Add parallel Print Page Options

ದೇವಾಲಯದ ಮುಂದಿನ ವಿನಾಶ

(ಮತ್ತಾಯ 24:1-44; ಲೂಕ 21:5-33)

13 ಯೇಸು ದೇವಾಲಯದಿಂದ ಹೊರಡುತ್ತಿರಲು ಆತನ ಶಿಷ್ಯರಲ್ಲಿ ಒಬ್ಬನು ಆತನಿಗೆ, “ಗುರುವೇ, ನೋಡು! ಈ ದೇವಾಲಯ ಎಂಥಾ ದೊಡ್ಡ ಕಲ್ಲುಗಳಿಂದ ಮಾಡಿದ ಎಂಥಾ ಸುಂದರ ಕಟ್ಟಡಗಳನ್ನು ಹೊಂದಿದೆ” ಎಂದನು.

ಯೇಸು, “ನೀವು ಈ ದೊಡ್ಡ ಕಟ್ಟಡಗಳನ್ನು ನೋಡುತ್ತಿರುವಿರಾ? ಇವುಗಳನ್ನೆಲ್ಲ ನಾಶಪಡಿಸಲಾಗುವುದು. ಪ್ರತಿಯೊಂದು ಕಲ್ಲನ್ನೂ ನೆಲಕ್ಕೆ ಕೆಡವಲಾಗುವುದು. ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ಉಳಿಯುವುದಿಲ್ಲ” ಎಂದನು.

ನಂತರ ಯೇಸು ಆಲಿವ್ ಮರಗಳ ಗುಡ್ಡದ ಮೇಲೆ, ಪೇತ್ರ, ಯಾಕೋಬ, ಯೋಹಾನ ಮತ್ತು ಅಂದ್ರೆಯರ ಸಂಗಡ ಕುಳಿತಿದ್ದನು. ಅವರೆಲ್ಲರಿಗೂ ಅಲ್ಲಿಂದ ದೇವಾಲಯ ಕಾಣುತಿತ್ತು. ಆ ಶಿಷ್ಯರು ಯೇಸುವಿಗೆ, “ಈ ಸಂಗತಿಗಳೆಲ್ಲಾ ಯಾವಾಗ ಸಂಭವಿಸುತ್ತವೆ? ಅವುಗಳು ನಡೆಯುವ ಕಾಲಕ್ಕೆ ಸೂಚನೆಯೇನು?” ಎಂದು ಕೇಳಿದರು.

ಅದಕ್ಕೆ ಯೇಸು, “ಎಚ್ಚರಿಕೆಯಿಂದಿರಿ! ನಿಮಗೆ ಮೋಸ ಮಾಡಲು ಯಾರಿಗೂ ಆಸ್ಪದ ಕೊಡಬೇಡಿ. ಅನೇಕ ಜನರು ಬಂದು, ‘ನಾನೇ ಕ್ರಿಸ್ತನು; ನಾನೇ ಕ್ರಿಸ್ತನು’ ಎನ್ನುತ್ತಾ ಅನೇಕ ಜನರನ್ನು ಮೋಸಗೊಳಿಸುತ್ತಾರೆ. ಸಮೀಪದಲ್ಲಿ ನಡೆಯುತ್ತಿರುವ ಯುದ್ಧಗಳ ಶಬ್ಧವನ್ನೂ ಬಹುದೂರದಲ್ಲಿ ನಡೆಯುತ್ತಿರುವ ಯುದ್ಧಗಳ ಬಗ್ಗೆ ಸುದ್ದಿಯನ್ನೂ ನೀವು ಕೇಳುವಿರಿ. ಆದರೆ ಭಯಪಡಬೇಡಿ. ಅಂತ್ಯಕಾಲ ಬರುವುದಕ್ಕಿಂತ ಮುಂಚೆ ಈ ಸಂಗತಿಗಳು ನಡೆಯಲೇಬೇಕು. ಜನಾಂಗಗಳು ಇತರ ಜನಾಂಗಗಳ ವಿರುದ್ಧ ಹೋರಾಡುತ್ತವೆ. ರಾಜ್ಯಗಳು ಇತರ ರಾಜ್ಯಗಳ ವಿರುದ್ಧ ಹೋರಾಡುತ್ತವೆ. ಜನರಿಗೆ ತಿನ್ನಲು ಏನೂ ಆಹಾರವಿಲ್ಲದಂಥ ಕಾಲ ಬರುತ್ತದೆ. ಅನೇಕ ಸ್ಥಳಗಳಲ್ಲಿ ಭೂಕಂಪಗಳಾಗುತ್ತವೆ. ಈ ಸಂಗತಿಗಳು ಪ್ರಸವವೇದನೆಯಂತಿರುತ್ತವೆ.

“ಎಚ್ಚರಿಕೆಯಿಂದಿರಿ! ನೀವು ನನ್ನನ್ನು ಹಿಂಬಾಲಿಸುವುದರಿಂದ ಜನರು ನಿಮ್ಮನ್ನು ಬಂಧಿಸಿ, ನ್ಯಾಯವಿಚಾರಣೆಗೆ ಕೊಂಡೊಯ್ಯುವರು. ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಹೊಡೆಯುವರು. ರಾಜರ ಮತ್ತು ಅಧಿಪತಿಗಳ ಮುಂದೆ ನಿಮ್ಮನ್ನು ನಿಲ್ಲಿಸಿ ನನ್ನ ವಿಷಯದಲ್ಲಿ ಸಾಕ್ಷಿಕೊಡಲು ನಿಮ್ಮನ್ನು ಬಲವಂತಪಡಿಸುವರು. 10 ಈ ಸಂಗತಿಗಳು ಸಂಭವಿಸುವುದಕ್ಕಿಂತ ಮೊದಲು ನೀವು ಜನರಿಗೆಲ್ಲ ಸುವಾರ್ತೆಯನ್ನು ತಿಳಿಸಬೇಕು. 11 ನೀವು ಬಂಧಿಸಲ್ಪಟ್ಟು ನ್ಯಾಯವಿಚಾರಣೆಗೆ ಒಳಗಾಗುವಿರಿ. ಆದರೆ ನೀವು ಏನು ಹೇಳಬೇಕೆಂಬುದರ ಬಗ್ಗೆ ಯೋಚಿಸಬೇಡಿ, ಆ ಸಮಯದಲ್ಲಿ ದೇವರು ನಿಮಗೆ ತಿಳಿಸಿಕೊಡುವುದನ್ನೇ ಹೇಳಿರಿ. ಆಗ ಮಾತಾಡುವವರು ನೀವಲ್ಲ, ಪವಿತ್ರಾತ್ಮನೇ.

12 “ಸಹೋದರರು ಸಹೋದರರನ್ನೇ, ತಂದೆಗಳು ತಮ್ಮ ಸ್ವಂತ ಮಕ್ಕಳನ್ನೇ ಮರಣಕ್ಕೆ ಗುರಿಮಾಡುವರು. ಮಕ್ಕಳು ತಮ್ಮ ಸ್ವಂತ ತಂದೆತಾಯಂದಿರ ವಿರುದ್ಧ ತಿರುಗಿಬಿದ್ದು ಅವರನ್ನು ಕೊಲ್ಲಿಸುವರು. 13 ನೀವು ನನ್ನನ್ನು ಹಿಂಬಾಲಿಸುವ ಕಾರಣ ಜನರೆಲ್ಲರೂ ನಿಮ್ಮನ್ನು ದ್ವೇಷಿಸುವರು. ಆದರೆ ಕೊನೆಯವರೆಗೆ ತಾಳುವವನು ರಕ್ಷಣೆ ಹೊಂದುವನು.

Read full chapter