ಮತ್ತಾಯ 8:5-13
Kannada Holy Bible: Easy-to-Read Version
ಆರೋಗ್ಯ ಹೊಂದಿದ ಅಧಿಕಾರಿಯ ಸೇವಕ
(ಲೂಕ 7:1-10; ಯೋಹಾನ 4:43-54)
5 ಯೇಸು ಕಪೆರ್ನೌಮ್ ಪಟ್ಟಣಕ್ಕೆ ಹೊರಟುಹೋದನು. ಆತನು ಪಟ್ಟಣಕ್ಕೆ ಪ್ರವೇಶಿಸಿದಾಗ ಸೈನ್ಯದ ಅಧಿಕಾರಿಯೊಬ್ಬನು ಬಂದು, 6 “ಪ್ರಭುವೇ, ನನ್ನ ಸೇವಕನು ಕಾಯಿಲೆಯಿಂದ ಹಾಸಿಗೆಯ ಮೇಲಿದ್ದಾನೆ. ಅವನು ಬಹಳ ನೋವಿನಿಂದ ನರಳುತ್ತಿದ್ದಾನೆ” ಎಂದು ಸಹಾಯಕ್ಕಾಗಿ ಬೇಡಿಕೊಂಡನು.
7 ಯೇಸು ಆ ಅಧಿಕಾರಿಗೆ, “ನಾನು ಬಂದು ಅವನನ್ನು ಗುಣಪಡಿಸುತ್ತೇನೆ” ಎಂದು ಹೇಳಿದನು.
8 ಅದಕ್ಕೆ ಆ ಅಧಿಕಾರಿ, “ಪ್ರಭುವೇ, ನನ್ನ ಮನೆಗೆ ನೀನು ಬರುವಷ್ಟು ಯೋಗ್ಯತೆ ನನಗಿಲ್ಲ. ಅವನಿಗೆ ಗುಣವಾಗಲಿ ಎಂದು ನೀನು ಆಜ್ಞಾಪಿಸಿದರೆ ಸಾಕು, ಅವನಿಗೆ ಗುಣವಾಗುವುದು. 9 ನಾನು ಸಹ ಬೇರೆ ಅಧಿಕಾರಿಗಳ ಅಧೀನದಲ್ಲಿದ್ದೇನೆ. ನನ್ನ ಅಧೀನದಲ್ಲಿ ಸಿಪಾಯಿಗಳಿದ್ದಾರೆ. ನಾನು ಒಬ್ಬ ಸಿಪಾಯಿಗೆ ‘ಹೋಗು’ ಅಂದರೆ ಅವನು ಹೋಗುತ್ತಾನೆ; ಮತ್ತೊಬ್ಬ ಸಿಪಾಯಿಗೆ ‘ಬಾ’ ಅಂದರೆ ಅವನು ಬರುತ್ತಾನೆ. ನಾನು ನನ್ನ ಸೇವಕನಿಗೆ, ‘ಇದನ್ನು ಮಾಡು’ ಅಂದರೆ ಅವನು ವಿಧೇಯತೆಯಿಂದ ಮಾಡುತ್ತಾನೆ. ನಿನಗೂ ಇದೇ ರೀತಿಯ ಅಧಿಕಾರವಿದೆ ಎಂದು ನನಗೆ ಗೊತ್ತಿದೆ” ಎಂದು ಹೇಳಿದನು.
10 ಇದನ್ನು ಕೇಳಿ ಯೇಸುವಿಗೆ ಆಶ್ಚರ್ಯವಾಯಿತು. ಯೇಸು ತನ್ನ ಸಂಗಡ ಇದ್ದವರಿಗೆ, “ನಾನು ಇಸ್ರೇಲಿನಲ್ಲಿಯೂ ಸಹ ಇಷ್ಟು ನಂಬಿಕೆಯುಳ್ಳ ವ್ಯಕ್ತಿಯನ್ನು ಕಾಣಲಿಲ್ಲ ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಎಂದನು. 11 ಅನೇಕ ಜನರು ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಿಂದ ಬರುತ್ತಾರೆ. ಅವರು ಪರಲೋಕರಾಜ್ಯದಲ್ಲಿ ಅಬ್ರಹಾಮ, ಇಸಾಕ, ಯಾಕೋಬ ಇವರ ಸಂಗಡ ಕುಳಿತುಕೊಂಡು ಊಟಮಾಡುತ್ತಾರೆ. 12 ಪರಲೋಕರಾಜ್ಯವನ್ನು ಹೊಂದತಕ್ಕವರು ಹೊರಗೆ ಕತ್ತಲೆಗೆ ಎಸೆಯಲ್ಪಡುವರು. ಅಲ್ಲಿ ಅವರು ಗೋಳಾಡುವರು ಮತ್ತು ನೋವಿನಿಂದ ಹಲ್ಲುಗಳನ್ನು ಕಡಿಯುವರು” ಎಂದನು.
13 ಬಳಿಕ ಯೇಸು ಆ ಅಧಿಕಾರಿಗೆ, “ಮನೆಗೆ ಹೋಗು, ನೀನು ನಂಬಿದಂತೆಯೇ ನಿನ್ನ ಸೇವಕನಿಗೆ ಗುಣವಾಗುವುದು” ಎಂದನು. ಅದೇ ಸಮಯದಲ್ಲಿ ಅವನ ಸೇವಕನಿಗೆ ಗುಣವಾಯಿತು.
Read full chapterKannada Holy Bible: Easy-to-Read Version. All rights reserved. © 1997 Bible League International