ಹೋಶೇಯ 2
Kannada Holy Bible: Easy-to-Read Version
2 “ಆಗ ನೀವು ನಿಮ್ಮ ಸಹೋದರರಿಗೆ, ‘ನೀವು ನನ್ನ ಜನರು’ ಎಂದು ಹೇಳುವಿರಿ. ಮತ್ತು ನಿಮ್ಮ ಸಹೋದರಿಯರಿಗೆ, ‘ಆತನು ನಿಮ್ಮ ಮೇಲೆ ಕರುಣೆ ಇಟ್ಟಿರುತ್ತಾನೆ’ ಎಂದು ಹೇಳುವಿರಿ.
2 “ನಿಮ್ಮ ತಾಯಿಯೊಂದಿಗೆ ವಾದಿಸಿರಿ. ಯಾಕೆಂದರೆ ಆಕೆ ನನ್ನ ಹೆಂಡತಿಯಲ್ಲ. ನಾನು ಆಕೆಯ ಗಂಡನಲ್ಲ. ವೇಶ್ಯೆಯ ಹಾಗೆ ಆಕೆ ವರ್ತಿಸುವದನ್ನು ನಿಲ್ಲಿಸು ಎಂದು ಹೇಳಿರಿ. ಆಕೆಯ ಸ್ತನಗಳ ಮಧ್ಯದಿಂದ ಆಕೆಯ ಪ್ರಿಯತಮರನ್ನು ತೆಗೆದುಹಾಕಲು ಹೇಳಿರಿ. 3 ಆಕೆ ವ್ಯಭಿಚಾರ ಮಾಡುವದನ್ನು ನಿಲ್ಲಿಸದೆ ಹೋದರೆ ನಾನು ಆಕೆಯನ್ನು ಬೆತ್ತಲೆ ಮಾಡಿ, ಆಕೆ ಜನ್ಮ ತಾಳಿದಾಗ ಹೇಗೆ ಇದ್ದಳೋ ಹಾಗೆ ಮಾಡುವೆನು. ಆಕೆಯ ಜನರನ್ನು ಆಕೆಯಿಂದ ತೊಲಗಿಸಿ ಆಕೆಯನ್ನು ಒಣ ಮರುಭೂಮಿಯಂತೆ ಬೆಂಗಾಡಾಗಿ ಮಾಡುವೆನು. ಆಕೆ ಬಾಯಾರಿ ಸಾಯುವಂತೆ ಮಾಡುವೆನು. 4 ಆಕೆಯ ಮಕ್ಕಳನ್ನು ನಾನು ಕನಿಕರಿಸೆನು. ಯಾಕೆಂದರೆ ಅವರು ವ್ಯಭಿಚಾರದಿಂದ ಹುಟ್ಟಿದ ಮಕ್ಕಳು. 5 ಅವರ ತಾಯಿಯು ವೇಶ್ಯೆಯಂತೆ ವರ್ತಿಸಿದಳು. ತಾನು ನಡಿಸಿದ ಕೃತ್ಯಗಳಿಗಾಗಿ ಆಕೆ ನಾಚಿಕೆಪಡಬೇಕು. ಆಕೆಯು ಹೀಗೆಂದುಕೊಳ್ಳುತ್ತಿದ್ದಾಳೆ, ‘ನಾನು ನನ್ನ ಪ್ರಿಯತಮರ ಬಳಿಗೆ ಹೋಗುವೆನು. ಅವರು ನನಗೆ ಅನ್ನ ನೀರನ್ನು ಕೊಡುವರು. ನನಗೆ ಉಣ್ಣೆಯನ್ನೂ, ನಾರುಮಡಿಯನ್ನೂ ಕೊಡುವರು. ದ್ರಾಕ್ಷಾರಸ ಮತ್ತು ಆಲೀವ್ ಎಣ್ಣೆಯನ್ನೂ ಕೊಡುವರು.’
6 “ಅದಕ್ಕಾಗಿ ಯೆಹೋವನಾದ ನಾನು ಇಸ್ರೇಲರ ಮಾರ್ಗವನ್ನು ಮುಳ್ಳುಗಳಿಂದ ಮುಚ್ಚಿಬಿಡುವೆನು. ನಾನು ಗೋಡೆ ಕಟ್ಟುವೆನು. ಆಗ ಅವಳು ತನ್ನ ದಾರಿಯನ್ನು ಕಂಡುಕೊಳ್ಳಲಾರಳು. 7 ಆಕೆಯು ತನ್ನ ಪ್ರಿಯತಮರ ಹಿಂದೆ ಓಡಿಹೋದರೂ ಅವರನ್ನು ಹಿಡಿಯಲಾರಳು. ಆಕೆಯು ತನ್ನ ಪ್ರಿಯತಮರನ್ನು ಹುಡುಕುವಳು. ಆದರೆ ಅವರು ಆಕೆಗೆ ಸಿಗುವುದಿಲ್ಲ. ಆಗ ಆಕೆ ಹೀಗೆ ಹೇಳುವಳು, ‘ನಾನು ನನ್ನ ಮೊದಲನೇ ಪತಿಯ ಬಳಿಗೆ (ಯೆಹೋವನು) ಹೋಗುವೆನು. ನಾನು ಆತನೊಂದಿಗೆ ಇದ್ದಾಗ ನನ್ನ ಜೀವಿತವು ಎಷ್ಟೋ ಚೆನ್ನಾಗಿತ್ತು. ಈಗಿನ ನನ್ನ ಜೀವಿತಕ್ಕಿಂತ ಆಗಿನ ಜೀವಿತವು ಎಷ್ಟೋ ಮೇಲಾಗಿತ್ತು.’
8 “ಆಕೆಗೆ (ಇಸ್ರೇಲಿಗೆ) ನಾನು (ಯೆಹೋವನು) ಧಾನ್ಯ, ಎಣ್ಣೆ, ದ್ರಾಕ್ಷಾರಸವನ್ನು ಕೊಟ್ಟವನೆಂದು ತಿಳಿದಿಲ್ಲ. ಆಕೆಗೆ ಹೆಚ್ಚೆಚ್ಚಾಗಿ ಬೆಳ್ಳಿಬಂಗಾರಗಳನ್ನು ಕೊಡುತ್ತಾ ಬಂದೆನು. ಆದರೆ ಆ ಬೆಳ್ಳಿಬಂಗಾರವನ್ನು ಇಸ್ರೇಲ್ ಬಾಳನ ವಿಗ್ರಹಗಳನ್ನು ತಯಾರಿಸಲು ಉಪಯೋಗಿಸಿದಳು. 9 ಆದ್ದರಿಂದ ನಾನು ಹಿಂತಿರುಗಿ ಬರುವೆನು. ನಾನು ಕೊಟ್ಟಿರುವ ಧಾನ್ಯವು ಕೊಯ್ಲಿಗೆ ತಯಾರಾದ ಅವಳಿಂದ ಅದನ್ನು ಹಿಂದಕ್ಕೆ ತೆಗೆದುಕೊಳ್ಳುವೆನು. ದ್ರಾಕ್ಷಿಹಣ್ಣು ಪಕ್ವವಾಗಿದ್ದಾಗ ನಾನು ಬಂದು ನನ್ನ ದ್ರಾಕ್ಷಾರಸವನ್ನು ಹಿಂದಕ್ಕೆ ತೆಗೆದುಕೊಳ್ಳುವೆನು. ನಾನು ಕೊಟ್ಟಿರುವ ಉಣ್ಣೆ ಮತ್ತು ನಾರಿನ ಬಟ್ಟೆಯನ್ನು ಹಿಂದಕ್ಕೆ ತೆಗೆದುಕೊಳ್ಳುವೆನು. ನಾನು ಅದನ್ನು ಅವಳಿಗೆ ತನ್ನ ಬೆತ್ತಲೆ ಶರೀರವನ್ನು ಮುಚ್ಚಿಕೊಳ್ಳುವದಕ್ಕೋಸ್ಕರ ಕೊಟ್ಟಿದ್ದೆನು. 10 ಈಗ ನಾನು ಆಕೆಯನ್ನು ಬಟ್ಟೆಯನ್ನು ಬಿಚ್ಚಿಹಾಕುವೆನು. ಆಕೆಯ ಬೆತ್ತಲೆತನವನ್ನು ಆಕೆಯ ಪ್ರಿಯತಮರೆಲ್ಲರೂ ನೋಡುವರು. ನನ್ನ ಕೈಯೊಳಗಿಂದ ಯಾರೂ ಆಕೆಯನ್ನು ರಕ್ಷಿಸಲಾರರು. 11 ನಾನು (ದೇವರು) ಆಕೆಯ ಉಲ್ಲಾಸಗಳನ್ನು ಅವಳಿಂದ ತೆಗೆಯುವೆನು. ಆಕೆಯ ಹಬ್ಬದ ದಿನಗಳು, ಅಮಾವಾಸ್ಯೆಯ ಹಬ್ಬ, ಸಬ್ಬತ್ ದಿನಗಳನ್ನು ಆಕೆಯಿಂದ ತೆಗೆದುಬಿಡುವೆನು. 12 ಆಕೆಯ ದ್ರಾಕ್ಷಾಲತೆಗಳನ್ನೂ ಅಂಜೂರದ ಮರಗಳನ್ನೂ ನಾಶಮಾಡುವೆನು. ‘ಇವುಗಳನ್ನು ನನ್ನ ಪ್ರಿಯತಮರು ನನಗೆ ಕೊಟ್ಟರು’ ಎಂದು ಆಕೆ ಹೇಳುತ್ತಾಳೆ. ಆದರೆ ನಾನು ಆಕೆಯ ತೋಟವನ್ನೇ ಬದಲಾಯಿಸುವೆನು. ಅದು ದಟ್ಟ ಅಡವಿಯಂತೆ ಆಗುವದು. ಅದರಲ್ಲಿದ್ದ ಮರಗಳ ಹಣ್ಣನ್ನು ಕಾಡುಪ್ರಾಣಿಗಳು ಬಂದು ತಿನ್ನುವವು.
13 “ಆಕೆಯು ಬಾಳನ ಸೇವೆಮಾಡಿದ್ದುದರಿಂದ ನಾನು ಆಕೆಯನ್ನು ಶಿಕ್ಷಿಸುವೆನು. ಬಾಳನಿಗೆ ಆಕೆ ಧೂಪ ಹಾಕಿದಳು. ಆಕೆ ವಸ್ತ್ರಾಭರಣಗಳಿಂದ ಭೂಷಿತಳಾಗಿ ಮೂಗುತಿಯನ್ನು ಧರಿಸಿಕೊಂಡು ತನ್ನ ಪ್ರೇಮಿಗಳ ಬಳಿಗೆ ಹೋದಳು. ನನ್ನನ್ನು ಮರೆತುಬಿಟ್ಟಳು.” ಇದು ಯೆಹೋವನು ಹೇಳಿದ ಮಾತು.
14 “ಆದ್ದರಿಂದ ನಾನು (ಯೆಹೋವನು) ಆಕೆಯೊಂದಿಗೆ ಸರಸ ಸಲ್ಲಾಪವಾಡುವೆನು. ಆಕೆಯನ್ನು ಮರುಭೂಮಿಗೆ ನಡೆಸಿ ಆಕೆಯೊಂದಿಗೆ ನಯನುಡಿಗಳಿಂದ ಮಾತಾಡುವೆನು. 15 ಅಲ್ಲಿ ಆಕೆಗೆ ನಾನು ದ್ರಾಕ್ಷಿತೋಟಗಳನ್ನು ಕೊಡುವೆನು. ಆಕೆಗೆ ಆಕೋರ್ ತಗ್ಗುಪ್ರದೇಶವನ್ನು ನಿರೀಕ್ಷೆಯ ಬಾಗಿಲಾಗಿ ಕೊಡುವೆನು. ಆಗ ಅವಳು ತಾನು ಈಜಿಪ್ಟಿನಿಂದ ಹೊರಬಂದ ತನ್ನ ಯೌವನದ ದಿನಗಳಲ್ಲಿ ಹೇಗೆ ನನ್ನ ಸಂಗಡ ಮಾತನಾಡಿದಳೋ ಹಾಗೆಯೇ ನನ್ನೊಂದಿಗೆ ಮಾತನಾಡುವಳು.” 16 ಇವು ಯೆಹೋವನ ಮಾತುಗಳು.
“ಆಗ ನನ್ನನ್ನು ನೀನು ‘ನನ್ನ ಗಂಡ’ ಎಂದು ಕರೆಯುವೆ. ‘ನನ್ನ ಬಾಳನು’ ಎಂದು ಕರೆಯುವದಿಲ್ಲ. 17 ನಾನು ಆಕೆಯ ಬಾಯಿಯಿಂದ ಬಾಳ್ ದೇವರುಗಳ ಹೆಸರನ್ನು ತೆಗೆದುಬಿಡುವೆನು. ಆಮೇಲೆ ಜನರು ಎಂದಿಗೂ ಬಾಳನ ಹೆಸರೆನ್ನೆತ್ತುವದಿಲ್ಲ.
18 “ಆ ಸಮಯದಲ್ಲಿ ನಾನು ಇಸ್ರೇಲರಿಗೋಸ್ಕರವಾಗಿ ಅಡವಿಯ ಮೃಗಗಳೊಂದಿಗೂ ಆಕಾಶದ ಪಕ್ಷಿಗಳೊಂದಿಗೂ ನೆಲದ ಮೇಲೆ ಹರಿದಾಡುವ ಜಂತುಗಳೊಂದಿಗೂ ಒಡಂಬಡಿಕೆ ಮಾಡುವೆನು. ನಾನು ಯುದ್ಧದ ಆಯುಧ, ಬಿಲ್ಲು, ಖಡ್ಗಗಳನ್ನು ತುಂಡು ಮಾಡುವೆನು. ಆ ದೇಶದೊಳಗೆ ಯಾವ ಆಯುಧವೂ ಇರದು. ಆಗ ಇಸ್ರೇಲಿನ ಜನರು ನಿಶ್ಟಿಂತೆಯಿಂದ ಮಲಗುವರು. 19 ಆಗ ನಾನು (ಯೆಹೋವನು) ನಿನ್ನನ್ನು ಒಳ್ಳೆಯತನದಿಂದಲೂ ನ್ಯಾಯದಿಂದಲೂ ಪ್ರೀತಿಯಿಂದಲೂ ಕರುಣೆಯಿಂದಲೂ ಕೂಡಿರುವ ನಿರಂತರವಾದ ವಧುವನ್ನಾಗಿ ಮಾಡುವೆನು. 20 ನಿನ್ನನ್ನು ನಾನು ನನ್ನ ನಂಬಿಗಸ್ತಳಾದ ವಧುವನ್ನಾಗಿ ಮಾಡುವೆನು. ಆಗ ನೀನು ನನ್ನನ್ನು ನಿಜವಾಗಿಯೂ ಅರಿತುಕೊಳ್ಳುವೆ. 21 ಆಗ ನಾನು ನಿನಗೆ ಪ್ರತಿಕ್ರಿಯೆ ತೋರ್ಪಡಿಸುವೆನು.” ಇದು ಯೆಹೋವನು ಹೇಳಿದ ಮಾತು:
“ನಾನು ಆಕಾಶದೊಂದಿಗೆ ಮಾತಾಡಲು
ಅದು ಭೂಮಿಯ ಮೇಲೆ ಮಳೆಗರೆಯುವದು.
22 ಭೂಮಿಯು ಧಾನ್ಯ, ದ್ರಾಕ್ಷಾರಸ, ಎಣ್ಣೆಯನ್ನು ಕೊಡುವದು.
ಇಜ್ರೇಲಿನ ಅವಶ್ಯಕತೆಗಳನ್ನು ಅವು ದೊರಕಿಸುವದು.
23 ಆಕೆಯ ದೇಶದಲ್ಲಿ ನಾನು ಬೀಜ ಬಿತ್ತುವೆನು.
ನಾನು ಲೋರುಹಾಮಳಿಗೆ ಕರುಣೆ ತೋರುವೆನು.
ಲೋ ಅಮ್ಮಿಗೆ ನಾನು, ‘ನೀವು ನನ್ನ ಜನರು’ ಎಂದು ಹೇಳುವೆನು.
ಆಗ ಅವರು, ‘ನೀನು ನಮ್ಮ ದೇವರು’ ಎಂದು ಹೇಳುವರು.”
Kannada Holy Bible: Easy-to-Read Version. All rights reserved. © 1997 Bible League International