Add parallel Print Page Options

ಯೇಸುವಿನಿಂದ ಕಾಯಿಲೆ ಹುಡುಗನಿಗೆ ಸ್ವಸ್ಥತೆ

(ಮತ್ತಾಯ 17:14-20; ಲೂಕ 9:37-43)

14 ನಂತರ ಯೇಸು, ಪೇತ್ರ, ಯಾಕೋಬ ಮತ್ತು ಯೋಹಾನ ಇತರ ಶಿಷ್ಯರ ಬಳಿಗೆ ಹೋದರು. ಆ ಶಿಷ್ಯರ ಸುತ್ತಲೂ ಅನೇಕ ಜನರು ನೆರೆದಿದ್ದರು. ಧರ್ಮೋಪದೇಶಕರು ಅವರೊಡನೆ ವಾದ ಮಾಡುತ್ತಾ ಇದ್ದರು. 15 ಆ ಜನರು ಯೇಸುವನ್ನು ನೋಡಿದಾಗ ಬಹಳ ಆಶ್ಚರ್ಯಪಟ್ಟು ಆತನನ್ನು ಸ್ವಾಗತಿಸಲು ಆತನ ಬಳಿಗೆ ಬಂದರು.

16 ಯೇಸು, “ನೀವು ಯಾವುದರ ಬಗ್ಗೆ ವಾದಿಸುತ್ತಿದ್ದೀರಿ?” ಎಂದು ಕೇಳಿದನು.

17 ಒಬ್ಬನು, “ಗುರುವೇ, ನನ್ನ ಮಗನಿಗೆ ದೆವ್ವ ಹಿಡಿದಿದ್ದ ಕಾರಣ ನಾನು ಅವನನ್ನು ನಿನ್ನ ಶಿಷ್ಯರ ಬಳಿಗೆ ತಂದೆನು. ಅವನು ಮಾತಾಡಲಾರ. 18 ಆ ದೆವ್ವವು ಅವನ ಮೇಲೆ ಆಕ್ರಮಣ ಮಾಡಿದಾಗಲೆಲ್ಲಾ ಅವನನ್ನು ನೆಲಕ್ಕೆ ಕೆಡವುತ್ತದೆ. ನನ್ನ ಮಗನು ಬಾಯಿಂದ ನೊರೆ ಸುರಿಸುತ್ತಾ ಹಲ್ಲುಗಳನ್ನು ಕಟಕಟನೆ ಕಡಿಯುತ್ತಾನೆ ಮತ್ತು ಬಹಳ ಬಿರುಸಾಗುತ್ತಾನೆ. ಅವನನ್ನು ಆ ದೆವ್ವದಿಂದ ಬಿಡಿಸುವಂತೆ ನಾನು ನಿನ್ನ ಶಿಷ್ಯರನ್ನು ಕೇಳಿಕೊಂಡೆನು. ಆದರೆ ಅವರಿಗೆ ಸಾಧ್ಯವಾಗಲಿಲ್ಲ” ಎಂದು ಹೇಳಿದನು.

19 ಯೇಸು, “ವಿಶ್ವಾಸವಿಲ್ಲದ ಸಂತಾನವೇ, ನಾನು ನಿಮ್ಮೊಡನೆ ಇನ್ನೆಷ್ಟು ಕಾಲ ಇರಲಿ? ಇನ್ನೆಷ್ಟು ಕಾಲ ಸಹಿಸಿಕೊಳ್ಳಲಿ? ಆ ಹುಡುಗನನ್ನು ನನ್ನ ಬಳಿಗೆ ತನ್ನಿರಿ!” ಎಂದು ಉತ್ತರಿಸಿದನು.

20 ಆಗ ಶಿಷ್ಯರು ಆ ಹುಡುಗನನ್ನು ಯೇಸುವಿನ ಬಳಿಗೆ ತಂದರು. ಆ ದೆವ್ವವು ಯೇಸುವನ್ನು ನೋಡಿದ ಕೂಡಲೇ ಆ ಹುಡುಗನ ಮೇಲೆ ಆಕ್ರಮಣ ಮಾಡಿತು. ಆ ಹುಡುಗನು ಕೆಳಗೆ ಬಿದ್ದು, ಬಾಯಿಂದ ನೊರೆಯನ್ನು ಸುರಿಸುತ್ತಾ ಒದ್ದಾಡತೊಡಗಿದನು.

21 ಯೇಸು, “ಎಷ್ಟು ಕಾಲದಿಂದ ಹೀಗಾಗುತ್ತಿದೆ?” ಎಂದು ಆ ಹುಡುಗನ ತಂದೆಯನ್ನು ಕೇಳಿದನು.

ಅದಕ್ಕೆ ತಂದೆಯು, “ಬಾಲ್ಯದಿಂದಲೇ ಹೀಗಾಗುತ್ತಿದೆ. 22 ಆಗಿಂದಾಗ್ಗೆ ದೆವ್ವವು ಅವನನ್ನು ಕೊಲ್ಲಲು ಬೆಂಕಿಯೊಳಗೆ ಅಥವಾ ನೀರಿನೊಳಗೆ ಎಸೆಯುತ್ತದೆ. ನಿನಗೆ ಸಾಧ್ಯವಿರುವುದಾದರೆ, ದಯವಿಟ್ಟು ನಮ್ಮ ಮೇಲೆ ಕರುಣೆಯಿಟ್ಟು ಸಹಾಯಮಾಡು” ಎಂದು ಉತ್ತರಿಸಿದನು.

23 ಅದಕ್ಕೆ ಯೇಸು, “‘ನಿನಗೆ ಸಾಧ್ಯವಿರುವುದಾದರೆ’ ಎಂದು ನೀನು ಹೇಳುವುದೇಕೆ? ನಂಬಿಕೆಯಿಡುವ ವ್ಯಕ್ತಿಗೆ ಎಲ್ಲವೂ ಸಾಧ್ಯ” ಎಂದು ಹೇಳಿದನು.

24 ಆ ಹುಡುಗನ ತಂದೆಯು ಸಂತೋಷದಿಂದ, “ನಾನು ನಂಬುತ್ತೇನೆ. ಇನ್ನೂ ಹೆಚ್ಚಾಗಿ ನಂಬಲು ನನಗೆ ಸಹಾಯ ಮಾಡು” ಎಂದನು.

25 ಅಲ್ಲಿ ನಡೆಯುತ್ತಿರುವುದನ್ನು ನೋಡಲು ಜನರೆಲ್ಲರೂ ಓಡಿಬರುತ್ತಿರುವುದನ್ನು ಕಂಡ ಯೇಸು, ಆ ದೆವ್ವಕ್ಕೆ, “ಎಲೈ ಕಿವುಡು ಮೂಕ ದೆವ್ವವೇ, ಈ ಹುಡುಗನಿಂದ ಹೊರಗೆ ಬರುವಂತೆಯೂ ಇವನೊಳಗೆ ಇನ್ನೆಂದಿಗೂ ಪ್ರವೇಶಿಸದಂತೆಯೂ ನಾನು ನಿನಗೆ ಆಜ್ಞಾಪಿಸುತ್ತೇನೆ!” ಎಂದನು.

26 ಆ ದೆವ್ವವು ಅರಚಿತು. ಅದು ಆ ಹುಡುಗನನ್ನು ಮತ್ತೆ ನೆಲದ ಮೇಲೆ ಬೀಳಿಸಿ, ಒದ್ದಾಡಿಸಿ ಹೊರಬಂದಿತು. ಆ ಹುಡುಗನು ಸತ್ತವನಂತೆ ಬಿದ್ದಿದ್ದನು. ಅನೇಕ ಜನರು, “ಅವನು ಸತ್ತುಹೋದನು” ಎಂದರು. 27 ಆದರೆ ಯೇಸು ಆ ಹುಡುಗನ ಕೈ ಹಿಡಿದೆತ್ತಿ, ಎದ್ದುನಿಲ್ಲಲು ಅವನಿಗೆ ಸಹಾಯಮಾಡಿದನು.

28 ಯೇಸು ಮನೆಯೊಳಗೆ ಹೋದ ಮೇಲೆ ಆತನ ಶಿಷ್ಯರು ಪ್ರತ್ಯೇಕವಾದ ಸ್ಥಳದಲ್ಲಿ ಆತನಿಗೆ, “ಆ ದೆವ್ವವನ್ನು ಬಿಡಿಸಲು ನಮಗೆ ಏಕೆ ಸಾಧ್ಯವಾಗಲಿಲ್ಲ?” ಎಂದು ಕೇಳಿದರು.

29 ಯೇಸು, “ಈ ಬಗೆಯ ದೆವ್ವವನ್ನು ಪ್ರಾರ್ಥನೆಯಿಂದ ಮಾತ್ರ ಬಿಡಿಸಲು ಸಾಧ್ಯ” ಎಂದು ಉತ್ತರಿಸಿದನು.

Read full chapter