Add parallel Print Page Options

ಸ್ವಂತ ಊರಿಗೆ ಯೇಸುವಿನ ಪ್ರಯಾಣ

(ಮತ್ತಾಯ 13:53-58; ಲೂಕ 4:16-30)

ಯೇಸು ಅಲ್ಲಿಂದ ಹೊರಟು, ತನ್ನ ಸ್ವಂತ ಊರಿಗೆ ಹೋದನು. ಆತನ ಶಿಷ್ಯರು ಆತನೊಂದಿಗೆ ಹೋದರು. ಸಬ್ಬತ್ ದಿನದಂದು ಯೇಸು ಸಭಾಮಂದಿರದಲ್ಲಿ ಉಪದೇಶಿಸಿದನು. ಆತನ ಉಪದೇಶವನ್ನು ಕೇಳಿ ಆಶ್ಚರ್ಯಗೊಂಡ ಅನೇಕ ಜನರು, “ಈ ಉಪದೇಶವನ್ನು ಮತ್ತು ಈ ಜ್ಞಾನವನ್ನು ಇವನು ಎಲ್ಲಿಂದ ಪಡೆದನು? ಇವನಿಗೆ ಕೊಟ್ಟವರು ಯಾರು? ಇವನಿಗೆ ಅದ್ಭುತಕಾರ್ಯಗಳನ್ನು ಮಾಡುವ ಶಕ್ತಿಯು ಎಲ್ಲಿಂದ ಬಂತು? ಇವನು ಕೇವಲ ಬಡಗಿಯಲ್ಲವೋ? ಇವನ ತಾಯಿ ಮರಿಯಳು. ಇವನು ಯಾಕೋಬ, ಯೋಸೆ, ಯೂದ ಮತ್ತು ಸಿಮೋನರ ಅಣ್ಣ. ಇವನ ತಂಗಿಯರು ಇಲ್ಲಿ ನಮ್ಮೊಂದಿಗಿದ್ದಾರೆ” ಎಂದು ಹೇಳಿ ಆತನನ್ನು ತಾತ್ಸಾರ ಮಾಡಿದರು.

ಯೇಸು, “ಪ್ರವಾದಿಯನ್ನು ಬೇರೆ ಜನರು ಗೌರವಿಸುತ್ತಾರೆ, ಆದರೆ ಪ್ರವಾದಿಗೆ ಸ್ವಂತ ಊರಿನಲ್ಲಿಯೂ ಸ್ವಂತ ಜನರಲ್ಲಿಯೂ ಸ್ವಂತ ಮನೆಯಲ್ಲಿಯೂ ಗೌರವ ದೊರೆಯುವುದಿಲ್ಲ” ಎಂದು ಜನರಿಗೆ ಹೇಳಿದನು. ಯೇಸು ಆ ಊರಿನಲ್ಲಿ ಅನೇಕ ಅದ್ಭುತಕಾರ್ಯಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಆತನು ತನ್ನ ಕೈಗಳನ್ನು ಕೆಲವು ಮಂದಿ ಕಾಯಿಲೆಯವರ ಮೇಲಿಟ್ಟು ಅವರ ಕಾಯಿಲೆಗಳನ್ನು ವಾಸಿಮಾಡಿದನು. ಇವುಗಳಲ್ಲದೆ ಬೇರೆ ಯಾವ ಅದ್ಭುತಕಾರ್ಯಗಳನ್ನೂ ಆತನು ಮಾಡಲಿಲ್ಲ. ಆ ಜನರಲ್ಲಿ ನಂಬಿಕೆಯಿಲ್ಲದಿರುವುದನ್ನು ಕಂಡು ಯೇಸುವಿಗೆ ಬಹಳ ಆಶ್ಚರ್ಯವಾಯಿತು. ಬಳಿಕ ಯೇಸು ಆ ಪ್ರದೇಶದ ಇತರ ಹಳ್ಳಿಗಳಿಗೆ ಹೋಗಿ ಉಪದೇಶಿಸಿದನು.

Read full chapter