Add parallel Print Page Options

ಯೋಹಾನನ ಬೋಧನೆ

(ಮತ್ತಾಯ 3:1-12; ಮಾರ್ಕ 1:1-8; ಯೋಹಾನ 1:19-28)

ಚಕ್ರವರ್ತಿಯಾದ ತಿಬೇರಿಯಸ್ ಸೀಸರನ ಆಳ್ವಿಕೆಯ ಹದಿನೈದನೇ ವರ್ಷ ಅದಾಗಿತ್ತು.

ಆಗ, ಪೊಂತ್ಯ ಪಿಲಾತನು ಜುದೇಯ ಪ್ರಾಂತ್ಯಕ್ಕೂ

ಹೆರೋದನು ಗಲಿಲಾಯಕ್ಕೂ

ಹೆರೋದನ ಸಹೋದರನಾದ ಫಿಲಿಪ್ಪನು ಇತುರೆಯ ಮತ್ತು ತ್ರಕೋನಿತಿ ಪ್ರಾಂತ್ಯಗಳಿಗೂ

ಲೂಸನ್ಯನು ಅಬಿಲೇನೆ ಪ್ರಾಂತ್ಯಕ್ಕೂ ಅಧಿಪತಿಯಾಗಿದ್ದರು.

ಅನ್ನನು ಮತ್ತು ಕಾಯಫನು ಮಹಾಯಾಜಕರಾಗಿದ್ದರು.[a] ಆ ಸಮಯದಲ್ಲಿ ಜಕರೀಯನ ಮಗನಾದ ಯೋಹಾನನಿಗೆ ದೇವರಿಂದ ಆಜ್ಞೆಯೊಂದು ಬಂತು. ಯೋಹಾನನು ಗುಡ್ಡಗಾಡಿನಲ್ಲಿ ವಾಸವಾಗಿದ್ದನು. ಯೋಹಾನನು ಜೋರ್ಡನ್ ನದಿಯ ಸುತ್ತಲಿರುವ ಪ್ರದೇಶದಲ್ಲೆಲ್ಲಾ ಸಂಚರಿಸಿ, ತಮ್ಮ ಪಾಪಪರಿಹಾರಕ್ಕಾಗಿ ಅವರು ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಜನರಿಗೆ ತಿಳಿಸಿದನು. ಯೆಶಾಯ ಪ್ರವಾದಿಯು ತನ್ನ ಗ್ರಂಥದಲ್ಲಿ ಬರೆದಿರುವಂತೆಯೇ ಇದು ನಡೆಯಿತು. ಅದೇನೆಂದರೆ:

“‘ಪ್ರಭುವಿಗಾಗಿ ಮಾರ್ಗವನ್ನು ಸಿದ್ಧಮಾಡಿರಿ.
    ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ.
ಪ್ರತಿಯೊಂದು ಕಣಿವೆಯು ಮುಚ್ಚಲ್ಪಡುವವು.
    ಪ್ರತಿಯೊಂದು ಬೆಟ್ಟಗುಡ್ಡಗಳು ಸಮನಾಗಿ ಮಾಡಲ್ಪಡುವವು.
ಡೊಂಕಾದ ದಾರಿಗಳು ನೀಟಾಗುವವು.
    ಕೊರಕಲಾದ ದಾರಿಗಳು ಸಮವಾಗುವವು.
ಪ್ರತಿಯೊಬ್ಬನೂ ದೇವರ ರಕ್ಷಣೆಯನ್ನು ಕಾಣುವನು!’
ಎಂಬುದಾಗಿ ಅಡವಿಯಲ್ಲಿ ಒಬ್ಬನು ಕೂಗುತ್ತಿದ್ದಾನೆ.”(A)

ಜನರು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಬಂದರು. ಯೋಹಾನನು ಅವರಿಗೆ. “ನೀವು ವಿಷಕರವಾದ ಹಾವುಗಳಂತಿದ್ದೀರಿ! ಬರಲಿರುವ ದೇವರ ಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮ್ಮನ್ನು ಎಚ್ಚರಿಸಿದವರು ಯಾರು? ನಿಮ್ಮ ಮನಸ್ಸು ನಿಜವಾಗಿಯೂ ದೇವರ ಕಡೆಗೆ ತಿರುಗಿಕೊಂಡಿರುವುದಾದರೆ ಅದನ್ನು ನಿಮ್ಮ ತಕ್ಕಕಾರ್ಯಗಳಿಂದ ತೋರಿಸಿರಿ. ‘ಅಬ್ರಹಾಮನು ನಮ್ಮ ತಂದೆ’ ಎಂದು ಜಂಬ ಕೊಚ್ಚಿಕೊಳ್ಳಬೇಡಿರಿ. ದೇವರು ಅಬ್ರಹಾಮನಿಗೆ ಇಲ್ಲಿರುವ ಕಲ್ಲುಗಳಿಂದ ಮಕ್ಕಳನ್ನು ಕೊಡಬಲ್ಲನೆಂದು ನಾನು ನಿಮಗೆ ಹೇಳುತ್ತೇನೆ. ಮರಗಳನ್ನು ಕಡಿಯುವುದಕ್ಕೆ ಕೊಡಲಿಯು ಸಿದ್ಧವಾಗಿದೆ. ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನು ಕತ್ತರಿಸಿ ಬೆಂಕಿಯಲ್ಲಿ ಹಾಕಲಾಗುವುದು” ಎಂದು ಹೇಳಿದನು.

Read full chapter

Footnotes

  1. 3:2 ಮಹಾಯಾಜಕ ಪ್ರಾಮುಖ್ಯರಾದ ಯೆಹೂದ್ಯಯಾಜಕರು.