ಲೂಕ 20:27-40
Kannada Holy Bible: Easy-to-Read Version
ಯೇಸುವನ್ನು ಮೋಸಗೊಳಿಸಲು ಕೆಲವು ಸದ್ದುಕಾಯರ ಪ್ರಯತ್ನ
(ಮತ್ತಾಯ 22:23-33; ಮಾರ್ಕ 12:18-27)
27 ಕೆಲವು ಸದ್ದುಕಾಯರು[a] ಯೇಸುವಿನ ಬಳಿಗೆ ಬಂದರು. (ಸತ್ತವರು ಪುನರುತ್ಥಾನ ಹೊಂದುವುದಿಲ್ಲ ಎಂದು ಸದ್ದುಕಾಯರು ನಂಬುತ್ತಾರೆ.) ಅವರು ಯೇಸುವಿಗೆ, 28 “ಉಪದೇಶಕನೇ, ಮದುವೆಯಾದ ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ತಮ್ಮನು ಆ ಸ್ತ್ರೀಯನ್ನು ಮದುವೆಯಾಗಿ, ಸತ್ತುಹೋದ ಸಹೋದರನಿಗಾಗಿ ಮಕ್ಕಳನ್ನು ಪಡೆಯಬೇಕೆಂದು[b] ಮೋಶೆಯು ಬರೆದಿದ್ದಾನಷ್ಟೆ. 29 ಒಂದು ಕಾಲದಲ್ಲಿ ಏಳು ಮಂದಿ ಸಹೋದರರಿದ್ದರು. ಮೊದಲನೆಯ ಸಹೋದರನು ಒಬ್ಬ ಸ್ತ್ರೀಯನ್ನು ಮದುವೆಯಾದನು, ಬಳಿಕ ಅವನೂ ಸತ್ತುಹೋದನು. ಅವನಿಗೆ ಮಕ್ಕಳಿರಲಿಲ್ಲ. 30 ಆಗ ಎರಡನೆಯ ಸಹೋದರನು ಆ ಸ್ತ್ರೀಯನ್ನು ಮದುವೆಯಾದನು, ಬಳಿಕ ಅವನೂ ಸತ್ತುಹೋದನು. 31 ಆಗ ಮೂರನೆಯ ಸಹೋದರನು ಆ ಸ್ತ್ರೀಯನ್ನು ಮದುವೆಯಾದನು. ಬಳಿಕ ಅವನೂ ಸತ್ತುಹೋದನು. ಇನ್ನುಳಿದ ಸಹೋದರರಿಗೂ ಹೀಗೆಯೇ ಆಯಿತು. ಅವರೆಲ್ಲರೂ ಮಕ್ಕಳಿಲ್ಲದೆ ಸತ್ತರು. 32 ಕೊನೆಯಲ್ಲಿ ಆ ಸ್ತ್ರೀಯೂ ಸತ್ತಳು. 33 ಆದರೆ ಆ ಏಳು ಮಂದಿ ಸಹೋದರರೂ ಆಕೆಯನ್ನು ಮದುವೆಯಾಗಿದ್ದರು. ಹೀಗಿರಲಾಗಿ, ಸತ್ತವರು ಪುನರುತ್ಥಾನ ಹೊಂದುವಾಗ, ಆ ಸ್ತ್ರೀಯು ಯಾರ ಹೆಂಡತಿಯಾಗಿರುವಳು?” ಎಂದು ಕೇಳಿದರು.
34 ಯೇಸು ಸದ್ದುಕಾಯರಿಗೆ, “ಭೂಲೋಕದಲ್ಲಿ ಜನರು ಒಬ್ಬರನ್ನೊಬ್ಬರು ಮದುವೆ ಆಗುತ್ತಾರೆ. 35 ಪುನರುತ್ಥಾನಕ್ಕೆ ಯೋಗ್ಯರಾದ ಕೆಲವು ಜನರು ಜೀವಂತವಾಗಿ ಎದ್ದುಬಂದು ಮತ್ತೆ ಜೀವಿಸುತ್ತಾರೆ. ಆ ಹೊಸ ಜೀವನದಲ್ಲಿ ಅವರು ಮದುವೆ ಆಗುವುದಿಲ್ಲ. 36 ಆ ಜೀವನದಲ್ಲಿ ಅವರು ದೇವದೂತರಂತಿರುತ್ತಾರೆ. ಅವರಿಗೆ ಮರಣವೂ ಇರುವುದಿಲ್ಲ. ಅವರು ದೇವರ ಮಕ್ಕಳಾಗಿರುತ್ತಾರೆ, ಏಕೆಂದರೆ ಅವರು ಪುನರುತ್ಥಾನ ಹೊಂದಿದವರಾಗಿದ್ದಾರೆ. 37 ಸತ್ತವರು ಪುನರುತ್ಥಾನ ಹೊಂದುವುದನ್ನು ಮೋಶೆಯು ಸ್ಪಷ್ಟವಾಗಿ ತೋರಿಸಿದ್ದಾನೆ. ಉರಿಯುವ ಪೊದೆಯ[c] ಕುರಿತು ಮೋಶೆ ಬರೆಯುವಾಗ ‘ಪ್ರಭುವಾದ ದೇವರೇ ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’ ಎಂದು ಹೇಳಿದ್ದಾನೆ. 38 ದೇವರು ಅವರೆಲ್ಲರಿಗೆ ದೇವರಾಗಿರುವುದರಿಂದ ಅವರೆಲ್ಲರು ನಿಜವಾಗಿಯೂ ಸತ್ತಿಲ್ಲ. ಏಕೆಂದರೆ ದೇವರು ಜೀವಿಸುವ ಜನರಿಗೇ ದೇವರಾಗಿದ್ದಾನೆ. ದೇವರಿಗೆ ಸೇರಿದವರೆಲ್ಲರೂ ಜೀವಂತರಾಗಿದ್ದಾರೆ” ಎಂದು ಹೇಳಿದನು.
39 ಧರ್ಮೋಪದೇಶಕರಲ್ಲಿ ಕೆಲವರು, “ಬೋಧಕನೇ, ನೀನು ಒಳ್ಳೆಯ ಉತ್ತರವನ್ನು ಕೊಟ್ಟಿರುವೆ” ಎಂದು ಹೇಳಿದರು. 40 ಇನ್ನೊಂದು ಪ್ರಶ್ನೆಯನ್ನು ಆತನಿಗೆ ಕೇಳುವುದಕ್ಕೆ ಯಾರಿಗೂ ಧೈರ್ಯವಿರಲಿಲ್ಲ.
Read full chapterFootnotes
- 20:27 ಸದ್ದುಕಾಯರು ಯೆಹೂದ್ಯರ ಪ್ರಾಮುಖ್ಯ ಧಾರ್ಮಿಕ ಗುಂಪು. ಅವರು ಹಳೆ ಒಡಂಬಡಿಕೆಯ ಮೊದಲಿನ ಐದು ಪುಸ್ತಕಗಳನ್ನು ಮಾತ್ರ ಅಂಗೀಕರಿಸಿದವರಾಗಿದ್ದರು.
- 20:28 ನೋಡಿರಿ: ವಿಮೋಚನ. 25:5,6.
- 20:37 ಉರಿಯುವ ಪೊದೆ ನೋಡಿರಿ: ವಿಮೋಚನ. 3:1-12.
Kannada Holy Bible: Easy-to-Read Version. All rights reserved. © 1997 Bible League International