Add parallel Print Page Options

ಯೇಸು ಈ ಹನ್ನೆರಡು ಅಪೊಸ್ತಲರಿಗೆ ಕೆಲವು ಆಜ್ಞೆಗಳನ್ನು ನೀಡಿ ಪರಲೋಕರಾಜ್ಯವನ್ನು ಕುರಿತು ತಿಳಿಸುವುದಕ್ಕಾಗಿ ಅವರನ್ನು ಕಳುಹಿಸಿದನು. ಯೇಸು ಅವರಿಗೆ ಹೇಳಿದ್ದೇನೆಂದರೆ: “ಯೆಹೂದ್ಯರಲ್ಲದ ಜನರ ಬಳಿಗಾಗಲಿ ಸಮಾರ್ಯದವರು ವಾಸಿಸುವ ಯಾವ ಊರಿಗಾಗಲಿ ಹೋಗಬೇಡಿ. ಆದರೆ ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರೇಲರ ಬಳಿಗೆ ಹೋಗಿ, ಪರಲೋಕರಾಜ್ಯವು ಬೇಗನೆ ಬರುತ್ತದೆ ಎಂದು ಬೋಧಿಸಿ. ರೋಗಿಗಳನ್ನು ವಾಸಿಮಾಡಿರಿ. ಸತ್ತವರನ್ನು ಬದುಕಿಸಿರಿ. ಕುಷ್ಠರೋಗಿಗಳನ್ನು ವಾಸಿಮಾಡಿರಿ. ಜನರನ್ನು ದೆವ್ವಗಳಿಂದ ಬಿಡಿಸಿರಿ. ನಾನು ನಿಮಗೆ ಈ ಅಧಿಕಾರಗಳನ್ನು ಉಚಿತವಾಗಿ ಕೊಡುತ್ತೇನೆ. ಆದ್ದರಿಂದ ಬೇರೆಯವರಿಗೆ ಉಚಿತವಾಗಿ ಸಹಾಯಮಾಡಿ. ನಿಮ್ಮೊಂದಿಗೆ ಹಣವನ್ನಾಗಲಿ ತಾಮ್ರ, ಬೆಳ್ಳಿಬಂಗಾರಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿ. 10 ಚೀಲವನ್ನಾಗಲಿ ಹೆಚ್ಚಿನ ಬಟ್ಟೆಗಳನ್ನಾಗಲಿ ಪಾದರಕ್ಷೆಗಳನ್ನಾಗಲಿ ಊರುಗೋಲುಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿ. ಕೆಲಸಗಾರನಿಗೆ ಅಗತ್ಯವಾದವುಗಳನ್ನು ಒದಗಿಸಲಾಗುವುದು.

11 “ನೀವು ಯಾವುದೇ ಊರಿನೊಳಕ್ಕೆ ಅಥವಾ ನಗರಕ್ಕೆ ಪ್ರವೇಶಿಸಿದಾಗ ಅಲ್ಲಿರುವ ಉತ್ತಮ ವ್ಯಕ್ತಿಯನ್ನು ಗುರುತಿಸಿ, ನೀವು ಆ ಊರನ್ನು ಬಿಡುವ ತನಕ ಅವನ ಮನೆಯಲ್ಲೇ ತಂಗಿರಿ. 12 ಆ ಮನೆಗೆ ನೀವು ಪ್ರವೇಶಿಸಿದಾಗ, ‘ನಿಮಗೆ ಶುಭವಾಗಲಿ’ ಎಂದು ಹೇಳಿರಿ. 13 ಆ ಮನೆಯಲ್ಲಿರುವ ಜನರು ನಿಮ್ಮನ್ನು ಸ್ವಾಗತಿಸಿದರೆ ನಿಮ್ಮ ಆಶೀರ್ವಾದಕ್ಕೆ ಅವರು ಯೋಗ್ಯರಾಗಿರುವುದರಿಂದ ಆ ಆಶೀರ್ವಾದವು ಅವರಿಗೆ ದೊರೆಯಲಿ. ಅವರು ನಿಮ್ಮನ್ನು ಸ್ವಾಗತಿಸದಿದ್ದರೆ, ನಿಮ್ಮ ಆಶೀರ್ವಾದವು ನಿಮಗೇ ಹಿಂತಿರುಗಿಬರಲಿ. 14 ಒಂದು ಮನೆಯವರು ಅಥವಾ ಒಂದು ಊರಿನವರು ನಿಮ್ಮನ್ನು ಸ್ವಾಗತಿಸದಿದ್ದರೆ ಇಲ್ಲವೇ ನಿಮ್ಮ ಮಾತನ್ನು ಕೇಳದಿದ್ದರೆ ನೀವು ಆ ಸ್ಥಳವನ್ನು ಬಿಟ್ಟುಹೋಗುವಾಗ, ನಿಮ್ಮ ಕಾಲಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ. 15 ನ್ಯಾಯವಿಚಾರಣೆಯ ದಿನದಲ್ಲಿ ಈ ಊರಿನ ಗತಿಯು ಸೊದೋಮ್ ಮತ್ತು ಗೊಮೋರಗಳಿಗಿಂತ ಬಹಳ ಕೆಟ್ಟದ್ದಾಗಿರುವುದು ಎಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.

Read full chapter