ಮತ್ತಾಯ 16:21-28
Kannada Holy Bible: Easy-to-Read Version
ಯೇಸು ತನ್ನ ಮರಣದ ಕುರಿತು ಮುಂತಿಳಿಸಿದ್ದು
(ಮಾರ್ಕ 8:31–9:1; ಲೂಕ 9:22-27)
21 ಆ ಸಮಯದಲ್ಲಿ ಯೇಸು ತಾನು ಜೆರುಸಲೇಮಿಗೆ ಹೋಗಬೇಕೆಂದು ಮತ್ತು ಅಲ್ಲಿ ಯೆಹೂದ್ಯರ ಹಿರಿಯ ನಾಯಕರಿಂದಲೂ ಮಹಾಯಾಜಕರಿಂದಲೂ ಮತ್ತು ಧರ್ಮೋಪದೇಶಕರಿಂದಲೂ ತಾನು ಅನೇಕ ಕಷ್ಟಗಳನ್ನು ಅನುಭವಿಸಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಸತ್ತವರೊಳಗಿಂದ ಜೀವಂತವಾಗಿ ಎದ್ದುಬರಬೇಕಾಗಿದೆ ಎಂದು ತನ್ನ ಶಿಷ್ಯರಿಗೆ ವಿವರಿಸಿ ಹೇಳಿದನು.
22 ಆಗ ಪೇತ್ರನು ಯೇಸುವನ್ನು ಸ್ವಲ್ಪ ದೂರದಲ್ಲಿ ಕರೆದೊಯ್ದು, “ದೇವರು ನಿನ್ನನ್ನು ಕಾಪಾಡಲಿ, ನಿನಗೆಂದಿಗೂ ಹಾಗೆ ಸಂಭವಿಸದಿರಲಿ!” ಎಂದು ಪ್ರತಿಭಟಿಸಿದನು.
23 ಆಗ ಯೇಸು ಪೇತ್ರನಿಗೆ, “ಸೈತಾನನೇ, ಇಲ್ಲಿಂದ ತೊಲಗು! ನೀನು ನನಗೆ ಅಡ್ಡಿಯಾಗಿರುವೆ! ನಿನ್ನ ಯೋಚನೆ ಮನುಷ್ಯರ ಯೋಚನೆಯೇ ಹೊರತು ದೇವರದಲ್ಲ” ಎಂದು ಹೇಳಿದನು.
24 ಬಳಿಕ ಯೇಸು ತನ್ನ ಶಿಷ್ಯರಿಗೆ, “ನನ್ನನ್ನು ಹಿಂಬಾಲಿಸಲು ಅಪೇಕ್ಷಿಸುವವನು ತನಗೆ ಇಷ್ಟವಾದದ್ದನ್ನು ತ್ಯಜಿಸಬೇಕು. ಅವನು ತನಗೆ ಕೊಟ್ಟಿರುವ ಶಿಲುಬೆಯನ್ನು (ಸಂಕಟ) ಸ್ವೀಕರಿಸಿಕೊಂಡು ನನ್ನನ್ನು ಹಿಂಬಾಲಿಸಬೇಕು. 25 ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು. ನನಗಾಗಿ ತನ್ನ ಪ್ರಾಣವನ್ನು ಕೊಡುವ ಪ್ರತಿಯೊಬ್ಬನೂ ಅದನ್ನು ಉಳಿಸಿಕೊಳ್ಳುವನು. 26 ಒಬ್ಬನು ಪ್ರಪಂಚವನ್ನೆಲ್ಲಾ ಗಳಿಸಿಕೊಂಡು ತನ್ನ ಆತ್ಮವನ್ನೇ ಕಳೆದುಕೊಂಡರೆ ಅದರಿಂದ ಅವನಿಗೇನು ಪ್ರಯೋಜನ? ಮನುಷ್ಯನು ತನ್ನ ಆತ್ಮವನ್ನು ಕೊಂಡುಕೊಳ್ಳಲು ಏನನ್ನು ತಾನೇ ಕೊಡಬಲ್ಲನು? 27 ಮನುಷ್ಯಕುಮಾರನು ತನ್ನ ತಂದೆಯ ಮಹಿಮೆಯೊಡನೆ ಮತ್ತು ತನ್ನ ದೂತರೊಡನೆ ಮರಳಿ ಬಂದು ಪ್ರತಿಯೊಬ್ಬನಿಗೂ ಅವನವನ ಕಾರ್ಯಗಳಿಗೆ ತಕ್ಕಂತೆ ಪ್ರತಿಫಲ ಕೊಡುವನು. 28 ನಾನು ನಿಮಗೆ ಸತ್ಯವನ್ನೇ ಹೇಳುತ್ತೇನೆ. ಈಗ ಇಲ್ಲಿ ನಿಂತಿರುವ ಕೆಲವರು, ಮನುಷ್ಯಕುಮಾರನು ತನ್ನ ರಾಜ್ಯದೊಡನೆ ಬರುವುದನ್ನು ನೋಡುವ ತನಕ ಸಾಯುವುದಿಲ್ಲ” ಎಂದು ಹೇಳಿದನು.
Read full chapterKannada Holy Bible: Easy-to-Read Version. All rights reserved. © 1997 Bible League International