Add parallel Print Page Options

ದೇವಾಲಯವು ಪ್ರಾರ್ಥನಾಲಯ

(ಮಾರ್ಕ 11:15-19; ಲೂಕ 19:45-48; ಯೋಹಾನ 2:13-22)

12 ಯೇಸು ದೇವಾಲಯದ ಒಳಕ್ಕೆ ಹೋದನು. ಅಲ್ಲಿ ಮಾರುತ್ತಿದ್ದ ಮತ್ತು ಕೊಂಡುಕೊಳ್ಳುತ್ತಿದ್ದ ಜನರನ್ನೆಲ್ಲಾ ಆತನು ಹೊರಗೆ ಓಡಿಸಿಬಿಟ್ಟನು; ನಾಣ್ಯ ವಿನಿಮಯ ಮಾಡುತ್ತಿದ್ದವರ ಮತ್ತು ಪಾರಿವಾಳಗಳನ್ನು ಮಾರುತ್ತಿದ್ದವರ ಮೇಜುಗಳನ್ನು ಕೆಡವಿದನು. 13 ಯೇಸು ಅಲ್ಲಿದ್ದ ಜನರಿಗೆಲ್ಲ, “‘ನನ್ನ ಆಲಯವು ಪ್ರಾರ್ಥನಾಲಯ ಎನಿಸಿಕೊಳ್ಳುವುದು’(A) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಆದರೆ ನೀವು ದೇವರ ಆಲಯವನ್ನು ‘ಕಳ್ಳರ ಗವಿ’ಯನ್ನಾಗಿ ಮಾಡುತ್ತಿದ್ದೀರಿ”(B) ಎಂದು ಹೇಳಿದನು.

14 ಕೆಲವು ಮಂದಿ ಕುರುಡರು ಮತ್ತು ಕುಂಟರು ದೇವಾಲಯದಲ್ಲಿ ಯೇಸುವಿನ ಬಳಿಗೆ ಬಂದರು. ಯೇಸು ಅವರನ್ನು ಗುಣಪಡಿಸಿದನು. 15 ಮಹಾಯಾಜಕರು ಮತ್ತು ಧರ್ಮೋಪದೇಶಕರು ಇದನ್ನು ನೋಡಿದರು. ಯೇಸು ಮಹತ್ಕಾರ್ಯಗಳನ್ನು ಮಾಡುತ್ತಿರುವುದನ್ನು ಮತ್ತು ದೇವಾಲಯದಲ್ಲಿ ಚಿಕ್ಕಮಕ್ಕಳು ಯೇಸುವನ್ನು ಕೊಂಡಾಡುತ್ತಿರುವುದನ್ನು ಅವರು ಗಮನಿಸಿದರು. ಚಿಕ್ಕ ಮಕ್ಕಳು, “ದಾವೀದನ ಕುಮಾರನಿಗೆ ಸ್ತೋತ್ರವಾಗಲಿ” ಎಂದು ಕೂಗುತ್ತಿದ್ದರು. ಇವುಗಳಿಂದಾಗಿ ಯಾಜಕರು ಮತ್ತು ಧರ್ಮೋಪದೇಶಕರು ಕೋಪಗೊಂಡರು.

16 ಮಹಾಯಾಜಕರು ಮತ್ತು ಧರ್ಮೋಪದೇಶಕರು ಯೇಸುವಿಗೆ, “ಈ ಚಿಕ್ಕಮಕ್ಕಳು ಹೇಳುತ್ತಿರುವ ಮಾತುಗಳನ್ನು ನೀನು ಕೇಳಿಸಿಕೊಂಡೆಯೋ?” ಎಂದು ಕೇಳಿದರು.

ಯೇಸು, “ಹೌದು, ‘ನೀನು ಚಿಕ್ಕಮಕ್ಕಳಿಗೂ ಎಳೆಯ ಕೂಸುಗಳಿಗೂ ಸ್ತೋತ್ರಮಾಡಲು ಕಲಿಸಿರುವೆ’(C) ಎಂದು ಪವಿತ್ರ ಗ್ರಂಥದಲ್ಲಿ ಹೇಳಿದೆ. ನೀವು ಪವಿತ್ರ ಗ್ರಂಥವನ್ನು ಓದಿಲ್ಲವೇ?” ಎಂದು ಉತ್ತರಕೊಟ್ಟನು.

17 ಬಳಿಕ ಆತನು ಆ ಸ್ಥಳವನ್ನು ಬಿಟ್ಟು ಬೆಥಾನಿ ಪಟ್ಟಣಕ್ಕೆ ಹೊರಟುಹೋದನು. ಯೇಸು ಆ ರಾತ್ರಿ ಅಲ್ಲಿಯೇ ತಂಗಿದನು.

Read full chapter