಸ್ಯಗಳ ಮೇಲೆ ಬೀಳುವುದು” ಎಂದು ಹೇಳಿದನು.
23 ಆದ್ದರಿಂದ ಮೋಶೆ ತನ್ನ ಕೋಲನ್ನು ಆಕಾಶದ ಕಡೆಗೆ ಚಾಚಿದನು. ಕೂಡಲೇ ಯೆಹೋವನು, ಗುಡುಗು ಮಿಂಚುಗಳಿಂದ ಕೂಡಿದ ಆಲಿಕಲ್ಲಿನ ಮಳೆಯನ್ನು ಈಜಿಪ್ಟಿನಲ್ಲೆಲ್ಲಾ ಸುರಿಸಿದನು. 24 ಆಲಿಕಲ್ಲಿನ ಮಳೆಯು ಭೀಕರವಾಗಿತ್ತು, ಝಗಝಗಿಸುವ ಮಿಂಚೂ ಅದರೊಂದಿಗಿತ್ತು. ಈಜಿಪ್ಟ್ ಒಂದು ರಾಷ್ಟ್ರವಾದಂದಿನಿಂದ ಇಂಥ ಭೀಕರವಾದ ಆಲಿಕಲ್ಲಿನ ಮಳೆ ಎಂದೂ ಆಗಿರಲಿಲ್ಲ. 25 ಈಜಿಪ್ಟಿನ ಹೊಲಗಳಲ್ಲಿದ್ದ ಪ್ರತಿಯೊಂದನ್ನೂ ಬಿರುಗಾಳಿ ನಾಶಮಾಡಿತು. ಆಲಿಕಲ್ಲು ಜನರನ್ನೂ ಪ್ರಾಣಿಗಳನ್ನೂ ಸಸ್ಯಗಳನ್ನೂ ನಾಶಮಾಡಿತು; ಹೊಲಗಳಲ್ಲಿದ್ದ ಎಲ್ಲಾ ಮರಗಳನ್ನು ಮುರಿದುಹಾಕಿತು. 26 ಇಸ್ರೇಲರು ವಾಸವಾಗಿದ್ದ ಗೋಷೆನ್ ಪ್ರದೇಶದಲ್ಲಿ ಮಾತ್ರ ಆಲಿಕಲ್ಲಿನ ಮಳೆಯಾಗಲಿಲ್ಲ.
27 ಫರೋಹನು ಮೋಶೆ ಆರೋನರನ್ನು ಕರೆಸಿ ಅವರಿಗೆ, “ಈ ಸಾರಿ ನಾನು ಪಾಪಮಾಡಿದ್ದೇನೆ. ಯೆಹೋವನೇ ನೀತಿವಂತನು. ನಾನೂ ನನ್ನ ಜನರೂ ದೋಷಿಗಳಾಗಿದ್ದೇವೆ. 28 ಭಯಂಕರವಾದ ಗುಡುಗೂ ಆಲಿಕಲ್ಲಿನ ಮಳೆಯೂ ಬಹಳ ಹೆಚ್ಚಾದವು. ಇವುಗಳನ್ನು ನಿಲ್ಲಿಸಬೇಕೆಂದು ದೇವರನ್ನು ಪ್ರಾರ್ಥಿಸಿರಿ; ನಿಮ್ಮನ್ನು ಈ ದೇಶದಿಂದ ಕಳುಹಿಸಿಕೊಡುತ್ತೇನೆ; ತಡೆಯುವುದಿಲ್ಲ” ಎಂದು ಹೇಳಿದನು.
29 ಮೋಶೆಯು ಫರೋಹನಿಗೆ, “ನಾನು ಪಟ್ಟಣದಿಂದಾಚೆಗೆ ಹೋದಕೂಡಲೇ ಕೈಯೆತ್ತಿ ಯೆಹೋವನಲ್ಲಿ ಪ್ರಾರ್ಥಿಸುವೆನು, ಆಗ ಗುಡುಗೂ ಆಲಿಕಲ್ಲಿನ ಮಳೆಯೂ ನಿಂತುಹೋಗುವವು. ಭೂಲೋಕವು ಯೆಹೋವನ ಅಧೀನದಲ್ಲಿದೆಯೆಂದು ಆಗ ನೀನು ತಿಳಿದುಕೊಳ್ಳುವೆ. 30 ಆದರೆ ನೀನಾಗಲಿ ನಿನ್ನ ಅಧಿಕಾರಿಗಳಾಗಲಿ ಇನ್ನೂ ದೇವರಿಗೆ ಭಯಪಡುವುದಿಲ್ಲ ಎಂಬುದು ನನಗೆ ಗೊತ್ತಿದೆ” ಎಂದು ಹೇಳಿದನು.
31 ಅಗಸೆಗೆ ಮೊಗ್ಗೆಯೂ ಬಾರ್ಲಿಗೆ ತೆನೆಯೂ ಬಂದಿದ್ದರಿಂದ ಈ ಎರಡು ಬೆಳೆಗಳು ನಾಶವಾದವು. 32 ಆದರೆ ಗೋಧಿಯೂ ಕಡಲೆಯೂ ಬೇರೆ ಧಾನ್ಯಗಳ ನಂತರ ಆಗುವ ಬೆಳೆಗಳಾಗಿದ್ದವು. ಆದ್ದರಿಂದ ಈ ಪೈರುಗಳು ನಾಶವಾಗಲಿಲ್ಲ.
33 ಮೋಶೆಯು ಫರೋಹನ ಬಳಿಯಿಂದ ಹೊರಟು ಪಟ್ಟಣದಾಚೆಗೆ ಹೋದಾಗ ಕೈಯೆತ್ತಿ ಯೆಹೋವನಲ್ಲಿ ಪ್ರಾರ್ಥಿಸಿದನು. ಆಗ ಗುಡುಗೂ ಆಲಿಕಲ್ಲಿನ ಮಳೆಯೂ ನಿಂತುಹೋದವು; ಮಳೆಯೂ ನಿಂತುಹೋಯಿತು.
34 ಮಳೆಯೂ ಆಲಿಕಲ್ಲಿನ ಮಳೆಯೂ ಗುಡುಗೂ ನಿಂತುಹೋದದ್ದನ್ನು ಕಂಡ ಫರೋಹನು ಮತ್ತು ಅವನ ಅಧಿಕಾರಿಗಳು ಮತ್ತೆ ತಮ್ಮ ಹೃದಯಗಳನ್ನು ಕಠಿಣಪಡಿಸಿಕೊಂಡು ಪಾಪ ಮಾಡಿದರು. 35 ಇಸ್ರೇಲರು ಸ್ವತಂತ್ರರಾಗಿ ಹೋಗಲು ಫರೋಹನು ಬಿಡಲಿಲ್ಲ. ಯೆಹೋವನು ಮೋಶೆಯ ಮೂಲಕ ಹೇಳಿಸಿದಂತೆಯೇ ಇದಾಯಿತು.
Kannada Holy Bible: Easy-to-Read Version. All rights reserved. © 1997 Bible League International