Add parallel Print Page Options

ಯೇಸುವಿನ ಏಕಾಂತ ಪ್ರಾರ್ಥನೆ

(ಮತ್ತಾಯ 26:36-46; ಲೂಕ 22:39-46)

32 ಯೇಸು ಮತ್ತು ಆತನ ಶಿಷ್ಯರು ಗೆತ್ಸೆಮನೆ ಎಂಬ ಸ್ಥಳಕ್ಕೆ ಹೋದರು. ಯೇಸು ತನ್ನ ಶಿಷ್ಯರಿಗೆ, “ನಾನು ಪ್ರಾರ್ಥಿಸಿ ಬರುವ ತನಕ ಕುಳಿತಿರಿ” ಎಂದು ಹೇಳಿ 33 ಪೇತ್ರನನ್ನು, ಯಾಕೋಬನನ್ನು ಮತ್ತು ಯೋಹಾನನನ್ನು ತನ್ನ ಜೊತೆ ಕರೆದುಕೊಂಡು ಹೋದನು. ನಂತರ ಯೇಸು ಬಹಳ ಗಲಿಬಿಲಿಗೊಂಡು, ದುಃಖದಿಂದ ತುಂಬಿದವನಾದನು. 34 ಯೇಸು ಅವರಿಗೆ, “ನನ್ನ ಪ್ರಾಣವು ಸಾಯುವಷ್ಟು ದುಃಖದಿಂದ ತುಂಬಿಹೋಗಿದೆ. ಎಚ್ಚರವಾಗಿದ್ದು ಇಲ್ಲಿಯೇ ಕಾದುಕೊಂಡಿರಿ” ಎಂದನು.

35 ಯೇಸು ಅವರಿಂದ ಸ್ವಲ್ಪದೂರ ನಡೆದುಹೋಗಿ ನೆಲದ ಮೇಲೆ ಬೋರಲಬಿದ್ದು, ಪ್ರಾರ್ಥಿಸುತ್ತಾ “ಸಾಧ್ಯವಾದರೆ, ಈ ಸಂಕಟದ ಗಳಿಗೆ ನನಗೆ ಬಾರದಿರಲಿ” ಎಂದು ಬೇಡಿಕೊಂಡನು. 36 ಬಳಿಕ ಯೇಸು, “ಅಪ್ಪಾ,[a] ತಂದೆಯೇ! ನಿನಗೆ ಎಲ್ಲವೂ ಸಾಧ್ಯ. ಈ ಸಂಕಟದ ಪಾತ್ರೆಯನ್ನು ನನ್ನಿಂದ ತೊಲಗಿಸು. ಆದರೆ ನನ್ನ ಚಿತ್ತದಂತೆ ಮಾಡದೆ, ನಿನ್ನ ಚಿತ್ತದಂತೆಯೇ ಮಾಡು” ಎಂದು ಪ್ರಾರ್ಥಿಸಿದನು.

37 ನಂತರ ಯೇಸು ತನ್ನ ಶಿಷ್ಯರ ಬಳಿಗೆ ಹಿಂತಿರುಗಿದಾಗ ಅವರು ನಿದ್ರಿಸುತ್ತಿರುವುದನ್ನು ಕಂಡು, ಪೇತ್ರನಿಗೆ, “ಸೀಮೋನನೇ, ಏಕೆ ನಿದ್ರೆ ಮಾಡುತ್ತಿರುವೆ? ನೀನು ನನ್ನೊಡನೆ ಒಂದು ಗಂಟೆ ಕಾಲ ಎಚ್ಚರವಾಗಿರಲು ಸಾಧ್ಯವಾಗಲಿಲ್ಲವೇ? 38 ನೀನು ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸು. ಮನಸ್ಸೇನೋ ಸಿದ್ಧವಾಗಿದೆ, ಆದರೆ ದೇಹಕ್ಕೆ ಬಲ ಸಾಲದು” ಎಂದನು.

39 ಪುನಃ ಯೇಸು ದೂರ ಹೋಗಿ, ಮೊದಲಿನಂತೆಯೇ ಪ್ರಾರ್ಥಿಸಿದನು. 40 ನಂತರ ಯೇಸು ತನ್ನ ಶಿಷ್ಯರ ಬಳಿಗೆ ಹಿಂತಿರುಗಿ ಬಂದಾಗ ಅವರು ನಿದ್ರಿಸುತ್ತಿರುವುದನ್ನು ಕಂಡನು. ಅವರ ಕಣ್ಣುಗಳು ಬಹಳ ಆಯಾಸಗೊಂಡಿದ್ದವು. ಯೇಸುವಿಗೆ ಏನು ಹೇಳಬೇಕೆಂದು ಆ ಶಿಷ್ಯರಿಗೆ ತಿಳಿಯಲಿಲ್ಲ.

41 ಯೇಸು ಮೂರನೆಯ ಸಾರಿ ಪ್ರಾರ್ಥಿಸಿದ ಮೇಲೆ, ತನ್ನ ಶಿಷ್ಯರ ಬಳಿಗೆ ಹಿಂತಿರುಗಿ, “ನೀವು ಇನ್ನೂ ನಿದ್ರಿಸುತ್ತಾ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೀರಾ? ಪಾಪಿಗಳ ಕೈಗೆ ಮನುಷ್ಯಕುಮಾರನನ್ನು ಒಪ್ಪಿಸುವ ಸಮಯ ಬಂದಿದೆ. 42 ಮೇಲೇಳಿ! ನಾವು ಹೋಗಬೇಕು. ನನ್ನನ್ನು ಆ ಜನರಿಗೆ ಹಿಡಿದುಕೊಡುವವನು ಇಲ್ಲಿಗೆ ಬರುತ್ತಿದ್ದಾನೆ” ಎಂದನು.

Read full chapter

Footnotes

  1. 14:36 ಅಪ್ಪಾ ಮೂಲಪದ ಅರಮೇಯಿಕ್ ಭಾಷೆಯ “ಅಬ್ಬಾ” ಇದರರ್ಥ “ಅಪ್ಪಾ.”