Add parallel Print Page Options

ಯೇಸುವಿಗೆ ದೆವ್ವಹಿಡಿದಿದೆ ಎಂಬ ಆರೋಪ

(ಮತ್ತಾಯ 12:22-32; ಲೂಕ 11:14-23; 12:10)

20 ನಂತರ ಯೇಸು ಮನೆಗೆ ಹೋದನು. ಮತ್ತೆ ಅನೇಕ ಜನರು ಅಲ್ಲಿಗೆ ಸೇರಿಬಂದರು. ಆದ್ದರಿಂದ ಯೇಸು ಮತ್ತು ಅವನ ಶಿಷ್ಯರಿಗೆ ಊಟಮಾಡಲೂ ಸಾಧ್ಯವಾಗಲಿಲ್ಲ. 21 ಯೇಸುವಿನ ಕುಟುಂಬದವರಿಗೆ ಈ ವಿಷಯಗಳೆಲ್ಲ ತಿಳಿದವು. ಯೇಸುವಿಗೆ ಹುಚ್ಚು ಹಿಡಿದಿದೆಯೆಂದು ಕೆಲವರು ಹೇಳಿದ್ದರಿಂದ ಆತನ ಕುಟುಂಬದವರು ಆತನನ್ನು ಕರೆದೊಯ್ಯಲು ಅಲ್ಲಿಗೆ ಬಂದರು.

22 ಜೆರುಸಲೇಮಿನ ಧರ್ಮೋಪದೇಶಕರು, “ಇವನೊಳಗೆ ದೆವ್ವಗಳ ಒಡೆಯನಾದ ಬೆಲ್ಜೆಬೂಲನು ವಾಸಿಸುತ್ತಿದ್ದಾನೆ. ದೆವ್ವಗಳಿಂದ ಪೀಡಿತರಾಗಿರುವವರನ್ನು ಇವನು ಬಿಡಿಸುವುದು ದೆವ್ವಗಳ ಒಡೆಯನ ಸಹಾಯದಿಂದಲೇ” ಎಂದು ಹೇಳಿದರು.

23 ಆದ್ದರಿಂದ ಯೇಸು ಜನರನ್ನು ಒಟ್ಟಿಗೆ ಕರೆದು, ಅವರಿಗೆ ಸಾಮ್ಯಗಳ ಮೂಲಕ ಬೋಧಿಸಿ, “ಸೈತಾನನು ತನ್ನ ದೆವ್ವಗಳನ್ನು ಜನರಿಂದ ಬಲವಂತವಾಗಿ ಹೊರಡಿಸುವುದಿಲ್ಲ. 24 ತನ್ನ ವಿರುದ್ಧವಾಗಿ ತಾನೇ ಹೋರಾಡುವ ರಾಜ್ಯ ಉಳಿಯುವುದಿಲ್ಲ. 25 ಭೇದ ಹುಟ್ಟಿದ ಕುಟುಂಬ ಏಳಿಗೆ ಹೊಂದುವುದಿಲ್ಲ. 26 ಸೈತಾನನು ತನ್ನ ವಿರುದ್ಧವಾಗಿಯೂ ತನ್ನ ಜನರ ವಿರುದ್ಧವಾಗಿಯೂ ತಾನೇ ಹೋರಾಟ ಮಾಡಿದರೆ ಅವನು ಅಂತ್ಯಗೊಳ್ಳುತ್ತಾನೆ.

27 “ಒಬ್ಬ ವ್ಯಕ್ತಿಯು ಬಲಾಢ್ಯನ ಮನೆಗೆ ಪ್ರವೇಶಿಸಿ ಅವನ ವಸ್ತುಗಳನ್ನು ಕದಿಯಲು ಇಚ್ಛಿಸಿದರೆ, ಮೊದಲು ಅವನು ಬಲಾಢ್ಯನನ್ನು ಕಟ್ಟಿಹಾಕಬೇಕು. ಆಗ ಅವನು ಬಲಾಢ್ಯನ ಮನೆಯಿಂದ ವಸ್ತುಗಳನ್ನು ಕದಿಯಲು ಸಾಧ್ಯವಾಗುವುದು.

28 “ನಾನು ನಿಮಗೆ ಸತ್ಯವನ್ನು ಹೇಳುತ್ತಿದ್ದೇನೆ, ಜನರು ಮಾಡುವ ಎಲ್ಲಾ ಪಾಪಗಳಿಗೂ ದೇವದೂಷಣೆಗಳಿಗೂ ಕ್ಷಮೆ ದೊರೆಯಲು ಸಾಧ್ಯ. 29 ಆದರೆ ಪವಿತ್ರಾತ್ಮನನ್ನು ದೂಷಿಸುವವನಿಗೆ ಕ್ಷಮೆ ಇಲ್ಲವೇ ಇಲ್ಲ. ಅವರ ಪಾಪ ಶಾಶ್ವತವಾದದ್ದು” ಎಂದು ಹೇಳಿದನು.

30 “ಇವನಿಗೆ ದೆವ್ವಹಿಡಿದಿದೆ” ಎಂದು ಧರ್ಮೋಪದೇಶಕರು ಆರೋಪಿಸಿದ್ದರಿಂದ ಯೇಸು ಹೀಗೆ ಹೇಳಬೇಕಾಯಿತು.

Read full chapter