2 ಸಮುವೇಲನು 6
Kannada Holy Bible: Easy-to-Read Version
ದೇವರ ಪವಿತ್ರ ಪೆಟ್ಟಿಗೆಯನ್ನು ಜೆರುಸಲೇಮಿಗೆ ತಂದರು
6 ಇಸ್ರೇಲಿನಲ್ಲಿ ಆರಿಸಲ್ಪಟ್ಟ ಮೂವತ್ತು ಸಾವಿರ ಮಂದಿಯನ್ನು ದಾವೀದನು ಮತ್ತೆ ಒಟ್ಟುಗೂಡಿಸಿದನು. 2 ಆಗ ದಾವೀದನು ತನ್ನ ಜನರೊಂದಿಗೆ ಯೆಹೂದದ ಬಾಳಾ ಎಂಬಲ್ಲಿಗೆ ಹೋದನು. ಯೆಹೂದದ ಬಾಳಾ ಎಂಬ ಸ್ಥಳದಲ್ಲಿದ್ದ ಪವಿತ್ರ ಪೆಟ್ಟಿಗೆಯನ್ನು ಜೆರುಸಲೇಮಿಗೆ ತೆಗೆದುಕೊಂಡು ಬಂದನು. ಯೆಹೋವನನ್ನು ಆರಾಧಿಸುವುದಕ್ಕಾಗಿ ಜನರು ಪವಿತ್ರ ಪೆಟ್ಟಿಗೆಯ ಬಳಿ ಹೋಗುತ್ತಿದ್ದರು. ಪವಿತ್ರ ಪೆಟ್ಟಿಗೆಯು ಯೆಹೋವನ ಪೀಠದಂತಿತ್ತು. ಪವಿತ್ರ ಪೆಟ್ಟಿಗೆಯ ಮೇಲ್ಭಾಗದಲ್ಲಿ ಕೆರೂಬಿಗಳಿದ್ದವು. ಯೆಹೋವನು ರಾಜನಂತೆ ದೂತರ ಮೇಲೆ ಆಸೀನನಾಗಿದ್ದನು. 3 ದಾವೀದನ ಜನರು ಪವಿತ್ರ ಪೆಟ್ಟಿಗೆಯನ್ನು ಹೊಸಬಂಡಿಯ ಮೇಲಿಟ್ಟರು. ಅವರು ಬೆಟ್ಟದ ಮೇಲಿರುವ ಅಬೀನಾದಾಬನ ಮನೆಯಿಂದ ದೇವರ ಪವಿತ್ರ ಪೆಟ್ಟಿಗೆಯನ್ನು ತಂದರು. ಅಬೀನಾದಾಬನ ಮಕ್ಕಳಾದ ಉಜ್ಜನೂ ಅಹಿಯೋವನೂ ಆ ಬಂಡಿಯನ್ನು ಹೊಡೆದರು.
4 ಬೆಟ್ಟದ ಮೇಲಿನ ಅಬೀನಾದಾಬನ ಮನೆಯಿಂದ ಹೊಸ ಬಂಡಿಯನ್ನು ತರುವಾಗ ಉಜ್ಜನೂ ಅಹಿಯೋವನೂ ಮುನ್ನಡೆಸಿದರು. ಈ ಬಂಡಿಯ ಮೇಲೆ ದೇವರ ಪವಿತ್ರ ಪೆಟ್ಟಿಗೆಯಿತ್ತು. ಉಜ್ಜನೂ ಬಂಡಿಯ ಮೇಲಿದ್ದನು. ಪವಿತ್ರ ಪೆಟ್ಟಿಗೆಯ ಮುಂದೆ ಅಹಿಯೋವನು ನಡೆಯುತ್ತಿದ್ದನು. 5 ದಾವೀದನು ಮತ್ತು ಇಸ್ರೇಲರೆಲ್ಲರು ಕಿನ್ನರಿ, ದಮ್ಮಡಿ, ಝಲ್ಲರಿ, ತಾಳಗಳನ್ನು ಬಾರಿಸುತ್ತಾ ಸನ್ನಿಧಿಯಲ್ಲಿ ನೃತ್ಯಮಾಡುತ್ತಿದ್ದರು. 6 ದಾವೀದನ ಜನರು ನಾಕೋನನ ಕಣಕ್ಕೆ ಬಂದಾಗ ಹಸುಗಳು ಮುಗ್ಗರಿಸಿದವು ಹಾಗೂ ದೇವರ ಪವಿತ್ರ ಪೆಟ್ಟಿಗೆಯು ಬಂಡಿಯಿಂದ ಕೆಳಗೆ ಬೀಳುವುದರಲ್ಲಿತ್ತು. ಪವಿತ್ರ ಪೆಟ್ಟಿಗೆಯು ಬೀಳದಂತೆ ಉಜ್ಜನು ಹಿಡಿದನು. 7 ಯೆಹೋವನು ಉಜ್ಜನ ಮೇಲೆ ಕೋಪಗೊಂಡು ಅವನನ್ನು ಕೊಂದನು.[a] ಉಜ್ಜನು ದೇವರಿಗೆ ಗೌರವವನ್ನು ತೋರಿಸದೆ ಪವಿತ್ರ ಪೆಟ್ಟಿಗೆಯನ್ನು ಸ್ಪರ್ಶಿಸಿದನು. ದೇವರ ಪವಿತ್ರ ಪಟ್ಟಿಗೆಯ ಹತ್ತಿರದಲ್ಲೇ ಉಜ್ಜನು ಸತ್ತನು. 8 ಯೆಹೋವನು ಉಜ್ಜನನ್ನು ಕೊಂದದ್ದರಿಂದ ದಾವೀದನು ತಳಮಳಗೊಂಡನು. ದಾವೀದನು ಆ ಸ್ಥಳವನ್ನು “ಪೆರೆಚುಜ್ಜಾ” ಎಂದು ಕರೆದನು. ಆ ಸ್ಥಳವನ್ನು ಇಂದಿಗೂ “ಪೆರೆಚುಜ್ಜಾ” ಎಂದೇ ಕರೆಯುತ್ತಾರೆ.
9 ಅಂದು ದಾವೀದನು ಯೆಹೋವನಿಗೆ ಭಯಪಟ್ಟು, “ದೇವರ ಪವಿತ್ರ ಪೆಟ್ಟಿಗೆಯನ್ನು ನಾನಿರುವಲ್ಲಿಗೆ ತೆಗೆದುಕೊಂಡು ಹೋಗುವುದು ಹೇಗೆ?” ಎಂದು ಯೋಚಿಸಿಕೊಂಡು 10 ಯೆಹೋವನ ಪವಿತ್ರ ಪೆಟ್ಟಿಗೆಯನ್ನು ದಾವೀದ ನಗರದೊಳಕ್ಕೆ ತರಲಿಲ್ಲ. ದಾವೀದನು ಪವಿತ್ರ ಪೆಟ್ಟಿಗೆಯನ್ನು ಗತ್‌ನ ಓಬೇದೆದೋಮನ ಮನೆಯಲ್ಲಿಟ್ಟನು. 11 ಓಬೇದೆದೋಮನ ಮನೆಯಲ್ಲಿ ಪವಿತ್ರ ಪೆಟ್ಟಿಗೆಯು ಮೂರು ತಿಂಗಳ ಕಾಲ ಇತ್ತು. ಓಬೇದೆದೋಮನನ್ನೂ ಅವನ ಕುಟುಂಬವನ್ನೂ ಯೆಹೋವನು ಆಶೀರ್ವದಿಸಿದನು.
12 ತರುವಾಯ ಜನರು ದಾವೀದನಿಗೆ, “ದೇವರ ಪವಿತ್ರ ಪೆಟ್ಟಿಗೆಯು ಓಬೇದೆದೋಮನ ಮನೆಯಲ್ಲಿರುವುದರಿಂದ ಯೆಹೋವನು ಅವನ ಕುಟುಂಬವನ್ನೂ ಅವನ ಸಮಸ್ತವನ್ನೂ ಆಶೀರ್ವದಿಸಿದನು.” ಎಂದು ಹೇಳಿದರು. ಆದ್ದರಿಂದ ದಾವೀದನು ಹೋಗಿ ಓಬೇದೆದೋಮನ ಮನೆಯಿಂದ ಪವಿತ್ರ ಪೆಟ್ಟಿಗೆಯನ್ನು ಸಂತೋಷದಿಂದ ತಂದನು. 13 ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಹೊತ್ತವರು ಆರು ಹೆಜ್ಜೆಗಳನ್ನು ನಡೆದು ನಿಂತಾಗ ದಾವೀದನು ಒಂದು ಹೋರಿಯನ್ನು ಮತ್ತು ಕೊಬ್ಬಿದ ಕರುವನ್ನು ಯಜ್ಞವಾಗಿ ಅರ್ಪಿಸಿದನು. 14 ಆಗ ದಾವೀದನು ಯೆಹೋವನ ಸನ್ನಿಧಿಯಲ್ಲಿ ತನ್ನ ಶಕ್ತಿಮೀರಿ ನರ್ತಿಸಿದನು. ಅವನು ಏಫೋದನ್ನು ಧರಿಸಿದ್ದನು.
15 ಯೆಹೋವನ ಪವಿತ್ರ ಪೆಟ್ಟಿಗೆಯನ್ನು ನಗರಕ್ಕೆ ತರುವಾಗ ದಾವೀದನು ಮತ್ತು ಇಸ್ರೇಲರೆಲ್ಲರು ಸಂತೋಷದಿಂದ ಆರ್ಭಟಿಸಿದರು; ತುತ್ತೂರಿಯನ್ನು ಊದಿದರು. 16 ಸೌಲನ ಮಗಳಾದ ಮೀಕಲಳು ಕಿಟಕಿಯಿಂದ ಹೊರಗೆ ನೋಡುತ್ತಿದ್ದಳು. ಅದೇ ಸಮಯದಲ್ಲಿ ಯೆಹೋವನ ಪವಿತ್ರ ಪೆಟ್ಟಿಗೆಯು ನಗರಕ್ಕೆ ಬಂದಿತು. ದಾವೀದನು ಯೆಹೋವನ ಸನ್ನಿಧಿಯಲ್ಲಿ ಜಿಗಿಯುತ್ತಾ ಕುಣಿದಾಡುತ್ತಿದ್ದನು. ಮೀಕಲಳು ಇದನ್ನು ಕಂಡು ದಾವೀದನನ್ನು ತನ್ನ ಹೃದಯದಲ್ಲಿ ತಿರಸ್ಕರಿಸಿದಳು; ಅವನು ತನ್ನನ್ನು ತಾನೇ ಮೂರ್ಖನನ್ನಾಗಿ ಮಾಡಿಕೊಳ್ಳುತ್ತಿದ್ದಾನೆ ಎಂದು ಆಲೋಚಿಸಿಕೊಂಡಳು.
17 ದಾವೀದನು ಪವಿತ್ರ ಪೆಟ್ಟಿಗೆಗಾಗಿ ಒಂದು ಗುಡಾರವನ್ನು ನಿರ್ಮಿಸಿದನು. ಇಸ್ರೇಲರು, ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಗುಡಾರದಲ್ಲಿ ಪ್ರತ್ಯೇಕವಾದ ಸ್ಥಳದಲ್ಲಿ ಇಟ್ಟರು. ಆಗ ದಾವೀದನು ಯೆಹೋವನ ಸನ್ನಿಧಿಯಲ್ಲಿ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸಿದನು.
18 ಬಳಿಕ, ದಾವೀದನು ಸರ್ವಶಕ್ತನಾದ ಯೆಹೋವನ ಹೆಸರಿನಲ್ಲಿ ಜನರನ್ನು ಆಶೀರ್ವದಿಸಿದನು. 19 ದಾವೀದನು ಇಸ್ರೇಲಿನ ಜನರಲ್ಲಿ ಪ್ರತಿಯೊಬ್ಬ ಗಂಡಸಿಗೂ ಹೆಂಗಸಿಗೂ ಒಂದು ತುಂಡು ರೊಟ್ಟಿಯನ್ನೂ ಒಣಗಿದ ದ್ರಾಕ್ಷೆಹಣ್ಣಿನ ಉಂಡೆಯನ್ನೂ ಒಂದು ತುಂಡು ಮಾಂಸವನ್ನೂ ಕೊಟ್ಟನು. ಆಗ ಜನರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದರು.
ಮೀಕಲಳು ದಾವೀದನನ್ನು ತಿರಸ್ಕರಿಸಿದಳು
20 ದಾವೀದನು ತನ್ನ ಕುಟುಂಬದವರನ್ನು ಆಶೀರ್ವದಿಸಲು ಹೋದನು. ಆದರೆ ಸೌಲನ ಮಗಳಾದ ಮೀಕಲಳು ಅವನನ್ನು ಭೇಟಿಮಾಡಲು ಹೊರಗೆ ಬಂದು, “ಇಸ್ರೇಲರ ರಾಜನು ಈ ದಿನ ತನ್ನ ಗೌರವವನ್ನು ಕಾಪಾಡಿಕೊಳ್ಳಲಿಲ್ಲ! ನಾಚಿಕೆಯಿಲ್ಲದೆ ತನ್ನೆಲ್ಲ ಬಟ್ಟೆಗಳನ್ನೂ ತೆಗೆದುಹಾಕುವ ಮೂರ್ಖನಂತೆ, ನೀನು ನಿನ್ನ ಸೇವಕರ ಮತ್ತು ದಾಸಿಯರ ಮುಂದೆ ನಿನ್ನ ಬಟ್ಟೆಗಳನ್ನೆಲ್ಲ ತೆಗೆದು ಹಾಕಿದೆಯಲ್ಲ”[b] ಎಂದಳು.
21 ಆಗ ದಾವೀದನು ಮೀಕಲಳಿಗೆ, “ಯೆಹೋವನು ನಿನ್ನ ತಂದೆಯನ್ನಾಗಲಿ ಅವರ ಕುಟುಂಬದ ಇತರ ಯಾರನ್ನೇ ಆಗಲಿ ಆರಿಸಿಕೊಳ್ಳದೆ ನನ್ನನ್ನೇ ಇಸ್ರೇಲರ ನಾಯಕನನ್ನಾಗಿ ಆರಿಸಿಕೊಂಡಿದ್ದಾನೆ. ಆದ್ದರಿಂದಲೇ ನಾನು ಯೆಹೋವನ ಸನ್ನಿಧಿಯಲ್ಲಿ ಕುಣಿದಾಡಿದೆನು. 22 ಆತನ ಮುಂದೆ ಇನ್ನೂ ಹೀನವಾಗಿ ಕಾಣಿಸಿಕೊಳ್ಳುವುದಕ್ಕೂ ನನ್ನನ್ನು ನಾನು ಕಡೆಗಣಿಸಿಕೊಳ್ಳುವುದಕ್ಕೂ ಸಿದ್ಧನಿದ್ದೇನೆ. ಬಹುಶಃ ನೀನು ನನ್ನನ್ನು ಗೌರವಿಸದಿರಬಹುದು, ಆದರೆ ನೀನು ಯಾವ ದಾಸಿಯರ ಬಗ್ಗೆ ಮಾತನಾಡಿದೆಯೋ ಅವರು ನನ್ನನ್ನು ಗೌರವಿಸುತ್ತಾರೆ” ಎಂದು ಹೇಳಿದನು.
23 ಸೌಲನ ಮಗಳಾದ ಮೀಕಲಳು ಬಂಜೆಯಾಗಿ ಉಳಿದಳು. ಅವಳು ಮಕ್ಕಳೇ ಇಲ್ಲದೆ ಸತ್ತುಹೋದಳು.
Kannada Holy Bible: Easy-to-Read Version. All rights reserved. © 1997 Bible League International