Add parallel Print Page Options

56 ಪೇತ್ರನು ಅಲ್ಲಿ ಕುಳಿತಿರುವುದನ್ನು ಒಬ್ಬ ಸೇವಕಿ ನೋಡಿದಳು. ಬೆಂಕಿಯ ಬೆಳಕಿನಿಂದ ಆಕೆಯು ಪೇತ್ರನನ್ನು ಗುರುತಿಸಿದಳು. ಅವಳು ಪೇತ್ರನ ಮುಖವನ್ನೇ ಲಕ್ಷ್ಯವಿಟ್ಟು ನೋಡಿ, “ಈ ಮನುಷ್ಯನು ಆತನ (ಯೇಸು) ಸಂಗಡ ಇದ್ದವನು” ಅಂದಳು.

57 ಆದರೆ ಪೇತ್ರನು ಅದು ನಿಜವಲ್ಲವೆಂದು ಹೇಳಿದನು. ಅವನು ಅಕೆಗೆ, “ಅಮ್ಮಾ, ಆತನು ನನಗೆ ಗೊತ್ತೇ ಇಲ್ಲ” ಅಂದನು. 58 ಸ್ವಲ್ಪ ಸಮಯದ ನಂತರ ಇನ್ನೊಬ್ಬ ವ್ಯಕ್ತಿ ಪೇತ್ರನನ್ನು ನೋಡಿ, “ನೀನು ಯೇಸುವನ್ನು ಹಿಂಬಾಲಿಸುತ್ತಿದ್ದ ಜನರಲ್ಲಿ ಒಬ್ಬನಾಗಿದ್ದೆ!” ಎಂದು ಹೇಳಿದನು.

ಆದರೆ ಪೇತ್ರನು, “ನಾನು ಆತನ ಹಿಂಬಾಲಕರಲ್ಲಿ ಒಬ್ಬನಲ್ಲ” ಅಂದನು.

59 ಸುಮಾರು ಒಂದು ತಾಸಿನ ನಂತರ ಇನ್ನೊಬ್ಬನು, “ಅದು ನಿಜ! ಈ ಮನುಷ್ಯನು ಆತನೊಡನೆ ಇದ್ದವನು. ಇವನು ಗಲಿಲಾಯದವನು!” ಎಂದು ದೃಢವಾಗಿ ಹೇಳಿದನು.

60 ಆಗ ಪೇತ್ರನು, “ನೀನು ಏನು ಹೇಳುತ್ತಿದ್ದೀಯೋ ನನಗೆ ಗೊತ್ತಿಲ್ಲ” ಅಂದನು.

ಪೇತ್ರನು ಇನ್ನೂ ಮಾತಾಡುತ್ತಿದ್ದಾಗ ಕೋಳಿ ಕೂಗಿತು. 61 ಆಗ ಪ್ರಭುವು (ಯೇಸು) ಹಿಂತಿರುಗಿ ಪೇತ್ರನನ್ನು ದೃಷ್ಟಿಸಿ ನೋಡಿದನು. “ಮುಂಜಾನೆ ಕೋಳಿ ಕೂಗುವುದಕ್ಕಿಂತ ಮೊದಲು ನೀನು ನನ್ನನ್ನು ಅರಿಯೆನೆಂಬುದಾಗಿ ಮೂರು ಸಲ ಹೇಳುವೆ” ಎಂದು ಪ್ರಭುವು ಹೇಳಿದ ಮಾತನ್ನು ಪೇತ್ರನು ಆಗ ಜ್ಞಾಪಿಸಿಕೊಂಡನು. 62 ಬಳಿಕ ಪೇತ್ರನು ಹೊರಗೆ ಹೋಗಿ ಬಹು ದುಃಖದಿಂದ ಅತ್ತನು.

Read full chapter