Add parallel Print Page Options

ಪಾಪದ ಪ್ರಾರಂಭ

ದೇವರಾದ ಯೆಹೋವನು ಸೃಷ್ಟಿಸಿದ ಎಲ್ಲ ಭೂಜಂತುಗಳಲ್ಲಿ ಸರ್ಪವು ಅತಿ ಯುಕ್ತಿಯುಳ್ಳದ್ದಾಗಿತ್ತು. ಸರ್ಪವು ಸ್ತ್ರೀಯನ್ನು ಮೋಸಗೊಳಿಸಲು ಅವಳ ಬಳಿಗೆ ಬಂದು, “ಏನಮ್ಮಾ, ಈ ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಕೂಡದೆಂದು ದೇವರು ನಿಮಗೆ ಹೇಳಿರುವುದು ನಿಜವೇ?” ಎಂದು ಕೇಳಿತು.

ಸ್ತ್ರೀಯು ಸರ್ಪಕ್ಕೆ, “ಇಲ್ಲ! ದೇವರು ಹಾಗೆ ಹೇಳಲಿಲ್ಲ! ತೋಟದಲ್ಲಿರುವ ಮರಗಳ ಹಣ್ಣುಗಳನ್ನು ನಾವು ತಿನ್ನಬಹುದು. ಆದರೆ ಒಂದು ಮರದ ಹಣ್ಣನ್ನು ಮಾತ್ರ ನಾವು ತಿನ್ನಕೂಡದು. ದೇವರು ನಮಗೆ, ‘ತೋಟದ ಮಧ್ಯದಲ್ಲಿರುವ ಮರದ ಹಣ್ಣನ್ನು ನೀವು ತಿನ್ನಕೂಡದು; ಆ ಮರವನ್ನು ಮುಟ್ಟಕೂಡದು, ಇಲ್ಲವಾದರೆ ನೀವು ಸಾಯುವಿರಿ’ ಎಂದು ಹೇಳಿದ್ದಾನೆ” ಎಂಬುದಾಗಿ ಉತ್ತರಕೊಟ್ಟಳು.

ಅದಕ್ಕೆ ಸರ್ಪವು ಸ್ತ್ರೀಗೆ, “ನೀವು ಸಾಯುವುದಿಲ್ಲ. ನೀವು ಆ ಮರದ ಹಣ್ಣನ್ನು ತಿಂದರೆ ನಿಮಗೆ ಒಳ್ಳೆಯದರ ಮತ್ತು ಕೆಟ್ಟದ್ದರ ಬಗ್ಗೆ ಜ್ಞಾನ ಬರುತ್ತದೆಯೆಂದು ದೇವರಿಗೆ ಗೊತ್ತಿದೆ. ಅಲ್ಲದೆ ನೀವು ದೇವರಿಗೆ ಸರಿಸಮಾನರಾಗುವಿರಿ” ಎಂದು ಹೇಳಿತು.

ಸ್ತ್ರೀಗೆ ಆ ಮರ ಸುಂದರವಾಗಿ ಕಂಡಿತು. ಅದರ ಹಣ್ಣು ಆಕೆಗೆ ತಿನ್ನಲು ಯೋಗ್ಯವಾಗಿ ಕಂಡಿತು. ಆ ಮರ ತನ್ನನ್ನು ಜ್ಞಾನಿಯನ್ನಾಗಿ ಮಾಡುತ್ತದೆಯೆಂದು ಆಕೆ ಉತ್ಸಾಹಗೊಂಡಳು. ಆದ್ದರಿಂದ ಸ್ತ್ರೀಯು ಆ ಮರದ ಹಣ್ಣನ್ನು ಕಿತ್ತುಕೊಂಡು ತಿಂದಳು; ತನ್ನೊಂದಿಗಿದ್ದ ಗಂಡನಿಗೂ ಸ್ವಲ್ಪ ಹಣ್ಣನ್ನು ಕೊಟ್ಟಳು. ಅವನು ಸಹ ಅದನ್ನು ತಿಂದನು.

ಕೂಡಲೇ ಪುರುಷನಲ್ಲಿಯೂ ಸ್ತ್ರೀಯಲ್ಲಿಯೂ ಬದಲಾವಣೆಗಳಾದವು. ಅವರ ಕಣ್ಣುಗಳು ತೆರೆದವು. ಅವರಿಗೆ ಎಲ್ಲವೂ ವಿಚಿತ್ರವಾಗಿ ಕಂಡವು. ತಾವು ಬೆತ್ತಲೆಯಿಂದಿರುವುದನ್ನು ಕಂಡು ಅಂಜೂರದ ಎಲೆಗಳನ್ನು ಕಿತ್ತು ಒಂದಕ್ಕೊಂದು ಜೋಡಿಸಿ ಸುತ್ತಿಕೊಂಡರು.

ಅಂದು ಸಂಜೆ ತಂಗಾಳಿ ಬೀಸುತ್ತಿರಲು ದೇವರಾದ ಯೆಹೋವನು ತೋಟದಲ್ಲಿ ತಿರುಗಾಡುತ್ತಿದ್ದನು. ಆತನ ಸಪ್ಪಳವನ್ನು ಕೇಳಿದ ಪುರುಷನು ಮತ್ತು ಅವನ ಹೆಂಡತಿಯು ತೋಟದ ಮರಗಳ ಮರೆಯಲ್ಲಿ ಅಡಗಿಕೊಂಡರು. ದೇವರಾದ ಯೆಹೋವನು ಪುರುಷನಿಗೆ, “ನೀನು ಎಲ್ಲಿರುವೆ?” ಎಂದು ಕೂಗಿ ಕೇಳಿದನು.

10 ಅದಕ್ಕೆ ಪುರುಷನು, “ನೀನು ತೋಟದಲ್ಲಿ ತಿರುಗಾಡುತ್ತಿರುವ ಸಪ್ಪಳವನ್ನು ನಾನು ಕೇಳಿದೆನು. ಆದರೆ ನಾನು ಬೆತ್ತಲೆಯಾಗಿದ್ದರಿಂದ ಭಯದಿಂದ ಅಡಗಿಕೊಂಡೆನು” ಎಂದು ಹೇಳಿದನು.

11 ದೇವರು ಪುರುಷನಿಗೆ, “ನೀನು ಬೆತ್ತಲೆಯಾಗಿರುವೆ ಎಂದು ನಿನಗೆ ಹೇಳಿದವರು ಯಾರು? ವಿಶೇಷವಾದ ಆ ಮರದ ಹಣ್ಣನ್ನು ನೀನು ತಿಂದೆಯಾ? ಆ ಮರದ ಹಣ್ಣನ್ನು ತಿನ್ನಕೂಡದೆಂದು ನಾನು ನಿನಗೆ ಆಜ್ಞಾಪಿಸಿದ್ದೆನಲ್ಲಾ!” ಎಂದು ಹೇಳಿದನು.

12 ಅದಕ್ಕೆ ಪುರುಷನು, “ನೀನು ನನಗಾಗಿ ಕೊಟ್ಟ ಸ್ತ್ರೀಯು ಆ ಮರದ ಹಣ್ಣನ್ನು ನನಗೆ ಕೊಟ್ಟಳು; ಆದ್ದರಿಂದ ನಾನು ತಿಂದೆ” ಅಂದನು.

13 ಆಗ ದೇವರಾದ ಯೆಹೋವನು ಸ್ತ್ರೀಗೆ, “ನೀನು ಮಾಡಿದ್ದೇನು?” ಎಂದು ಕೇಳಿದನು.

ಅದಕ್ಕೆ ಸ್ತ್ರೀಯು, “ಆ ಹಾವಿನ ಮೋಸಕ್ಕೆ ಒಳಗಾಗಿ ನಾನು ಆ ಹಣ್ಣನ್ನು ತಿಂದೆ” ಅಂದಳು.

Read full chapter