ಯೆಹೆಜ್ಕೇಲ 45-46
Kannada Holy Bible: Easy-to-Read Version
ಪವಿತ್ರ ಕಾರ್ಯಕ್ಕಾಗಿ ದೇಶದ ವಿಭಜನೆ
45 “ನೀನು ಚೀಟುಹಾಕಿ ಇಸ್ರೇಲರ ಕುಲಗಳಿಗನುಸಾರವಾಗಿ ದೇಶವನ್ನು ವಿಂಗಡಿಸಬೇಕು. ಆ ಸಮಯದಲ್ಲಿ ಒಂದು ಭಾಗವನ್ನು ಪ್ರತ್ಯೇಕಿಸಿಡಬೇಕು. ಅದು ಯೆಹೋವನಿಗೋಸ್ಕರ ಮೀಸಲಾಗಿಡಲ್ಪಟ್ಟದ್ದು. ಆ ಪ್ರದೇಶವು ಇಪ್ಪತ್ತೈದು ಸಾವಿರ ಮೊಳ ಉದ್ದ ಮತ್ತು ಹತ್ತು ಸಾವಿರ ಮೊಳ ಅಗಲವಿರುವದು.[a] ಈ ಎಲ್ಲಾ ಜಾಗವು ಪರಿಶುದ್ಧವಾದದ್ದು. 2 ಆ ಪ್ರದೇಶದ ಮಧ್ಯ ಭಾಗದಲ್ಲಿ ಐನೂರು ಮೊಳ ಚೌಕದ ಸ್ಥಳ ದೇವಾಲಯಕ್ಕೆ ಮೀಸಲಾಗಿದೆ. ಈ ಭಾಗದ ಪರಿಧಿಯ ಉದ್ದಕ್ಕೂ ಐವತ್ತು ಮೊಳ ಅಗಲದ ಜಾಗವಿರುವದು. 3-4 ಪವಿತ್ರವಾದ ಪ್ರದೇಶದಲ್ಲಿ ಇಪ್ಪತ್ತೈದು ಸಾವಿರ ಮೊಳ ಉದ್ದದ ಮತ್ತು ಹತ್ತು ಸಾವಿರ ಮೊಳ ಅಗಲದ ಸ್ಥಳವು ಯಾಜಕರಿಗೆ ಸೇರಬೇಕು. ಅವರು ಯೆಹೋವನ ಸನ್ನಿಧಿಗೆ ಹೋಗಿ ಆತನ ಪವಿತ್ರಾಲಯದಲ್ಲಿ ಆತನ ಸೇವೆ ಮಾಡುವುದರಿಂದ ಪವಿತ್ರ ಪ್ರದೇಶದ ಈ ಭಾಗವು ಅವರಿಗೋಸ್ಕರವಾಗಿಯೂ ಅವರ ಮನೆಗಳಿಗೋಸ್ಕರವಾಗಿಯೂ ಇರಬೇಕು. ಆಲಯಕ್ಕಾಗಿ ಮೀಸಲಾದ ಐನೂರು ಮೊಳ ಚೌಕವಾದ ಜಾಗವು ಈ ಪವಿತ್ರ ಪ್ರದೇಶದೊಳಗಿರಬೇಕು. ಆ ಸ್ಥಳವು ಮಹಾ ಪವಿತ್ರವಾದ ಸ್ಥಳ. ಯಾಕೆಂದರೆ ಅತ್ಯಂತ ಪವಿತ್ರವಾದ ಆಲಯವು ಅಲ್ಲಿರುತ್ತದೆ. 5 ಪವಿತ್ರ ಪ್ರದೇಶದ ಉಳಿದರ್ಧ ಭಾಗವು ಅಂದರೆ ಇಪ್ಪತ್ತೈದು ಸಾವಿರ ಮೊಳ ಉದ್ದದ ಮತ್ತು ಹತ್ತು ಸಾವಿರ ಮೊಳ ಅಗಲದ ಜಾಗವು ಲೇವಿಯರಿಗೆ ಮೀಸಲಾಗಿದೆ. ಅವರು ವಾಸಿಸುವ ಪಟ್ಟಣವು ಈ ಪ್ರದೇಶದಲ್ಲಿರುತ್ತದೆ.[b]
6 “ಪವಿತ್ರ ಪ್ರದೇಶ ಭಾಗದ ಪಕ್ಕದಲ್ಲಿ ಇಪ್ಪತ್ತೈದು ಸಾವಿರ ಮೊಳ ಉದ್ದದ ಮತ್ತು ಐದು ಸಾವಿರ ಮೊಳ ಅಗಲದ ಪ್ರದೇಶ ಭಾಗವು ಸಹ ಇರುತ್ತದೆ. ಇಸ್ರೇಲಿನ ಉಳಿದೆಲ್ಲ ಜನರಿಗೂ ಈ ಪ್ರದೇಶ ಭಾಗವು ಪಟ್ಟಣವಾಗಿರುತ್ತದೆ. 7 ಅಧಿಪತಿಗೆ ಪವಿತ್ರ ಪ್ರದೇಶ ಭಾಗದ ಎರಡು ಕಡೆಗಳಲ್ಲೂ ಭೂಭಾಗಗಳಿರುವುದು. ಅಂದರೆ ಪವಿತ್ರ ಪ್ರದೇಶಕ್ಕೆ ಪಶ್ಚಿಮದಲ್ಲಿರುವ ಪಶ್ಚಿಮ ಭಾಗ ಮತ್ತು ಇಸ್ರೇಲರ ಪಟ್ಟಣದ ಪೂರ್ವ ಭೂಭಾಗ. ಇದು ಪವಿತ್ರ ಪ್ರದೇಶದ ಪೂರ್ವಭಾಗದಲ್ಲಿದೆ. ಅಧಿಪತಿಯ ಪಶ್ಚಿಮ ಭಾಗವು ಪವಿತ್ರ ಪ್ರದೇಶ ಭಾಗದ ಪಶ್ಚಿಮದ ಅಂಚಿನಿಂದ ಮೆಡಿಟರೇನಿಯನ್ ಸಮುದ್ರದವರೆಗೂ ವಿಸ್ತರಿಸಿದೆ. ಅಧಿಪತಿಯ ಪೂರ್ವ ಪ್ರದೇಶ ಭಾಗವು ಪೂರ್ವದಿಕ್ಕಿನ ಪಟ್ಟಣದ ಅಂಚಿನಿಂದ ಪೂರ್ವದ ಗಡಿಯವರೆಗೂ ವಿಸ್ತರಿಸಿದೆ. 8 ಭೂಪ್ರದೇಶದ ಈ ಭಾಗವು ಅಧಿಪತಿಗೆ ಸೇರಿದೆ. ಹೀಗೆ, ಹಿಂದಿನ ಕಾಲದ ಅಧಿಪತಿಗಳು ಮಾಡಿದಂತೆ ಈ ಅಧಿಪತಿಯು ಜನರನ್ನು ಹಿಂಸಿಸಿ ಅವರ ಭೂಮಿಯನ್ನು ಕಸಿದುಕೊಳ್ಳುವುದಿಲ್ಲ. ಉಳಿದ ಭೂಭಾಗವು ಇಸ್ರೇಲಿನ ಇತರ ಕುಲಗಳವರಿಗೆ ಯಾವಾಗಲೂ ಸೇರಿರುತ್ತದೆ.”
9 ಇದು ನನ್ನ ಒಡೆಯನಾದ ಯೆಹೋವನ ನುಡಿಗಳು: “ಇಸ್ರೇಲ್ ಜನರನ್ನು ಆಳುವವರೇ, ಅವರನ್ನು ಕಠಿಣವಾಗಿ ಆಳುವದನ್ನು ನಿಲ್ಲಿಸಿರಿ. ಅವರನ್ನು ಸುಲುಕೊಳ್ಳುವದನ್ನು ನಿಲ್ಲಿಸಿರಿ. ನ್ಯಾಯದಿಂದಿದ್ದು ಒಳ್ಳೆಯದನ್ನೆ ಮಾಡಿರಿ. ಅವರನ್ನು ಅವರ ಮನೆಗಳಿಂದ ಹೊರಡಿಸುವದನ್ನು ನಿಲ್ಲಿಸಿರಿ.” ಇದು ನನ್ನ ಒಡೆಯನಾದ ಯೆಹೋವನ ನುಡಿ.
10 “ಜನರನ್ನು ಮೋಸಪಡಿಸುವದನ್ನು ನಿಲ್ಲಿಸಿರಿ. ನ್ಯಾಯವಾದ ಅಳತೆಗಳನ್ನೂ ತ್ರಾಸುಗಳನ್ನೂ ಉಪಯೋಗಿಸಿರಿ. 11 ಏಫಾ ಮತ್ತು ಬತ್ ಇವೆರಡು ಒಂದೇ ಅಳತೆಯುಳ್ಳವುಗಳಾಗಿರಬೇಕು. ಬತ್ ಮತ್ತು ಏಫಾ ಇವೆರಡೂ ಹೋಮೆರಿನ ಹತ್ತನೇ ಒಂದು ಪಾಲು. ಆ ಅಳತೆಗಳು ಹೋಮೆರಿಗೆ ಹೊಂದಿಕೊಂಡಿರಬೇಕು. 12 ಒಂದು ಶೆಕೆಲ್ ಇಪ್ಪತ್ತು ಗೆರಾ ಇರಬೇಕು. ಒಂದು ಮಿನವು ಅರವತ್ತು ಶೆಕೆಲ್‌ನಷ್ಟು ಇರಬೇಕು. ಅದು ಇಪ್ಪತ್ತು ಶೆಕೆಲ್ ಮತ್ತು ಇಪ್ಪತ್ತೈದು ಶೆಕೆಲ್ ಮತ್ತು ಹದಿನೈದು ಶೆಕೆಲ್‌ಗಳಿಗೆ ಸಮಾನವಾಗಿರಬೇಕು.
13 “ನೀವು ಸಮರ್ಪಿಸಬೇಕಾದ ವಿಶೇಷ ಕಾಣಿಕೆಯಿದು:
ಒಂದು ಹೋಮೆರ್ ಗೋಧಿಗೆ 1/6 ಏಫಾ ಗೋಧಿ ಕೊಡಬೇಕು.
ಒಂದು ಹೋಮರ್ ಬಾರ್ಲಿಗೆ 1/6 ಏಫಾ ಬಾರ್ಲಿ ಕೊಡಬೇಕು;
14 ಒಂದು ಕೋರ್ ಆಲೀವ್ ಎಣ್ಣೆಗೆ 1/10 ಬತ್ ಆಲಿವ್ ಎಣ್ಣೆಯನ್ನು ಕೊಡಬೇಕು;
ಹತ್ತು ಬತ್ ಅಂದರೆ ಒಂದು ಹೋಮೆರ್, ಹತ್ತು ಬತ್ ಅಂದರೆ ಒಂದು ಕೋರ್ ಎಂಬುದನ್ನು ಜ್ಞಾಪಕದಲ್ಲಿಡಿರಿ.
15 ಇಸ್ರೇಲಿನ ನೀರಾವರಿಯ ಹುಲ್ಲುಗಾವಲಿನ ಇನ್ನೂರು ಕುರಿಗಳಲ್ಲಿ
ಒಂದು ಕುರಿಯನ್ನು ಕೊಡಬೇಕು.
“ಧಾನ್ಯನೈವೇದ್ಯಗಳಿಗೂ, ಸರ್ವಾಂಗಹೋಮಗಳಿಗೂ ಸಮಾಧಾನಯಜ್ಞಗಳಿಗೂ ಈ ಕಾಣಿಕೆಗಳನ್ನು ಕೊಡಬೇಕು. ಈ ಕಾಣಿಕೆಗಳು ಜನರನ್ನು ಶುದ್ಧಮಾಡುವವು.” ನನ್ನ ಒಡೆಯನಾದ ಯೆಹೋವನ ನುಡಿಗಳಿವು.
16 “ಇಸ್ರೇಲಿನಲ್ಲಿರುವ ಪ್ರತಿಯೊಬ್ಬನು ಈ ಕಾಣಿಕೆಯನ್ನು ಇಸ್ರೇಲಿನ ಅಧಿಪತಿಗೆ ಕೊಡಬೇಕು. 17 ಆದರೆ ವಿಶೇಷವಾದ ಹಬ್ಬದ ಆಚರಣೆಗಳಿಗಾಗಿ ಅಧಿಪತಿಯು ಕಾಣಿಕೆಗಳನ್ನು ಕೊಡಲೇಬೇಕು. ಅಧಿಪತಿಯು ಪಾಪಪರಿಹಾರಕಯಜ್ಞಗಳನ್ನೂ ಧಾನ್ಯಾರ್ಪಣೆಗಳನ್ನೂ ಪಾನದ್ರವ್ಯಾರ್ಪಣೆಗಳನ್ನೂ ಕೊಡಬೇಕು. ಈ ಕಾಣಿಕೆಗಳನ್ನು ಪ್ರತಿಯೊಂದು ಹಬ್ಬದ ದಿನದಲ್ಲಿಯೂ ಅಮಾವಾಸ್ಯೆಯಲ್ಲಿಯೂ ಸಬ್ಬತ್ ದಿನದಲ್ಲಿಯೂ ಇಸ್ರೇಲ್ ಜನಾಂಗದ ಎಲ್ಲಾ ವಿಶೇಷ ಹಬ್ಬಗಳಲ್ಲಿಯೂ ಅರ್ಪಿಸಬೇಕು. ಇಸ್ರೇಲ್ ಸಂತತಿಯ ಜನರನ್ನು ಶುದ್ಧೀಕರಿಸುವುದಕ್ಕಾಗಿ ಅಧಿಪತಿಯು ಈ ಕಾಣಿಕೆಗಳನ್ನು ಕೊಡಬೇಕು.”
18 ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದ್ದಾನೆ: “ಮೊದಲನೇ ತಿಂಗಳಿನ ಮೊದಲನೇ ದಿವಸದಲ್ಲಿ ಪೂರ್ಣಾಂಗವಾದ ಒಂದು ಎಳೇ ಹೋರಿಯನ್ನು ತೆಗೆದುಕೊಂಡು ಅದನ್ನು ಆಲಯದ ಶುದ್ಧೀಕರಣಕ್ಕಾಗಿ ಉಪಯೋಗಿಸಬೇಕು. 19 ಪಾಪಪರಿಹಾರಕಯಜ್ಞಕ್ಕೆ ಬಲಿಯರ್ಪಿಸಿದ್ದ ಪ್ರಾಣಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಅದನ್ನು ಆಲಯದ ಬಾಗಿಲಿನ ನಿಲುವು ಕಂಬಗಳಿಗೂ, ಯಜ್ಞವೇದಿಕೆಯ ಸಜ್ಜದ ನಾಲ್ಕು ಮೂಲೆಗಳಿಗೂ ಮತ್ತು ಒಳಗಿನ ಪ್ರಾಕಾರದ ಪ್ರವೇಶ ದ್ವಾರದ ಎರಡು ನಿಲುವು ಕಂಬಗಳಿಗೂ ಹಚ್ಚಬೇಕು. 20 ಯಾರಾದರೂ ಆಕಸ್ಮಿಕವಾಗಿ ಅಥವಾ ತಿಳಿಯದೆ ಪಾಪಮಾಡಿದ್ದಲ್ಲಿ, ಹೀಗೆಯೇ ತಿಂಗಳಿನ ಏಳನೇ ದಿವಸದಲ್ಲಿಯೂ ಮಾಡಬೇಕು. ಈ ರೀತಿಯಾಗಿ ಆಲಯವನ್ನು ಶುದ್ಧೀಕರಿಸುವಿರಿ.
ಪಸ್ಕಹಬ್ಬದ ಸಮಯದಲ್ಲಿ ಕಾಣಿಕೆ ಸಮರ್ಪಣೆ
21 “ಮೊದಲನೇ ತಿಂಗಳಿನ ಹದಿನಾಲ್ಕನೇ ದಿವಸದಲ್ಲಿ ನೀವು ಪಸ್ಕಹಬ್ಬ ಆಚರಿಸಬೇಕು. ಹುಳಿ ಇಲ್ಲದ ರೊಟ್ಟಿಯ ಹಬ್ಬವು ಈ ಸಮಯದಲ್ಲಿ ಪ್ರಾರಂಭವಾಗುವದು. ಆ ಹಬ್ಬವು ಏಳು ದಿವಸಗಳ ತನಕ ನಡೆಯುವದು. 22 ಆ ಸಮಯದಲ್ಲಿ ಪ್ರಜೆಯನ್ನಾಳುವ ರಾಜನು ತನಗೋಸ್ಕರವಾಗಿಯೂ ಇಸ್ರೇಲಿನ ಎಲ್ಲಾ ಜನರಿಗೋಸ್ಕರವಾಗಿಯೂ ಒಂದು ಹೋರಿಯನ್ನು ಬಲಿಯರ್ಪಿಸಬೇಕು. ಅದು ಪಾಪಪರಿಹಾರಕಯಜ್ಞಕ್ಕಾಗಿ ಸಮರ್ಪಿಸಲ್ಪಡುವದು. 23 ಹಬ್ಬದ ಏಳು ದಿವಸಗಳಲ್ಲಿಯೂ ರಾಜನು ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಪಾಪಪರಿಹಾರಕಯಜ್ಞಕ್ಕಾಗಿ ಸಮರ್ಪಿಸಬೇಕು. 24 ರಾಜನು ಧಾನ್ಯಸಮರ್ಪಣೆಗಾಗಿ ಒಂದು ಏಫಾ ಜವೆಗೋಧಿಯನ್ನು ಹೋರಿಯೊಂದಿಗೂ ಒಂದು ಏಫಾ ಜವೆಗೋಧಿಯನ್ನು ಟಗರಿನೊಂದಿಗೂ ಕೊಡಬೇಕು. ಅದರೊಂದಿಗೆ ರಾಜನು ಪ್ರತೀ ಒಂದು ಏಫಾ ಜವೆಗೋಧಿಯೊಂದಿಗೆ ಒಂದು ಹಿನ್ ಎಣ್ಣೆಯನ್ನೂ ಕೊಡಬೇಕು. 25 ಪರ್ಣಶಾಲೆಗಳ ಹಬ್ಬದ ಏಳು ದಿವಸಗಳಲ್ಲೂ ರಾಜನು ಹಾಗೆಯೇ ಮಾಡಬೇಕು. ಈ ಹಬ್ಬವು ಏಳನೇ ತಿಂಗಳಿನ ಹದಿನೈದನೇ ದಿವಸದಲ್ಲಿ ಪ್ರಾರಂಭವಾಗುವದು. ಈ ಕಾಣಿಕೆಯು ಸರ್ವಾಂಗಹೋಮ, ಪಾಪಪರಿಹಾರಕಯಜ್ಞ, ಧಾನ್ಯಸಮರ್ಪಣೆ ಮತ್ತು ಎಣ್ಣೆಯ ಸಮರ್ಪಣೆಗಳಿಗಾಗಿ ಅವೆ.”
ರಾಜನೂ ಹಬ್ಬಗಳೂ
46 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಒಳಗಿನ ಪ್ರಾಕಾರದ ಪೂರ್ವ ದಿಕ್ಕಿನ ದ್ವಾರವು ಆರು ಕೆಲಸದ ದಿವಸಗಳಲ್ಲಿ ಮುಚ್ಚಲ್ಪಡುವದು. ಅದು ಸಬ್ಬತ್ ದಿವಸಗಳಲ್ಲಿಯೂ ಅಮಾವಾಸ್ಯೆಯ ದಿವಸಗಳಲ್ಲಿಯೂ ತೆರೆಯಲ್ಪಡುವದು. 2 ಅಧಿಪತಿಯು ಆ ದ್ವಾರದ ಕೈಸಾಲೆಯೊಳಗೆ ಪ್ರವೇಶಿಸಿ ಅದರ ನಿಲುವು ಕಂಬದ ಬಳಿಯಲ್ಲಿ ನಿಲ್ಲುವನು. ಅಧಿಪತಿಯು ಕೊಡುವ ಸರ್ವಾಂಗಹೋಮವನ್ನು ಮತ್ತು ಸಮಾಧಾನಯಜ್ಞವನ್ನು ಆಗ ಯಾಜಕರು ಸಮರ್ಪಿಸುವರು. ಅಧಿಪತಿಯು ಆ ದ್ವಾರದ ಮುಂಭಾಗದಲ್ಲಿ ಆರಾಧಿಸುವನು. ಅನಂತರ ಅವನು ಹೊರಗೆ ಹೋಗುವನು. ಆ ದ್ವಾರದ ಕದಗಳು ಸಾಯಂಕಾಲದ ತನಕ ತೆರೆದೇ ಇರುವವು. 3 ಸಬ್ಬತ್ ಮತ್ತು ಅಮಾವಾಸ್ಯೆ ದಿವಸಗಳಲ್ಲಿ ಸಾಮಾನ್ಯ ಜನರೂ ಅದೇ ದ್ವಾರದ ಬಳಿ ಆರಾಧಿಸುವರು.
4 “ಸಬ್ಬತ್ ದಿವಸದಲ್ಲಿ ರಾಜನು ಯೆಹೋವನಿಗೆ ಸರ್ವಾಂಗಹೋಮವನ್ನು ಸಮರ್ಪಿಸುವನು. ಅವನು ಅದಕ್ಕಾಗಿ ನಿಷ್ಕಳಂಕವಾದ ಆರು ಕುರಿಗಳನ್ನೂ ನಿಷ್ಕಳಂಕವಾದ ಒಂದು ಟಗರನ್ನೂ ಕೊಡಬೇಕು. 5 ಟಗರಿನೊಂದಿಗೆ ಒಂದು ಏಫಾ ಧಾನ್ಯಸಮರ್ಪಣೆಗಾಗಿ ಕೊಡಬೇಕು. ಕುರಿಗಳೊಂದಿಗೆ ಧಾನ್ಯಸಮರ್ಪಣೆಗಾಗಿ ರಾಜನು ತನ್ನ ಇಷ್ಟಬಂದ ಹಾಗೆ ಕೊಡಬಹುದು. ಆದರೆ ಪ್ರತೀ ಒಂದು ಏಫಾ ಧಾನ್ಯದೊಂದಿಗೆ ಒಂದು ಹಿನ್ ಆಲಿವ್ ಎಣ್ಣೆಯನ್ನು ಕೊಡಬೇಕು.
6 “ಅಮಾವಾಸ್ಯೆ ದಿವಸ ಅವನು ಒಂದು ಎಳೇ ಪೂರ್ಣಾಂಗವಾದ ಹೋರಿಯನ್ನು ಸಮರ್ಪಿಸಬೇಕು. ಅದರ ಜೊತೆಗೆ ಆರು ಪೂರ್ಣಾಂಗವಾದ ಕುರಿಗಳನ್ನೂ ಒಂದು ಪೂರ್ಣಾಂಗವಾದ ಟಗರನ್ನೂ ಸಮರ್ಪಿಸಬೇಕು. 7 ರಾಜನು ಒಂದು ಏಫಾ ಧಾನ್ಯವನ್ನು ಹೋರಿಯೊಂದಿಗೂ ಇನ್ನೊಂದು ಏಫಾ ಧಾನ್ಯವನ್ನು ಟಗರಿನೊಂದಿಗೂ ಕೊಡಬೇಕು. ಆದರೆ ಅಧಿಪತಿಯು ಕುರಿಗಳೊಂದಿಗೆ ತನಗಿಷ್ಟವಾದಷ್ಟು ಧಾನ್ಯಸಮರ್ಪಣೆಯನ್ನು ಕೊಡಬಹುದು. ಆದರೆ ಅವನು ಪ್ರತೀ ಒಂದು ಏಫಾ ಧಾನ್ಯಕ್ಕೆ ಒಂದು ಹಿನ್ ಆಲಿವ್ ಎಣ್ಣೆಯನ್ನು ಕೊಡಲೇಬೇಕು.
8 “ಅಧಿಪತಿಯು ಆಲಯದ ಸಂಕೀರ್ಣ ಪ್ರವೇಶಿಸುವಾಗ ಅವನು ಪೂರ್ವದಿಕ್ಕಿನ ದ್ವಾರದಿಂದ ಪ್ರವೇಶಿಸಬೇಕು. ಮತ್ತು ಅದರ ಮೂಲಕವೇ ಅವನು ಹೊರಗೆ ಹೋಗಬೇಕು.
9 “ಸಾಮಾನ್ಯ ಜನರು ವಿಶೇಷ ಹಬ್ಬದ ದಿವಸಗಳಲ್ಲಿ ಯೆಹೋವನನ್ನು ಸಂಧಿಸಲು ಬರುವಾಗ ಉತ್ತರ ದ್ವಾರದಿಂದ ಬರುವವರು ದಕ್ಷಿಣ ದ್ವಾರದ ಮೂಲಕ ಹೊರಗೆ ಹೋಗಬೇಕು. ದಕ್ಷಿಣದ ದ್ವಾರದಿಂದ ಒಳ ಪ್ರವೇಶಿಸುವವನು ಉತ್ತರ ದ್ವಾರದ ಮೂಲಕ ಹೊರಗೆ ಹೋಗಬೇಕು. ಯಾರೂ ಬಂದ ದಾರಿಯಿಂದ ಹಿಂದೆ ಹೋಗಬಾರದು. ಪ್ರತಿಯೊಬ್ಬನೂ ನೇರವಾಗಿ ಮುಂದಕ್ಕೆ ಹೋಗಬೇಕು. 10 ರಾಜನು ತನ್ನ ಜನರೊಂದಿಗೆ ಇರಬೇಕು. ಜನರು ಒಳಗೆ ಪ್ರವೇಶ ಮಾಡುವಾಗ ಅವನೂ ಅವರ ಜೊತೆಯಲ್ಲಿರಬೇಕು. ಅವರು ಹೊರಗೆ ಹೋಗುವಾಗಲೂ ಅವನು ಅವರ ಜೊತೆಯಲ್ಲಿರಬೇಕು.
11 “ಹಬ್ಬದ ದಿವಸಗಳಲ್ಲಿ ಮತ್ತು ಬೇರೆ ವಿಶೇಷ ದಿವಸಗಳಲ್ಲಿ ಪ್ರತಿ ಎಳೇ ಹೋರಿಯೊಂದಿಗೆ ಒಂದು ಏಫಾ ಧಾನ್ಯಸಮರ್ಪಣೆಯನ್ನು ಸಮರ್ಪಿಸಬೇಕು. ಮತ್ತು ಪ್ರತಿ ಒಂದು ಟಗರಿನೊಂದಿಗೆ ಒಂದು ಏಫಾ ಧಾನ್ಯವನ್ನು ಸಮರ್ಪಿಸಬೇಕು. ಕುರಿಗಳೊಂದಿಗೆ ಸಮರ್ಪಿಸಬೇಕಾದ ಧಾನ್ಯವು ರಾಜನಿಗೆ ಇಷ್ಟದ ಪ್ರಕಾರ ಇರುವದು. ಅದರ ಜೊತೆಗೆ ಒಂದು ಏಫಾ ಧಾನ್ಯದೊಂದಿಗೆ ಒಂದು ಹಿನ್ ಎಣ್ಣೆಯನ್ನೂ ಕೊಡಬೇಕು.
12 “ರಾಜನು ತನ್ನ ಇಚ್ಛೆಯ ಪ್ರಕಾರ ಯೆಹೋವನಿಗೆ ಸರ್ವಾಂಗಹೋಮ ಅಥವಾ ಸಮಾಧಾನಯಜ್ಞ ಅಥವಾ ಮನಃಪೂರ್ವಕವಾದ ಕಾಣಿಕೆಯನ್ನು ಸಮರ್ಪಿಸುವಾಗ ಅವನಿಗಾಗಿ ಪೂರ್ವದ ಬಾಗಿಲು ತೆಗೆಯಲ್ಪಡಬೇಕು. ಆದರೆ ಅವನು ಸಬ್ಬತ್ ದಿನದಂತೆ ತನ್ನ ಕಾಣಿಕೆಗಳನ್ನು ಸಮರ್ಪಿಸಿದ ನಂತರ ಅವನು ಹಿಂತಿರುಗಿದಾಗ ಪ್ರವೇಶ ದ್ವಾರವು ಮುಚ್ಚಲ್ಪಡಬೇಕು.
ದೈನಂದಿನ ಸಮರ್ಪಣೆ
13 “ನೀನು ಪ್ರತಿದಿನ ಮುಂಜಾನೆ ಒಂದು ವರ್ಷದ ಪೂರ್ಣಾಂಗವಾದ ಕುರಿಯನ್ನು ಸರ್ವಾಂಗಹೋಮವಾಗಿ ಯೆಹೋವನಿಗೆ ಸಮರ್ಪಿಸಬೇಕು. 14 ಪ್ರತಿ ಮುಂಜಾನೆ ನೀನು ಐದು ಸೇರು ಗೋಧಿಹಿಟ್ಟನ್ನೂ ಎರಡು ಸೇರು ಎಣ್ಣೆಯನ್ನೂ ಒಟ್ಟಾಗಿ ಬೆರೆಸಿ ಪ್ರತಿದಿನ ಯೆಹೋವನಿಗೆ ಧಾನ್ಯ ನೈವೇದ್ಯವಾಗಿ ಸಮರ್ಪಿಸಬೇಕು. 15 ಹೀಗೆ ಅವರು ಶಾಶ್ವತವಾಗಿ ಕುರಿ, ಧಾನ್ಯ ಮತ್ತು ಎಣ್ಣೆಯನ್ನು ಪ್ರತೀ ಮುಂಜಾನೆ ಸರ್ವಾಂಗಹೋಮವಾಗಿ ಸಮರ್ಪಿಸಬೇಕು.”
ರಾಜನ ಸ್ವಾಸ್ತ್ಯದ ಬಗ್ಗೆ ಕಟ್ಟಳೆಗಳು
16 ನನ್ನ ಒಡೆಯನಾದ ಯೆಹೋವನು ಹೇಳಿದ್ದೇನೆಂದರೆ, “ಒಬ್ಬ ರಾಜನು ತನ್ನ ಗಂಡುಮಕ್ಕಳಿಗೆ ತನ್ನ ಭೂಮಿಯ ಭಾಗವನ್ನು ಉಚಿತವಾಗಿ ಕೊಟ್ಟರೆ ಅದು ಅವನ ಗಂಡುಮಕ್ಕಳಿಗೆ ಸೇರುವದು. ಅದು ಅವರ ಆಸ್ತಿಯಾಗುವದು. 17 ಆದರೆ ಆ ರಾಜನು ತನ್ನ ಭೂಮಿಯ ಒಂದು ಭಾಗವನ್ನು ತನ್ನ ದಾಸನಿಗೆ ಉಚಿತವಾಗಿ ಕೊಟ್ಟರೆ, ಆ ಭೂಮಿಯು ಬಿಡುಗಡೆ ಸಂವತ್ಸರದ ತನಕ ಮಾತ್ರವೇ ದಾಸನದ್ದಾಗಿರುವದು. ಅನಂತರ ಅದು ರಾಜನಿಗೆ ಹಿಂದೆ ಹೋಗುವದು. ರಾಜನ ಗಂಡುಮಕ್ಕಳು ಮಾತ್ರ ರಾಜನಿಂದ ಹೊಂದಿದ ಭೂಮಿಯನ್ನು ನಿತ್ಯಕಾಲಕ್ಕೂ ಅನುಭೋಗಿಸುವರು. 18 ರಾಜನು ತನ್ನ ಪ್ರಜೆಯ ಭೂಮಿಯನ್ನು ತನ್ನ ಉಪಯೋಗಕ್ಕೆಂದು ಬಲತ್ಕಾರದಿಂದ ಇಟ್ಟುಕೊಳ್ಳಬಾರದು ಅಥವಾ ತೆಗೆದುಕೊಳ್ಳಲೂಬಾರದು. ತನ್ನ ಸ್ವಂತ ಭೂಮಿಯಿಂದ ಪಾಲನ್ನು ತನ್ನ ಮಕ್ಕಳಿಗೆ ಕೊಡಬೇಕು. ಹೀಗೆ ನನ್ನ ಜನರು ತಮ್ಮ ಭೂಮಿಯನ್ನು ಕಳೆದುಕೊಳ್ಳುವದಿಲ್ಲ.”
ವಿಶೇಷ ಅಡಿಗೆಮನೆ
19 ಬಳಿಕ ಆ ಪುರುಷನು ನನ್ನನ್ನು ಮಹಾದ್ವಾರದ ಪಕ್ಕದಲ್ಲಿನ ಪ್ರವೇಶಮಾರ್ಗವಾಗಿ ಉತ್ತರದಲ್ಲಿರುವ ಯಾಜಕರ ಪವಿತ್ರ ಕೋಣೆಗಳಿಗೆ ಕರೆದುಕೊಂಡು ಹೋದನು. 20 ಅವನು ನನಗೆ ಹೇಳಿದ್ದೇನೆಂದರೆ, “ಈ ಸ್ಥಳದಲ್ಲಿ ಯಾಜಕರು ದೋಷಪರಿಹಾರಕ ಮತ್ತು ಪಾಪಪರಿಹಾರಕಯಜ್ಞದ ಮಾಂಸಗಳನ್ನು ಬೇಯಿಸುವರು. ಇದೇ ಸ್ಥಳದಲ್ಲಿ ಧಾನ್ಯಸಮರ್ಪಣೆಯ ಹಿಟ್ಟಿನಿಂದ ರೊಟ್ಟಿಯನ್ನು ಸುಡುವರು. ಇದನ್ನು ಇಲ್ಲಿಯೇ ಯಾಕೆ ಮಾಡುತ್ತಾರೆಂದರೆ ಅವರು ಹೊರಗಿನ ಪ್ರಾಕಾರದೊಳಗೆ ಆ ಪವಿತ್ರ ವಸ್ತುವನ್ನು ತರುವ ಅವಶ್ಯಕತೆ ಇರುವದಿಲ್ಲ. ಸಾರ್ವಜನಿಕರು ಕೂಡುವ ಸ್ಥಳದಲ್ಲಿ ಆ ಪವಿತ್ರ ವಸ್ತುವನ್ನು ತರಬಾರದು.”
21 ಆಮೇಲೆ ಅವನು ಹೊರಗಿನ ಪ್ರಾಕಾರಕ್ಕೆ ಕರೆದುಕೊಂಡು ಹೋದನು. ಆ ಪ್ರಾಕಾರದ ನಾಲ್ಕು ಮೂಲೆಗಳಿಗೆ ನನ್ನನ್ನು ಕರೆದುಕೊಂಡು ಹೋದನು. ವಿಶಾಲವಾದ ಪ್ರಾಕಾರದ ಪ್ರತೀ ಮೂಲೆಗಳಲ್ಲಿ ಇನ್ನೊಂದು ಚಿಕ್ಕ ಪ್ರಾಕಾರವಿರುವದನ್ನು ಕಂಡೆನು. 22 ಆ ನಾಲ್ಕು ಮೂಲೆಗಳಲ್ಲಿಯೂ ಗೋಡೆಗಳಿಂದ ಆವರಿಸಲ್ಪಟ್ಟಿದ್ದ ಒಂದು ಚಿಕ್ಕ ಪ್ರಾಕಾರವಿತ್ತು. ಈ ಪ್ರಾಕಾರದ ಉದ್ದ ನಲವತ್ತು ಮೊಳ ಮತ್ತು ಅಗಲ ಮೂವತ್ತು ಮೊಳ. ಈ ನಾಲ್ಕು ಚಿಕ್ಕ ಪ್ರಾಕಾರಗಳು ಒಂದೇ ಅಳತೆಯುಳ್ಳವುಗಳಾಗಿದ್ದವು. 23 ಇವುಗಳ ಸುತ್ತಲೂ ಇಟ್ಟಿಗೆಯ ಗೋಡೆ ಕಟ್ಟಲ್ಪಟ್ಟಿತ್ತು. ಈ ಗೋಡೆಯೊಳಗೆ ಅಡಿಗೆ ಮಾಡುವದಕ್ಕಾಗಿ ಸ್ಥಳವನ್ನು ಏರ್ಪಡಿಸಲಾಗಿತ್ತು. 24 ಅವನು ನನಗೆ ಹೇಳಿದ್ದೇನೆಂದರೆ, “ಆಲಯದ ಈ ಸ್ಥಳದಲ್ಲಿ ಸೇವೆಮಾಡುವ ಜನರು ಸಾಮಾನ್ಯ ಜನರ ಯಜ್ಞದ ಮಾಂಸವನ್ನು ಆ ಜನರಿಗಾಗಿ ಬೇಯಿಸುವರು.”
Footnotes
- 45:1 ಹತ್ತು ಸಾವಿರ ಮೊಳ ಅಗಲ ಪುರಾತನ ಗ್ರೀಕ್ ಪ್ರತಿಯಲ್ಲಿ “ಇಪ್ಪತ್ತು ಸಾವಿರ ಮೊಳ” ಎಂದು ಬರೆದಿದೆ. ಯಾಜಕರಿಗೋಸ್ಕರ ಮತ್ತು ದೇವಾಲಯಕ್ಕೋಸ್ಕರ ಮೀಸಲಾಗಿದ್ದ ಪ್ರದೇಶವನ್ನು ಹೀಬ್ರೂ ಭಾಷೆಯ ಪ್ರತಿಯು ಸೂಚಿಸುತ್ತಿರಬಹುದು. ಯಾಜಕರಿಗೋಸ್ಕರ, ದೇವಾಲಯಕ್ಕೋಸ್ಕರ ಮತ್ತು ಲೇವಿಯರಿಗೋಸ್ಕರ ಮೀಸಲಾಗಿದ್ದ ಪ್ರದೇಶವನ್ನು ಗ್ರೀಕ್ ಪ್ರತಿಯು ಸೂಚಿಸುತ್ತಿರಬಹುದು.
- 45:5 ಅವರು … ಈ ಪ್ರದೇಶದಲ್ಲಿರುತ್ತದೆ ಹೀಬ್ರೂ ಪ್ರತಿಯಲ್ಲಿ “ಈ ಪ್ರದೇಶದೊಳಗೆ 20 ಭಾಗಗಳು” ಎಂದು ಬರೆದಿದೆ.
Kannada Holy Bible: Easy-to-Read Version. All rights reserved. © 1997 Bible League International